ಆ್ಯಪ್ನಗರ

ಬಣ್ಣದಾಟಕ್ಕೆ ಬ್ಯಾಡಗಿ ಸಿದ್ಧ

ಬ್ಯಾಡಗಿ : ಯುವ ಜನತೆಯ ನೆಚ್ಚಿನ ಸಂಭ್ರಮಾಚರಣೆ ಬಣ್ಣದಾಟಕ್ಕೆ ಬ್ಯಾಡಗಿ ಪಟ್ಟಣ ಸಿದ್ಧವಾಗಿದ್ದು, ಸೋಮವಾರ ಮಾ.25 ರಂದು ಹಲಗಿ, ಬಾಜಾ ಸದ್ದನ್ನು ಏಲ್ಲೆಡೆ ಮಾರ್ದನಿಸಲು ಯುವಕರ ಪಡೆ ಸಜ್ಜಾಗಿ ನಿಂತಿದೆ.

Vijaya Karnataka 25 Mar 2019, 5:00 am
ಬ್ಯಾಡಗಿ : ಯುವ ಜನತೆಯ ನೆಚ್ಚಿನ ಸಂಭ್ರಮಾಚರಣೆ ಬಣ್ಣದಾಟಕ್ಕೆ ಬ್ಯಾಡಗಿ ಪಟ್ಟಣ ಸಿದ್ಧವಾಗಿದ್ದು, ಸೋಮವಾರ ಮಾ.25 ರಂದು ಹಲಗಿ, ಬಾಜಾ ಸದ್ದನ್ನು ಏಲ್ಲೆಡೆ ಮಾರ್ದನಿಸಲು ಯುವಕರ ಪಡೆ ಸಜ್ಜಾಗಿ ನಿಂತಿದೆ.
Vijaya Karnataka Web HVR-23BYD5B


ಓಕುಳಿ ಎಂದರೆ ಯುವ ಜನತೆ ಮೈಮನಗಳಲ್ಲಿ ಏನೋ ರೊಮಾಂಚನ, ಪ್ರತಿ ವರ್ಷದಂತೆ ಈ ವರ್ಷವು ಪಟ್ಟಣದಲ್ಲಿ ರಂಗು ರಂಗಿನ ಬಣ್ಣದಾಟಕ್ಕೆ ಎಲ್ಲ ಸಿದ್ಧತೆಗಳು ನಡೆಯುತ್ತಿದ್ದು, ಹಲಗಿ ಸದ್ದು ಎಲ್ಲೆಡೆ ಮಾರ್ದನಿಸುತ್ತಿದೆ.

ವ್ಯಾಪಾರ ಜೋರು: ರಂಗಿನಾಟಕ್ಕೆ ಪ್ರಮುಖ ಆಕರ್ಷಣೆಯಾದ ಹಲಗಿ ಹಾಗೂ ಪಿಚಕಾರಿ ಸೇರಿದಂತೆ ಬಣ್ಣಗಳ ವ್ಯಾಪಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿನ ಅಂಗಡಿಗಳಲ್ಲಿ ಜೋರಾಗಿ ನಡೆದಿದ್ದು ಮಕ್ಕಳು ಹೆಚ್ಚಾಗಿ ಇದರಲ್ಲಿ ತೊಡಗಿದ್ದರು.

ಪ್ರತಿ ವರ್ಷದಂತೆ ಈ ವರ್ಷವು ಓಕುಳಿ ಕಾರ‍್ಯಕ್ರಮವು ಮುಂಜಾನೆ 8 ಗಂಟೆಗೆ ಪ್ರಾರಂಭವಾಗಿ ಮಧ್ಯಾಹ್ನ 4 ಗಂಟೆ ಸುಮಾರಿಗೆ ಮುಗಿಯಲಿದೆ. ಹೋಳಿ ಹಬ್ಬದ ಪ್ರಯುಕ್ತ ಹಳೇಪೇಟೆಯಲ್ಲಿ ರತಿ ಕಾಮರನ್ನು ಸ್ಥಾಪಿಸಲಾಗಿದ್ದು ಗಾಂಧಿನಗರದ ಹರಿಜನಕೇರಿಯಿಂದ ತಂದಂತಹ ಬೆಂಕಿಯಿಂದ ದಹನ ಮಾಡುವ ಮೂಲಕ ಬಣ್ಣದೋಕುಳಿಗೆ ಚಾಲನೆ ದೊರೆಯಲಿದೆ.

ಎತ್ತಿನ ಬಂಡಿಯಲ್ಲಿ ಬಣ್ಣ: ಎರಡರಿಂದ ಮೂರು ಡ್ರಮ್‌ಗಳಲ್ಲಿ ಬಣ್ಣದ ನೀರನ್ನು ತುಂಬಿ ಎತ್ತಿನ ಬಂಡಿ ಮೇಲಿರಿಸಿ ವಿವಿಧ ವಾದ್ಯ ಮೇಳಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿ ಎಲ್ಲರ ಮೇಲೆ ಬಣ್ಣ ಎರಚುತ್ತಾ ಸಾಗುವ ಪದ್ಧತಿ ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದು ಈ ವರ್ಷವು ಮುಂದುವರೆಯಲಿದೆ.

ಮಡಕೆ ಒಡೆಯುವ ಸ್ಪರ್ಧೆ: ರಂಗಿನಾಟದ ಪ್ರಯುಕ್ತ ಪಟ್ಟಣದ ಚಾವಡಿ ರಸ್ತೆಯಲ್ಲಿ ಮಡಕೆ ಒಡೆಯುವ ಸ್ಪರ್ಧೆ ಆಯೋಜಿಸಲಾಗಿದ್ದು ಪ್ರಸಕ್ತ ವರ್ಷದ ಹೋಳಿ ಹಬ್ಬದ ವಿಶೇಷ ಆಕರ್ಷಣೆಗಳಲ್ಲಿ ಒಂದಾಗಿದೆ. ಇದಕ್ಕಾಗಿ ಎತ್ತರದ ಎರಡು ಕಂಬಗಳ ನಡುವೆ ಹಗ್ಗ ಕಟ್ಟಿ ಮಧ್ಯದಲ್ಲಿ ಬಣ್ಣದ ನೀರು ತುಂಬಿದ್ದ ಮಡಕೆಯನ್ನು ಕಟ್ಟಲಾಗಿದ್ದು ಇದನ್ನು ಒಡೆಯಲು ಸಾಹಸಿ ಯುವಕರು ಕಾತರರಾದ್ದಾರೆ.

ಮಹಿಳೆಯರೂ ಭಾಗಿ: ಕೆಲ ವರ್ಷಗಳಿಂದ ಮಹಿಳೆಯರು, ಯುವತಿಯರು ರಂಗಿನಾಟದಲ್ಲಿ ತೊಡಗುತ್ತಿದ್ದು ಹಬ್ಬದ ಮರೆಗನ್ನು ಹೆಚ್ಚಿಸುವ ಸಾಧ್ಯತೆ ಇದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ: ಸೋಮವಾರ ಬಣ್ಣದ ಹಬ್ಬದ ಜೊತೆಯಲ್ಲಿ ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿನ 7 ಕೇಂದ್ರದಲ್ಲಿ ನಡೆಯಲಿದ್ದು ಇದರಿಂದ ಕೆಲ ವಿದ್ಯಾರ್ಥಿಗಳು ಹಬ್ಬವನ್ನು ಮಿಸ್‌ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಪರೀಕ್ಷೆ ಮುಗಿಸಿಕೊಂಡು ಬಣ್ಣದಲ್ಲಿ ಮಿಂದೇಳುವ ಇರಾದೆ ವ್ಯಕ್ತಪಡಿಸುತ್ತಿದ್ದಾರೆ.

24 ತಾಸು ಬಾರ್‌ ಬಂದ್‌: ಎಸ್ಸೆಸ್ಸೆಲ್ಸಿ ಪರೀಕ್ಷೆ ಹಾಗೂ ಹೋಳಿ ಬಣ್ಣದಾಟ ಎರಡು ಒಂದೇ ದಿನ ಬಂದಿದ್ದು ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಪೊಲೀಸ್‌ ಇಲಾಖೆ ಸೂಕ್ತ ಬಂದೋಬಸ್ತಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಸೋಮವಾರ ಮಾ.25 ಬೆಳಿಗ್ಗೆ 6 ರಿಂದ ಮಾ.26 ಬೆಳಿಗ್ಗೆ 6 ವರೆಗೆ ಮದ್ಯದಂಗಡಿ ಬಂದ್‌ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ