ಆ್ಯಪ್ನಗರ

ಪರಿಸರ ಸ್ನೇಹಿ ಗಣಪ ರಚನೆ ಚುರುಕು

ಪುನೀತಾ.ಎಂ.ಪಿ ಹಾನಗಲ್ಲ: ಪಿ.ಓ.ಪಿ ಗಣೇಶ ಮೂರ್ತಿ ನಿಷೇಧದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಕಲೆಗಾರಿಕೆಯ ಕುಂಬಾರರ ಮನೆಗಳಲ್ಲಿ ಮಣ್ಣಿನ ಗಣಪ ರಚನೆ ಚುರುಕು ಪಡೆದಿದ್ದು, ಸುಂದರ ವಿನಾಯಕ ವಿಗ್ರಹಗಳು ರೂಪುಗೊಳ್ಳುತ್ತಿವೆ.

Vijaya Karnataka 19 Jul 2019, 5:00 am
ಪುನೀತಾ.ಎಂ.ಪಿ ಹಾನಗಲ್ಲ: ಪಿ.ಓ.ಪಿ ಗಣೇಶ ಮೂರ್ತಿ ನಿಷೇಧದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಕಲೆಗಾರಿಕೆಯ ಕುಂಬಾರರ ಮನೆಗಳಲ್ಲಿ ಮಣ್ಣಿನ ಗಣಪ ರಚನೆ ಚುರುಕು ಪಡೆದಿದ್ದು, ಸುಂದರ ವಿನಾಯಕ ವಿಗ್ರಹಗಳು ರೂಪುಗೊಳ್ಳುತ್ತಿವೆ.
Vijaya Karnataka Web HVR-18HGL2


ಗಣಪ ರಚನೆಗೆ ಅಗತ್ಯದ ಶುದ್ಧ ಜೇಡಿ ಮಣ್ಣಿನ ಕೊರತೆ, ಮೂರ್ತಿ ರಚನೆಯ ಕೌಶಲ್ಯದ ಕಲೆಗಾರರ ಸಂಖ್ಯೆ ಕಡಿಮೆ ಇರುವುದು ಪರಿಸರ ಸ್ನೇಹಿ ಮಣ್ಣಿನ ಗಣೇಶ ರಚನೆಯಲ್ಲಿ ತೊಡಕು ತಂದಿತ್ತಿದೆ. ಹಾನಗಲ್ಲನ 3 ಕುಂಬಾರರ ಮನೆ ಮತ್ತು ಗಂಗಾನಗರ ಭಾಗದ ಆಸಕ್ತ ವಿಗ್ರಹ ರಚನೆಗಾರ ಯುವಕ ಪ್ರದೀಪಕುಮಾರ ಹುನಗುಂದ ಮನೆಯಲ್ಲಿ ಈಗಾಗಲೇ ಗಣೇಶ ಮೂರ್ತಿ ನಿರ್ಮಾಣದ ಕಾರ್ಯ ಆರಂಭಗೊಂಡಿದೆ. ಜನರ ಬೇಡಿಕೆಗೆ ತಕ್ಕಂತೆ ಗಣಪ ರಚನೆಯ ತರಾತುರಿಯಲ್ಲಿ ಕಲೆಗಾರರು ಇದ್ದಾರೆ.

ಮನೆಗಳಲ್ಲಿ ಪ್ರತಿಷ್ಠಾಪಿಸುವ 1 ರಿಂದ 3 ಅಡಿ ಎತ್ತರದ ಗಣೇಶ ಮತ್ತು ಸಾರ್ವಜನಕ ಪ್ರತಿಷ್ಠಾಪನೆಯ 10 ರಿಂದ 15 ಅಡಿ ಎತ್ತರದ ಮಣ್ಣಿನ ಗಣಪ ವಿಗ್ರಹಗಳು ರೂಪು ತಾಳುತ್ತಿವೆ. ಶುದ್ಧ ಪರಿಸರ ಸ್ನೇಹಿ ಗಣೇಶ ತಯಾರಿಕೆ ಮೂಲಕ ಕುಂಬಾರರು ಜನರನ್ನು ಆಕರ್ಷಿಸುತ್ತಿದ್ದಾರೆ. ಆಯಿಲ್‌ ಪೆಂಟ್‌ ಬಳಸದೆ, ವಾಟರ್‌ ಪೆಂಟ್‌ ಮೂಲಕ ಗಣೇಶನಿಗೆ ಅಲಂಕಾರ ಮಾಡಲಾಗುತ್ತಿದೆ. ವಿಸರ್ಜನೆ ಬಳಿಕ ನೀರಿನಲ್ಲಿ ಗಣೇಶ ಮೂತಿರ್ತಿ ಸುಲಭವಾಗಿ ಕರಗುತ್ತದೆ ಎಂಬ ಭರವಸೆಯನ್ನು ಕುಂಬಾರರು ವ್ಯಕ್ತಪಡಿಸುತ್ತಾರೆ.

ಮೊದಲೆಲ್ಲ ಸ್ಥಳೀಯವಾಗಿ ಸಿಗುತ್ತಿದ್ದ ಗಣೇಶ ಮೂರ್ತಿ ತಯಾರಿಕೆಯ ವಿಶೇಷ ಮಣ್ಣು ಈಗ ಲಭ್ಯವಿಲ್ಲ. ಹಾಗಾಗಿ ಕೊಪ್ಪರಸಿಕೊಪ್ಪ, ಕೆಲವರಕೊಪ್ಪ, ಬೆಳಗಾಲಪೇಟೆ ಮತ್ತಿತರೆಡೆ ನೀರು ಹರಿದು ಬರುವ ಕೆರೆ-ಕಟ್ಟೆಗಳ ಮಣ್ಣು ತರಿಸಿಕೊಂಡು, ಶುದ್ಧಗೊಳಿಸಿ, ಹದಹಾಕಿ ಜಿಗುಟು ಮಣ್ಣು ಹರಡಿಕೊಂಡು ವಿಗ್ರಹಗಳ ತಯಾರಿಕೆಯಲ್ಲಿ ತೊಡಗಿದ್ದಾರೆ.

ಮನೆಗಳಲ್ಲಿ ಪ್ರತಿಷ್ಠಾಪಿಸುವ ಸಣ್ಣ ಗಾತ್ರದ ಸುಮಾರು 500 ಗಣೇಶ ವಿಗ್ರಹ ಮತ್ತು ಸಾರ್ವಜನಿಕ ಪ್ರತಿಷ್ಠಾಪನೆಯ 15 ದೊಡ್ಡ ಗಣಪ ಮೂರ್ತಿಗಳನ್ನು ರಚಿಸುವಲ್ಲಿ ನಿರತವಾಗಿರುವ ಇಲ್ಲಿನ ಕುಂಬಾರ ಮನೆಯ ರಾಘವೇಂದ್ರ ಚಕ್ರಸಾಲಿ ಅವರಿಗೆ ಮನೆಮಂದಿ ಸಾಥ್‌ ನೀಡುತ್ತಿದ್ದಾರೆ. ಆದರೆ ಅಗತ್ಯದ ಮಣ್ಣಿನ ಕೊರತೆಯನ್ನು ರಾಘವೇಂದ್ರ ಎದುರಿಸುತ್ತಿದ್ದಾರೆ.

ಮಣ್ಣಿನ ಪರಿಕರ ರಚನೆಗಾಗಿ ಕುಂಬಾರ ವೃತ್ತಿಯವರಿಗೆ ಮೀಸಲಿದ್ದ ಪಟ್ಟಣದ ನವನಗರ ಭಾಗದ ಸರಕಾರಿ ಪಿಯು ಕಾಲೇಜು ಹಿಂಭಾಗದ ನೀರಿನ ಕಟ್ಟೆ ಅರ್ದ ಅತಿಕ್ರಮಣ ಆಗಿದೆ. ಇಲ್ಲಿ ಸಿಗುತ್ತಿದ್ದ ಶುದ್ಧ ಜೇಡಿ ಮಣ್ಣು ಸಿಗದಿರುವ ಕಾರಣ ಕುಂಬಾರ ವೃತ್ತಿಗೆ ಕಂಟಕವಾಗುತ್ತಿದೆ. ದೂರದ ಊರಿನಿಂದ ಮಣ್ಣು ತರಿಸಿಕೊಂಡು ನಮ್ಮ ಉದ್ಯೋಗ ಸಂಭಾಳಿಸುವುದು ಅಸಾಧ್ಯ ಎಂಬಂತಾಗಿದೆ ಎಂದು ರಾಘವೇಂದ್ರ ನೋವು ತೋಡಿಕೊಳ್ಳುತ್ತಾರೆ.

ತರಾವರಿ ವಿನ್ಯಾಸ: ಶಾಲೆಯಲ್ಲಿ ಕ್ಲೇ ಮಾಡೆಲ್‌ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಮಣ್ಣಿನಿಂದ ಕಲಾಕೃತಿ ರಚಿಸುವ ಆಸಕ್ತಿ ಹುಟ್ಟಿಸಿಕೊಂಡಿರುವ ಇಲ್ಲಿನ ಗಂಗಾನವರ ಯುವಕ ಪ್ರದೀಪಕುಮಾರ ಹುನಗುಂದ ಕೈಚಳಕದಲ್ಲಿ ತರಾವರಿ ವಿನ್ಯಾಸದ ಸುಂದರ ಗಣೇಶ ಮೂರ್ತಿಗಳು ರೂಪು ತಳೆಯುತ್ತಿವೆ. ಶುದ್ಧ ಪರಿಸರ ಸ್ನೇಹಿ ಗಣೇಶ ವಿಗ್ರಹ ರಚನೆ ಮಾಡುತ್ತೇನೆ. ಗ್ರಾಹಕರು ಈಗ ಜಾಗೃತಗೊಂಡಿದ್ದಾರೆ. ವಾಟರ್‌ ಪೆಂಟ್‌ ಬಳಕೆಯೂ ಬೇಡ. ಬರೀ ಮಣ್ಣಿನ ಗಣೇಶ ಮೂರ್ತಿ ಅಪೇಕ್ಷಿಸುತ್ತಾರೆ. ಜನರ ಬೇಡಿಕೆಗೆ ತಕ್ಕಂತೆ ವಿಗ್ರಹ ರೂಪಿಸಿ ಕೊಡುತ್ತೇವೆ. ಸುಮಾರು 250 ವಿಗ್ರಹ ರಚನೆಗೆ ಸಜ್ಜುಗೊಂಡಿದ್ದೇನೆ, ಹಾಗಂತ ಇದು ಲಾಭದಾಯಕ ಉದ್ಯೋಗವಲ್ಲ. ನನ್ನ ಆಸಕ್ತಿ, ಜನರ ಒಲವು ಹೆಚ್ಚೆಚ್ಚು ಗಣೇಶ ಮೂರ್ತಿ ತಯಾರಿಕೆಗೆ ಉತ್ತೇಜಿಸುತ್ತದೆ ಎಂದು ಪ್ರದೀಪಕುಮಾರ ಹೇಳುತ್ತಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ