ಆ್ಯಪ್ನಗರ

ತ್ಯಾಜ ವಿಲೇವಾರಿ ಸ್ಥಳವಾದ ಉದ್ಯಾನ

ಶಿಗ್ಗಾವಿ: ಪಠ್ಯೇತರ ಚಟುವಟಿಕೆಗಳೊಂದಿಗೆ ಮಕ್ಕಳ ಮನಸ್ಸು ವಿಕಾಸಗೊಳಿಸುವ ಸದುದ್ದೇಶದಿಂದ ಪಟ್ಟಣದ ಹೃದಯ ಭಾಗದಲ್ಲಿ ಸ್ಥಾಪಿತಗೊಂಡಿರುವ ಚಿಕ್ಕ ಮಕ್ಕಳ ಉದ್ಯಾನ, ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ತ್ಯಾಜ ವಿಲೇವಾರಿ ಸ್ಥಳವಾಗಿ ಪರಿವರ್ತನೆಯಾಗುತ್ತಿದೆ.

Vijaya Karnataka 15 Jan 2019, 5:00 am
ಶಿಗ್ಗಾವಿ: ಪಠ್ಯೇತರ ಚಟುವಟಿಕೆಗಳೊಂದಿಗೆ ಮಕ್ಕಳ ಮನಸ್ಸು ವಿಕಾಸಗೊಳಿಸುವ ಸದುದ್ದೇಶದಿಂದ ಪಟ್ಟಣದ ಹೃದಯ ಭಾಗದಲ್ಲಿ ಸ್ಥಾಪಿತಗೊಂಡಿರುವ ಚಿಕ್ಕ ಮಕ್ಕಳ ಉದ್ಯಾನ, ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ತ್ಯಾಜ ವಿಲೇವಾರಿ ಸ್ಥಳವಾಗಿ ಪರಿವರ್ತನೆಯಾಗುತ್ತಿದೆ.
Vijaya Karnataka Web garden of waste disposal
ತ್ಯಾಜ ವಿಲೇವಾರಿ ಸ್ಥಳವಾದ ಉದ್ಯಾನ


ಪುರಸಭೆ 2008 ರಲ್ಲಿ ಎಸ್‌ಎಫ್‌ಸಿ ಯೋಜನೆಯಡಿ 8 ಲಕ್ಷ ರೂ.ಗಳಲ್ಲಿ ನಿರ್ಮಿಸಿರುವ ಉದ್ಯಾನಕ್ಕೂ ಮಕ್ಕಳಿಗೂ ಇಂದು ಸಂಬಂಧ ಇಲ್ಲದಂತೆ ಭಾಸವಾಗಿದೆ. ಸ್ಥಳೀಯರ ಅನಾಗರಿಕತೆಗೆ ಕಸದಿಂದ ತುಂಬಿಕೊಳ್ಳುವ ಮೂಲಕ ಅಧ್ವಾನಗೊಂಡಿರುವ ಉದ್ಯಾನ ದಾರಿಹೋಕರಿಗೆ ಮೂತ್ರ ವಿಸರ್ಜನೆ ಸ್ಥಳವಾಗಿದೆ.

ಬೆಳಿಗ್ಗೆಯಿಂದ ಸಂಜೆವರೆಗೆ ಹಂದಿ-ದನಕರುಗಳ ದಡ್ಡಿಯಾದರೆ, ರಾತ್ರಿ ಕುಡುಕರಿಗೆ ವಿಶ್ರಾಂತಿ ಸ್ಥಳವಾಗಿದೆ. ವಿಶೇಷವಾಗಿ ಈ ಉದ್ಯಾನದ ಅಕ್ಕ-ಪಕ್ಕದಲ್ಲಿರುವ ಮನೆ ಮಂದಿ ನಿದ್ರೆಗೆ ಜಾರಿದ್ದೇ ತಡ ಅನೈತಿಕ ಚಟುವಟಿಕೆಗಳ ತಾಣವಾಗಿರುವ ಬಗ್ಗೆ ದೂರುಗಳು ವ್ಯಕ್ತವಾಗಿವೆ. ಸಾರ್ವಜನಿಕ ವಿರೋಧ ವ್ಯಕ್ತವಾಗದ ಹಿನ್ನೆಲೆಯಲ್ಲಿ ಮೋಜು, ಮಸ್ತಿ ಅವ್ಯಾಹತವಾಗಿ ನಡೆಯುತ್ತಿದೆ.

ಮತ್ತೊಂದೆಡೆ ಉದ್ಯಾನದ ಕಾಂಪೌಂಡ್‌ನ್ನು ತೊಳೆದ ಬಟ್ಟೆಗಳನ್ನು ನೇತು ಹಾಕಲು ಉಪಯೋಗಿಸಿಕೊಳ್ಳುತ್ತಿದ್ದಾರೆ. ಜಾಹೀರಾತು ಪೋಸ್ಟರ್‌ ಅಂಟಿಸಲು ಉಪಯೋಗಿಸುತ್ತಿದ್ದಾರೆ. ಇತ್ತ ಪುರಸಭೆ ಉದ್ಯಾನ ಸದ್ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ್ದಾದರೂ ಕ್ರಮಕೈಗೊಳ್ಳಲು ಅಸಹಾಯಕತೆ ಮೆರೆಯತ್ತಿದೆ.

ತುಕ್ಕು ಹಿಡಿದ ಆಟಿಕೆ : ಇನ್ನು ಮಕ್ಕಳ ಆಟಕ್ಕೆಂದು ಅಳವಡಿಸಿದ ಸಾಮಗ್ರಿಗಳು ತುಕ್ಕು ಹಿಡಿದಿವೆ. ಮಕ್ಕಳು ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ. ಅಳವಡಿಸಿದ ವಿಶ್ರಾಂತಿ ಆಸನಗಳು, ಜಾರಿ ಬಂಡಿ, ಜೋಕಾಲಿ ಸೇರಿ ಇತರೆ ಆಟದ ಸಾಮಗ್ರಿಗಳು ಹಾಳಾಗಿವೆ. ಆಸನಗಳು ಗಲೀಜುಗೊಂಡಿವೆ. ಕೆಲವು ನೆಲಕ್ಕುರುಳಿವೆ. ಅಕ್ಕ-ಪಕ್ಕ ವಿಷಕಾರಿ ಗಿಡ ಕಂಟೆಗಳು ಬೆಳೆದಿವೆ.

ಉದ್ಯಾನದಲ್ಲಿ ಕನಿಷ್ಠ ಸೌಕರ್ಯ ಕಲ್ಪಿಸಿಲ್ಲ. ಈ ಬಗ್ಗೆ ಪುರಸಭೆಗೂ ಕಾಳಜಿ ಇಲ್ಲದಾಗಿದೆ. ನಾಮಫಲಕವೂ ನೆಲಕ್ಕುರುಳಿದೆ. ಮಕ್ಕಳ ಉಲ್ಲಾಸಕ್ಕೆ ಉದ್ಯಾನದ ಅಭಿವೃದ್ಧಿಗೆ ಪುರಸಭೆ ಮುಂದಾಗಬೇಕು. ಉದ್ಯಾನ ಪ್ರವೇಶಕ್ಕೆ ಸಮಯ ನಿಗದಿಪಡಿಸಿ ಗೇಟ್‌ಗಳಿಗೆ ಬೀಗ ಹಾಕುವ ಮೂಲಕ ಭದ್ರತೆ ಕಲ್ಪಿಸಬೇಕು. ಅನೈತಿಕ ಚಟುವಟಿಕೆಗೆ ತಡೆಗೆ ಪೊಲೀಸರು ಮತ್ತು ಪುರಸಭೆ ಕ್ರಮಕ್ಕೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ