ಆ್ಯಪ್ನಗರ

ದಟ್ಟ ಅರಣ್ಯದಲ್ಲಿ ಆಹಾರವಿಲ್ಲದೆ ರಾತ್ರಿ ಕಳೆದ ಪ್ರಯಾಣಿಕರು

ಹಾಸನ ಜಿಲ್ಲೆಯ ಪ್ರಮುಖ ರಾಜ್ಯ ಹೆದ್ದಾರಿ ಬಿಸಿಲೆ-ಜಲಸೂರು ರಸ್ತೆಯ ಹಡ್ಲಗದ್ದೆ ಗ್ರಾಮದ ಬಳಿ ಅರಣ್ಯ ಪ್ರದೇಶದಲ್ಲಿ ಭೂಕುಸಿತ ಉಂಟಾದ ಪರಿಣಾಮ ಸಾರಿಗೆ ಬಸ್‌ಗಳು ಸಂಚರ ಸ್ಥಗಿತಗೊಳಿಸಿದ ಪರಿಣಾಮ ರಾತ್ರಿಯಿಡೀ ಪ್ರಯಾಣಿಕರು ಆಹಾರ, ನಿದ್ರೆ ಇಲ್ಲದೆ ಪರಿತಪಿಸುವಂತಾಯಿತು.

Vijaya Karnataka 16 Aug 2018, 5:00 am
ಪ್ರಯಾಣಿಕರ ನೆರವಿಗೆ ಬಾರದ ತಾಲೂಕು ಆಡಳಿತದ ವಿರುದ್ಧ ಆಕ್ರೋಶ
Vijaya Karnataka Web passengers travelling overnight without food in dense forest
ದಟ್ಟ ಅರಣ್ಯದಲ್ಲಿ ಆಹಾರವಿಲ್ಲದೆ ರಾತ್ರಿ ಕಳೆದ ಪ್ರಯಾಣಿಕರು


ವನಗೂರು (ಸಕಲೇಶಪುರ):
ಹಾಸನ ಜಿಲ್ಲೆಯ ಪ್ರಮುಖ ರಾಜ್ಯ ಹೆದ್ದಾರಿ ಬಿಸಿಲೆ-ಜಲಸೂರು ರಸ್ತೆಯ ಹಡ್ಲಗದ್ದೆ ಗ್ರಾಮದ ಬಳಿ ಅರಣ್ಯ ಪ್ರದೇಶದಲ್ಲಿ ಭೂಕುಸಿತ ಉಂಟಾದ ಪರಿಣಾಮ ಸಾರಿಗೆ ಬಸ್‌ಗಳು ಸಂಚರ ಸ್ಥಗಿತಗೊಳಿಸಿದ ಪರಿಣಾಮ ರಾತ್ರಿಯಿಡೀ ಪ್ರಯಾಣಿಕರು ಆಹಾರ, ನಿದ್ರೆ ಇಲ್ಲದೆ ಪರಿತಪಿಸುವಂತಾಯಿತು.

ಹಡ್ಲಗದ್ದೆ ಬಳಿ ಅರಣ್ಯ ಪ್ರದೇಶದಲ್ಲಿ ರಸ್ತೆಯೂ ಸೇರಿದಂತೆ ಸುಮಾರು 2 ಹೆಕ್ಟೇರ್‌ನಷ್ಟು ಭೂಮಿ ಕುಸಿದಿದ್ದು, ಸುಳ್ಯ ಘಟಕಕ್ಕೆ ಸೇರಿದ ಸಾರಿಗೆ ಬಸ್‌ಗಳು ಸಂಚರಿಸಲಾಗದೆ ಅಲ್ಲಲ್ಲೇ ಸಂಚಾರ ಸ್ಥಗಿತಗೊಳಿಸಿವೆ. ಹೀಗಾಗಿ ಮಂಗಳವಾರ ಮಧ್ಯಾಹ್ನ 1ರಿಂದ ಬುಧವಾರ ಮುಂಜಾನೆವರೆಗೂ ಯಾವುದೇ ನೆರವಿಲ್ಲದೆ ಸುಮಾರು 60 ಪ್ರಯಾಣಿಕರು ದಟ್ಟ ಅರಣ್ಯದಲ್ಲಿ ಆಹಾರ, ನಿದ್ರೆ ಇಲ್ಲದೆ ಪಡಿಪಾಟಲು ಅನುಭವಿಸಬೇಕಾಯಿತು.

ನೆರವಿಗೆ ಬಾರದ ಅರಣ್ಯ ಇಲಾಖೆ, ಪಿಡಬ್ಲೂಡಿ ಇಲಾಖೆ: ಬಿಸಿಲೆ ಮಾರ್ಗದಲ್ಲಿ ಸಾರಿಗೆ ಬಸ್‌ ಮೂಲಕ ಕುಕ್ಕೆ ಸುಬ್ರಮಣ್ಯದಿಂದ ಬೆಂಗಳೂರಿಗೆ ಹೊರಟ ಸುಮಾರು 60 ಪ್ರಯಾಣಿಕರು ಗುಡ್ಡ ಕುಸಿತದಿಂದ ಸಂಕಷ್ಟದಲ್ಲಿ ಅರಣ್ಯದಲ್ಲಿ ರಾತ್ರಿ ಕಳೆದಿದ್ದಾರೆ. ತಾಲೂಕು ಆಡಳಿತ ಯಾವುದೇ ನೆರವು ನೀಡದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಸ್ಸಿನಲ್ಲಿ ಸುಮಾರು 10 ವೃದ್ಧರು ಇದ್ದು, ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಬಸ್‌ ಚಾಲಕರು, ಅರಣ್ಯ ಇಲಾಖೆ ಹಾಗೂ ಸ್ಥಳಕ್ಕೆÜ ಭೇಟಿ ನೀಡಿದ ಪಿಡಬ್ಲೂಡಿ ಎಂಜಿನಿಯರ್‌ ವೆಂಕಟೇಶ್‌ ಅವರಿಗೆ ಮಾಹಿತಿ ನೀಡಿದರು. ಜಿಲ್ಲಾಧಿಕಾರಿಗೆ ಮಾಹಿತಿ ನೀಡದೆ ಕರ್ತವ್ಯ ಲೋಪವೆಸಗಿದ್ದು, ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಪ್ರಯಾಣಿಕರಿಗೆ ನೆರವು ನೀಡಿದ ಗ್ರಾಮಸ್ಥರನ್ನು ಸ್ಮರಿಸಿದರು.

ಸಂಚಾರ ಸ್ಥಗಿತ: ಕೊಡಗಿನ ಸೋಮವಾರಪೇಟೆ, ಕುಂದಹಳ್ಳಿ, ಶಾಂತಹಳ್ಳಿ ಸಂಪರ್ಕಿಸುವ ರಸ್ತೆ ಮಾಗೇರಿ ಸಮೀಪ ಸುಮಾರು 500 ಮೀ. ದೊಡ್ಡ ಕಂದಕ ನಿರ್ಮಾಣವಾಗಿದ್ದು, ರಸ್ತೆ ಎರಡು ಭಾಗವಾಗಿ ಕೊಡಗು-ಸಕಲೇಶಪುರ ಸಂಪರ್ಕ ಸ್ಥಗಿತವಾಗಿದೆ. ಅಲ್ಲಲ್ಲಿ ಭಾರಿ ಮರಗಳು ರಸ್ತೆಗೆ ಉರುಳಿ ಬಿದ್ದಿದೆ. ಗುಡ್ಡ ಕುಸಿತದ ಭೀತಿಯಲ್ಲಿ ಜನರಿದ್ದು, ಕೊಡಗಿನ ಅಧಿಕಾರಿಗಳು ಕೊಡಗು ಗಡಿಯಲ್ಲಿ ನಾಮಫಲಕ ಅಳವಡಿಸಿ ಸಿಬ್ಬಂದಿ ನೇಮಿಸಿದ್ದಾರೆ. ಹಾಸನ ಜಿಲ್ಲೆಯ ಭಾಗದಿಂದ ಯಾವುದೇ ಕಾರ್ಯಾಚರಣೆ ಬುಧವಾರ ಮಧ್ಯಾಹ್ನ 2 ಗಂಟೆವರೆಗೂ ಆರಂಭವಾಗಿರಲಿಲ್ಲ.

ಮಾನವೀಯತೆ ಮೆರೆದ ಅಧಿಕಾರಿಗಳು: ಬಿಸ್ಲೆಘಾಟ್‌ನಲ್ಲಿ ಬೆಂಗಳೂರಿನ ಪ್ರಯಾಣಿಕರು ಸಂಕಷ್ಟದಲ್ಲಿ ಇದ್ದುದ್ದರಿಂದ, ಸುಳ್ಯ ಡಿಪೋ ಅಧಿಕಾರಿಗಳು ಕನಿಷ್ಠ ಬೇರೆ ಬಸ್‌ ಕಳುಹಿಸಿದ್ದಾರೆ. ಸುಮಾರು 200 ಕಿ.ಮೀ. ಸುತ್ತಿ ಬಳಸಿ ಮಡಿಕೇರಿ ಘಟಕದ ಬಸ್‌ ಸೋಮವಾರಪೇಟೆ-ವನಗೂರು ಮೂಲಕ ಬುಧವಾರ ಬೆಳಗ್ಗೆ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಮಾನವೀಯತೆ ಮೆರೆದಿದ್ದು, ಈ ಭಾಗದ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಉಡಾಫೆ ವರ್ತನೆ ತೋರಿದ ಸಕಲೇಶಪುರ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮನೆಗಳು ಕುಸಿಯುವ ಭೀತಿ: ಸಕಲೇಶಪುರ ತಾಲೂಕಿನಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಹೆತ್ತೂರು ಭಾಗದಲ್ಲಿ ಸುಮಾರು ಹತ್ತು ಮನೆಗಳು ಕುಸಿಯುವ ಭೀತಿ ಎದುರಾಗಿದೆ. ಗೊದ್ದು ಗ್ರಾಮದಲ್ಲಿ ಎರಡು ಮನೆಗಳು ಜಖಂಗೊಂಡಿದ್ದು, ಗದ್ದೆಗಳು ಸಂಪೂರ್ಣ ಜಲಾವೃತವಾಗಿವೆ. ಜನರು ಮನೆಯಲ್ಲೇ ಉಳಿಯುವಂತಾಗಿದ್ದು, ಮಳೆ ಅಬ್ಬರಕ್ಕೆ ನೂರಾರು ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ