ಆ್ಯಪ್ನಗರ

ನೆರೆ ಸಂತ್ರಸ್ತರ ಸಮಸ್ಯೆ ಆಲಿಸಿದ ಮಾಜಿ ಸಿಎಂ

ಪಟ್ಟಣದಲ್ಲಿ ತಾಲೂಕು ಆಡಳಿತ ತೆರೆದಿರುವ ಕಾಳಜಿ ಕೇಂದ್ರಗಳಿಗೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವಾನ ಹೇಳಿದರು.

Vijaya Karnataka 13 Aug 2019, 5:00 am
ಹೊಳೆನರಸೀಪುರ : ಪಟ್ಟಣದಲ್ಲಿ ತಾಲೂಕು ಆಡಳಿತ ತೆರೆದಿರುವ ಕಾಳಜಿ ಕೇಂದ್ರಗಳಿಗೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವಾನ ಹೇಳಿದರು.
Vijaya Karnataka Web HSN-HSN12HNP1A


ಶ್ರವಣಬೆಳಗೊಳದ ಶ್ರೀಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಮಾಜಿ ಸಚಿವ ಬಂಡೇಪ ಕಾಶೆಂಪೂರ್‌ ಜತೆಗಿದ್ದು, ನೆರೆಗೀಡಾದವರಿಗೆ ಸಾಂತ್ವಾನ ಹೇಳಿದರು.

ತುರ್ತು ನಿರ್ವಹಣೆಗೆಂದು ಸಂತ್ರಸ್ತ ಕುಟುಂಬವೊಂದಕ್ಕೆ ತಲಾ 3,800 ರೂಪಾಯಿಯಂತೆ ಸುಮಾರು 60 ಕುಟುಂಬಗಳಿಗೆ ಪರಿಹಾರದ ಚೆಕ್‌ ನೀಡಿದರು.

ಹೇಮಾವತಿ ನದಿ ಅಂಚಿನ ಗ್ರಾಮಗಳಲ್ಲಿ ಹೊಳೆ ಉಕ್ಕಿ ಹರಿದಿದ್ದರಿಂದ ಹಾನಿಗೊಳಗಾದ ನಿವಾಸಿಗಳಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಕಾಳಜಿ ಕೇಂದ್ರ ಸ್ಥಾಪಿಸಲಾಗಿದ್ದು, ಅಲ್ಲಿಗೆ ಆಗಮಿಸಿದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಆಶ್ರಯ ಪಡೆದವರು ರಾತ್ರಿ ವೇಳೆ ತಂಗಲು ವಿದ್ಯುತ್‌ ದೀಪ ವ್ಯವಸ್ಥೆ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲಿನ ವ್ಯವಸ್ಥೆ ಬಗ್ಗೆ ಆಶ್ರಯ ಪಡೆದಿರುವವರಿಂದ ಕೇಳಿ ಪಡೆದರು. ಪೌರಕಾರ್ಮಿಕರ ಬಡಾವಣೆಗೆ ನೀರು ನುಗ್ಗಿದ್ದರಿಂದ ಸುಮಾರು 100ಕ್ಕೂ ಹೆಚ್ಚು ಜನರು ಶಿಕ್ಷ ಕರ ಭವನದ ಆಶ್ರಯದಲ್ಲಿ ಉಳಿದಿದ್ದು, ಇಲ್ಲಿನ ಜನರ ಕಷ್ಟಕ್ಕೆ ಸರಕಾರ ಸ್ಪಂದಿಸಲಿದೆ. ಈಗಾಗಲೇ ಪೌರಕಾರ್ಮಿಕರ ವಸತಿ ಅನುಕೂಲತೆಗೆ ಮನೆ ನಿರ್ಮಾಣ ಕಾರ್ಯ ನಡೆದಿದೆ. ಮುಂದಿನ ಒಂದು ತಿಂಗಳಲ್ಲಿ ನೂತನ ಮನೆಗಳು ನಿಮಗೆ ಲಭ್ಯವಾಗಲಿವೆ ಎಂದರು.

ಯಾಸೀನ್‌ನಗರದಲ್ಲಿ ಹಾನಿಗೀಡಾಗಿ ಬಿದ್ದು ಹೋಗಿರುವ ಮನೆಗಳನ್ನು ವೀಕ್ಷಿಸಿದ ಅವರು, ಶಾದಿಮೊಹಲ್‌ಗೆ ಆಗಮಿಸಿ ಸಾಂತ್ವಾನ ಹೇಳಿದರು. ಕಷ್ಟದ ನಡುವೆ ಹಬ್ಬ ಆಚರಿಸಿದ್ದೀರಿ. ನಿಮಗೆ ಬಕ್ರೀದ್‌ ಹಬ್ಬದ ಶುಭಾಷಯಗಳು. ದೇವರ ದಯೆ ಇಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಕೆಲವೆಡೆ ಬಾರಿ ಅನಾಹುತವನ್ನೇ ತಂದೊಡ್ಡಿದೆ. ಕೊಡಗಿನಲ್ಲಿ ಕಳೆದ ಬಾರಿ ನೆರೆಯಾದಾಗ ಸಾವಿರಾರು ಸಾವು ನೋವು ಸಂಭವಿಸಿತ್ತು. ಅಂದು ನಾನು ಕಚ್ಚಾಮನೆಗಳಿಗೆ 95 ಸಾವಿರ ರೂ, ಪಕ್ಕಾ ಮನೆಗಳಿಗೆ ಒಂದೂವರೆ ಲಕ್ಷ ರೂ. ಸಹಾಯ ಧನ ನೀಡಲು ಆದೇಶಿಸಿದ್ದೆ. ಬಾಡಿಗೆ ಮನೆ ಪಡೆದವರಿಗೆ ಮಾಸಿಕ 10 ಸಾವಿರ ರೂ. ಸರಕಾರದಿಂದ ನೀಡಲಾಗುತ್ತಿತ್ತು. ಪ್ರಸ್ತುತ ಸರಕಾರದ ಹಂತದಲ್ಲಿ ಏನು ಮಾಡಿದೆಯೋ ನನಗೆ ಗೊತ್ತಿಲ್ಲ. ಒಟ್ಟಾರೆ ಸರಕಾರದಿಂದ ನಿಮಗೆ ಪ್ರಯೋಜನ ದೊರಕಲಿದೆ. ಆತಂಕ ಬೇಡ ಎಂದರು.

ನಾನು ಅಂದಾಜಿಸಿರುವ ಪ್ರಕಾರ ರಾಜ್ಯದಲ್ಲಿ ಬೆಳೆ, ರಸ್ತೆ, ಸೇತುವೆ ಮತ್ತು ಮನೆಗಳು ಸೇರಿದಂತೆ ಒಟ್ಟು 60 ಸಾವಿರ ಕೋಟಿ ರೂ. ನಷ್ಟ ಸಂಭವಿಸಿದೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಮಯದ ಅಭಾವ ಕಾರಣದಿಂದ ಸಾಕಷ್ಟು ಮಾಹಿತಿ ಸಂಗ್ರಹವಾಗಿಲ್ಲ ಎಂದು ಕಾಣುತ್ತದೆ. 30 ಸಾವಿರ ಕೋಟಿ ರೂ. ನಷ್ಟ ಉಂಟಾಗಿರಬಹುದು ಎಂದಿದ್ದಾರೆ. ಪರವಾಗಿಲ್ಲ. ಆದರೆ, ಜನರಿಗೆ ಪರಿಹಾರ ದೊರತು ಕಷ್ಟ ನಿವಾರಣೆಯಾದರೆ ಸಾಕು. ವಿಪರಾರ‍ಯಸ ಎಂದರೆ ಇಂತಹಾ ಸಂಕಷ್ಟದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಸಚಿವ ಸಂಪುಟ ಇಲ್ಲ. ಟೀಕೆಯಿಂದ ನೊಂದವರಿಗೆ ಪರಿಹಾರ ಸಿಕ್ಕುವುದಿಲ್ಲ. ಬದಲಿಗೆ ವಿಪಕ್ಷ ಸಭೆ ಕರೆಯಲಿ ಎಂದು ನನ್ನ ಅಭಿಪ್ರಾಯ ತಿಳಿಸಿದ್ದೇನೆ ಎಂದರು.

ಶ್ರವಣಬೆಳಗೊಳದ ಶ್ರೀಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ನಾವೇ ಮಾಡಿಟ್ಟುಕೊಂಡ ಅವಘಡದಿಂದ ನೆರೆ ಸಂಭವಿಸಿದೆ. ನಾವುಗಳೇ ಸರಿಪಡಿಸಿಕೊಳ್ಳಬೇಕು. ಹಾಸನ ಜಿಲ್ಲೆಯವರಾಗಿ ನಮ್ಮ ಕಷ್ಟಗಳಿಗೆ ನಾವೇ ಸ್ಪಂದಿಸಬೇಕು. ಸ್ಪಂದನೆ ಮಾನವೀಯತೆಯ ಪ್ರತೀಕ. ದೇವರಲ್ಲಿ ಪ್ರಾರ್ಥಿಸಿ ಪರಿಹಾರ ಕಾರ್ಯಕ್ಕೆ ಮುಂದಾಗೋಣ ಎಂದರು.

ಪಟ್ಟಣದ ಉದ್ದಕ್ಕೂ ಬಹುಕೋಟಿ ವೆಚ್ಚದಲ್ಲಿ ಹೇಮಾವತಿ ನದಿಗೆ ತಡೆಗೋಡೆ ನಿರ್ಮಿಸಿರುವುದು ರೇವಣ್ಣರ ಮುಂದಾಲೋಚನೆಯ ಪ್ರತೀಕ ಎಂದು ಎಚ್‌.ಡಿ.ಕುಮಾರಸ್ವಾಮಿ ಪ್ರಶಂಸಿದರು. ಮಾಜಿ ಸಚಿವ ಎಚ್‌.ಡಿ.ರೇವಣ್ಣ ಆಹಾರ ಪದಾರ್ಥಗಳನ್ನು ವಿತರಿಸಿದರು. ಸಂಸದ ಪ್ರಜ್ವಲ್‌ ರೇವಣ್ಣ, ಜಿಪಂ ಮಾಜಿ ಸದಸ್ಯ ಎಚ್‌.ಎನ್‌.ದೇವೇಗೌಡ ಹಾಗೂ ತಹಸೀಲ್ದಾರ್‌ ಕೆ.ಆರ್‌.ಶ್ರೀನಿವಾಸ್‌ ಸೇರಿದಂತೆ ನಾನಾ ಅಧಿಕಾರಿಗಳು ಜತೆಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ