ಆ್ಯಪ್ನಗರ

ಕೋರಂ ಅಭಾವ: ತಡವಾಗಿ ಸಭೆ ಆರಂಭ

ರಾಣೇಬೆನ್ನೂರ: ಇಲ್ಲಿನ ತಾಪಂ ಸಭಾಭವನದಲ್ಲಿ ಶುಕ್ರವಾರ ಸಭೆಗೆ ಗೈರಾದ ಹಿನ್ನೆಲೆಯಲ್ಲಿ ತಾಲೂಕ ಮಟ್ಟದ ಅಧಿಕಾರಿಗಳ ಮೇಲೆ ಹರಿಹಾಯ್ದಿದ್ದ ಸದಸ್ಯರುಗಳೇ ಶನಿವಾರ ಕರೆಯಲಾಗಿದ್ದ ಸಭೆಗೆ ನಿಗದಿತ ಸಮಯಕ್ಕೆ ಆಗಮಿಸದ ಕಾರಣ ಸುಮಾರು ಒಂದು ಕಾಲು ಗಂಟೆ ತಡವಾಗಿ ಸಭೆ ಆರಂಭವಾಯಿತು.

Vijaya Karnataka 18 Aug 2019, 5:00 am
ರಾಣೇಬೆನ್ನೂರ: ಇಲ್ಲಿನ ತಾಪಂ ಸಭಾಭವನದಲ್ಲಿ ಶುಕ್ರವಾರ ಸಭೆಗೆ ಗೈರಾದ ಹಿನ್ನೆಲೆಯಲ್ಲಿ ತಾಲೂಕ ಮಟ್ಟದ ಅಧಿಕಾರಿಗಳ ಮೇಲೆ ಹರಿಹಾಯ್ದಿದ್ದ ಸದಸ್ಯರುಗಳೇ ಶನಿವಾರ ಕರೆಯಲಾಗಿದ್ದ ಸಭೆಗೆ ನಿಗದಿತ ಸಮಯಕ್ಕೆ ಆಗಮಿಸದ ಕಾರಣ ಸುಮಾರು ಒಂದು ಕಾಲು ಗಂಟೆ ತಡವಾಗಿ ಸಭೆ ಆರಂಭವಾಯಿತು.
Vijaya Karnataka Web HVR-17RNR2


ಸಭೆಯಲ್ಲಿ ಅನುಸರಣಾ ವರದಿ ಮಂಡನೆ ಸಮಯದಲ್ಲಿ ಸಣ್ಣ ನೀರಾವರಿ ಇಲಾಖೆ ವಿಷಯ ಪ್ರಸ್ತಾಪವಾದಾಗ ಎದ್ದುನಿಂತ ಬಿಜೆಪಿ ಸದಸ್ಯ ಭರಮಪ್ಪ ಉರ್ಮಿ ಮಾತನಾಡಿ, ಸಭೆಯಲ್ಲಿ ಸದಸ್ಯರು ಗಮನಸೆಳೆದ ವಿಷಯಗಳು ಹಾಗೂ ಸಮಸ್ಯೆಗಳಿಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳುತ್ತಿಲ್ಲ. ಸಾಮಾನ್ಯ ಸಭೆ ನೆಪ ಮಾತ್ರ ಎನ್ನುವಂತಾಗಿದೆ. ಇತ್ತೀಚಿಗೆ ಯಕ್ಲಾಸಪುರ ಗ್ರಾಮದಲ್ಲಿ ಸ್ವತಃ ತಹಸೀಲ್ದಾರ ಅವರೇ ಸಭೆ ಕರೆದಿದ್ದರೂ ಯಾವುದೇ ಅಧಿಕಾರಿಗಳು ಆಗಮಿಸಿರಲಿಲ್ಲ ಎಂದು ಆರೋಪಿಸಿದರು.

ತಾಲೂಕಿನ ಕಮದೋಡ ಕೆರೆಯಿಂದ ಮಣ್ಣನ್ನು ರಾಷ್ಟ್ರೀಯ ಹೆದ್ದಾರಿ ಕೆಲಸಕ್ಕೆ ಅನಧಿಕೃತವಾಗಿ ಬಳಕೆ ಮಾಡಿಕೊಳ್ಳುತ್ತಿದ್ದರೂ ಸಣ್ಣ ನೀರಾವರಿ ಇಲಾಖೆಯಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಭರಮಪ್ಪ ಉರ್ಮಿ ದೂರಿದರು.

ಇದಕ್ಕೆ ಉತ್ತರಿಸಿದ ಸಣ್ಣ ನೀರಾವರಿ ಇಲಾಖೆ ಅಧಿಕಾರಿ, ತಮಗೆ ಏಳು ತಾಲೂಕುಗಳ ಉಸ್ತುವಾರಿಯಿದ್ದು ತಕ್ಷ ಣ ಗಮನ ಹರಿಸಲು ಸಾಧ್ಯವಾಗಿರಲಿಲ್ಲ. ಮೇಲಾಗಿ ಕೆರೆಯ ಮಣ್ಣನ್ನು ಬಳಕೆ ಮಾಡಲು ಗ್ರಾಮಸ್ತರಿಂದ ಒತ್ತಡವಿತ್ತು. ಆದರೂ ಕೂಡ ಮಣ್ಣು ತೆಗೆಯುವ ವಿಚಾರ ಗಮನಕ್ಕೆ ಬಂದ ನಂತರ ಗುತ್ತಿಗೆದಾರರಿಗೆ ಅದನ್ನು ನಿಲ್ಲಿಸುವಂತೆ ತಿಳಿಸಿ ನೋಟಿಸ್‌ ನೀಡಲಾಗಿದೆ ಎಂದರು.

ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ: ಕಮದೋಡ ಕೆರೆಯ ಮಣ್ಣು ಸಾಗಿಸುವ ವಿಚಾರವಾಗಿ ಪ್ರತಿಪಕ್ಷ ಬಿಜೆಪಿಯ ರಾಮಪ್ಪ ಬೆನ್ನೂರ ಹಾಗೂ ಭರಮಪ್ಪ ಉರ್ಮಿ ನಡುವೆ ವಾಗ್ವಾದ ನಡೆಯಿತು. ತಮ್ಮದಲ್ಲದ ಕ್ಷೇತ್ರದ ಬಗ್ಗೆ ಭರಮಪ್ಪ ಉರ್ಮಿ ಪ್ರಸ್ತಾಪಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಮಪ್ಪ ಬೆನ್ನೂರ ಒಂದು ಕ್ಷೇತ್ರದ ಸದಸ್ಯರು ಮತ್ತೊಂದು ಕ್ಷೇತ್ರದ ವಿಚಾರದಲ್ಲಿ ಮೂಗು ತೂರಿಸುವುದು ಸರಿಯಲ್ಲ. ನನ್ನ ಕ್ಷೇತ್ರದ ಸಮಸ್ಯೆ ನನಗೆ ಚೆನ್ನಾಗಿ ಗೊತ್ತಿರುತ್ತದೆ. ನಾನೇ ಖುದ್ದಾಗಿ ಕಮದೋಡ ಗ್ರಾಪಂ, ಗ್ರಾಮಸ್ಥರ ಜತೆ ಮಾತನಾಡಿ ಕೆರೆ ಮಣ್ಣು ಸಾಗಿಸುವಂತೆ ಸೂಚಿಸಿದ್ದೆನು. ಇದನ್ನು ಅರಿಯದ ಸದಸ್ಯರು ಸಭೆಯಲ್ಲಿ ಅದರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು. ಇದು ಇಬ್ಬರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಒಂದು ಹಂತದಲ್ಲಿ ಭರಮಪ್ಪ ಸಭೆಯಲ್ಲಿ ತಮಗೆ ಅವಮಾನವಾಗಿದೆ ಎನ್ನುತ್ತಾ ಸಭಾತ್ಯಾಗಕ್ಕೆ ಮುಂದಾದರು. ಆಗ ತಾಪಂ ಅಧ್ಯಕ್ಷೆ ಗೀತಾ ಲಮಾಣಿ ಹಾಗೂ ಕಾನಿ ಅಧಿಕಾರಿ ಎಸ್‌.ಎಂ.ಕಾಂಬಳೆ ಸದಸ್ಯರನ್ನು ಸಮಾಧಾನ ಮಾಡಲು ಯತ್ನಿಸಿದರು. ಕಾಂಗ್ರೆಸ್‌ ಪಕ್ಷ ದ ಡಾ.ಪುಟ್ಟಪ್ಪ ಭಿಕ್ಷಾವರ್ತಿಮಠ ಸಭಾತ್ಯಾಗಕ್ಕೆ ಮುಂದಾಗಿದ್ದ ಭರಮಪ್ಪ ಅವರನ್ನು ಸಮಾಧಾನಗೊಳಿಸಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ನೀಲಕಂಠಪ್ಪ ಕುಸಗೂರ, ತಾಲೂಕಿನ ಅಭಿವೃದ್ಧಿ ವಿಚಾರವಾಗಿ ಯಾವುದೇ ಕ್ಷೇತ್ರದ ಬಗ್ಗೆ ಮಾತನಾಡಲು ಎಲ್ಲ ಸದಸ್ಯರಿಗೂ ಹಕ್ಕಿದೆ ಎಂದು ವಿಷಯಕ್ಕೆ ತೆರೆ ಎಳೆದರು.

ಕರಿಯಪ್ಪ ತೋಟಗೇರ ಮಾತನಾಡಿ, ತಾಲೂಕಿನಲ್ಲಿ ಸರಕಾರಿ ಜಾಗೆಗಳು ಎಲ್ಲೆಲ್ಲಿವೆ ಎಂಬುದರ ಕುರಿತು ಸಭೆಗೆ ಮಾಹಿತಿ ನೀಡಿದ್ದಿರಾ? ಸಾವಿರಾರು ಎಕರೆ ಒತ್ತುವರಿಯಾಗಿದೆ. ಕೆಲವು ಕಡೆ ನೀರು ನಿಲ್ಲುವ ಜಾಗೆ ಕೂಡ ಒತ್ತುವರಿಯಾಗಿದೆ. ನಗರದ ದೊಡ್ಡಕೆರೆ ಪ್ರದೇಶದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲವಾಗಿದೆ ಎಂದು ಸರ್ವೆ ಇಲಾಖೆ ಅಧಿಕಾರಿಯನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸರ್ವೆ ಇಲಾಖೆ ಅಧಿಕಾರಿಯು, ಇದುವರೆಗೂ ತಾಲೂಕಿನಲ್ಲಿ 25 ಕೆರೆಗಳ ಅಳತೆ ಮಾಡಲಾಗಿದೆ. ಅಸುಂಡಿ ಕೆರೆಯಲ್ಲಿ 4 ಎಕರೆ ಒತ್ತುವರಿಯಾಗಿದೆ ಎಂದರು.

ಇದನ್ನು ಅಲ್ಲಗಳೆದ ಕರಿಯಪ್ಪ ತೋಟಗೇರ ಅಸುಂಡಿ ಕೆರೆಯಲ್ಲಿ ಸುಮಾರು 40 ಎಕರೆ ಒತ್ತುವರಿಯಾಗಿದೆ. ಒತ್ತುವರಿ ಮಾಡಿದವರಿಗೆ ನೋಟಿಸು ನೀಡಿ ಎಂದರು.

ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಸರಕಾರಿ ಶಾಲಾ ಕಟ್ಟಡ ಶಿಥಿಲಗೊಂಡಿದ್ದು ಅದನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಿಸಲು ಹಿಂದೇಟು ಹಾಕುತ್ತಿರುವ ಪಂಚಾತರಾಜ್‌ ಎಂಜಿನಿಯರಿಂಗ ಉಪವಿಭಾಗದ ಅಧಿಕಾರಿಯನ್ನು ಕರಿಯಪ್ಪ ತೋಟಗೇರ ತರಾಟೆಗೆ ತೆಗೆದುಕೊಂಡರು. ಅಚ್ಚರಿ ಸಂಗತಿ ಎಂದರೆ ಇದಕ್ಕೆ ಕ್ಷೇತ್ರ ಶಿಕ್ಷ ಣಾಧಿಕಾರಿಗಳು ಬೆಂಬಲ ವ್ಯಕ್ತಪಡಿಸುತ್ತಾ ತಾವು ಈಗಾಗಲೇ ಅನೇಕ ಬಾರಿ ಪಿಆರ್‌ಡಿ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದರು.

ಇದಕ್ಕೆ ಉತ್ತರಿಸಿದ ಪಿಆರ್‌ಡಿ ಅಧಿಕಾರಿ ರಾಮಪ್ಪ ಬಜಾರಿ, ತಮಗೆ ಶಿಕ್ಷ ಣ ಇಲಾಖೆಯಿಂದ ಕಟ್ಟಡ ಕೆಡವಲು ಪತ್ರ ನೀಡಿ ಎಂದರು.

ಆಗ ಚರ್ಚೆಯಲ್ಲಿ ಮಧ್ಯ ಪ್ರವೇಶಿಸಿದ ತಾಪಂ ಕಾನಿ ಅಧಿಕಾರಿ ಎಸ್‌.ಎಂ.ಕಾಂಬಳೆ, ಶಿಕ್ಷ ಣ ಇಲಾಖೆಯಿಂದ ಪತ್ರ ಕೊಡುತ್ತಾರೆ. ನೀವು ಮೂರ್ನಾಲ್ಕು ದಿನಗಳಲ್ಲಿ ಕಟ್ಟಡ ಕೆಡವಿ ಭೂಮಿ ಪೂಜೆಗೆ ವ್ಯವಸ್ಥೆ ಮಾಡಿ ಎಂದು ಪಿಆರ್‌ಡಿ ಅಧಿಕಾರಿಗೆ ಸಲಹೆ ನೀಡಿದರು.

ತಾಪಂ ಅಧ್ಯಕ್ಷೆ ಗೀತಾ ಲಮಾಣಿ, ಉಪಾಧ್ಯಕ್ಷೆ ಕಸ್ತೂರೆಮ್ಮ ಹೊನ್ನಾಳಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಜು ಸುರ್ವೆ, ತಾಪಂ ಕಾನಿ ಅಧಿಕಾರಿ ಎಸ್‌.ಎಂ.ಕಾಂಬಳೆ ಇದ್ದರು.

ನೆರೆ: 152 ಕಿ.ಮಿ. ರಸ್ತೆ ಹಾಳು: ಇತ್ತೀಚಿಗೆ ಉಂಟಾದ ನೆರೆ ಹಾವಳಿಯಿಂದ ತಾಲೂಕಿನಲ್ಲಿ ತಮ್ಮ ಇಲಾಖೆಗೆ ಸೇರಿದ 152 ಕಿ.ಮಿ. ರಸ್ತೆ ಹಾಳಾಗಿದ್ದು ಅದರ ದುರಸ್ತಿಗೆ 184 ಲಕ್ಷ ರೂ. ಅಗತ್ಯವಿದೆ ಎಂದು ಪಿಆರ್‌ಡಿ ಅಧಿಕಾರಿ ರಾಮಪ್ಪ ಬಜಾರಿ ಸಭೆಗೆ ಮಾಹಿತಿ ನೀಡಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ