ಆ್ಯಪ್ನಗರ

ವಿದ್ಯಾರ್ಥಿಗಳ ಪ್ರಬುದ್ಧತೆಗೆ ಸ್ಪೀಕ್‌ ಫಾರ್‌ ಇಂಡಿಯಾ ಸಾಕ್ಷಿ - ಪ್ರಜ್ಞಾವಂತಿಕೆ ಅನಾವರಣಗೊಳಿಸಿದ ಸ್ಪರ್ಧೆ

ವಿದ್ಯಾರ್ಥಿಗಳ ಪ್ರಬುದ್ಧತೆಗೆ ಸ್ಪೀಕ್‌ ಫಾರ್‌ ಇಂಡಿಯಾ ಸಾಕ್ಷಿ - ಪ್ರಜ್ಞಾವಂತಿಕೆ ಅನಾವರಣಗೊಳಿಸಿದ ಸ್ಪರ್ಧೆ ವಿಕ ಸುದ್ದಿಲೋಕ ಹಾಸನ ಶಿಕ್ಷಣದಿಂದ ಮಾತ್ರ ...

Vijaya Karnataka 25 Sep 2018, 5:00 am
ಹಾಸನ: ಶಿಕ್ಷಣದಿಂದ ಮಾತ್ರ ಬುದ್ಧಿವಂತಿಕೆಯೇ? ಸಂಪತ್ತಿಗಿಂತ ಸ್ವಾತಂತ್ರ್ಯ ಮುಖ್ಯವೇ? ಆನ್‌ಲೈಸ್‌ ವ್ಯಾಪಾರ ಅಪಾಯಕಾರಿಯೇ? ಸಮಾಜಕ್ಕೆ ಮಹಿಳೆ ಎಷ್ಟು ಮುಖ್ಯ....?
Vijaya Karnataka Web hassan vijayakarnataka times of india fedaral bank speak for india
ವಿದ್ಯಾರ್ಥಿಗಳ ಪ್ರಬುದ್ಧತೆಗೆ ಸ್ಪೀಕ್‌ ಫಾರ್‌ ಇಂಡಿಯಾ ಸಾಕ್ಷಿ - ಪ್ರಜ್ಞಾವಂತಿಕೆ ಅನಾವರಣಗೊಳಿಸಿದ ಸ್ಪರ್ಧೆ


ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಪರ-ವಿರೋಧ ಚರ್ಚೆಯನ್ನು ನಗರದ ನಾನಾ ಕಾಲೇಜಿನ ವಿದ್ಯಾರ್ಥಿಗಳು ಮಾಡುವ ಮೂಲಕ ತಮ್ಮ ಪ್ರಬುದ್ಧತೆ ಮೆರೆದರು.

ಇದಕ್ಕೆ ವೇದಿಕೆ ಕಲ್ಪಿಸಿದ್ದು ವಿಜಯ ಕರ್ನಾಟಕ, ಟೈಮ್ಸ್‌ ಆಫ್‌ ಇಂಡಿಯಾ ಹಾಗೂ ಫೆಡರಲ್‌ ಬ್ಯಾಂಕ್‌ ಸಹಭಾಗಿತ್ವದ ಸ್ಪೀಕ್‌ ಫಾರ್‌ ಇಂಡಿಯಾ ಕರ್ನಾಟಕ ವಿಭಾಗದ ನಾಲ್ಕನೆ ಆವೃತ್ತಿಯ ಕಾರ‍್ಯಕ್ರಮ.

ನಗರದ ಕೇಂದ್ರೀಯ ವಾಣಿಜ್ಯ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಚರ್ಚಾಸ್ಪರ್ಧೆಯಲ್ಲಿ ನಗರದ ನಾನಾ ಕಾಲೇಜಿನ 70 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶಿಕ್ಷಣದಿಂದ ಮಾತ್ರ ಬುದ್ಧಿವಂತರಾಗಲು ಸಾಧ್ಯವೇ ಎಂಬ ವಿಷಯವಾಗಿ ಮಾತನಾಡಿದ ವಿದ್ಯಾರ್ಥಿಗಳು, ''ಹಿಂದೆ ಗುರುಕುಲ ಶಿಕ್ಷಣ ಪದ್ಧತಿ ಇತ್ತು. ಅಲ್ಲಿ ಪಾಠದ ಜತೆಗೆ ನಾನಾ ವಿದ್ಯೆಗಳನ್ನು ಹೇಳಿಕೊಡಲಾಗುತ್ತಿತ್ತು. ಆದರೆ, ಪ್ರಸ್ತುತ ಶಿಕ್ಷಣ ಅಂಕಗಳಿಕೆಗೆ ಮಾತ್ರ ಸೀಮಿತವಾಗಿದೆ. ಎಂಎಲ್‌ಎ, ಎಂಪಿ ಆಗುವವರಿಗೆ ಶಿಕ್ಷಣ ಕಡ್ಡಾಯವಲ್ಲ. ಶಿಕ್ಷಣ ಇಲ್ಲದವರು ಬುದ್ಧಿವಂತರಾಗಿ ಆಡಳಿತ ನಡೆಸಿದ ಉದಾಹರಣೆ ಕಣ್ಣಮುಂದಿರುವಾಗ ಶಿಕ್ಷಣದಿಂದ ಮಾತ್ರ ಬುದ್ಧಿವಂತರಾಗಲು, ಪರಿಪೂರ್ಣತೆ ಹೊಂದಲು ಸಾಧ್ಯವಿಲ್ಲ ಎಂಬ ವಾದವನ್ನು ಮಂಡಿಸಿದರು. ಶಿಕ್ಷಣ ಅಂಧಕಾರದಿಂದ ಜ್ಞಾನದ ಹಾದಿಗೆ ತರಲು ಸಾಧ್ಯ'' ಎಂದರು.

ಮಹಿಳೆ ಸಮಾಜಕ್ಕೆ ಎಷ್ಟು ಮುಖ್ಯ ಎಂಬ ವಿಷಯವಾಗಿ ಮಾತನಾಡಿದ ವಿದ್ಯಾರ್ಥಿನಿಯರು, ''ತಂದೆಗಿಂತ ಹೆಚ್ಚಿನ ಪಾತ್ರವನ್ನು ತಾಯಿ ವಹಿಸುತ್ತಾಳೆ. ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮಿಬಾಯಿಯಂತಹ ವೀರನಾರಿಯರು ದೇಶಕ್ಕಾಗಿ ಹೋರಾಡಿದ್ದಾರೆ. ಪ್ರಸ್ತುತ ಎಲ್ಲ ಕ್ಷೇತ್ರದಲ್ಲಿ ಮಹಿಳೆ ಇರುವಾಗ ಆಕೆಯ ಪಾತ್ರ ಅಮೂಲ್ಯವಾದದ್ದು'' ಎಂದು ಮಹಿಳಾಪರ ವಾದ ಮಂಡಿಸಿದರು.

ಸಂಪತ್ತಿಗಿಂತ ಸ್ವಾತಂತ್ರ್ಯ ಮುಖ್ಯವೇ ಎಂಬ ವಿಷಯ ಇತಿಹಾಸದ ಸಂಗತಿಗಳತ್ತ ಹೊರಳಿತು. ''ಬ್ರಿಟಿಷರು ವ್ಯಾಪಾರಕ್ಕೆಂದು ಭಾರತಕ್ಕೆ ಬಂದರು. ಇಲ್ಲಿನ ಸಂಪತ್ತನ್ನು ಲೂಟಿ ಹೊಡೆದರು. ಸ್ವಾತಂತ್ರ್ಯ ಹರಣ ಮಾಡಿದರು. ಆ ಸಂದರ್ಭ ಸಂಪತ್ತಿಗಿಂತ ಸ್ವಾತಂತ್ರ್ಯ ಮುಖ್ಯ ಎಂದು ನಿರ್ಧರಿಸಿದ ಮಹಾತ್ಮ ಗಾಂಧೀಜಿಯಂತಹ ಮಹನೀಯರು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದರೆ ಹೊರತು ಕೇವಲ ಸಂಪತ್ತಿಗಾಗಿ ಅಲ್ಲ'' ಎಂದರು.

ಆನ್‌ಲೈನ್‌ ವ್ಯಾಪಾರ ಅನುಕೂಲವೇ? ಅನನುಕೂಲವೇ ಎಂಬ ವಿಷಯವಾಗಿ ಮಾತನಾಡಿದ ವಿದ್ಯಾರ್ಥಿಗಳು, ''ನಾವು ಒಂದು ವಸ್ತು ಖರೀದಿಗೆಂದು ಮಾರುಕಟ್ಟೆಗೆ ತೆರಳುವಾಗ ಆಟೋದಲ್ಲಿ ತೆರಳಿದರೆ ಆಟೋದವನ ಜೀವನ ನಿರ್ವಹಣೆಯಾಗುತ್ತದೆ. ವಸ್ತು ಮಾರಾಟಗಾರನಿಗೂ ಅನುಕೂಲ. ರಸ್ತೆಬದಿಯಿಂದ ಹಿಡಿದು ಶಾಪಿಂಗ್‌ಮಾಲ್‌ವರೆಗೆ ವ್ಯಾಪಾರಿಗಳು ವ್ಯಾಪಾರದಿಂದ ಬದುಕು ಕಟ್ಟಿಕೊಂಡಿದ್ದಾರೆ. ಕೋಟ್ಯಂತರ ರೂ. ಬಂಡವಾಳ ಹೂಡಿದ್ದಾರೆ. ಇದರಿಂದ ಉದ್ಯೋಗ ಸೃಷ್ಟಿಯಾಗಿದೆ. ಪ್ರಸ್ತುತ ಆನ್‌ಲೈನ್‌ ವ್ಯಾಪಾರದಿಂದ ಶೇ. 20ರಷ್ಟು ಜಿಡಿಪಿ ಕುಸಿತವಾಗಿದೆ. ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುವ ಜತೆಗೆ ನಿರುದ್ಯೋಗ ಸೃಷ್ಟಿಯಾಗುತ್ತಿದೆ'' ಎಂಬ ಸಂಗತಿ ಮೇಲೆ ಬೆಳಕು ಚೆಲ್ಲಿದರು.

ಕೇಂದ್ರ ಮತ್ತು ರಾಜ್ಯಕ್ಕೆ ಏಕಕಾಲಕ್ಕೆ ಚುನಾವಣೆ ಮಾಡಬೇಕೆ, ಬೇಡವೇ ಎಂಬ ವಿಷಯವಾಗಿ ಮಾತನಾಡಿದ ವಿದ್ಯಾರ್ಥಿಗಳು, ''ಪ್ರತ್ಯೇಕವಾಗಿ ಚುನಾವಣೆ ಮಾಡುವುದರಿಂದ ಆಗುವ ಆರ್ಥಿಕ ಹೊರೆ, ಸಮಸ್ಯೆಗಳು, ಅಕ್ರಮ, ಮಾನವ ಸಂಪನ್ಮೂಲ ವ್ಯರ್ಥ ಮುಂತಾದ ಸಂಗತಿಗಳ ಬಗ್ಗೆ ಬೆಳಕು ಚೆಲ್ಲಿದರು.

ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಜಿಲ್ಲೆ, ವಲಯ, ಸೆಮಿಫೈನಲ್‌, ಫೈನಲ್‌ ಹಂತದಲ್ಲಿ ಸ್ಪರ್ಧೆ ನಡೆದು ರಾಜ್ಯದ ಎಂಟು ಸ್ಪರ್ಧಾಳುಗಳು ಫೈನಲ್‌ಗೆ ಆಯ್ಕೆಯಾಗಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ