ಆ್ಯಪ್ನಗರ

ರುದ್ರಪಟ್ಟಣದಲ್ಲಿ ಸಂಗೀತೋತ್ಸವಕ್ಕೆ ಚಾಲನೆ

ರಾಮನಾಥಪುರ ಹೋಬಳಿಯ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ನಾಲ್ಕು ದಿನಗಳ ಕಾಲ ಆಯೋಜಿಸಿರುವ 18ನೇ ವರ್ಷದ ಸಂಗೀತೋತ್ಸವಕ್ಕೆ ಗುರುವಾರ ಸಂಭ್ರಮದ ಚಾಲನೆ ದೊರಕಿತು.

Vijaya Karnataka 17 May 2019, 5:00 am
ಕೊಣನೂರು (ಹಾಸನ ಜಿಲ್ಲೆ): ರಾಮನಾಥಪುರ ಹೋಬಳಿಯ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ನಾಲ್ಕು ದಿನಗಳ ಕಾಲ ಆಯೋಜಿಸಿರುವ 18ನೇ ವರ್ಷದ ಸಂಗೀತೋತ್ಸವಕ್ಕೆ ಗುರುವಾರ ಸಂಭ್ರಮದ ಚಾಲನೆ ದೊರಕಿತು.
Vijaya Karnataka Web HSN-HSN16KNR4


ಪಟ್ಟಣದ ರಾಮಮಂದಿರದಲ್ಲಿ ಬೆಂಗಳೂರಿನ ಯಾಮಿನೀ ಪ್ರಸಾದ್‌ ಹಾಗೂ ಸುದೀಕ್ಷಾರಾಮ್‌ ಅವರು ನೃತ್ಯದ ಮುಖಾಂತರ 'ಕಲ್ಯಾಣ-ಶೃಂಗ ಪುರಾಧೀಶ್ವರಿ ಎನ್ನದೇವಿ' ಕೃತಿಯೊಂದಿಗೆ ಗಣೇಶನನ್ನು ಸ್ತುತಿಸಿ ಸಂಗೀತ ನೃತ್ಯ ಪ್ರಾರಂಭಿಸುವ ಮೂಲಕ ಸಂಗೀತ ಸಮಾರಾಧನೆಗೆ ಚಾಲನೆ ನೀಡಲಾಯಿತು.

ಬಳಿಕ ಅತ್ರಿ ಕೌಶಿಕ್‌ ಮತ್ತು ತಂಡದವರು ನಡೆಸಿಕೊಟ್ಟ ನಾದಜ್ಯೋತಿ ಮುತ್ತುಸ್ವಾಮಿ ದೀಕ್ಷಿತರ ನುಡಿನಮನ, ಹರಿಣಿ ಅವರ ನಿರ್ದೇಶನದಲ್ಲಿ ನಿನಾದ ತಂಡದಿಂದ ನಾದಸೇವೆ, ಪಂ.ಶ್ರೀರಾಮಭಟ್‌ ಹಾರ್ಮೋನಿಯಂ ಹಾಗೂ ಪಂ.ಜಗದೀಶ್‌ ಕುರ್ತುಕೋಟಿ ಅವರ ತಬಲದೊಂದಿಗೆ ಸಂಜನಾ ಕೌಶಿಕ್‌ ಅವರ ಹಿಂದೂಸ್ಥಾನಿ ಗಾಯನ, ವಿ.ಮಂಡ್ಯ ನಾಗರಾಜ್‌ ಪಿಟೀಲು, ವಿ.ಸಂಜಯ್‌ ತಾರಾನಾಥನ್‌ ಮೃದಂಗ ಹಾಗೂ ವಿ.ಶರತ್‌ ಕೌಶಿಕ್‌ ಅವರ ಘಟದೊಂದಿಗೆ ವಿ.ಸಂಗೂತ ತಾರಾನಾಥನ್‌ ಅವರ ಗಾಯನ, ವಿ.ಮತ್ತೂರು ಆರ್‌. ಶ್ರೀನಿಧಿ, ಪಿಟೀಲು, ವಿ.ಎ.ರೇಣುಕಾಪ್ರಸಾದ್‌ ಮೃದಂಗ, ವಿಎಎಸ್‌ಎನ್‌ ಸ್ವಾಮಿ ಅವರ ಖಂಜರಿಯೊಂದಿಗೆ ವಿ.ರಾಕೇಶ್‌ ದತ್ತ ಅವರ ಕೊಳಲು ವಾದನ ಸಂಗೀತಾಸಕ್ತರನ್ನು ನಿಬ್ಬೆರಗಾಗಿಸಿತು. ವಿದ್ವಾಂಸರುಗಳ ಹಾಡುಗಾರಿಕೆ ಕೇಳುಗರ ಮನಸೂರೆಗೊಂಡರು.

ಶಾಸ್ತ್ರೀಯ ಕಲೆ ಶಾಶ್ವತ: ಪದ್ಮನಾಭ್‌
ದೇಶದ ಶಾಸ್ತ್ರೀಯ ಕಲೆಗಳು ವೇದಗಳಿರುವವರೆಗೂ ಶಾಶ್ವತವಾಗಿರುತ್ತವೆ. ಸಂಗೀತಕ್ಕೆ ಮಡಿ, ಮೈಲಿಗೆ, ಜಾತಿ, ಧರ್ಮ ಯಾವುದೂ ಇಲ್ಲ. ಯಾರು ಬೇಕಾದರೂ ಸಂಗೀತ ಕಲಿಯಬಹುದು. ತಾಯಿ ಮತ್ತು ಮಗುವಿನ ಸಂಬಂಧವನ್ನು ನಿರ್ಮಾಣ ಮಾಡುವುದೇ ಸಂಗೀತವಾಗಿದೆ ಎಂದು ಗಾನ ಕೋಗಿಲೆ ವಿದ್ವಾನ್‌ ಡಾ.ಆರ್‌.ಕೆ. ಪದ್ಮನಾಭ್‌ ಅಭಿಪ್ರಾಯಪಟ್ಟರು.

ಸಂಗೀತ ಸಮಾರಾಧನೆ ಕಾರ‍್ಯಕ್ರಮದಲ್ಲಿ ಮಾತನಾಡಿದ ಅವರು, ''ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಪಿಟೀಲು ಚೌಡಯ್ಯ, ಕೃಷ್ಣಮೂರ್ತಿ, ಭಾಗವತರಂಹ ಮಹಾನ್‌ ದಿಗ್ಗಜರು ಇಲ್ಲಿ ಕಛೇರಿ ನಡೆಸಿಕೊಟ್ಟಿದ್ದಾರೆ. ಸಂಗೀತ ಎನ್ನುವುದು ವಿಶ್ವಭಾಷೆ, ನಮ್ಮ ಸಂಸ್ಕೃತಿ, ನಮ್ಮ ಪರಂಪರೆಯ ಸಂಗೀತಕ್ಕೆ ವಿಶೇಷ ಸ್ಥಾನವಿದೆ. ಸಂಗೀತವನ್ನು ಕೇವಲ ಮನರಂಜನೆಗಾಗಿ ಬಳಸದೆ ದೇವರ ಸೇವೆಗಾಗಿ, ಮನಸ್ಸಿನ ನೆಮ್ಮದಿ ಹಾಗೂ ನಮ್ಮ ಸಾಧನೆಗಾಗಿ ಎಂದು ಪರಿಗಣಿಸಬೇಕು,'' ಎಂದರು.

''ರುದ್ರಪಟ್ಟಣದ ದೇವಾಲಯ ವಿಶ್ವದಲ್ಲಿಯೇ ಏಕೈಕ ಜಾತಿ ಮತ್ತು ಧರ್ಮರಹಿತ ಸಪ್ತಸ್ವರ ದೇವತಾ ಧ್ಯಾನ ಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗ್ರಾಮದಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ದ್ವಾದಶ ಸ್ವರಸ್ತಂಭ ನಿರ್ಮಾಣಕ್ಕಾಗಿ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ 12 ಲಕ್ಷ ರೂ. ನೀಡಿ ಆಶೀರ್ವದಿಸಿದ್ದಾರೆ,'' ಎಂದು ತಿಳಿಸಿದರು. ಕಾರ‍್ಯಕ್ರಮದಲ್ಲಿ ಭಾಸ್ಕರ್‌ ಅವಧಾನಿ, ಕೃಷ್ಣಪ್ರಸಾದ್‌, ದೀಪಕ್‌, ರತ್ನಮಾಲಾ ಮುಂತಾದವರು ಭಾಗವಹಿಸಿದ್ದರು.

ಇಂದಿನ ಕಾರ‍್ಯಕ್ರಮಗಳು
ಶುಕ್ರವಾರ ಬೆಳಗ್ಗೆ 10.30ರಿಂದ 1ರವರೆಗೆ ವಿ.ಜಯಂತಿ ಕುಮರೇಶ್‌ ಅವರ ವೀಣೆಯೊಂದಿಗೆ ವಿ.ಅರ್ಜುನ್‌ ಕುಮಾರ್‌ ಮೃದಂಗ, ವಿ.ಟ್ರಿಜಿ ಎಸ್‌.ಕೃಷ್ಣ ಘಟ ನಡೆಸಿಕೊಡುವರು. ಸಂಜೆ 5ರಿಂದ 6ರವರೆಗೆ ವಿ.ಎಂ.ಡಿ.ಸಮುದ್ಯತ ಅವರ ಗಾಯನದೊಂದಿಗೆ ವಿ.ಎಂ.ವಿ.ವಿಶ್ವಜಿತ್‌ ವಯೋಲಿನ್‌ ಹಾಗೂ ವಿ.ಸಾವಂಶಿ ಮೃದಂಗ ನಡೆಸಿಕೊಡುವರು. ಸಂಜೆ 6.15ರಿಂದ ವಿ.ಕಲ್ಯಾಣಪುರಂ ಎಸ್‌.ಅರವಿಂದ್‌ ಅವರ ಗಾಯನದೊಂದಿಗೆ ವಿ.ಸಿ.ಎನ್‌.ಚಂದ್ರಶೇಖರ್‌ ವಯೋಲಿನ್‌, ವಿ.ಸಿ.ಚಲುವರಾಜ್‌ ಮೃದಂಗ ಹಾಗೂ ವಿ.ರಾಜಶೇಖರ್‌ ಮೋರ್ಚಿಂಗ್‌ ನಡೆಸಿಕೊಡುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎ.ಮಂಜು ಆಗಮಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ