ಆ್ಯಪ್ನಗರ

ಹಸಿರ ಉಸಿರು ಕಾಪಾಡುವ ತಂಡ

ಬರೋಬ್ಬರಿ 20 ಸಾವಿರ ಸಸಿಗಳು, ಹನ್ನೆರಡು ಕೆರೆ, ಮೂವತ್ತ ನಾಲ್ಕು ಕಲ್ಯಾಣಿಗಳ ಪುನಶ್ಚೇತನ.

Vijaya Karnataka 6 Jun 2019, 5:00 am
ಪ್ರಕಾಶ್‌ ಜಿ. ಹಾಸನ
Vijaya Karnataka Web HSN-HSN5M5


ಬರೋಬ್ಬರಿ 20 ಸಾವಿರ ಸಸಿಗಳು, ಹನ್ನೆರಡು ಕೆರೆ, ಮೂವತ್ತ ನಾಲ್ಕು ಕಲ್ಯಾಣಿಗಳ ಪುನಶ್ಚೇತನ.

ಇದ್ಯಾವುದೋ ಸರಕಾರಿ ಲೆಕ್ಕವಲ್ಲ. ಅಂತರ್ಜಲಮಟ್ಟ ವೃದ್ಧಿ, ಪರಿಸರ ಸಂರಕ್ಷಣೆಗೆ ಶ್ರಮಿಸುತ್ತಿರುವ ಜಿಲ್ಲೆಯ ಹಸಿರುಭೂಮಿ ಪ್ರತಿಷ್ಠಾನವು 2017ರಿಂದ ಈವರೆಗೆ ಜಿಲ್ಲೆಯಲ್ಲಿ ಕೆರೆ, ಕಲ್ಯಾಣಿಗಳ ಉಳಿವು, ಅಂತರ್ಜಲಮಟ್ಟ ವೃದ್ಧಿ, ಸಸಿಗಳನ್ನು ನೆಟ್ಟು ಪೋಷಿಸಿರುವ ಮಹತ್ಕಾರ್ಯದ ಲೆಕ್ಕ.

ಹಸಿರುಭೂಮಿ ಪ್ರತಿಷ್ಠಾನವು ನೆಲ, ಜಲ, ಪರಿಸರ ಸಂರಕ್ಷಣೆಯ ಉಳಿವಿಗೆ ಸರಕಾರದ ನಯಾಪೈಸೆ ಅನುದಾನವಿಲ್ಲದೆ ಪ್ರತಿಷ್ಠಾನದ ಸದಸ್ಯರು ಮತ್ತು ದಾನಿಗಳ ನೆರವಿನಿಂದ ಈವರೆಗೆ ಒಂದೂವರೆ ಕೋಟಿ ರೂ. ವ್ಯಯ ಮಾಡಿ ಅಂತರ್ಜಲ ವೃದ್ಧಿ, ಪರಿಸರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ.

17 ಜನರ ತಂಡ: ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ ಆರ್‌.ಪಿ.ವೆಂಕಟೇಶಮೂರ್ತಿ, ಹಾಲಿ ಅಧ್ಯಕ್ಷ ಹಾಗೂ ನಿವೃತ್ತ ಎಂಜಿನಿಯರ್‌ ಸುಬ್ಬಸ್ವಾಮಿ, ಗೌರವಾಧ್ಯಕ್ಷರಾದ ಉಪವಿಭಾಗಾಧಿಕಾರಿ ಡಾ.ನಾಗರಾಜ್‌, ಸಾಹಿತಿ ರೂಪಾ ಹಾಸನ್‌, ಡಾ.ಸಾವಿತ್ರಿ, ತಾರಾ ಎಸ್‌. ಸುಬ್ಬಸ್ವಾಮಿ, ಪರಿಸರವಾದಿ ಚ.ನಾ.ಅಶೋಕ್‌ ಹೀಗೆ 17 ಜನರ ತಂಡ ಕೆರೆ, ಕಲ್ಯಾಣಿಗಳ ಪುನಶ್ಚೇತನದಲ್ಲಿ ದೊಡ್ಡ ಪಾತ್ರ ವಹಿಸುತ್ತಿದೆ.

ಪುನಶ್ಚೇತನ: ಸರಕಾರ ಅಭಿವೃದ್ಧಿ ಹೆಸರಿನಲ್ಲಿ ಕೆರೆಗಳಿಗೆ ಉಳಿಗಾಲವಿಲ್ಲ ಎನ್ನುವ ಜತೆಗೆ ರಿಯಲ್‌ಎಸ್ಟೇಟ್‌ ಮಾಫಿಯಾ ಒತ್ತುವರಿ, ಕೆರೆ ಕಬಳಿಕೆಯ ಸನ್ನಿವೇಶದಲ್ಲಿ ಕೆರೆಗಳ ಸಂರಕ್ಷಣೆ, ಪುನಶ್ಚೇತನಕ್ಕೆ ಹೊರಟಾಗ ಎದುರಾದ ಅನೇಕ ಸವಾಲುಗಳನ್ನು ಮೆಟ್ಟಿನಿಂತು ಅಂತರ್ಜಲ ವೃದ್ಧಿಗೆ ಕೊಡುಗೆ ನೀಡಿದೆ.

ಹೂಳು, ತ್ಯಾಜ್ಯದಿಂದ ತುಂಬಿ ಇತಿಹಾಸದ ಪುಟದಲ್ಲಿ ಸೇರುವಂತಿದ್ದ ತಾಲೂಕಿನ ದೊಡ್ಡಕೊಂಡಗೊಳ ಕೆರೆ ಸಂರಕ್ಷಣೆಯ ಹೊಣೆ ಹೊತ್ತು ಶ್ರಮಿಸಿದ ಪರಿಣಾಮ ಇಂದು ನೀರು ತುಂಬಿಕೊಂಡು ಕೆರೆ ಕಂಗೊಳಿಸುತ್ತಿದೆ. ಇಡೀ ಗ್ರಾಮದಲ್ಲಿ ಅಂತರ್ಜಲ ವೃದ್ಧಿಯಾಗಿದೆ. ಬೇಲೂರು, ಅರಸೀಕೆರೆ, ಚನ್ನರಾಯಪಟ್ಟಣ ಹೀಗೆ ಜಿಲ್ಲೆಯಾದ್ಯಂತ ಆಯ್ದ ಕೆರೆ, ಕಟ್ಟೆಗಳ ಒಡಲು ತುಂಬಲು ತನ್ನದೇ ಆದ ಕೊಡುಗೆ ನೀಡಿದೆ. ಮೂಗುಮುಚ್ಚಿ ತಿರುಗುವಂತಿದ್ದ ಕೆರೆ, ಕಟ್ಟೆಗಳ ಸುತ್ತಲಿನ ವಾತಾವರಣ ಸ್ವಚ್ಛಗೊಳಿಸಿ, ಸೌಂದರ್ಯದ ತಾಣವನ್ನಾಗಿಸಿದೆ. ಪರಿಣಾಮ ವಾಯುವಿಹಾರಿಗಳು, ಪರಿಸರಾಸಕ್ತರು ,ಸಾರ್ವಜನಿಕರು ಇತ್ತ ಹೆಜ್ಜೆಇಟ್ಟು ದೃಷ್ಟಿ ಹರಿಸುವಂತಾಗಿದೆ.

20 ಸಾವಿರ ಸಸಿ: ವಿಶ್ವಪರಿಸರ ದಿನಾಚರಣೆಯಂದು ಹಸಿರುಡುಗೆ ತೊಟ್ಟು, ಒಂದೆರಡು ಸಸಿನೆಟ್ಟು ಫೋಟೊಗೆ ಫೋಸ್‌ ನೀಡಲು ಸೀಮಿತವಾದವರ ನಡುವೆ ಟ್ರಸ್ಟ್‌ನ ಪದಾಧಿಕಾರಿಗಳು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಈವರೆಗೆ 20 ಸಾವಿರ ಸಸಿನಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.

ಗ್ರಾಮಸೈನ್ಯ: ನಗರ, ಪಟ್ಟಣ, ಗ್ರಾಮ ವ್ಯಾಪ್ತಿಯ ಕೆರೆ, ಕಲ್ಯಾಣಿ ಪುನಶ್ಚೇತನ, ಸಸಿ ನೆಡುವುದಷ್ಟೇ ಅಲ್ಲದೆ, ಸ್ಥಳೀಯ ಯುವಜನರು, ಹಿರಿಯರು ಹೀಗೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಸರ ಸಂರಕ್ಷಣೆಗೆ ಮುಂದುವರಿದ ಜವಾಬ್ದಾರಿಯನ್ನು ಸ್ಥಳೀಯವಾಗಿ ವಹಿಸಲು 'ಗ್ರಾಮಸೈನ್ಯ'ವನ್ನು ರಚಿಸಿ ಜವಾಬ್ದಾರಿ ವಹಿಸಿಸುತ್ತಿದೆ.

ಲೆಕ್ಕಾಚಾರ: ಇಂತಹ ಕೆರೆ ಪುನಶ್ಚೇತನಗೊಳಿಸಬೇಕು, ತಡೆಗೋಡೆ ಭದ್ರಪಡಿಸಬೇಕು, ಹೂಳು ತೆಗೆಯಬೇಕು ಎಂಬುದರಿಂದ ಮೊದಲ್ಗೊಂಡು ಇಷ್ಟು ಖರ್ಚಾಗುತ್ತದೆ ಎಂಬ ಲೆಕ್ಕಾಚಾರ ಪೂರ್ವಭಾವಿ ಸಭೆಯಲ್ಲಿ ಸಿದ್ಧವಾಗುತ್ತದೆ. ಆ ಕ್ಷಣದಲ್ಲಿ ನಾನು ಐದು ಸಾವಿರ, ನಾನು ಹತ್ತು ಸಾವಿರ ಎಂಬ ಧ್ವನಿಗೆ, ಧ್ವನಿಗೂಡಿ ಅದು ಲಕ್ಷಾಂತರ ರೂ.ತನಕ ಬಂದು ನಿಲ್ಲುತ್ತದೆ. ಆ ಸಂದರ್ಭದಲ್ಲಿ ಊರಿನ ಮುಖಂಡರು, ದಾನಿಗಳು ಕೂಡ 'ನಿಮ್ಮೊಂದಿಗೆ ನಾವಿದ್ದೇವೆ ಒಳ್ಳೆಯ ಕೆಲಸ ಮಾಡಿ' ಎಂದು ಕೈಜೋಡಿಸುತ್ತಿರುವ ಪರಿಣಾಮವಾಗಿಯೇ ಈ ಒಂದು ಸೇವೆ ಮುಂದುವರೆಯಲು ಸಾಧ್ಯವಾಗಿದೆ ಎಂದು ಸ್ಮರಿಸುತ್ತಾರೆ ಹಸಿರುಭೂಮಿ ಪ್ರತಿಷ್ಠಾನದ ಸದಸ್ಯೆ ತಾರಾ ಎಸ್‌. ಸುಬ್ಬಸ್ವಾಮಿ.

ಶ್ರಮಜೀವಿ ಎಸಿ

ಅಧಿಕಾರಿಗಳು ಎಂದಾಕ್ಷಣ ಟಾಕು, ಟೀಕಾಗಿ ಬಂದು, ಪರಿಸರ ದಿನಾಚರಣೆ ಬಗ್ಗೆ ಉದ್ದುದ್ದ ಭಾಷಣ ಮಾಡುವವರಿಗೆ ಕಮ್ಮಿ ಇಲ್ಲ. ಇದಕ್ಕೆ ವ್ಯತಿರಿಕ್ತ ಎಂಬಂತೆ ಹಾಸನದ ಎಸಿ ಡಾ.ಎಚ್‌.ಎಲ್‌.ನಾಗರಾಜು ಪರಿಸರ ಸಂರಕ್ಷಣೆಗೆ ಪಣತೊಟ್ಟು,ತಂಡದ ಸದಸ್ಯರಂತೆ ಕೈಯಲ್ಲಿ ಮಚ್ಚು, ಗುದ್ದಲಿ ಹಿಡಿದು ಸ್ವಚ್ಛತೆ, ಹೂಳು ತೆಗೆಯಲು ನಿಂತರೆ ಬೆವರಿಳಿಸಿ ಕೆಲಸ ಪೂರ್ಣಗೊಂಡ ಬಳಿಕವೇ ನಿಟ್ಟುಸಿರು ಬಿಡುವುದು. ಈ ಕಾಯಕವನ್ನು ನೋಡಿಯೇ ಶ್ರಮಜೀವಿ, ಸ್ನೇಹಮಹಿ ಅಧಿಕಾರಿ ಎಂಬ ಪ್ರಶಂಸೆಗೆ ಪಾತ್ರವಾಗಿದ್ದಾರೆ.

ಪರಿಸರ ಉಳಿಯಬೇಕು
ಪರಿಸರ ಸಂರಕ್ಷಣೆಗೆ ಹಸಿರುಭೂಮಿ ಪ್ರತಿಷ್ಠಾನ ನಿರಂತರವಾಗಿ ಶ್ರಮಿಸುತ್ತಿದೆ. ಸಮಾಜಸೇವೆಯ ಮನಸ್ಸಿನವರು, ದಾನಿಗಳು, ಮಾರ್ಗದರ್ಶಕರು ಒಟ್ಟಾರೆ ಮುಕ್ತಮನಸ್ಸಿನವರು ಸೇರಿದ್ದೇವೆ. ಇಲ್ಲಿ ನಿವೃತ್ತ ಅಧಿಕಾರಿಗಳು, ಹಾಲಿ ಅಧಿಕಾರಿಗಳು, ಗಣ್ಯರು ಎಲ್ಲರೂ ಇದ್ದಾರೆ. ಎಲ್ಲರ ಕೈಜೋಡಿಸುವಿಕೆಯಿಂದ ಮಹತ್ಕಾರ್ಯ ನಡೆಯುತ್ತಿದೆ. ಕೆರೆ,ಕಟ್ಟೆ, ಪರಿಸರ ಉಳಿಸಬೇಕು ಎಂಬುದೇ ಎಲ್ಲರ ಧ್ಯೇಯವಾಗಿದ್ದು, ಈ ಕೆಲಸಕ್ಕೆ ನಮ್ಮಿಂದ ಹಣ ಖರ್ಚಾಯಿತು ಎಂಬುದರ ಬದಲು ಮನಸ್ಸಿಗೆ ನೆಮ್ಮದಿ ನೀಡಿದೆ. ನಮ್ಮ ಆರೋಗ್ಯವೂ ವೃದ್ಧಿಸುತ್ತಿದೆ ಎಂಬುದೇ ನೆಮ್ಮದಿಯ ಸಂಗತಿ. ಇದಕ್ಕಾಗಿ ನೆರವು ನೀಡಿ ಎಂದು ನಾವು ಸರಕಾರಕ್ಕೆ ಅರ್ಜಿ ಹಾಕಿಲ್ಲ.
- ತಾರಾ ಎಸ್‌.ಸುಬ್ಬಸ್ವಾಮಿ, ಹಸಿರುಭೂಮಿ ಪ್ರತಿಷ್ಠಾನದ ಸದಸ್ಯೆ. ಹಾಸನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ