ಆ್ಯಪ್ನಗರ

ಹಾವೇರಿ: ವರುಷಗಳಾದರೂ ಇನ್ನೂ ಸಿಕ್ಕಿಲ್ಲ ನೆರೆ ಪರಿಹಾರ

ಬಿದ್ದ ಮನೆಗಳಿಗೆ ಸರಕಾರ ಐದು ಲಕ್ಷ ರೂ. ಪರಿಹಾರ ನೀಡುತ್ತದೆ. ಆದರೆ ಚಾವಣಿ ಕುಸಿದ ಮನೆಗಳನ್ನು ಎ ಕೆಟಗಿರಿ ಬದಲು ಸಿ ಕೆಟಗಿರಿಗೆ ಸೇರಿಸಿರುವುದು ಸರಿಯಲ್ಲ. ಕೂಡಲೇ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಸಿ ಕೆಟಗಿರಿ ಮನೆಗಳ ಸಂಪೂರ್ಣ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ಕಳುಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Vijaya Karnataka Web 12 Mar 2021, 5:38 pm
ರಾಣೇಬೆನ್ನೂರ: ಪ್ರಕೃತಿ ವಿಕೋಪದಿಂದ ಬಿದ್ದ ಮನೆಗಳಿಗೆ ಪರಿಹಾರ ನೀಡಲು ವಿಳಂಬ ಮಾಡುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಶಾಸಕ ಅರುಣಕುಮಾರ ಪೂಜಾರ ಹರಿಹಾಯ್ದ ಘಟನೆ ಶುಕ್ರವಾರ ಜರುಗಿತು.
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. ಬಿದ್ದ ಮನೆಗಳಿಗೆ ಸರಕಾರ ಐದು ಲಕ್ಷ ರೂ. ಪರಿಹಾರ ನೀಡುತ್ತದೆ. ಆದರೆ ಚಾವಣಿ ಕುಸಿದ ಮನೆಗಳನ್ನು ಎ ಕೆಟಗಿರಿ ಬದಲು ಸಿ ಕೆಟಗಿರಿಗೆ ಸೇರಿಸಿರುವುದು ಸರಿಯಲ್ಲ. ಕೂಡಲೇ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಸಿ ಕೆಟಗಿರಿ ಮನೆಗಳ ಸಂಪೂರ್ಣ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ಕಳುಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಅಡವಿ ಆಂಜನೇಯ ಬಡಾವಣೆಯಲ್ಲಿ 2012ರಲ್ಲಿಯೇ 536 ಆಶ್ರಯ ಮನೆಗಳ ವಿತರಣೆಗೆ ಜನರಿಂದ ಹಣ ತುಂಬಿಸಿಕೊಂಡಿದ್ದರೂ ಇದುವರೆಗೂ ಹಂಚಿಕೆ ಮಾಡಿಲ್ಲವೇಕೆ? ಎಂದು ಶಾಸಕರು ನಗರದ ಗ್ರಾಮ ಲೆಕ್ಕಾಧಿಕಾರಿಯನ್ನು ಪ್ರಶ್ನಿಸಿದರು. ಉತ್ತರಿಸಿದ ಗ್ರಾಮಲೆಕ್ಕಾಧಿಕಾರಿ, ಇದು ನಗರಸಭೆ ವ್ಯಾಪ್ತಿಗೆ ಬರುತ್ತದೆ. ಮನೆ ಕುಸಿತಕ್ಕೆ ಪರಿಹಾರ ನೀಡಿಕೆ ಮಾತ್ರ ಕಂದಾಯ ಇಲಾಖೆಗೆ ಸೇರಿದೆ ಎಂದರು.

ವಿಚಾರಣೆ ಕೊಠಡಿ ತೆರೆಯಿರಿ

ತಾಲೂಕಿನ ಚಿಕ್ಕಮಾಗನೂರ ಗ್ರಾಮದ ಮಹಿಳೆಯೊಬ್ಬರು ಬಿದ್ದ ಮನೆಗೆ ಪರಿಹಾರ ಪಡೆಯುವ ಸಲುವಾಗಿ ನಾಲ್ಕು ವಷಗಳಿಂದ ಅಲೆಯುತ್ತಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕಚೇರಿ ಕೆಲಸಕ್ಕೆ ಬರುವವರ ಮಾಹಿತಿ ಸಂಗ್ರಹಿಸಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗುಡಿಯಲ್ಲಿ ವಾಸ

ತಾಲೂಕಿನ ನದಿಹರಳಹಳ್ಳಿ ಗ್ರಾಮದಲ್ಲಿ ಮನೆಯೊಂದು ಸಂಪೂರ್ಣ ಕುಸಿದಿದ್ದರೂ ಪರಿಹಾರ ಸಿಗದಿರುವುದರಿಂದ ಆ ಕುಟುಂಬದ ಸದಸ್ಯರು ಗುಡಿಯಲ್ಲಿ ವಾಸವಾಗಿದ್ದಾರೆ. ಇದಕ್ಕೆ ಕಾರಣವೇನು? ಎಂದು ಶಾಸಕರು ಪ್ರಶ್ನಿಸಿದರು. ಫಲಾನುಭವಿಯ ಹೆಸರಿನಲ್ಲಿ ಎರಡು ಲಾಗಿನ್‌ ಹುಟ್ಟು ಹಾಕಿರುವುದರಿಂದ ಈ ರೀತಿ ಸಮಸ್ಯೆಯಾಗಿದೆ. ಇದು ಬೆಂಗಳೂರಿನಿಂದಲೇ ಆಗಿದ್ದು ಅಲ್ಲಿಯೇ ಅದನ್ನು ಸರಿಪಡಿಸಬೇಕಾಗಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದರು.

ಬೆಳೆ ವಿಮೆ ವಿಳಂಬಕ್ಕೆ ಬೇಸರ

ಗದಗ ಜಿಲ್ಲೆಯಲ್ಲಿ ಮಳೆ ಸುರಿದು 15 ದಿನಗಳಲ್ಲಿಯೇ ರೈತರಿಗೆ ಬೆಳೆ ಪರಿಹಾರ ನೀಡಲಾಗಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಇದು ಯಾಕೆ ಸಾಧ್ಯವಿಲ್ಲ ಎಂದು ಶಾಸಕರು ಪ್ರಶ್ನಿಸಿದರು.

ಮೊಬೈಲ್‌ ನೋಡುತ್ತಿದ್ದ ಗ್ರಾಮಲೆಕ್ಕಾಧಿಕಾರಿ

ಸಭೆ ನಡೆಯುತ್ತಿರುವಾಗ ಮೊಬೈಲ್‌ ವೀಕ್ಷಣೆಯಲ್ಲಿ ತೊಡಗಿದ್ದ ವಿಲ್ಸನ್‌ ಪ್ರಭಾಕರ ಎಂಬ ಗ್ರಾಮ ಲೆಕ್ಕಾಧಿಕಾರಿಯನ್ನು ಶಾಸಕರು ತರಾಟೆಗೆ ತೆಗೆದುಕೊಂಡರು. ಬೇಲೂರ ಭಾಗದಲ್ಲಿ ನಿಮ್ಮ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿವೆ. ಮುತುವರ್ಜಿಯಿಂದ ಕೆಲಸ ನಿರ್ವಹಿಸಿ ಎಂದರು.

ಹೊಸ ಪಡಿತರ ಅಂಗಡಿ

ಮೆಡ್ಲೇರಿ ಗ್ರಾಮದಲ್ಲಿ 3000 ಕಾರ್ಡುದಾರರಿದ್ದರೂ ಇಂದಿನವರೆಗೂ ಒಂದೇ ಪಡಿತರ ವಿತರಣಾ ಅಂಗಡಿಯಿದೆ. ಅಲ್ಲಿ ಹೊಸದಾಗಿ ಮೂರು ಹಾಗೂ ಅದೇ ರೀತಿ ಮಾಕನೂರಿನಲ್ಲಿ ಒಂದು, ಕೊಡಿಯಾಲ ಹೊಸಪೇಟೆಯಲ್ಲಿ ಎರಡು ಪಡಿತರ ವಿತರಣಾ ಅಂಗಡಿ ತೆರೆಯಲು ಅವಕಾಶ ಕಲ್ಪಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ