Please enable javascript.ಗ್ರಾಮದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ,ಗ್ರಾಮದೇವಿ ಮೂರ್ತಿಯ ಭವ್ಯ ಮೆರವಣಿಗೆ - a grand parade of the village goddess - Vijay Karnataka

ಗ್ರಾಮದೇವಿ ಮೂರ್ತಿಯ ಭವ್ಯ ಮೆರವಣಿಗೆ

Vijaya Karnataka 28 Mar 2019, 5:00 am
Subscribe

ಅಕ್ಕಿಆಲೂರು: ಗ್ರಾಮದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಗ್ರಾಮದೇವಿ ಮೂರ್ತಿಯ ಮೆರವಣಿಗೆ ಸಹಸ್ರಾರು ಸಂಖ್ಯೆಯ ಭಕ್ತ ಸಮೂಹದ ಹರ್ಷೋದ್ಘಾರದ ಮಧ್ಯೆ ಸಂಭ್ರಮದಿಂದ ನೆರವೇರಿತು.

HVR-27AKR1
ಅಕ್ಕಿಆಲೂರು: ಗ್ರಾಮದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಗ್ರಾಮದೇವಿ ಮೂರ್ತಿಯ ಮೆರವಣಿಗೆ ಸಹಸ್ರಾರು ಸಂಖ್ಯೆಯ ಭಕ್ತ ಸಮೂಹದ ಹರ್ಷೋದ್ಘಾರದ ಮಧ್ಯೆ ಸಂಭ್ರಮದಿಂದ ನೆರವೇರಿತು.

ಭಕ್ತರ ದ್ಯಾಮವ್ವ ನಿನ್ನಾಲ್ಕುಧೋ.. ಉಧೋ... ಜಯಘೋಷಣೆ ಮತ್ತು ವಿವಿಧ ಕಲಾವಾಧ್ಯ ಮೇಳಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಸಾಗಿಬಂದ ಮೆರವಣಿಗೆ ಬುಧವಾರ ನಸುಕಿನಲ್ಲಿ ಪಾದಗಟ್ಟಿ ಬಳಿಯ ಆಕರ್ಷಕ ಮಂಟಪದಲ್ಲಿ ಕೊನೆಗೊಂಡು ಬಳಿಕ ಪ್ರತಿಷ್ಠಾಪನಾ ಮಹೋತ್ಸವ ನೆರವೇರಿತು.

ಮಂಗಳವಾರ ರಾತ್ರಿ 10 ಗಂಟೆಗೆ ಗ್ರಾಮದೇವಿ ದೇವಸ್ಥಾನದ ಬಳಿ ವಿಶೇಷ ಪೂಜೆ ಮತ್ತು ಧಾರ್ಮಿಕ ವಿಧಿಗಳು ಸಂಪನ್ನಗೊಂಡ ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಹಳೂರು ಓಣಿ, ಸಾಲಿಮಠ ಓಣಿ, ಕೆಳಗಿನ ಓಣಿ, ದುರ್ಗವ್ವನ ಗುಡಿ ಓಣಿ, ಚೌಕಿಮಠ, ಸಿ.ಎಂ.ಉದಾಸಿ ಮುಖ್ಯರಸ್ತೆ, ಪೇಟೆ ಓಣಿಯಲ್ಲಿ ಮೆರವಣಿಗೆ ಹಾಯ್ದು ಬಂದಿತು. ಸ್ಥಳೀಯ ಮಾತ್ರವಲ್ಲದೇ ಸುತ್ತಲಿನ ಗ್ರಾಮಗಳ ಭಕ್ತ ಸಮೂಹದ ಕಾಳಿ ಕಾಳಿ ಮಹಾಕಾಳಿ, ದ್ಯಾಮವ್ವ-ದುರ್ಗವ್ವ ಮೂರು ಮುಕ್ತೆವ್ವ ನಿನ್ನಾಲ್ಕುಧೋ ಉಧೋ... ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

ಟ್ರ್ಯಾಕ್ಟರ್‌ನಲ್ಲಿ ಇರಿಸಲಾಗಿದ್ದ ಗ್ರಾಮದೇವಿ ಮೂರ್ತಿಯನ್ನು ಚಿನ್ನ ಮತ್ತು ಬೆಳ್ಳಿಯ ಆಭರಣಗಳಿಂದ ಶೃಂಗರಿಸಲಾಗಿತ್ತು. ಗುಲಾಬಿ ಹೂವು ಮತ್ತು ನಿಂಬೆಹಣ್ಣುಗಳ ಹಾರಗಳಿಂದ ಅಲಂಕರಿಸಲಾಗಿದ್ದು, ಗಮನ ಸೆಳೆಯಿತು. ದೇವಿಯ ಮೂರ್ತಿಗೆ ಪ್ರತಿಯೊಂದು ಮನೆಗಳ ಎದುರು ಹೆಂಗಳೆಯರು ಆರತಿ ಬೆಳಗಿ, ಭಕ್ತಿಭಾವದಿಂದ ಬರಮಾಡಿಕೊಂಡರು. ಇಡೀ ಪಟ್ಟಣ ಕೇಸರಿಮಯವಾಗಿ ಸಿಂಗಾರಗೊಂಡಿತ್ತು.

ಸೌಂಡ್‌ ಸಿಸ್ಟ್‌ಂನಿಂದ ಹೊರಹೊಮ್ಮುತ್ತಿದ್ದ ಹಾಡುಗಳಿಗೆ ಸಹಸ್ರಾರು ಸಂಖ್ಯೆಯ ಯುವಕರು ಕೇಕೆ ಹಾಕಿ ಏಕಕಾಲಕ್ಕೆ ನರ್ತಿಸುತ್ತಿದ್ದ ದೃಶ್ಯ ಕಣ್ತುಂಬಿಕೊಳ್ಳಲು ಸೊಗಸೆನಿಸಿತು. ಪೂಜಾ ಕುಣಿತ, ಚಂಡಿ ವಾದ್ಯ, ವೀರಗಾಸೆ, ಹುಲಿ ಕುಣಿತ, ಕುದುರೆ ಕುಣತ, ಬೇಡರ ವೇಷ, ಭಜನಾ ಮೇಳ, ಗೊಂಬೆ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಕಲಾ ಪ್ರದರ್ಶನ ಸಾಂಸ್ಕೃತಿಕ ಲೋಕವನ್ನೇ ಅನಾವರಣಗೊಳಿಸಿ ಜಾತ್ರಾ ಮಹೋತ್ಸವಕ್ಕೆ ಮೆರುಗು ತಂದುಕೊಟ್ಟಿತು. ಉಗ್ರ ನರಸಿಂಹ ಸ್ತಬ್ಧಚಿತ್ರ ಮನಸೂರೆಗೊಂಡಿತು.

ಕೆಲವು ಯುವಕರು ಹಲಿಗೆ ನುಡಿಸುತ್ತಾ ಬಗೆ ಬಗೆಯ ಸ್ವರಗಳನ್ನು ಹೊರಸೂಸಿ ನರ್ತಿಸಿ, ಸಂಭ್ರಮಿಸಿದರು. ಗುರುರಾಯಪಟ್ಟಣ, ಸೇವಾಲಾಲ ಸೇರಿದಂತೆ ಸುತ್ತಲಿನ ಕೆಲವು ತಾಂಡಾಗಳಿಂದ ಆಗಮಿಸಿದ್ದ ಲಂಬಾಣಿ ಮಹಿಳೆಯರು ತಮ್ಮ ಸಮುದಾಯದ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. ಮೆರವಣಿಗೆಯುದ್ದಕ್ಕೂ ಜೋಗತಿಯರು ಚಾಮರ ಅಲುಗಾಡಿಸುತ್ತಾ ತನ್ಮಯತೆಯಿಂದ ಉಧೋ.. ಉಧೋ... ಎಂದು ಉದ್ಘರಿಸುತ್ತಾ ಸಾಗಿಬಂದು ಭಕ್ತಿಭಾವ ಪ್ರದರ್ಶಿಸಿದರು.

ಅಕ್ಕಿಆಲೂರು ಮಾತ್ರವಲ್ಲದೇ ಸುತ್ತಲಿನ ಕಲ್ಲಾಪುರ, ಗೊಂದಿ, ಹಾವಣಗಿ, ಡೊಳ್ಳೇಶ್ವರ, ಸುರಳೇಶ್ವರ, ಶಾಡಗುಪ್ಪಿ, ಹೊಂಕಣ, ಬಾಳಂಬೀಡ, ಅರಳೇಶ್ವರ, ಹೋತನಹಳ್ಳಿ, ಅಕ್ಕಿವಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು. ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು ಮೆರವಣಿಗೆ ಅಚ್ಚುಕಟ್ಟಾಗಿ ನೆರವೇರುವಂತೆ ಮಾಡುವಲ್ಲಿ ಯಶಸ್ವಿಯಾದರು.

ಬಲಿದಾನಕ್ಕೆ ವಿದಾಯ: ಬಹುತೇಕ ಎಲ್ಲ ಗ್ರಾಮದೇವಿ ಜಾತ್ರೆಗಳಲ್ಲಿ ಕೋಣ ಬಲಿ ಸಾಮಾನ್ಯ. ಆದರೆ ಪಟ್ಟಣದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಬಲಿದಾನಕ್ಕೆ ವಿದಾಯ ಹಾಡುವ ಮೂಲಕ ಸ್ಥಳೀಯರು ಇಡೀ ನಾಡಿಗೆ ಆದರ್ಶ ಸಂದೇಶ ಸಾರುವಲ್ಲಿ ಯಶಸ್ವಿಯಾದರು. ಇದಕ್ಕೆ ಪ್ರೇರಣೆ ಇಲ್ಲಿನ ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ. ನಿಲ್ಲಿಸೋಣ ಪ್ರಾಣಿ ಬಲಿದಾನ ಎನ್ನುವ ಸಂಕಲ್ಪದೊಂದಿಗೆ ಜಾತ್ರಾ ಮಹೋತ್ಸವದಲ್ಲಿ ಕೋಣ ಬಲಿದಾನ ಮಾಡದೇ ರಾಜ್ಯಕ್ಕೊಂದು ಉತ್ತಮ ಸಂದೇಶ ಸಾರಿದ್ದು ವಿಶೇಷವಾಗಿತ್ತು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ