ಆ್ಯಪ್ನಗರ

ನಾಲ್ವರು ಗುತ್ತಿಗೆದಾರರ ಮೇಲೆ ಐಟಿ ದಾಳಿ

ತಾಲೂಕಿನಲ್ಲಿ ನಾಲ್ಕು ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ಬೆಳಗಿನಿಂದಲೇ ತಮ್ಮ ದಾಳಿ ಆರಂಭಿಸಿದ್ದು ನಾಗರೀಕರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

Vijaya Karnataka 29 Mar 2019, 5:00 am
ಚನ್ನರಾಯಪಟ್ಟಣ: ತಾಲೂಕಿನಲ್ಲಿ ನಾಲ್ಕು ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ಬೆಳಗಿನಿಂದಲೇ ತಮ್ಮ ದಾಳಿ ಆರಂಭಿಸಿದ್ದು ನಾಗರೀಕರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
Vijaya Karnataka Web HSN-HSN28CRP5


ಪ್ರಥಮ ದರ್ಜೆ ಗುತ್ತಿಗೆದಾರರಾಗಿರುವ ಪಟ್ಟಣದ ತಾಲೂಕು ಕಚೇರಿ ರಸ್ತೆಯಲ್ಲಿರುವ ಅಶ್ವತ್ಥ ಗೌಡ, ನಾಗಸಮುದ್ರ ರಸ್ತೆಯಲ್ಲಿರುವ ದಿ.ರಾಯಿಗೌಡರ ಪುತ್ರ ತಿಮ್ಮೇಗೌಡ, ನಾರಾಯಣರೆಡ್ಡಿ ಮತ್ತು ತಾಲೂಕಿನ ಶ್ರವಣಬೆಳಗೊಳದ ಅಬ್ದುಲ್‌ ಹಫೀಜ್‌ ಅವರ ಮನೆಗಳಿಗೆ ಬೆಳಗ್ಗೆ 5.30 ರಿಂದಲೇ ದರ್ಶನ ನೀಡಿದ ಆದಾಯ ತೆರಿಗೆ ಅಧಿಕಾರಿಗಳು, ಇಡೀ ದಿನ ಎಲ್ಲ ಮನೆಗಳಲ್ಲಿ ತಮಗೆ ಬೇಕಾದ ದಾಖಲೆಗಳನ್ನು ಜಾಲಾಡಿದರು.

ಎಲ್ಲ ಮನೆಗಳಿಗೂ ಕಾರಿನಲ್ಲಿ ಆಗಮಿಸಿದ ಅಧಿಕಾರಿಗಳು, ಒಂದು ಕಾರಿನಲ್ಲಿ ನಾಲ್ವರು ಅಧಿಕಾರಿಗಳು ಮತ್ತು ಇಬ್ಬರು ಸಿಆರ್‌ಪಿಎಫ್‌ ಯೋಧರನ್ನು ತಮ್ಮೊಂದಿಗೆ ಕರೆತಂದಿದ್ದರು. ಈ ದಾಳಿಗೆ ಸ್ಥಳೀಯ ಪೊಲೀಸರನ್ನಾಗಲೀ, ಇಲ್ಲವೇ ಯಾವುದೇ ಇಲಾಖೆಯ ಅಧಿಕಾರಿಗಳ ಸಹಾಯವನ್ನಾಗಲೀ ಪಡೆಯದೆ ತಮ್ಮ ಕಾರಾರ‍ಯಚರಣೆಯನ್ನು ಸದ್ದಿಲ್ಲದೆ ಆರಂಭಿಸಿದರು.

ಅಧಿಕಾರಿಗಳು ಮನೆಗಳ ಒಳಗೆ ಹೋಗುವ ಮುನ್ನ ಅಕ್ಕಪಕ್ಕದಲ್ಲಿ ನೋಡಿ ತಮ್ಮನ್ನು ಯಾರಾದರೂ ಹಿಂಬಾಲಿಸುತ್ತಿದ್ದಾರೆಯೇ ಎಂದು ಅವಲೋಕಿಸಿ ಅದೇ ಬಡಾವಣೆಯ ಮತ್ತೊಬ್ಬರಿಂದ ಬಾಗಿಲು ತಟ್ಟಿಸಿ ಅವರನ್ನು ಎಬ್ಬಿಸುವ ಪ್ರಯತ್ನವನ್ನೂ ಮಾಡಿದರು. ನಂತರ ತಮ್ಮ ಪ್ರಯತ್ನ ಮುಂದುವರಿಸಿದರು. ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಮನೆಯಲ್ಲಿದ್ದ ಎಲ್ಲರ ಮೊಬೈಲ್‌ಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಮನೆಯಲ್ಲಿರುವ ಯಾರೊಬ್ಬರೂ ಹೊರಗೆ ಹೋಗದಂತೆ ನಿರ್ಬಂಧಿಸಿದರು.

ಬೆಳಗಿನ ನಿದ್ದೆಯ ಮಂಪರಿನಲ್ಲಿದ್ದವರಿಗೆ ನಮ್ಮ ಮನೆಯಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯುವಷ್ಟರಲ್ಲಿಯೇ ಅಧಿಕಾರಿಗಳು ತಮ್ಮ ಕಾರಾರ‍ಯಚರಣೆಯನ್ನು ಆರಂಭಿಸಿದ್ದರು. ಮನೆಗೆ ಬಂದ ಕೆಲಸದವರ ಬಳಿಯಿದ್ದ ಮೊಬೈಲ್‌ಗಳನ್ನೂ ತೆಗೆದುಕೊಂಡು ಸ್ವಿಚ್‌ಆಫ್‌ ಮಾಡಿ ತಮ್ಮ ಕಾರಾರ‍ಯಚರಣೆಯ ವಿಷಯ ಬಹಿರಂಗವಾದಂತೆ ಎಚ್ಚರವಹಿಸಿದರು. ಶಾಲೆಗೆ ಹೋಗುವ ಮಕ್ಕಳಿದ್ದರೆ ಮಾತ್ರ ಅವರನ್ನು ಕರೆದುಕೊಂಡು ಹೋಗಿ ಕರೆದುಕೊಂಡು ಬರಲು ಅವಕಾಶ ನೀಡಲಾಗಿತ್ತು.

ಕಾರಾರ‍ಯಚರಣೆ ಆರಂಭಗೊಂಡ ನಂತರ ಮನೆಯ ಒಳಗೆ ಏನೇನು ನಡೆಯುತ್ತಿದೆ ಎಂದು ತಿಳಿಯುವ ಕುತೂಹಲ ವಿಷಯ ತಿಳಿದು ಹೊರಗೆ ಕಾಯುತ್ತಿದ್ದ ನಾಗರೀಕರದ್ದಾಗಿತ್ತು. ಮನೆಯ ಒಳಗೆ ನಡೆಯುವ ಎಲ್ಲ ವಿದ್ಯಮಾನಗಳನ್ನೂ ತಮ್ಮದೇ ಸಿಬ್ಬಂದಿಯ ಮೂಲಕ ವೀಡಿಯೋ ರೆಕಾರ್ಡ್‌ ಮಾಡಿಕೊಳ್ಳುವ ಮೂಲಕ ತಪಾಸಣೆ ನಡೆಸಲಾಯಿತು. ಬೆಳಗಿನ ತಿಂಡಿಯನ್ನು ಹೊಟೆಲ್‌ನಿಂದ ತರಿಸಿಕೊಂಡ ಅಧಿಕಾರಿಗಳು ಮಧ್ಯಾಹ್ನದ ಊಟಕ್ಕೆ ಮನೆಯವರಿಗೆ ಬಿಡುವುಕೊಟ್ಟು ಒಬ್ಬರು ಸಿಆರ್‌ಪಿಎಫ್‌ ಯೋಧರನ್ನು ಕಾವಲಿಗೆ ಬಿಟ್ಟು ಉಳಿದವರು ತಮ್ಮದೇ ಕಾರಿನಲ್ಲಿ ಹೋಗಿ ಊಟ ಮಾಡಿಕೊಂಡು ಬಂದು ಸಂಜೆ 6ರ ತನಕವೂ ಪರಿಶೀಲನೆ ಮುಂದುವರಿಸಿದ್ದರು.

ಪ್ರತಿಭಟನೆ
ಈ ನಡುವೆ ಪಟ್ಟಣದಲ್ಲಿ ಆದಾಯ ತೆರಿಗೆ ಅಧಿಕಾರಿಗಳ ದಾಳಿಗೆ ಯಾವುದೇ ಪ್ರತಿರೋಧ ಯಾರಿಂದಲೂ ಬರಲಿಲ್ಲವಾದರೂ ಶ್ರವಣಬೆಳಗೊಳದಲ್ಲಿ ಮಾತ್ರ ಅಬ್ದುಲ್‌ಹಫೀಜ್‌ ಅವರ ಮನೆಯ ಎದುರು ರಸ್ತೆಯಲ್ಲೇ ಕುಳಿತ ಜೆಡಿಎಸ್‌ ಬೆಂಬಲಿಗರು ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಮಾಜಿ ಉಪಾಧ್ಯಕ್ಷ ಶಿವರಾಜ್‌ ನೇತೃತ್ವದಲ್ಲಿ ಧರಣಿ ನಡೆಸಿದರು.

ಇದೊಂದು ರಾಜಕೀಯ ಪ್ರೇರಿತ ಕೃತ್ಯವಾಗಿದ್ದು ಇದಕ್ಕೆ ಕೇಂದ್ರಸರಕಾರವೇ ಹೊಣೆ ಎಂದು ಟೀಕಿಸಿದರು.

ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರ ಮನೆಗಳನ್ನೇ ಗುರಿಯಾಗಿಟ್ಟುಕೊಂಡಿರುವುದು ಬಿಜೆಪಿಯವರ ಹತಾಶ ಭಾವನೆಯನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ