ಆ್ಯಪ್ನಗರ

ಹಾಸನ ರೆಸಾರ್ಟ್ ನಲ್ಲಿ ರೇವ್ ಪಾರ್ಟಿ: 130 ಮಂದಿ ಯುವಕ, ಯುವತಿಯರು ಪೊಲೀಸ್ ವಶಕ್ಕೆ!

ರೆಸಾರ್ಟ್‌ನಲ್ಲಿ ಆಯೋಜಿಸಿದ್ದ ರೇವ್‌ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿ 130 ಮಂದಿ ಯುವಕ, ಯುವತಿಯರನ್ನು ಬಂಧಿಸಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯ ಹಾಗೂ ಹೊರರಾಜ್ಯಗಳಿಂದ ಸುಮಾರು ನೂರಾರು ಐಷಾರಾಮಿ ಕಾರು ಹಾಗೂ ಬೈಕ್ ಗಳಲ್ಲಿ ಆಗಮಿಸಿದ ಯುವಕ, ಯುವತಿಯರ ಗುಂಪು ಪಾರ್ಟಿಯಲ್ಲಿ ತೊಡಗಿದ್ದರು.

Vijaya Karnataka Web 11 Apr 2021, 6:00 pm
ಹಾಸನ: ಆಲೂರು ತಾಲೂಕು ಕೆಂಚಮ್ಮನ ಹೊಸಕೋಟೆ ಸಮೀಪದ ನಂದಿಪುರ ಎಸ್ಟೇಟ್ ಮೋಟಾರ್ ಸೈಕಲ್ ರೆಸಾರ್ಟ್‌ನಲ್ಲಿ ಆಯೋಜಿಸಿದ್ದ ರೇವ್‌ಪಾರ್ಟಿ ಮಾಹಿತಿ ಪಡೆದ ಎಸ್‌ಪಿ ನೇತೃತ್ವದ ಪೊಲೀಸ್ ತಂಡ ರಾತ್ರೋರಾತ್ರಿ ದಾಳಿ ಮಾಡಿ 130 ಮಂದಿ ಯುವಕ, ಯುವತಿಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಎಸ್ಟೇಟ್ ಮಾಲೀಕರನ್ನು ವಶಕ್ಕೆ ಪಡೆದಿದ್ದು, ಆಯೋಜಕನಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯ ಹಾಗೂ ಹೊರರಾಜ್ಯಗಳಿಂದ ಸುಮಾರು ನೂರಾರು ಐಷಾರಾಮಿ ಕಾರು ಹಾಗೂ ಬೈಕ್ ಗಳಲ್ಲಿ ಆಗಮಿಸಿದ ಯುವಕ, ಯುವತಿಯರ ಗುಂಪು ಪಾರ್ಟಿಯಲ್ಲಿ ತೊಡಗಿದ್ದರು.

ಡಿ.ಜೆ, ಬಳಸಿಕೊಂಡು ಮದ್ಯಪಾನ, ಗಾಂಜ ಸೇವಿಸಿ ಮೋಜು, ಮಸ್ತಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಎಸ್‌ಪಿ ಆರ್. ಶ್ರೀನಿವಾಸಗೌಡ, ಡಿವೈಎಸ್ಪಿ ಗೋಪಿ, ಪೊಲೀಸ್ ಇನ್ಸ್‌ಪೆಕ್ಟರ್ ವೆಂಕಟೇಶ್ ರವರ ತಂಡದೊಂದಿಗೆ ಶನಿವಾರ ರಾತ್ರಿ ದಾಳಿ ನಡೆಸಿ ಸ್ಥಳದಲ್ಲಿದ್ದ ಪ್ರತಿಯೊಬ್ಬರನ್ನು ಮತ್ತು ಐಶಾರಾಮಿ ಕಾರು, ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ.

ದಾಳಿವೇಳೆ ಅಲ್ಪ ಪ್ರಮಾಣದ ಗಾಂಜಾ, ಅಫೀಮು, ಮದ್ಯ ವಶಪಡಿಸಿಕೊಳ್ಳಲಾಗಿದೆ. ರಾಜ್ಯ, ಹೊರರಾಜ್ಯ, ಗೋವಾದಿಂದಲೂ ಬಂದಿರುವ ಯುವಕರು ತಂಡದಲ್ಲಿದ್ದಾರೆ. ಪ್ರತಿಯೊಬ್ಬರ ರಕ್ತ ಪರೀಕ್ಷೆ ಮಾಡಿ ಪ್ರಕರಣದ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಶ್ರೀನಿವಾಸಗೌಡ ತಿಳಿಸಿದ್ದಾರೆ.

ಕೊವಿಡ್ ಹಿನ್ನೆಲೆಯಲ್ಲಿ ರಾತ್ರಿ ಪಾರ್ಟಿ ನಿಷೇಧ ಮಾಡಿದ್ದರೂ, ಇಂತಹ ಪಾರ್ಟಿ ಆಯೋಜಿಸಿದ್ದು ಹೇಗೆ ಎಂಬ ಜತೆಗೆ ಕಾಡಾನೆ ಹಾವಳಿ ಇರುವ ಈ ಪ್ರದೇಶದಲ್ಲಿ ಈವರೆಗೆ ಅನೇಕ ಜನರು ಪ್ರಾಣ ತೆತ್ತಿದ್ದಾರೆ ಇದೆಲ್ಲವನ್ನು ಲೆಕ್ಕಿಸದೆ ಕೋವಿಡ್ ನಿಯಮ ಉಲ್ಲಂಘನೆ, ಅಬಕಾರಿ ನಿಯಮಾನುಸಾರವಾಗಿ ಪ್ರಕರಣ ದಾಖಲಿಸಲಾಗುವುದು ಎಂದು ಎಸ್‌ಪಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಾಸಕ ಎಚ್. ಕೆ. ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಪೊಲೀಸರ ಕ್ರಮ ಶ್ಲಾಘನೀಯ. ಕೋವಿಡ್ ಹಿನ್ನೆಲೆಯಲ್ಲಿ ವಿಶೇಷವಾಗಿ ಕಾಡಾನೆ ಹಾವಳಿ ಪೀಡಿತ ಪ್ರದೇಶದಲ್ಲಿ ಇಂತಹ ಪ್ರಕರಣ ಜರುಗಿರುವುದು ತಪ್ಪು. ಪ್ರಕರಣದ ಬಗ್ಗೆ ತನಿಖೆ ನಡೆಸಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ