ಆ್ಯಪ್ನಗರ

ಲಾಕ್‌ಡೌನ್ ಮುಂದಿನ ಸ್ಥಿತಿ ಗಂಭೀರ, ರೈತರು, ಕೂಲಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುವ ಆತಂಕ ಹೆಚ್ಚು: ದೇವೇಗೌಡ

ಲಾಕ್‌ಡೌನ್ ನಿಂದ ಆಗಿರುವ ಸಮಸ್ಯೆಯನ್ನು ಸೂಕ್ಷ್ಮವಾಗಿ ಆಲಿಸುತ್ತಿದ್ದೇನೆ ಇದನ್ನು ಗಮನಿಸಿದರೆ ಮುಂದೆ ಸಮಸ್ಯೆ ಎದುರಿಸಲಾಗದ ಸ್ಥಿತಿಗೆ ತಲುಪಿದರೂ ಆಶ್ಚರ್ಯವಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದರು.

Vijaya Karnataka Web 13 Apr 2020, 3:52 pm
ಹಾಸನ: ಸರಕಾರ ಕೆಲ ಕ್ರಮದಿಂದ ಕೊರೊನಾ ವೇಗವಾಗಿ ಹರಡುವುದನ್ನು ತಡೆಗಟ್ಟಿರಬಹುದು ಆದರೆ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿ ಸಿಲುಕಿರುವ ರೈತಾಪಿ ವರ್ಗ, ಕೂಲಿ ಕಾರ್ಮಿಕರು ಸಾಲಬಾಧೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವ ಭೀತಿ ಹೆಚ್ಚಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆತಂಕ ವ್ಯಕ್ತಪಡಿಸಿದರು.
Vijaya Karnataka Web ಎಚ್‌ಡಿ ದೇವೇಗೌಡ
ಎಚ್‌ಡಿ ದೇವೇಗೌಡ


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಉಚಿತ ಅಕ್ಕಿ ಕೊಟ್ಟ ಕ್ಷಣ ಸಮಸ್ಯೆ ಬಗೆಹರಿದಿಲ್ಲ, ಮೂರು ತಿಂಗಳು ಇಎಂಐ ಕಟ್ಟುವಂತಿಲ್ಲ ಎಂದು ಪ್ರಕಟಿಸಿತು ಆದರೆ ಬ್ಯಾಂಕ್‌ನವರು ನೋಟಿಸ್ ನೀಡುವ ಮೂಲಕ ಸಾಲದ ವಸೂಲಿಗೆ ಇಳಿದಿದ್ದಾರೆ ಎಂದು ದೂರಿದರು.

ಲಾಕ್‌ಡೌನ್ ನಿಂದ ಆಗಿರುವ ಸಮಸ್ಯೆಯನ್ನು ಸೂಕ್ಷ್ಮವಾಗಿ ಆಲಿಸುತ್ತಿದ್ದೇನೆ ಇದನ್ನು ಗಮನಿಸಿದರೆ ಮುಂದೆ ಸಮಸ್ಯೆ ಎದುರಿಸಲಾಗದ ಸ್ಥಿತಿಗೆ ತಲುಪಿದರೂ ಆಶ್ಚರ್ಯವಿಲ್ಲ ಎಂದು ಮಾಜಿ ಪ್ರಧಾನಿ ತಿಳಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಬೆಂಗಳೂರಿನಲ್ಲಿ 50 ಕಿಮೀ ಸಂಚರಿಸಿ, ತೋರ್ಪಡಿಕೆಯ ರಾಜಕಾರಣ ಮಾಡುತ್ತಿದ್ದಾರೆ, ಪೊಲೀಸರ ಸೆಲ್ಯೂಟ್ ಬಿಟ್ಟರೆ ಜನರ ಸಮಸ್ಯೆಗೆ ಎಷ್ಟರ ಮಟ್ಟಿಗೆ ಪರಿಹಾರ ಸಿಕ್ಕಿತು ಎಂಬುದು ಮುಖ್ಯವಲ್ಲವೇ ಎಂದು ಎಚ್‌ಡಿ ದೇವೇಗೌಡ ಪ್ರಶ್ನಿಸಿದರು.

ಕೊರೊನಾ ಲಾಕ್‌ಡೌನ್ ವಿಷಯದಲ್ಲಿ ಲೋಪ ಸಾಕಷ್ಟಿದೆ ಪಟ್ಟಿ ಮಾಡುತ್ತಾ ಹೋದರೆ ದೊಡ್ಡದಾಗುತ್ತದೆ ಕೇಂದ್ರ ಸರಕಾರ ಹೇಳುವುದು ಒಂದು ಇಲ್ಲಿ ನಡೆಯುತ್ತಿರುವುದು ಮತ್ತೊಂದು, ರೈತ ಬೆಳೆದ ಬೆಳೆ ಕೇಳುವವರು ಇಲ್ಲ, ಕೊಳ್ಳುವವರು ಇಲ್ಲವಾಗಿದೆ, ಈ ಬಗ್ಗೆ ಪ್ರಧಾನಿ ನರೇಂದ್ರಮೋದಿ ಹಾಗೂ ಸಿಎಂ ಯಡಿಯೂರಪ್ಪ ಅವರಿಗೂ ಪತ್ರ ಬರೆದು ಅಗತ್ಯ ವಸ್ತುಗಳ ಸಾಗಣೆಗೆ ಅನುಮತಿ ನೀಡಿ, ಹೊರ ರಾಜ್ಯದ ಬೇಡಿಕೆ ಪೂರೈಸಿ ಎಂದು ಸಲಹೆ ನೀಡಿದ್ದೇನೆ ಎಂದರು.

ತಂತ್ರಜ್ಞಾನ ಯುಗದಲ್ಲಿ ಕುಳಿತಲ್ಲೇ ಹೊರ ರಾಜ್ಯ, ಹೊರ ಜಿಲ್ಲೆಯ ಅಗತ್ಯತೆಗಳೇನು? ಇಲ್ಲಿ ಹೆಚ್ಚುವರಿ ಏನು ಬೆಳೆಯಲಾಗಿದೆ ಎಂಬ ಮಾಹಿತಿಯನ್ನು ಆನ್‌ಲೈನ್‌ನಲ್ಲೇ ಪಡೆದು ಸಾಗಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಆಟೋ, ಕಾರು ಓಡಿಸುವ ಹಾಗೂ ಗಾರ್ಮೆಂಟ್ಸ್ ಕಾರ್ಮಿಕರು, ಕೂಲಿ ಕಾರ್ಮಿಕರ ಸ್ಥಿತಿ ಏನಾಗಿದೆ ಎಂಬುದು ಗೊತ್ತೇ? ಆಹಾರ ಪದಾರ್ಥ ಕೊಡುತ್ತಿದ್ದೇವೆ ಎನ್ನುತ್ತಾರೆ. ಅದು ಎಷ್ಟರ ಮಟ್ಟಿಗೆ ಎಂಬುದನ್ನು ತಿಳಿದಿಲ್ಲ ಎಂದು ಎಚ್‌ಡಿ ದೇವೇಗೌಡ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ