ಆ್ಯಪ್ನಗರ

ಅಡಗೂರು ಕೆರೆಗೆ ಹರಿಯಿತು ಯಗಚಿ ನೀರು: ಗ್ರಾಮಸ್ಥರ ಸಂತಸ

ಮಾದಿಹಳ್ಳಿ ಹೋಬಳಿಯ ರೈತರ ಹಲವು ದಶಕಗಳ ಯಗಚಿ ನೀರಿನ ಬೇಡಿಕೆ ಕೊನೆಗೂ ಈಡೇರಿದ್ದು, ಮಾದಿಹಳ್ಳಿ ಹೋಬಳಿಯ ದೊಡ್ಡಕೆರೆ ಅಡಗೂರು ಕೆರೆಗೆ ಯಗಚಿ ಜಲಾಶಯದಿಂದ ನಾಲೆ ಮೂಲಕ ಏತ ನೀರಾವರಿ ಯೋಜನೆಯ ನೀರು ಹರಿಯತೊಡಗಿದೆ.

Vijaya Karnataka 24 Nov 2018, 5:00 am
ಬೇಲೂರು: ಮಾದಿಹಳ್ಳಿ ಹೋಬಳಿಯ ರೈತರ ಹಲವು ದಶಕಗಳ ಯಗಚಿ ನೀರಿನ ಬೇಡಿಕೆ ಕೊನೆಗೂ ಈಡೇರಿದ್ದು, ಮಾದಿಹಳ್ಳಿ ಹೋಬಳಿಯ ದೊಡ್ಡಕೆರೆ ಅಡಗೂರು ಕೆರೆಗೆ ಯಗಚಿ ಜಲಾಶಯದಿಂದ ನಾಲೆ ಮೂಲಕ ಏತ ನೀರಾವರಿ ಯೋಜನೆಯ ನೀರು ಹರಿಯತೊಡಗಿದೆ.
Vijaya Karnataka Web HSN-HSN 23BLRP-3


ತಮ್ಮ ಜಮೀನಿನ ಬಳಿ ನಾಲೆಯಲ್ಲಿ ನೀರು ಹರಿಯುವುದನ್ನು ಕಂಡ ರೈತರು ಹರ್ಷಚಿತ್ತರಾಗಿ ನೀರಿನಲ್ಲಿ ಇಳಿದು ಶುಕ್ರವಾರ ಸಂಭ್ರಮಿಸಿದರು. ''ನಮ್ಮ ಹಲವು ವರ್ಷಗಳ ಬೇಡಿಕೆ ಈಗಲಾದರೂ ಈಡೇರುವ ಲಕ್ಷ ಣಗಳು ಕಂಡುಬರುತ್ತಿದೆ. ಈಗ ನೀರು ಹರಿಸುತ್ತಿರುವಂತೆ ಇನ್ನು 1 ತಿಂಗಳಕಾಲ ಸತತವಾಗಿ ನೀರು ಹರಿದರೆ ಕೆರೆಯಲ್ಲಿ ಸಾಕಷ್ಟು ನೀರು ನಿಲ್ಲಲಿದೆ. ಇದರಿಂದ ಈ ಭಾಗದ ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಲಿದೆ. ಜಮೀನಿಗೆ ನೀರು ಬರಲಿದೆ'' ಎಂಬುದು ಆ ಭಾಗದ ರೈತರ ಅಭಿಪ್ರಾಯ.

ಅಡಗೂರು ಕೆರೆಗೆ ನೀರು ಹರಿಸಲು ತೋಡಲಾದ ನಾಲೆ ಕೆಲಸ ಪೂರ್ಣಗೊಂಡು ಹಲವು ವರ್ಷಗಳೇ ಕಳೆದಿದ್ದು, ಹಲವು ಕಡೆ ನಾಲೆಯಲ್ಲಿ ಮಣ್ಣು, ಕಲ್ಲುಗಳು ತುಂಬಿಕೊಂಡು ನೀರು ಸರಾಗವಾಗಿ ಹರಿಯಲು ತೊಡಕಾಗಿತ್ತು. ಇದನ್ನು ಮನಗಂಡ ರೈತರು, ಯುವಕರು ಹಲವು ಸ್ಥಳದಲ್ಲಿ ನೀರು ಹರಿಯುತ್ತಿರುವ ನಾಲೆಯೊಳಗೆ ಇಳಿದು ಕಲ್ಲು ಮಣ್ಣುಗಳನ್ನು ತೆರವು ಮಡಡಿದರು. ಕೆಲವು ಸ್ಥಳದಲ್ಲಿ ಜೆಸಿಬಿ ಯಂತ್ರದಿಂದಲೂ ಮಣ್ಣನ್ನು ತೆಗೆಸಿದ್ದು ಕಂಡುಬಂತು.

ಇಂದಲ್ಲ ನಾಳೆ ಅಡಗೂರು ಕೆರೆಗೆ ನೀರು ಖಂಡಿತಾ ಹರಿಯಲಿದೆ ಎಂಬ ಕಾರಣಕ್ಕೆ ನಾಲೆ ಬಳಿ ಬಂದು ವೀಕ್ಷಿಸಿ ಹೋಗುತ್ತಿದ್ದೆವು. ಕೆಲವು ಸ್ಥಳದಲ್ಲಿ ನಾವೆ ನಾಲೆಯನ್ನು ತೋಡಿದ್ದೆವು. ಮಹಿಳೆಯರು ನಮಗೆ ಸಾಥ್‌ ಕೊಟ್ಟರು, ಬುತ್ತಿಕಟ್ಟಿಕೊಟ್ಟರು. ಎಲ್ಲರ ಪ್ರರಿಶ್ರಮದಿಂದಾಗಿ ಇಂದು ಕೆರೆಗೆ ನೀರು ಹರಿದಿದೆ. ನಮ್ಮ ಶ್ರಮಕ್ಕೆ ತಕ್ಕ ಫಲ ನೀಡಿದೆ ಎಂದು ರೈತಮುಖಂಡ ಎ.ಎಸ್‌.ಆನಂದ್‌ ಹೇಳಿದರು.

ಪತ್ರಿಕೆಯೊಂದಿಗೆ ಮಾತನಾಡಿದ ನೀರಾವರಿ ಹೋರಾಟಗಾರ ಪದ್ಮಪ್ರಭು, ನಾಲೆಯಲ್ಲಿ ಕೆಲವು ಕಡೆ ಕಾಂಕ್ರಿಟ್‌ ಲೈನಿಂಗ್‌ ಇರುವ ಸ್ಥಳದಲ್ಲಿ ನೀರು ಜಿನುಗುತ್ತಿದೆ. ನಾಲೆಯ ಏರಿ ಸಡಿಲವಾಗು ಸಾಧ್ಯತೆಯಿದೆ. ಅದರ ದುರಸ್ತಿ ಮಾಡುವ ಅಗತ್ಯ ಎಂದರು.

2 ದಶಕಗಳ ಹೋರಾಟದ ಫಲವಾಗಿ ಇಂದು ನಾಲೆಯಲ್ಲಿ ನೀರು ಹರಿದು ಇದೀಗ ಅಡಗೂರು ಕೆರೆಗೆ ಹರಿಯುತ್ತಿದೆ. ಈ ಭಾಗದ ರೈತರು, ಗ್ರಾಮಸ್ಥರು ಕೊಳವೆ ಬಾವಿಯಲ್ಲಿ ನೀರು ಇಲ್ಲದೆ ಕುಡಿಯಲು ನೀರಿಗಾಗಿ ಹಾಹಾಕಾರ ಪಡುತ್ತಿದ್ದರು. ಜಾನುವಾರುಗಳ ಸಾಕಾಣಿಕೆಗೆ ಉತ್ಸಾಹ ನೀಗಿಹೋಗಿತ್ತು. ಈಗ ನೀರಿನ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ. ನೀರು ಸದಾಕಾಲ ಹರಿಸಿದರೆ ಅನುಕೂಲ ಆಗಲಿದೆ. ನಮ್ಮಂತೆ ಹಳೇಬೀಡು ಹೋಬಳಿಯ ಕೆರೆಗಳಿಗೂ ನೀರು ಹರಿದು ದ್ವಾರಸಮುದ್ರ ಕೆರೆ ಭರ್ತಿಯಾಗಬೇಕೆಂಬುದು ನಮ್ಮ ಆಕಾಂಕ್ಷೆ.
- ವಿಜಯಕುಮಾರ್‌, ಹೋರಾಟಗಾರ


ಮಾದಿಹಳ್ಳಿ ಹಾಗೂ ಹಳೇಬೀಡು ಹೋಬಳಿ ಎರಡಕ್ಕೂ ಯಗಚಿ ನೀರು ಹರಿಯುವ ಯೋಜನೆ ಇದಾದರೂ ಇದೀಗ ಮೊದಲಿಗೆ ಮಾದಿಹಳ್ಳಿ ಹೋಬಳಿಯ ಅಡಗೂರು ಕೆರೆಗೆ ನೀರು ಹರಿದಿದೆ. ಶೀಘ್ರದಲ್ಲೆ ಹಳೇಬೀಡು ಹೋಬಳಿಯ ಕೆರೆಗಳಿಗೂ ನೀರು ಹರಿದು ಅಂತಿಮವಾಗಿ ಹಳೇಬೀಡಿನ ದ್ವಾರಸಮುದ್ರ ಕೆರೆಗೆ ನೀರು ಹರಿಯಲಿದೆ.
- ಕೆ.ಎಸ್‌.ಲಿಂಗೇಶ್‌, ಶಾಸಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ