ಆ್ಯಪ್ನಗರ

ಕೆಶಿಪ್‌ ಕಚೇರಿ ಸ್ಥಳಾಂತರ ಸಮರ್ಥಿಸಿಕೊಂಡು ಸಚಿವ ರೇವಣ್ಣ

ವಿಶ್ವಬ್ಯಾಂಕ್‌ ಸಲಹೆ ಮೇರೆಗೆ ಕೆಶಿಪ್‌ ಸ್ಥಳಾಂತರ *ಲೋಕೋಪಯೋಗಿ ಇಲಾಖೆ ಸಚಿವ ಎಚ್‌ಡಿ...

Vijaya Karnataka 11 Aug 2018, 5:00 am
ಹಾಸನ: ವಿಶ್ವ ಬ್ಯಾಂಕ್‌ ನಿಯಂತ್ರಣದಲ್ಲಿರುವ ಕೆಶಿಪ್‌ ಕಚೇರಿಯ ಮೇಲಧಿಕಾರಿಗಳು ಬೆಳಗಾವಿಯಲ್ಲಿ ಕಚೇರಿಗಳ ಅಗತ್ಯವಿಲ್ಲ ಎಂದು ಇಲಾಖೆಗೆ ತಿಳಿಸಿದ ಬಳಿಕವೇ ಕಚೇರಿಯನ್ನು ಹಾಸನಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.
Vijaya Karnataka Web hassan k sip office shifting minister hd revanna justification
ಕೆಶಿಪ್‌ ಕಚೇರಿ ಸ್ಥಳಾಂತರ ಸಮರ್ಥಿಸಿಕೊಂಡು ಸಚಿವ ರೇವಣ್ಣ


ಗೋಕಾಕ್‌ ಹಾಗೂ ಧಾರವಾಡದಲ್ಲಿ ಉಪವಿಭಾಗಗಳು ಕಾರ್ಯನಿರ್ವಹಿಸಲಿದ್ದು ಯಾವುದೇ ವಿಚಾರದ ಕುರಿತು ಮಾತನಾಡುವಾಗ ಪೂರ್ವಾಪರ ತಿಳಿದಿರಬೇಕು. ಬೆಳಗಾವಿ ಜಿಲ್ಲೆಯಲ್ಲಿ 618 ಕೋಟಿ ರೂ. ವೆಚ್ಚದ ಷಟ್ಪಥ ರಸ್ತೆ ನಿರ್ಮಾಣ ಸಂದರ್ಭದಲ್ಲಿ ಕಚೇರಿ ಅಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಇದೀಗ ಅಲ್ಲಿ ಕೆಲಸ ಮುಗಿದಿದ್ದು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗಿದೆ. ವಿಶ್ವ ಬ್ಯಾಂಕ್‌ ಯೋಜನಾ ನಿರ್ದೇಶಕರು 2018ರ ಜೂನ್‌ 23ಕ್ಕೆ ಸರಕಾರಕ್ಕೆ ಪತ್ರ ಬರೆದಿದ್ದು ಅದರ ಆಧಾರದ ಮೇಲೆ ನಾವು ಜುಲೈ 7ಕ್ಕೆ ಕಚೇರಿ ಸ್ಥಳಾಂತರಿಸಿ ಆದೇಶ ಹೊರಡಿಸಿದ್ದೇವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬೆಳಗಾವಿಯಿಂದ ಹಾಸನಕ್ಕೆ ಬರಲಾಗದ ನೌಕರರು ಈ ರೀತಿ ಮಾಧ್ಯಮದವರಿಗೆ ಸರಿಯಾದ ಮಾಹಿತಿ ನೀಡದೆ ತಮ್ಮ ಮೇಲೆ ಆರೋಪಿ ಬರುವಂತೆ ಮಾಡಿದ್ದಾರೆ. ಇದಕ್ಕೆಲ್ಲ ಹೆದರುವ ಪ್ರಶ್ನೆಯೇ ಇಲ್ಲ. ಕಚೇರಿಗಳ ಸ್ಥಳಾಂತರ ಬೇಡವಾದರೆ ಬಿಡಲಿ. ತಾನು ಬೇರೆ ವ್ಯವಸ್ಥೆ ಮಾಡಿಕೊಳ್ಳುತ್ತೇನೆ. ಜಿಲ್ಲೆಯ ಶಿರಾಡಿಘಾಟ್‌ ರಸ್ತೆ ಕಾಮಗಾರಿ ಮುಗಿದ ಬಳಿಕ ಸಕಲೇಶಪುರದಲ್ಲಿದ್ದ ಕಚೇರಿಯನ್ನು ಬೇಲೂರಿಗೆ ಸ್ಥಳಾಂತರಿಸಲಾಗಿದೆ. ಬೇಲೂರು-ಚಿಕ್ಕಮಗಳೂರಿನ 175 ಕೋಟಿ ರೂ. ರಸ್ತೆ ಕೆಲಸ ನಡೆಯುತ್ತಿದ್ದು ಸಕಲೇಶಪುರದಲ್ಲಿದ್ದ ಸಿಬ್ಬಂದಿ ಅಲ್ಲಿ ಕೆಲಸ ಮಾಡುತ್ತಾರೆ. ಜಿಲ್ಲೆಯ ವಿವಿಧೆಡೆ 685 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಯಲಿದ್ದು ಅದರ ನಿರ್ವಹಣೆಗಾಗಿ ಕೆಶಿಫ್‌ ಸಿಬ್ಬಂದಿ ಹಾಸನದಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಬೇಲೂರು - ಚಿಕ್ಕಮಗಳೂರು 175 ಕೋಟಿ ರೂ., ಬಾಣಾವರ - ಹಿರಿಯೂರು 125 ಕೋಟಿ ರೂ., ಎಡೆಗೋಡನಹಳ್ಳಿ - ಹಾಸನ ರಾಷ್ಟ್ರೀಯ ಹೆದ್ದಾರಿ 373 ಕಾಮಗಾರಿ 325 ಕೋಟಿ ರೂ. ಹೀಗೆ ಹಲವು ಕೆಲಸಗಳು ನಡೆಯಲಿವೆ. ಲೋಕೋಪಯೋಗಿ ಇಲಾಖೆಯ 24 ಸಾವಿರ ಕೋಟಿ ರೂ.ವೆಚ್ಚದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಾಕಿ ಇದೆ. ಇದರಲ್ಲಿ ಉತ್ತರ ಕರ್ನಾಟಕ ಭಾಗದ ರಸ್ತೆಗಳು ಸೇರಿವೆ. ಐದು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕಾಮಗಾರಿಗೆ ಮರುಜೀವ ನೀಡಲಾಗಿದೆ. ಅಭಿವೃದ್ಧಿ ಸಹಿಸದ ಬಿಜೆಪಿಯವರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಕಾಲವೇ ಉತ್ತರ ನೀಡಲಿದೆ ಎಂದು ಹೇಳಿದರು.

ಬಿಎಸ್‌ವೈಗೂ ಗಿಫ್ಟ್‌ ಕೊಡುತ್ತೇವೆ: ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್‌ ಪಕ್ಷದವರು ಜೆಡಿಎಸ್‌ ಬಿಜೆಪಿಯ ಬಿ ಟೀಂ ಎಂದು ಕರೆಯದಿದ್ದರೆ ಬಿಜೆಪಿಗೆ ಇನ್ನು 30 ಸ್ಥಾನ ಕಡಿಮೆ ಬರುತ್ತಿದ್ದವು. ಮೊದಲು ಅದನ್ನು ಯಡಿಯೂರಪ್ಪ ಅರ್ಥ ಮಾಡಿಕೊಳ್ಳಬೇಕು. ಮೈತ್ರಿ ಸರಕಾರಕ್ಕೆ ಯಾವುದೇ ಭಯವಿಲ್ಲ, ಸುಸೂತ್ರವಾಗಿ ಆಡಳಿತ ನಡೆಸುತ್ತೇವೆ. ಬಿಜೆಪಿಯಿಂದ ಜೆಡಿಎಸ್‌ ಸೇರಲು 20 ಶಾಸಕರು ತಯಾರಾಗಿದ್ದಾರೆ. ಆದರೆ ನಾವೇ ಬೇಡ ಎಂದಿದ್ದೇವೆ. ಬಿ.ಎಸ್‌.ಯಡಿಯೂರಪ್ಪ ಚೆನ್ನಾಗಿರಬೇಕು. ಶಾಸಕರು ಈಗಲೇ ಬಂದು ಬಿಟ್ಟರೆ ಇಳಿವಯಸ್ಸಿನಲ್ಲಿರುವ ಅವರ ಆರೋಗ್ಯ ಸ್ಥಿತಿ ಹದಗೆಡುತ್ತದೆ. ಆದ್ದರಿಂದಲೇ ನಾವು ಬಿಜೆಪಿ ಶಾಸಕರಿಗೆ ಅಲ್ಲೇ ಇರಲು ಹೇಳಿದ್ದೇವೆ. ಸಿಎಂ ಕುಮಾರಸ್ವಾಮಿ ಸ್ವಾತಂತ್ರ್ಯ ದಿನಾಚರಣೆ ಅಥವಾ ಗಣೇಶ ಚತುರ್ಥಿಗೆ ರಾಜ್ಯದ ರೈತರಿಗೆ ವಿಶೇಷ ಗಿಫ್ಟ್‌ ಘೋಷಿಸಲಿದ್ದಾರೆ. ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪನವರಿಗೂ ವಿಶೇಷ ಗಿಫ್ಟ್‌ ಕೊಡುತ್ತೇವೆ. ಅಲ್ಲಿವರೆಗೆ ತಾಳ್ಮೆ ವಹಿಸಬೇಕು ಎಂದು ಹೇಳಿದರು.

ಇನ್ನು ಸಮ್ಮಿಶ್ರ ಸರಕಾರ ಕಾರ‍್ಯವೈಖರಿ ಟೀಕಿಸಿರುವ ಬಿಜೆಪಿ ನಾಯಕರಾದ ಜಗದೀಶ್‌ ಶೆಟ್ಟರ್‌ ಹಾಗೂ ಸಿ.ಟಿ.ರವಿ ಅವರ ವಿರುದ್ಧ ಕಿಡಿಕಾರಿದ ಸಚಿವರು ಜಗದೀಶ್‌ ಶೆಟ್ಟರ್‌ ಅವರಿಗೆ ಅಭಿವೃದ್ಧಿ ಬಗ್ಗೆ ಕಾಳಜಿ ಇದ್ದಿದ್ದರೆ ಹುಬ್ಬಳ್ಳಿ ನಗರದಲ್ಲಿ ರಸ್ತೆಗಳ ದುರಸ್ತಿಗೆ ತಾನು ಬರಬೇಕಿರಲಿಲ್ಲ. ನನೆಗುದಿಗೆ ಬಿದ್ದಿದ್ದ ಹುಬ್ಬಳ್ಳಿ ನಗರ ರಸ್ತೆ ಕಾಮಗಾರಿ ಸಂಬಂಧ ಪ್ರಗತಿ ಪರಿಶೀಲನಾ ಸಭೆ ನಡೆಸಿ ಬಾಕಿ ಉಳಿದಿದ್ದ 33 ಕೋಟಿ ರೂ.ನಲ್ಲಿ 18 ಕೋಟಿ ರೂ.ಗಳನ್ನು ತಕ್ಷ ಣವೇ ಬಿಡುಗಡೆ ಮಾಡಿಸಿ ಕೆಲಸ ಪೂರ್ಣಗೊಳಿಸಿದೆ. ಧಾರವಾಡ ನಗರದಲ್ಲೂ ರಸ್ತೆ ಕಾಮಗಾರಿ ಶೀಘ್ರ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.

ಇನ್ನು ಬೇರೆ ಪಕ್ಷ ದವರನ್ನು ಟೀಕಿಸುವಲ್ಲೇ ನಿರತರಾಗಿರುವ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಕ್ಷೇತ್ರದ ಜನರ ಸಮಸ್ಯೆಗೆ ಧ್ವನಿಯಾಗಲಿ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಸಂಕಷ್ಟಕ್ಕೆ ಸಿಲುಕಿರುವ ಕಾಫಿ ಬೆಳೆಗಾರರಿಗೆ ಪರಿಹಾರ ದೊರಕಿಸಿಕೊಡಲಿ ಎಂದು ಕಿಡಿ ಕಾರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ