ಆ್ಯಪ್ನಗರ

ಕೇಂದ್ರ ತಂಡದಿಂದ ಸರ್ವೆ: ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

ಹಾಸನ: ಮಾಹಿತಿ ನೀಡದೆ ಕಳೆದ ಕೆಲ ದಿನದಿಂದ ರೈತರ ಜಮೀನು ಮತ್ತಿತರ ಪ್ರದೇಶದಲ್ಲಿ ಕೇಂದ್ರದ ಗಣಿ ಮತ್ತು ಭೂವಿಜ್ಞಾನ ಇಲಾಖೆ (ಜಿಯಾಲಾಜಿಕಲ್‌ ಸರ್ವೆ ಆಫ್‌ ಇಂಡಿಯಾ) ಅಧಿಕಾರಿಗಳ ತಂಡ ಸರ್ವೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಯಾವುದೋ ನಿಕ್ಷೇಪ ಪತ್ತೆಗೆ ಸರ್ವೆ ನಡೆಯುತ್ತಿದೆ,

Vijaya Karnataka 25 Nov 2018, 5:00 am
ಹಾಸನ: ಮಾಹಿತಿ ನೀಡದೆ ಕಳೆದ ಕೆಲ ದಿನದಿಂದ ರೈತರ ಜಮೀನು ಮತ್ತಿತರ ಪ್ರದೇಶದಲ್ಲಿ ಕೇಂದ್ರದ ಗಣಿ ಮತ್ತು ಭೂವಿಜ್ಞಾನ ಇಲಾಖೆ (ಜಿಯಾಲಾಜಿಕಲ್‌ ಸರ್ವೆ ಆಫ್‌ ಇಂಡಿಯಾ) ಅಧಿಕಾರಿಗಳ ತಂಡ ಸರ್ವೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಯಾವುದೋ ನಿಕ್ಷೇಪ ಪತ್ತೆಗೆ ಸರ್ವೆ ನಡೆಯುತ್ತಿದೆ, ನಮ್ಮ ಭೂಮಿ ಸ್ವಾಧೀನಪಡಿಸಿಕೊಳ್ಳುತ್ತಾರೆ ಎಂಬ ಆತಂಕದಿಂದ ರೈತರು, ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಕರಣ ಅರಸೀಕೆರೆ ತಾಲೂಕು ಶಿಶುನಾಳ ಗ್ರಾಮದಲ್ಲಿ ಶನಿವಾರ ನಡೆಯಿತು.
Vijaya Karnataka Web hassan arasikere shisunala village central mining and geological department surevy
ಕೇಂದ್ರ ತಂಡದಿಂದ ಸರ್ವೆ: ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ


ಗ್ರಾಮದ ಸುತ್ತಲಿನ ಜಮೀನು, ಗುಡ್ಡದ ಪ್ರದೇಶದಲ್ಲಿ ಎಂಟರಿಂದ ಹತ್ತು ಅಧಿಕಾರಿಗಳ ತಂಡ ನಿರಂತರವಾಗಿ ಸರ್ವೆಕಾರ್ಯದಲ್ಲಿ ತಲ್ಲೀನವಾಗಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದ ರೈತರು, ಗ್ರಾಮಸ್ಥರು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ.

ದಿನ ಬೆಳಗಾದರೆ ಜೀಪ್‌ನಲ್ಲಿ ಬರುವುದು, ಒಂದು ಕಡೆಯಿಂದ ಮತ್ತೊಂದು ಕಡೆ ತೆರಳಿ ಸರ್ವೆ ಮಾಡುತ್ತಿದ್ದರು. ಭಾಷಾ ತೊಡಕಿನಿಂದ ಪ್ರಶ್ನಿಸಲು ಮುಂದಾಗಲಿಲ್ಲ ಎನ್ನಲಾಗಿದೆ.

ನಿಕ್ಷೇಪದ ವದಂತಿ: ''ಶಿಶುನಾಳ ಭಾಗದಲ್ಲಿ ಯಾವುದೋ ನಿಕ್ಷೇಪವಿದೆ. ಅದಕ್ಕಾಗಿ ವಿಜ್ಞಾನಿಗಳು ಬಂದು ಸರ್ವೆ ಮಾಡುತ್ತಿದ್ದಾರೆ,'' ಎಂಬ ವದಂತಿ ರೈತರನ್ನು, ಗ್ರಾಮಸ್ಥರ ಆತಂಕ ಹೆಚ್ಚಿಸಿತು. ಹೀಗಾಗಿ ಶನಿವಾರ ಬೆಳಗ್ಗೆ ಸರ್ವೆಗೆ ಬಂದ ಅಧಿಕಾರಿಗಳು, ಸಿಬ್ಬಂದಿಯನ್ನು ಪ್ರಶ್ನಿಸಲು ಆರಂಭಿಸಿದರು.

ತಮಿಳು, ಇಂಗ್ಲಿಷ್‌ ಅಷ್ಟೇ ಬಲ್ಲವರಾಗಿದ್ದ ಅಧಿಕಾರಿಗಳು, ''ನಿಮ್ಮ ತಹಸೀಲ್ದಾರ್‌ ಅವರನ್ನು ಕೇಳಿ,'' ಎಂದಷ್ಟೇ ಹೇಳಿದರು. ''ನೀವು ಹೇಳಿ ಏನು ಮಾಡ್ತಿದ್ದೀರಿ ಎಂದು ಆಮೇಲೆ ತಹಸೀಲ್ದಾರ್‌ ಕೇಳುತ್ತೇವೆ,'' ಎಂದು ತರಾಟೆಗೆ ತೆಗೆದುಕೊಂಡು ವಾಗ್ವಾದ ನಡೆಸಿದರು.

''ಇಂದು ಹಿರಿಯ ಅಧಿಕಾರಿಗಳು ಇಲ್ಲಿಗೆ ಬಂದಿಲ್ಲ. ಸೋಮವಾರ ಬರುತ್ತಾರೆ. ಬಂದ ಬಳಿಕ ಅವರೇ ಎಲ್ಲ ಮಾಹಿತಿ ನೀಡುತ್ತಾರೆ,'' ಎಂಬ ಉತ್ತರದಿಂದ ತೃಪ್ತರಾಗದ ಗ್ರಾಮಸ್ಥರು, ''ಅಲ್ಲಿಯ ತನಕ ಸರ್ವೆ ಮಾಡಬೇಡಿ,'' ಎಂದು ತಾಕೀತು ಮಾಡಿದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ವೆ ಕಾರ‍್ಯ ಕೈಬಿಟ್ಟು ತೆರಳಿದ್ದಾರೆ.

ಕಾರ‍್ಯದರ್ಶಿಗೆ ಪತ್ರ: ಕರ್ನಾಟಕ-ಗೋವಾದಲ್ಲಿ 2018-19ನೇ ಸಾಲಿನಲ್ಲಿ ಸರ್ವೆ ನಡೆಸುವ ಸಂಬಂಧ ಕೇಂದ್ರ ಸರಕಾರ ರಾಜ್ಯದ ಮುಖ್ಯ ಕಾರ್ಯದರ್ಶಿಗೆ 2018ರ ಮೇ 11ರಂದೇ ಪತ್ರ ಬರೆದಿದೆ. ಈ ಮಾಹಿತಿಯನ್ನು ಆಯಾ ಜಿಲ್ಲಾಧಿಕಾರಿಗಳು, ಅರಣ್ಯ ಇಲಾಖೆ ಮತ್ತಿತರ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸುವಂತೆ ಕೋರಿದೆ.
------------
ಸಹಜ ಸಮೀಕ್ಷೆ
ಪ್ರತಿವರ್ಷ ಕೇಂದ್ರ ಗಣಿ ಮತ್ತು ಭೂವಿಜ್ಞಾನ ಇಲಾಖೆ ವಿಜ್ಞಾನಿಗಳು ಮತ್ತಿತರರ ತಂಡ ನಿಕ್ಷೇಪ, ಭೂಕಂಪ ಮತ್ತಿತರ ಮುನ್ನೆಚ್ಚರಿಕಾ ಕ್ರಮವಾಗಿ ಸರ್ವೆ ನಡೆಸುವುದು ಸಹಜ. ಸರ್ವೆ ನಡೆಸಿದ ಕಡೆ ಎಲ್ಲ ಸಿಗುತ್ತದೆ ಎಂದು ಹೇಳಲು ಬರುವುದಿಲ್ಲ. ಶಿಶುನಾಳ ಗ್ರಾಮದಲ್ಲೂ ಇಂತಹದ್ದೇ ನಿಕ್ಷೇಪ ಇದೆ ಎಂಬ ಖಚಿತ ಮಾಹಿತಿ ಇಲ್ಲ. ಸರ್ವೆ ಅಷ್ಟೇ ನಡೆಸುತ್ತಿದ್ದಾರೆ. ಶುಕ್ರವಾರ ತಮ್ಮನ್ನು ಭೇಟಿ ಮಾಡಿದ್ದ ಅಧಿಕಾರಿಗಳು ಸರ್ವೆಗೆ ತೊಂದರೆ ಆಗುತ್ತಿದೆ ಎಂದು ಹೇಳಿದರೆ ಹೊರತು ಯಾವ ಕಾರಣದಿಂದ ಸರ್ವೆ ನಡೆಯುತ್ತಿದೆ ಎಂದು ತಿಳಿಸಿಲ್ಲ. ಪೊಲೀಸ್‌ ಅಧಿಕಾರಿಗಳ ಗಮನಕ್ಕೂ ಈ ಸಂಗತಿ ತಂದಿದ್ದಾರೆ. ಇಷ್ಟರ ಹೊರತಾಗಿ ನಿಕ್ಷೇಪದ ಬಗ್ಗೆ ಯಾವುದೇ ಮಾಹಿತಿ ತಮಗೂ ಇಲ್ಲ.
-ಶ್ರೀನಿವಾಸ್‌, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕ ಹಾಸನ
--------------
ಏನು ಸಿಗುತ್ತದೆ ಎಂದು ಗೊತ್ತಿಲ್ಲ
ಯಾವ ನಿಕ್ಷೇಪ ಸಿಗುತ್ತದೆ ಎಂಬುದು ನನಗೆ, ತಹಸೀಲ್ದಾರ್‌ಗೆ ತಿಳಿದಿಲ್ಲ. ಗ್ರಾಮಸ್ಥರು ಭಯಗೊಂಡಿದ್ದರು. ಅವರಿಗೆ ಕನ್ನಡ ತಿಳಿಯಲ್ಲ, ಕೆಲದಿನದಿಂದ ಸರ್ವೆ ಮಾಡುತ್ತಿದ್ದಾರೆ. ಗ್ರಾಮಸ್ಥರು ನನ್ನ ಬಳಿ ಬಂದಿದ್ದರು, ಮಾಹಿತಿ ಪಡೆದು ಕೆಲಸ ಮಾಡಲು ಬಿಡಿ ಎಂದು ಹೇಳಿದ್ದೇನೆ, ನಿಕ್ಷೇಪ ಇದ್ದರೆ ಅದನ್ನು ತಡೆಯಲು ನಾವ್ಯಾರು? ನಿಯಮದಂತೆ ಪಡೆಯುವ ಹಕ್ಕು ಸರಕಾರಕ್ಕೆ ಇದೆ. ರೈತರ ಜಮೀನು, ತೋಟದಲ್ಲಿ ಸರ್ವೆ ಮಾಡುವಾಗ ಮಾಹಿತಿ ನೀಡಬಾರದೆ?
-ಕೆ.ಎಂ.ಶಿವಲಿಂಗೇಗೌಡ, ಶಾಸಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ