ಆ್ಯಪ್ನಗರ

ಹದಗೆಟ್ಟ ಸಿಗ್ನಲ್‌ ಲೈಟ್‌ ದುರಸ್ತಿಗೆ ವಾರದ ಗಡುವು

ನಗರದಲ್ಲಿ ಸಂಚಾರಿ ವ್ಯವಸ್ಥೆಗಳು ಹದಗೆಟ್ಟಿದ್ದು ಇನ್ನಷ್ಟು ಪರಿಣಾಮಕಾರಿಯಾಗಿ ಸುಧಾರಣಾ ಕ್ರಮ ಕೈಗೊಳ್ಳುವುದರ ಜತೆಗೆ ಸ್ಥಗಿತಗೊಂಡಿರುವ ಸಿಗ್ನಲ್‌ ದೀಪಗಳನ್ನು ಇನ್ನೊಂದು ವಾರದಲ್ಲಿ ಸರಿಪಡಿಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ ನೀಡಿದ್ದಾರೆ.

Vijaya Karnataka 12 Dec 2018, 5:00 am
ಹಾಸನ: ನಗರದಲ್ಲಿ ಸಂಚಾರಿ ವ್ಯವಸ್ಥೆಗಳು ಹದಗೆಟ್ಟಿದ್ದು ಇನ್ನಷ್ಟು ಪರಿಣಾಮಕಾರಿಯಾಗಿ ಸುಧಾರಣಾ ಕ್ರಮ ಕೈಗೊಳ್ಳುವುದರ ಜತೆಗೆ ಸ್ಥಗಿತಗೊಂಡಿರುವ ಸಿಗ್ನಲ್‌ ದೀಪಗಳನ್ನು ಇನ್ನೊಂದು ವಾರದಲ್ಲಿ ಸರಿಪಡಿಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ ನೀಡಿದ್ದಾರೆ.
Vijaya Karnataka Web HSN-HSN11P1 KSRTC


ಜಿಲ್ಲಾಧಿಕಾರಿ ಕಚೇರಿ ಸಂಭಾಗಣದಲ್ಲಿಂದು ನಡೆದ ರಸ್ತೆ ಸುರಕ್ಷ ತಾ ಸಭೆಯಲ್ಲಿ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ವಾಹನಗಳ ಪಾರ್ಕಿಂಗ್‌ ಮಾಡಲಾಗುತ್ತಿದ್ದು ಸುಗಮ ಸಂಚಾರಕ್ಕೆ ಅಡೆತಡೆಯಾಗುತ್ತಿದೆ. ಇನ್ನೊಂದು ವಾರದೊಳಗೆ ಇವುಗಳ ಬದಲಾವಣೆಯಾಗಬೇಕು ಎಂದು ನಿರ್ದೇಶನ ನೀಡಿದರು.

ತಣ್ಣಣ್ಣೀರುಹಳ್ಳ, ಸಂತೇಪೇಟೆ, ಡೈರಿ ವೃತ್ತಗಳಲ್ಲಿ ಅಳವಡಿಸಿರುವ ಸಿಗ್ನಲ್‌ ಲೈಟ್‌ಗಳು ಕಾರ್ಯನಿರ್ವಹಿಸುತ್ತಿಲ್ಲ ಈ ಬಗ್ಗೆ ಪೊಲೀಸ್‌ ಇಲಾಖೆ, ನಗರಸಭೆ ಮತ್ತು ಚೆಸ್ಕಾಂ ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ನಗರದಲ್ಲಿ ಈ ಹಿಂದೆ ಇದ್ದಂತೆ ಸಂಚಾರಿ ವಾರ್ಡನ್‌ಗಳನ್ನು ಸಮಪರ್ಕವಾಗಿ ಬಳಸಿಕೊಳ್ಳಿ, ಸ್ಕೌಡ್ಸ್‌, ಗೈಡ್ಸ್‌, ಎಸ್‌.ಸಿ.ಸಿ, ವಿದ್ಯಾರ್ಥಿಗಳನ್ನು ಬಳಸಿ ವಾಹನ ಓಡಾಟಗಳಲ್ಲಾಗುತ್ತಿರುವ ನಿಯಮ ಉಲ್ಲಂಘನೆ ನಿಯಂತ್ರಿಸಿ ಎಂದು ಸೂಚಿಸಿದರು.

ನಗರದ ಎನ್‌.ಆರ್‌. ವೃತ್ತ ಸೇರಿದಂತೆ ವಿವಿದೆಡೆ ಕೆ.ಎಸ್‌ಆರ್‌ಟಿಸಿ ಬಸ್‌ಗಳು ನಿಗಧಿತ ನಿಲ್ದಾಣದಲ್ಲಿ ನಿಲ್ಲದೆ ಅಡ್ಡಾದಿಡ್ಡಿಯಾಗಿ ಸಂಚಾರಿಸುತ್ತಿದ್ದು ,ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿಯವರಿಗೆ ತಿಳಿಸಿದರು.

ನಗರದ ರೈಲ್ವೆ ನಿಲ್ದಾಣದ ಬಳಿ ನಡೆಯುತ್ತಿರುವ ವಾರದ ಸಂತೆಯಿಂದ ವಾಹನ ಸಂಚಾರ ಸಮಸ್ಯೆ ಎದುರಾಗುತ್ತಿದೆ ಅದನ್ನು ಸಮೀಪದ ರೇಷ್ಮೇ ಇಲಾಖೆ ಕಚೇರಿ ಬಳಿ ಇರುವ ಖಾಲಿ ಜಾಗಕ್ಕೆ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿಯವರು ಪೊಲೀಸ್‌ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ಹಳೆ ಬಸ್‌ ನಿಲ್ದಾಣ ಬಳಿ ಇರುವ ಆಟೋ ನಿಲ್ದಾಣವನ್ನು ಈಗ ಇರುವ ಖಾಸಗಿ ಟ್ಯಾಕ್ಸಿ ನಿಲ್ದಾಣ ಬಳಿಗೆ ಸ್ಥಳಾಂತರಿಸಬೇಕು. ನೂತನ ಬಸ್‌ ನಿಲ್ದಾಣ ಬಳಿ ಖಾಸಗಿ ಟಾಕ್ಸಿ ನಿಲ್ದಾಣಕ್ಕೆಜಾಗ ನಿಗದಿಪಡಿಸಬೇಕು. ಈ ಬಗ್ಗೆ ಕೆ.ಎಸ್‌.ಆರ್‌.ಟಿ.ಸಿ ಹಾಗೂ ಪೊಲೀಸ್‌ ಇಲಾಖಾ ಅಧಿಕಾರಿಗಳು ಚರ್ಚಿಸಿ ನಿರ್ಧಾರ ಕೈಗೊಂಡು ವರದಿ ನೀಡುವಂತೆ ಹೇಳಿದರು.

ನಗರದ ಬಿ.ಎಂ ರಸ್ತೆ ವಿಸ್ತರಣೆಯಾಗುತ್ತಿದೆ, ಹೊಸದಾಗಿ ಕಟ್ಟಡಗಳ ನಿರ್ಮಾಣದ ವೇಳೆ ಎಲ್ಲರಿಗೂ ತಳ ಭಾಗದಲ್ಲಿ ಪಾರ್ಕಿಂಗ್‌ ವ್ಯವಸ್ಥೆಗೆ ಜಾಗ ಕಾಯ್ದಿರಿಸಲು ಸೂಚಿಸಬೇಕು ಹಾಗೂ ಹೊಸ ಹೊಟೇಲ್‌ ಆಸ್ಪತ್ರೆಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೆ ಪರವಾನಗಿ ನೀಡಬಾರದು ಎಂದು ನಗರಸಭೆ ಆಯುಕ್ತರಿಗೆ ತಿಳಿಸಿದರು.

ನಗರ ವ್ಯಾಪ್ತಿ ಅಥವಾ ಹೊರಭಾಗದಲ್ಲಿ ಟ್ರಕ್‌ ಟರ್ಮಿನಲ್‌ಗೆ ಜಾಗ ಗುರುತಿಸಿ ಕಾಯ್ದಿರಿಸಬೇಕು ಈ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳು ಹೂಡಾದಿಂದ ಈಗ ಗುರುತಿಸಿರುವ ಜಾಗ ಪರಿಶೀಲಿಸಿ ಮಾಲೀಕರೊಂದಿಗೆ ಮಾತನಾಡಿ, ಇನ್ನೊಂದುವಾರದೊಳಗೆ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಕೆ.ಎಸ್‌.ಆರ್‌.ಟಿ.ಸಿ. ಅಧಿಕಾರಿಗಳು ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಗ್ರಾಮೀಣ ಪ್ರದೇಶಗಳಿಂದ ಸಕಾಲದಲ್ಲಿ ಬಸ್‌ ಸೌಲಭ್ಯಗಳು ದೊರೆಯುತ್ತಿವೆಯೇ ಕುಂದು ಕೊರತೆಗಳೇನಾದರೂ ಇದೆಯೇ ಎಂಬ ಬಗ್ಗೆ ವಿದ್ಯಾರ್ಥಿಗಳಿಂದ ಅಭಿಪ್ರಾಯ ಸಂಗ್ರಹಿಸಿ ತಮಗೆ ವರದಿ ಸಲ್ಲಿಸಬೇಕು ಹಾಗೂ ಅವರ ದೂರುಗಳು ಸಲ್ಲಿಕೆಗೆ ಸಹಾಯವಾಣಿ ರೂಪದ ವ್ಯವಸ್ಥೆ ಕಲ್ಪಿಸಬೇಕು ಎಂದು ಡಿಸಿ ಸೂಚನೆ ನೀಡಿದರು.

ಇದೇ ರೀತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಿ ಸಮಸ್ಯೆ ಎದುರಾಗುತ್ತಿದ್ದು ಮಂಗಳೂರು ಕಡೆಯಿಂದ ಆಗಮಿಸುವ ಟ್ಯಾಂಕರ್‌ಗಳಿಗೆ ರಾತ್ರಿ 7 ಗಂಟೆಯ ನಂತರ ಸಂಚಾರ ನಿಷೇಧಿಸಲು ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.

ನಗರದಲ್ಲಿ ಕೆಲವು ಮಿನಿ ಬಸ್‌ಗಳ ಸಂಚಾರ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿಯವರು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಅಲ್ಲದೆ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಟವನ್ನು ಸಂಪೂರ್ಣ ನಿಯಂತ್ರಿಸುವಂತೆ ಪೊಲೀಸ್‌ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಉಪವಿಭಾಗಾಧಿಕಾರಿ ಡಾ.ಎಚ್‌. ಎಲ್‌ ನಾಗರಾಜ್‌, ನಗರಸಭೆ ಆಯುಕ್ತ ಬಿ.ಎ. ಪರಮೇಶ್‌, ಕೆ.ಎಸ್‌.ಆರ್‌.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ಯಶವಂತ್‌, ಪ್ರಾದೇಶಿಕ ಸಾರಿಗೆ ಅಧಿಕಾರಿ ಕುಲಕರ್ಣಿ, ಡಿ.ವೈ.ಎಸ್‌.ಪಿ, ಪುಟ್ಟಸ್ವಾಮಿ ಗೌಡ, ಪಿಡ್ಬ್ಲ್ಯುಡಿ ಕಾರ್ಯಪಾಲಕ ಅಭಿಯಂತ ಮಂಜುನಾಥ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ