ಆ್ಯಪ್ನಗರ

ಹಾಸನದಲ್ಲಿ ಎರಡು ಕೋಟಿ ಚಿನ್ನಾಭರಣ ಕಳವು ಪ್ರಕರಣ: ಇಬ್ಬರ ಬಂಧನ

ಅನುಮಾನಾಸ್ಪದವಾಗಿ ವರ್ತಿಸಿದ ಕಡೂರು ಹಾಗೂ ಮಂಗಳೂರು ಮೂಲದ ಇಬ್ಬರ ಕಾರನ್ನು ಪರಿಶೀಲಿಸಿದಾಗ ಕಪ್ಪುಬಣ್ಣದ ಪರ್ಸ್‌ನಲ್ಲಿ ಚಿನ್ನದಗಟ್ಟಿ, ಮೂರು ಚಿನ್ನದ ಚೈನ್, ಮತ್ತೊಂದು ಕಾರಿನಲ್ಲಿ 500 ಬೆಲೆಯ ಎರಡು ಕಂತೆ ನೋಟ್ ಪತ್ತೆಯಾಗಿತ್ತು. ಎರಡು ಕೋಟಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ 45 ಲಕ್ಷ ರೂ.ಬೆಲೆಯ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

Vijaya Karnataka Web 12 Nov 2021, 3:09 pm
ಹಾಸನ: ನಗರದ ವಿಶ್ವೇಶ್ವರಯ್ಯ ಬಡಾವಣೆ ಗ್ರಾನೈಟ್ ಉದ್ಯಮಿ ಮನೆಯಲ್ಲಿ ಸೆ.7ರಂದು ನಡೆದಿದ್ದ ಎರಡು ಕೋಟಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ 45 ಲಕ್ಷ ರೂ.ಬೆಲೆಯ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಹಳೇಬೀಡು ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಸ್‌ಪಿ ಶ್ರೀನಿವಾಸಗೌಡ ತಿಳಿಸಿದ್ದಾರೆ.
Vijaya Karnataka Web ಚಿನ್ನ
ಸಾಂದರ್ಭಿಕ ಚಿತ್ರ


ಹಳೇಬೀಡು ಠಾಣೆ ವೃತ್ತ ನಿರೀಕ್ಷಕ ಶ್ರೀಕಾಂತ್ ಮಾಯಗೊಂಡನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ನ.12ರಂದು ಬೆಳಗ್ಗೆ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಜಾವ್‌ಗಲ್ ಕಡೆಯಿಂದ ಬಂದ ಕೇರಳ ಮೂಲದ ನೊಂದಣಿ ಇದ್ದ ಎರಡು ಕಾರನ್ನು ತಡೆದು ದಾಖಲೆ ತೋರಿಸುವಂತೆ ತಿಳಿಸಿದ ವೇಳೆ ಅನುಮಾನಾಸ್ಪದವಾಗಿ ವರ್ತಿಸಿದ ಕಡೂರು ಹಾಗೂ ಮಂಗಳೂರು ಮೂಲದ ಇಬ್ಬರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಕಳವು ಪ್ರಕರಣ ಬೆಳಕಿಗೆ ಬಂತು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾರನ್ನು ಪರಿಶೀಲಿಸಿದಾಗ ಕಪ್ಪುಬಣ್ಣದ ಪರ್ಸ್‌ನಲ್ಲಿ ಚಿನ್ನದಗಟ್ಟಿ, ಮೂರು ಚಿನ್ನದ ಚೈನ್, ಮತ್ತೊಂದು ಕಾರಿನಲ್ಲಿ 500 ಬೆಲೆಯ ಎರಡು ಕಂತೆ ನೋಟ್ ಪತ್ತೆಯಾಗಿದೆ ಎಂದರು. ಆರೋಪಿಗಳು ಸೆ.7ರಂದು ವಿಶ್ವೇಶ್ವರಯ್ಯ ಬಡಾವಣೆಯ 80 ಅಡಿ ರಸ್ತೆಯ ರಘು ಎಂಬವರ ಮನೆಯಲ್ಲಿ ಸಂಜೆ ವೇಳೆ ಎರಡು ವಾಹನಗಳು ಒಂದರ ಬಳಿಕ ಮತ್ತೊಂದು ಹೋಗಿದ್ದನ್ನು ಗಮನಿಸಿ, ಆ ಬಳಿಕ 15ರಿಂದ 20ನಿಮಿಷದ ಅಂತರದಲ್ಲಿ ಎರಡು ಕೋಟಿಯಷ್ಟು ಚಿನ್ನಾಭರಣ ಕಳವು ಮಾಡಿಕೊಂಡು ಪರಾರಿಯಾಗಿದ್ದರು.

ಪ್ರಕರಣ ಭೇದಿಸಲು 7ರಿಂದ 8 ತಂಡವನ್ನು ರಚಿಸಲಾಗಿತ್ತು. ಹಳೇಬೀಡು ಸಿಪಿಐ ಶ್ರೀಕಾಂತ್ ಮತ್ತು ಎಸ್‌ಐ ಗಿರಿಧರ್ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಸಿಸಿ ಕ್ಯಾಮೆರಾ ಮನೆಯಲ್ಲಿ ಇಲ್ಲವಾದ ಕಾರಣ ಹಾಗೂ ಯಾವುದೇ ಸುಳಿವು ದೊರೆಯದೆ ಪ್ರಕರಣ ಸವಾಲಾಗಿ ಪರಿಣಮಿಸಿತ್ತು ಎಂದು ಎಸ್ಪಿ ತಿಳಿಸಿದರು.

ಪ್ರಕರಣವನ್ನು ಭೇದಿಸಿ ಇಬ್ಬರಿಂದ 727 ಗ್ರಾಂ ತೂಕದ ಚಿನ್ನಾಭರಣ, 4ಕೆಜಿ 800ಗ್ರಾಂ ಬೆಳ್ಳಿ ಆಭರಣ, ಎರಡು ಲಕ್ಷ ರೂ. ಕೃತ್ಯಕ್ಕೆ ಉಪಯೋಗಿಸಿದ್ದ ಎರಡು ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಇನ್ನಿಬ್ಬರು ಭಾಗಿಯಾಗಿದ್ದರು ಎಂಬ ಮಾಹಿತಿ ದೊರಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ