ಆ್ಯಪ್ನಗರ

ಸ್ಥಳೀಯ ಸಂಸ್ಥೆ ಚುನಾವಣೆ: ಎಣಿಕೆಗೆ ಸಕಲ ಸಿದ್ಧತೆ, ಬಿಗಿ ಬಂದೋಬಸ್ತ್‌

ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತದಾನದ ಬಳಿಕ ಇದೀಗ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು, ಸೋಮವಾರ ನಡೆಯಲಿರುವ ಮತಎಣಿಕೆಗೆ ಸಕಲ ಸಿದ್ಧತೆ ನಡೆದಿದೆ.

Vijaya Karnataka 2 Sep 2018, 5:00 am
ಹಾಸನ: ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತದಾನದ ಬಳಿಕ ಇದೀಗ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು, ಸೋಮವಾರ ನಡೆಯಲಿರುವ ಮತಎಣಿಕೆಗೆ ಸಕಲ ಸಿದ್ಧತೆ ನಡೆದಿದೆ.
Vijaya Karnataka Web HSN-HSN1N1


ನಗರದ ಎಂ.ಜಿ. ರಸ್ತೆಯಲ್ಲಿರುವ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಟ್ರಾಂಗ್‌ ರೂಂ ನಲ್ಲಿ ಹಾಸನ ನಗರಸಭೆ ಚುನಾವಣೆಯ ಮತಯಂತ್ರಗಳನ್ನು ಭದ್ರವಾಗಿರಿಸಲಾಗಿದೆ. ಕಾಲೇಜಿನಲ್ಲಿ ಇರಿಸಲಾಗಿರುವ ಸ್ಟ್ರಾಂಗ್‌ ರೂಂ ಗೆ ಬಿಗಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಸೋಮವಾರ ಮತಎಣಿಕೆ ಕಾರ್ಯವು ಬೆಳಗ್ಗೆ ಪ್ರಾರಂಭವಾಗಲಿದೆ. ಬೆಳಗ್ಗೆ 8 ಕ್ಕೆ ಸ್ಟ್ರಾಂಗ್‌ ರೂಂ ತೆಗೆದು ಎಣಿಕೆ ಕಾರ್ಯ ಪ್ರಾರಂಭಿಸಲಾಗುತ್ತದೆ. ಎಣಿಕೆ ಕಾರ್ಯಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲಾ ರೀತಿಯ ಸಿದ್ಧತೆಯನ್ನು ನಡೆಸಲಾಗಿದೆ. ಹಾಸನ ನಗರಸಭೆಯ 35 ವಾರ್ಡ್‌ಗಳ ಮತ ಎಣಿಕೆಗೆ 5 ಕೊಠಡಿಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, 1ನೇ ಕೊಠಡಿಯಲ್ಲಿ 3 ಟೇಬಲ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಉಳಿದಂತೆ ಕೋಠಡಿ ಸಂಖ್ಯೆ 2, 3, 4 ಮತ್ತು 5 ರಲ್ಲಿ 2 ಟೇಬಲ್‌ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಎಣಿಕೆ ಕಾರ್ಯಕ್ಕೆ ಸುಮಾರು 60ರಿಂದ 70 ಮಂದಿಯನ್ನು ನಿಯೋಜಿಸಲಾಗಿದೆ.

ಶನಿವಾರ ಉಪ ವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌, ತಹಸೀಲ್ದಾರ್‌ ಶಿವಶಂಕರ್‌ ಸೇರಿದಂತೆ ಇತರೆ ಚುನಾವಣಾ ಅಧಿಕಾರಿಗಳು ನಗರದ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ತೆರಳಿ ಪರಿಶೀಲನೆ ನಡೆಸಿದರು. ಯಾವ ಕೋಠಡಿಗಳಲ್ಲಿ ಮತ ಎಣಿಕೆಯನ್ನು ನಡೆಸಬೇಕು. ಭದ್ರತೆಯನ್ನು ಯಾವ ರೀತಿಯಲ್ಲಿ ಒದಗಿಸಬೇಕು. ಅಭ್ಯರ್ಥಿಗಳು ಮತ್ತು ಅವರ ಕಡೆಯವರಿಗೆ ಮತ ಎಣಿಕೆಯ ಸಂದರ್ಭದಲ್ಲಿ ಎಷ್ಟು ಮಂದಿಗೆ ಅವಕಾಶವನ್ನು ನೀಡಬೇಕು ಎಂಬ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದರು.

ಪೊಲೀಸ್‌ ಭದ್ರತೆ

ತೀವ್ರ ಕೂತುಹಲ ಕೆರಳಿಸಿದ್ದ ಹಾಸನ ನಗರಸಭೆ ಚುನಾವಣೆ ಶುಕ್ರವಾರ ಮುಕ್ತಾಯಗೊಂಡಿದ್ದು, ಈಗಾಗಲೇ ಮತ ಯಂತ್ರಗಳನ್ನು ನಗರದ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಟ್ರಾಂಗ್‌ ರೂಂ ನಲ್ಲಿ ಇಡಲಾಗಿದ್ದು, ಸ್ಟ್ರಾಂಗ್‌ ರೂಂ ಗೆ ಬಿಗಿ ಭದ್ರತೆ ನೀಡಿರುವ ಜಿಲ್ಲಾ ಪೊಲೀಸ್‌ ಇಲಾಖೆ, ಸೋಮವಾರ ನಡೆಯುವ ಎಣಿಕೆ ವೇಳೆ ಯಾವುದೇ ಅನಾಹುತ ನಡೆಯದಂತೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಜಿಲ್ಲೆಯ ಅರಸೀಕೆರೆ ಮತ್ತು ಹಾಸನ ನಗರಸಭೆ, ಹೊಳೆನರಸೀಪುರ, ಸಕಲೇಶಪುರ ಹಾಗೂ ಚನ್ನರಾಯಪಟ್ಟಣ ಪುರಸಭೆಗಳಿಗೆ ಮತದಾನ ನಡೆದಿದ್ದು, ಎಲ್ಲಾ ಕಡೆಗಳಲ್ಲಿ ಭದ್ರತೆ ಹಾಕಲು ಕ್ರಮ ವಹಿಸಿದೆ. ಇದಕ್ಕಾಗಿ ಐದು ಕೆಎಸ್‌ಆರ್‌ಪಿ ಪಡೆ ಹಾಗೂ 15 ಡಿಆರ್‌, ಪಿಎಸ್‌ಐ ಹಾಗೂ ಸಿವಿಲ್‌ ಪೊಲೀಸ್‌ ಸಿಬ್ಬಂದಿಗಳನ್ನು ಮತ ಎಣಿಕೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಇನ್ನು ಹಾಸನ ನಗರಸಭೆ ಮತ ಎಣಿಕ ನಡೆಯುವ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ರಸ್ತೆಯಲ್ಲಿ ಯಾವುದೇ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಅಲ್ಲದೇ ಮತ ಎಣಿಕೆ ಕೊಠಡಿಗೆ ತೆರೆಳಲು ಪಾಸ್‌ ಇದ್ದವರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಮತ ಎಣಿಕೆ ಕಾರ್ಯವು ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದ್ದು, ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ದತೆಯನ್ನು ನಡೆಸಲಾಗುತ್ತಿದೆ. ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮತ ಎಣಿಕೆ ಸಂದರ್ಭದಲ್ಲಿ ವಿಡಿಯೋ ಚಿತ್ರೀಕರಣವನ್ನು ಮಾಡಿಸಲಾಗುತ್ತದೆ.

ಶಿವಶಂಕರಪ್ಪ, ತಹಸೀಲ್ದಾರ್‌, ಹಾಸನ

ಜಿಲ್ಲೆಯ ಮೂರು ಪುರಸಭೆ ಹಾಗೂ ಎರಡು ನಗರಸಭೆಗಳ ಮತ ಎಣಿಕೆ ಕಾರ‍್ಯ ಸೋಮವಾರ ನಡೆಯಲಿದ್ದು, ಮತ ಎಣಿಕೆ ವೇಳೆ ಯಾವುದೇ ಅನಾಹುತ ನಡೆಯದಂತೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮತ ಎಣಿಕೆ ನಡೆಯುವ ಕೇಂದ್ರ ಸುತ್ತ ಮುತ್ತ ಬಿಗಿ ಭದ್ರತೆ ಹಾಕಲಾಗುವುದು. ಅಭ್ಯರ್ಥಿಗಳು ಪೊಲೀಸ್‌ ಸಿಬ್ಬಂದಿಗಳ ಜತೆ ಸಹಕರಿಸಿದರೆ ಯಾವುದೇ ಗೊಂದಲ ಉಂಟಾಗುವುದಿಲ್ಲ.

- ರಾಹುಲ್‌ ಕುಮಾರ್‌ ಶಹಪುರವಾಡ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ