ಆ್ಯಪ್ನಗರ

ಚನ್ನರಾಯಪಟ್ಟಣ: ರಕ್ತ ವರ್ಗಾವಣೆ ಮಾಡಿ ಹಸು ರಕ್ಷಣೆ, ಪಶುವೈದ್ಯರ ಕರ್ತವ್ಯ ಪ್ರಜ್ಞೆಗೆ ಶ್ಲಾಘನೆ

ತೀವ್ರ ರಕ್ತ ಹೀನತೆಯಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಹಸುವಿಗೆ ಮತ್ತೊಂದು ಹಸುವಿನ ರಕ್ತ ವರ್ಗಾವಣೆ ಮಾಡಿ ರಕ್ಷಿಸಿ ಅಣತಿ ಪಶುಚಿಕಿತ್ಸಾಲಯದ ಪಶುವೈದ್ಯರ ಕರ್ತವ್ಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ.

Vijaya Karnataka Web 9 Nov 2020, 4:26 pm
ಚನ್ನರಾಯಪಟ್ಟಣ: ತೀವ್ರ ರಕ್ತ ಹೀನತೆಯಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಹಸುವಿಗೆ ಮತ್ತೊಂದು ಹಸುವಿನ ರಕ್ತ ವರ್ಗಾವಣೆ ಮಾಡುವ ಮೂಲಕ ರಕ್ಷಿಸಲಾಗಿದೆ. ಸಕಾಲಕ್ಕೆ ಚಿಕಿತ್ಸೆ ನೀಡಿ ಹಸುವಿನ ಜೀವ ಉಳಿಸಿದ ತಾಲೂಕಿನ ಅಣತಿ ಪಶುಚಿಕಿತ್ಸಾಲಯದ ಪಶುವೈದ್ಯ ಡಾ.ಎಸ್‌.ಪಿ.ಮಂಜುನಾಥ್‌ ಅವರ ಕರ್ತವ್ಯ ಪ್ರಜ್ಞೆಯನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ.
Vijaya Karnataka Web cow


ಗಂಡಸಿ ಹೋಬಳಿಯ ಶಿವಪುರದ ವಿಶ್ವನಾಥ್‌ ಎಂಬುವವರ ಹಸು ತೈಲೇರಿಯಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದು ತೀವ್ರ ರಕ್ತದ ಕೊರತೆಯನ್ನು ಎದುರಿಸುತ್ತಿತ್ತು. ಕತ್ತನ್ನು ಮೇಲೆತ್ತಲೂ ಆಗದ ಸ್ಥಿತಿಯಲ್ಲಿದ್ದು ಸಾವು, ಬದುಕಿನ ನಡುವೆ ಹೋರಾಟ ಮಾಡುತ್ತಿತ್ತು. ಕೂಡಲೇ ಸ್ಪಂದಿಸಿದ ವೈದ್ಯರು ಇರುವ ವ್ಯವಸ್ಥೆಯಲ್ಲಿಯೇ ಸೂಕ್ತ ಚಿಕಿತ್ಸೆ ನೀಡುವ ಮೂಲಕ ತಮ್ಮ ಕರ್ತವ್ಯಪಾಲನೆಗೆ ಹೊಸ ಗರಿ ಮೂಡಿಸಿದ್ದಾರೆ.

ಈ ವೇಳೆ ಮಾತನಾಡಿದ ಡಾ.ಎಸ್‌.ಪಿ.ಮಂಜುನಾಥ್‌, ''ರಕ್ತ ವರ್ಗಾವಣೆ ಮೂಲಕ ರಕ್ತಹೀನತೆಯಿಂದ ಬಳಲುತ್ತಿರುವ ಜಾನುವಾರುಗಳನ್ನು ಮನುಷ್ಯರಂತೆಯೇ ರಕ್ತನೀಡಿ ರಕ್ಷಿಸಬಹುದಾಗಿದೆ. ಕೇವಲ ಶೇ.14ರಷ್ಟಿದ್ದ ರಕ್ತಾಂಶವನ್ನು ಹೆಚ್ಚು ಮಾಡಲು ಅದೇ ಮನೆಯ ಮತ್ತೊಂದು ಹಸುವಿನಿಂದ 4 ಲೀಟರ್‌ ರಕ್ತವನ್ನು ವೈಜ್ಞಾನಿಕವಾಗಿ ಹೊರತೆಗೆದು ಅದನ್ನು ಈ ಹಸುವಿಗೆ ನೀಡುವ ಮೂಲಕ ಅದಕ್ಕೆ ಮರುಹುಟ್ಟು ನೀಡಿದಂತಾಗಿದೆ. ನಿತ್ರಾಣಗೊಂಡಿದ್ದ ಹಸು ಈಗ ದಿನಕ್ಕೆ 10 ಲೀ. ಹಾಲು ಕೊಡುತ್ತಿದೆ,'' ಎಂದರು. ರೈತರ ಮನೆಬಾಗಿಲಲ್ಲೇ ಚಿಕಿತ್ಸೆ ನೀಡುವ ಮೂಲಕ ಹಸುವನ್ನು ರಕ್ಷಿಸಿದ ವೈದ್ಯರನ್ನು ಗ್ರಾಮಸ್ಥರು ಪ್ರಶಂಸಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ