ಆ್ಯಪ್ನಗರ

ಪ್ರಜೆಗಳೇ ಪ್ರಭುವಾದರೆ ಪ್ರಜಾಪ್ರಭುತ್ವ

ಹಾವೇರಿ: ಬಂಡವಾಳಶಾಹಿಗಳ ಕೈಯಲ್ಲಿ ಸಿಲುಕಿ ರಾಜಕೀಯ ವ್ಯಾಪಾರದ ಸರಕಾಗಿ ಮಾರ್ಪಟ್ಟಿದ್ದು, ಪ್ರಜೆಗಳ ಸ್ವಾತಂತ್ರ್ಯ ಹರಣ ಮಾಡಲಾಗುತ್ತಿದೆ. ಪ್ರಜಾಭ್ರಭುತ್ವದಲ್ಲಿ ಪ್ರಭುವಾಗಬೇಕಿದ್ದ ಪ್ರಜೆ ತನ್ನ ಶಕ್ತಿಯ ಅರಿವಿಲ್ಲದೇ ಬೇಡುವ ಪರಿಸ್ಥಿತಿಗೆ ಬಂದಿದ್ದು ದುರಂತದ ವಿಷಯ. ಪ್ರಜೆಗಳೇ ಪ್ರಭುವಾದಲ್ಲಿ ಮಾತ್ರ ನಿಜವಾದ ಪ್ರಜಾಪ್ರಭುತ್ವ ಉಳಿಯಲಿದೆ ಎಂದು ನಟ ಹಾಗೂ ಉತ್ತಮ ಪ್ರಜಾಕೀಯ ಪಕ್ಷ ದ ಸಂಸ್ಥಾಪಕ ಉಪೇಂದ್ರ ಹೇಳಿದರು.

Vijaya Karnataka 11 Apr 2019, 5:00 am
ಹಾವೇರಿ: ಬಂಡವಾಳಶಾಹಿಗಳ ಕೈಯಲ್ಲಿ ಸಿಲುಕಿ ರಾಜಕೀಯ ವ್ಯಾಪಾರದ ಸರಕಾಗಿ ಮಾರ್ಪಟ್ಟಿದ್ದು, ಪ್ರಜೆಗಳ ಸ್ವಾತಂತ್ರ್ಯ ಹರಣ ಮಾಡಲಾಗುತ್ತಿದೆ. ಪ್ರಜಾಭ್ರಭುತ್ವದಲ್ಲಿ ಪ್ರಭುವಾಗಬೇಕಿದ್ದ ಪ್ರಜೆ ತನ್ನ ಶಕ್ತಿಯ ಅರಿವಿಲ್ಲದೇ ಬೇಡುವ ಪರಿಸ್ಥಿತಿಗೆ ಬಂದಿದ್ದು ದುರಂತದ ವಿಷಯ. ಪ್ರಜೆಗಳೇ ಪ್ರಭುವಾದಲ್ಲಿ ಮಾತ್ರ ನಿಜವಾದ ಪ್ರಜಾಪ್ರಭುತ್ವ ಉಳಿಯಲಿದೆ ಎಂದು ನಟ ಹಾಗೂ ಉತ್ತಮ ಪ್ರಜಾಕೀಯ ಪಕ್ಷ ದ ಸಂಸ್ಥಾಪಕ ಉಪೇಂದ್ರ ಹೇಳಿದರು.
Vijaya Karnataka Web HVR-10BYD7A


ಹಾವೇರಿ ಲೋಕಸಭಾ ಉತ್ತಮ ಪ್ರಜಾಕೀಯ ಪಕ್ಷ ದ ಅಭ್ಯರ್ಥಿ ಈಶ್ವರ ಪಾಟೀಲ ಅವರ ಪರ ಪ್ರಚಾರದ ನಿಮಿತ್ತ ಹಾವೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಯಾವೊಬ್ಬ ರಾಜಕಾರಣಿಗಳೂ ತಮ್ಮ ಸ್ವಂತ ಹಣದಿಂದ ಮಾಡುತ್ತಿಲ್ಲ. ಬದಲಾಗಿ ಸಾರ್ವಜನಿಕರ ತೆರಿಗೆ ಹಣದಿಂದ ಮಾಡುತ್ತಿದ್ದಾರೆ ಎಂಬ ವಿಷಯ ಪ್ರತಿಯೊಬ್ಬರ ಮನಸ್ಸಿನ ಆಳಕ್ಕೆ ಇಳಿಯಬೇಕು. ಅಂದಾಗ ಮಾತ್ರ ರಾಜಕೀಯ ನಾಯಕರ ಬಣ್ಣ ತಿಳಿಯಲಿದೆ ಎಂದರು.

ಈಗಾಗಲೇ 27 ಸ್ಥಾನ ಗೆದ್ದಿದ್ದೇವೆ: ಇಂದಿನ ರಾಜಕೀಯ ಸಂಘರ್ಷದಲ್ಲಿ ಮತ್ತು ಹಣ ಬಲದ ಮುಂದೇ ಚುನಾವಣೆ ಕಣದಲ್ಲಿ ಸ್ಪರ್ಧೆ ಮಾಡುವುದೇ ಪ್ರಮುಖ ವಿಷಯ. ಹೊಸ ವಿಚಾರದೊಂದಿಗೆ ಪ್ರಜೆಗಳನ್ನು ಪ್ರಭುಗಳನ್ನಾಗಿಸುವ ನಿಟ್ಟಿನಲ್ಲಿ ಪ್ರಜಾಕೀಯ ಪಕ್ಷ ಹೆಜ್ಜೆ ಇಟ್ಟಿದ್ದು, ಸೋಲು ಗೆಲುವಿಗಿಂತ ನಮ್ಮ ಅಭ್ಯರ್ಥಿಗಳು ಕಣದಲ್ಲಿ ಭಾಗವಹಿಸಿದ್ದಾರಲ್ಲಾ ಅವರು ಈಗಾಗಲೇ ಗೆದ್ದಂತಾಗಿದೆ. ಯಾವುದೇ ಕಾರಣಕ್ಕೂ ನಮ್ಮ ಸಿದ್ಧಾಂತಗಳನ್ನು ಕೈ ಬಿಟ್ಟು ಪಕ್ಷ ನಡೆಸಲ್ಲ ಎಂದರು.

50 ಸಾವಿರ ಖರ್ಚು : ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಸಭೆ ಸಮಾರಂಭ ಹಾಗೂ ಬಹಿರಂಗ ರಾರ‍ಯಲಿಗಳಿಗೆ ನೂರಾರು ಕೋಟಿ ಖರ್ಚು ಮಾಡಲಾಗುತ್ತದೆ. ಅದರಂತೆ ನಾವು ಖರ್ಚು ಮಾಡುತ್ತಿದ್ದೇವೆ ನಮ್ಮ ಅಭ್ಯರ್ಥಿ ಈಶ್ವರ ಪಾಟೀಲ ಕೂಡ 50 ಖರ್ಚು ಮಾಡಲಿದ್ದಾರೆ. ಆದರೆ ಅದು 50 ಕೋಟಿಯಲ್ಲ, ಬದಲಾಗಿ ಠೇವಣಿ ಸೇರಿ 50 ಸಾವಿರ ರೂ. ಮಾತ್ರ ಎಂದು ನಗುತ್ತ ಉತ್ತರಿಸಿದರು.

ಈ ಸಂದರ್ಭದಲ್ಲಿ ಅಭ್ಯರ್ಥಿ ಈಶ್ವರ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

ಸಾವಿರ ಕೋಟಿ ಎಲ್ಲಿಂದ ಬರುತ್ತೆ?: ಚುನಾವಣೆ ಹೆಸರಲ್ಲಿ ರಾಜಕೀಯ ಪಕ್ಷ ಗಳು ಹಣವನ್ನು ನೀರಿನಂತೆ ಖರ್ಚು ಮಾಡಿ ಮತ ಸೇರಿದಂತೆ ಕಾರ‍್ಯಕರ್ತರನ್ನು ಕೊಂಡುಕೊಳ್ಳುತ್ತಿದ್ದಾರೆ. ಸಭೆ, ಸಮಾರಂಭ, ರಾರ‍ಯಲಿ ಎನ್ನುತ್ತ ಸಾವಿರಾರು ಕೋಟಿ ಖರ್ಚು ಮಾಡುತ್ತಿದ್ದಾರೆ. ಆ ದುಡ್ಡು ಎಲ್ಲಿಂದ ಬರುತ್ತೆ ಎಂದು ಯಾರೊಬ್ಬರು ಪ್ರಶ್ನೆ ಮಾಡುತ್ತಿಲ್ಲ. ಇದೇ ನಮ್ಮಗಳ ಬಲಹೀನತೆಯಾಗಿದೆ. ಅದನ್ನೆ ಅವರು ಬಂಡವಾಳ ಮಾಡಿಕೊಂಡು ನಮ್ಮನ್ನು ಆಳುತ್ತಿದ್ದಾರೆ ಎಂದು ಉಪೇಂದ್ರ ಹೇಳಿದರು.

ಸೇವೆ ಪದ ಬಳಕೆ ಮೂರ್ಖತನ: ನಮ್ಮ ವಿಚಾರಗಳನ್ನು ಕೆಲ ಪಕ್ಷ ದ ಹಿರಿಯರು ಒಪ್ಪಿಕೊಂಡಿದ್ದು, ನಿಮ್ಮ ವಿಚಾರಗಳು ಜಾರಿಯಾದಲ್ಲಿ ನಾವು ಈ ವಿಷ ವರ್ತುಲದಿಂದ ಹೊರ ಬರುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಅದರಿಂದ ಅವರಿಗೆ ಹೊರಬರಲು ಆಗುತ್ತಿಲ್ಲ. ಆದರೆ ಮುಂದಿನ ದಿನಗಳಲ್ಲಿ ನಮ್ಮ ಪಕ್ಷ ದ ವಿಚಾರಕ್ಕೆ ಬೆಲೆ ಸಿಗಲಿದೆ ಎಂದ ಉಪೇಂದ್ರ, ಇಲ್ಲಿ ಯಾರೊಬ್ಬರು ಉಚಿತವಾಗಿ ಕೆಲಸ ಮಾಡುತ್ತಿಲ್ಲ. ಬದಲಾಗಿ ನಮ್ಮಗಳ ತೆರಿಗೆ ಹಣದಿಂದ ಸಂಬಳ ತೆಗೆದುಕೊಂಡು ಮಾಡುತ್ತಿದ್ದಾರೆ. ಇದಕ್ಕೆ ಸೇವೆ ಅನ್ನುವ ಲೇಬಲ್‌ ಅಂಟಿಸಿ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಅಷ್ಟೇ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ