ಆ್ಯಪ್ನಗರ

ಅತಿವೃಷ್ಟಿ: 750 ಕೋಟಿ ರೂ. ವೆಚ್ಚದ ರಸ್ತೆ ಹಾನಿ

750 ಕೋಟಿ ರೂ ವೆಚ್ಚದ ರಸ್ತೆ ಹಾನಿ * ಲೋಕೋಪಯೋಗಿ ಇಲಾಖೆ ಸಚಿವ ಎಚ್‌ಡಿ...

Vijaya Karnataka 28 Aug 2018, 5:00 am
ಹಾಸನ: ಸಕಲೇಶಪುರ, ಅರಕಲಗೂಡು, ಬೇಲೂರು ತಾಲೂಕಿನಲ್ಲಿ 300 ಕೋಟಿ ಹಾಗೂ ಕೊಡಗಿನಲ್ಲಿ 450 ಕೋಟಿ ವೆಚ್ಚದ ರಸ್ತೆಗಳು ಸಂಪೂರ್ಣ ಹಾಳಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಎಚ್‌.ಡಿ.ರೇವಣ್ಣ ತಿಳಿಸಿದರು.
Vijaya Karnataka Web hassan heavy rain 750 core rupies cost road damage minister hd revanna
ಅತಿವೃಷ್ಟಿ: 750 ಕೋಟಿ ರೂ. ವೆಚ್ಚದ ರಸ್ತೆ ಹಾನಿ


ಮಳೆ, ಪ್ರವಾಹದಿಂದ ಬಿಸಿಲೆ ಘಾಟ್‌ ರಸ್ತೆ ಹಾನಿಯಾಗಿದ್ದು ದುರಸ್ತಿಗೆ 200 ಕೋಟಿ ರೂ.ಅಗತ್ಯವಿದೆ. ಮುಖ್ಯಮಂತ್ರಿ, ಸಚಿವರು,ಶಾಸಕರು ಜನತೆಯ ಕಷ್ಟಕ್ಕೆ ಹಗಲಿರುಗಳು ಶ್ರಮಿಸುತ್ತಿದ್ದಾರೆ. ಬಿಜೆಪಿಯವರು ಟೀಕೆ ಮಾಡಿಕೊಂಡು ತಿರುಗುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಏನು ಕೊಡುಗೆ: ರಾಜ್ಯದಿಂದ ಆಯ್ಕೆಯಾಗಿ ಕೇಂದ್ರದಲ್ಲಿ ಸಚಿವರಾಗಿರುವವರು ಕೊಡಗಿಗೆ ನೀಡಿದ ಕೊಡುಗೆ ಏನು? ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಏಳುಕೋಟಿ ಬಿಡುಗಡೆ ಮಾಡಿದ್ದಾರೆ. ಪರಿಹಾರದ ವಿಷಯದಲ್ಲಿ ಯಾರೊಬ್ಬರು ರಾಜಕೀಯ ಮಾಡಬಾರದು. ನೊಂದವರಿಗೆ ಸ್ಪಂದಿಸಬೇಕು. ಕೇಂದ್ರದ ಮಂತ್ರಿಗಳು ಪ್ರಧಾನಿಮೇಲೆ ಒತ್ತಡ ತಂದು ಹೆಚ್ಚಿನ ನೆರವು ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

ರೈತರ ಸಾಲಮನ್ನಾದ ವಿಷಯ ಶ್ರೀರಾಮುಲುಗೆ ಏನು ತಿಳಿದಿದೆ? ಮಾಜಿ ಪ್ರಧಾನಿ ದಿ.ಚಂದ್ರಶೇಖರ್‌ ಅವರನ್ನು ನೆನೆಯಬೇಕು. ದೇವೇಗೌಡರು ಮೀಸಲು ಕೊಡಿಸದಿದ್ದರೆ ಅವರೆಲ್ಲಿ ಶಾಸಕರಾಗುತ್ತಿದ್ದರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯದ 30 ಜಿಲ್ಲೆಯೂ ಒಂದೇ ಅಭಿವೃದ್ಧಿ, ಪರಿಹಾರದ ವಿಷಯದಲ್ಲಿ ತಾರತಮ್ಯ ಮಾಡಿಲ್ಲ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ 39 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದಾರೆ. ಹಾಸನ ಜಿಲ್ಲೆಯ 501 ಕೋಟಿ ಮನ್ನಾ ಆಗಿದೆ. ಬೆಳಗಾವಿ, ಬಾಗಲಕೋಟೆ, ಬೀದರ್‌ ಜಿಲ್ಲೆಯ ಹೆಚ್ಚಿನ ರೈತರ ಸಾಲಮನ್ನಾ ಆಗಿದೆ. ಆರೋಪ ಮಾಡುವವರು ಅಂಕಿ, ಅಂಶ ತಿಳಿದು ಮಾತನಾಡಲಿ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.

ರಾಜ್ಯದ 108 ಶಾಲೆ, ಕಾಲೇಜಿಗೆ ಕಟ್ಟಡವಿರಲಿಲ್ಲ. 600 ಕೋಟಿ ರೂ, 550 ಕೋಟಿ ವೆಚ್ಚದಲ್ಲಿ ಪ್ರಾಥಮಿಕ, ಮಾಧ್ಯಮಿಕ, ಪಿಯುಕಾಲೇಜು ಅಭಿವೃದ್ಧಿ, 5,500 ಶಿಕ್ಷಕರ ನೇಮಕಾತಿ ಹೀಗೆ ಹತ್ತು ಹಲವು ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಇನ್ನಷ್ಟು ಕೆಲಸ ಮಾಡಲು ಕನಿಷ್ಠ ಆರು ತಿಂಗಳು ಕಾಲಾವಕಾಶ ನೀಡಬೇಕು ಎಂದರು.

ನಗರ-ಪುರಸಭೆ ಚುನಾವಣೆಯಲ್ಲಿ ಜಾತ್ಯಾತೀತವಾಗಿ ಜೆಡಿಎಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಕಾಂಗ್ರೆಸ್‌ ಮತ್ತು ಬಿಜೆಪಿ ಎರಡು ಸರಕಾರವನ್ನು ಜನತೆ ನೋಡಿದ್ದಾರೆ. ನಮಗೂ ಅವಕಾಶ ನೀಡುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ