ಆ್ಯಪ್ನಗರ

ಮಳೆ ಏನೋ ಬಂತು, ಬೋರ್‌ವೆಲ್‌ ಬಾಕಿ ಬರ್ಲಿಲ್ಲ

ರಾಜು ನದಾಫ ಹಾವೇರಿ: ಮಳೆರಾಯನ ಆಗಮನ ರೈತರ ಮೊಗದಲ್ಲಿ ಸಮಾಧಾನ ತಂದಿದೆ. ಬರ ಪರಿಸ್ಥಿತಿ ಸಹ ತಗ್ಗಿದೆ. ಆದರೆ ಬರ ನಿರ್ವಹಣೆಗೆ ಕೊರೆಯಿಸಿದ ಬೋರವೆಲ್‌ (ಕೊಳವೆ ಬಾವಿ) ಬಾಕಿ ಕಳೆದೊಂದು ವರ್ಷದಿಂದ ಹಾಗೇ ಇದೆ.

Vijaya Karnataka 16 Jul 2019, 5:00 am
ರಾಜು ನದಾಫ ಹಾವೇರಿ: ಮಳೆರಾಯನ ಆಗಮನ ರೈತರ ಮೊಗದಲ್ಲಿ ಸಮಾಧಾನ ತಂದಿದೆ. ಬರ ಪರಿಸ್ಥಿತಿ ಸಹ ತಗ್ಗಿದೆ. ಆದರೆ ಬರ ನಿರ್ವಹಣೆಗೆ ಕೊರೆಯಿಸಿದ ಬೋರವೆಲ್‌ (ಕೊಳವೆ ಬಾವಿ) ಬಾಕಿ ಕಳೆದೊಂದು ವರ್ಷದಿಂದ ಹಾಗೇ ಇದೆ.
Vijaya Karnataka Web something of the rain came and the borewell was not pending
ಮಳೆ ಏನೋ ಬಂತು, ಬೋರ್‌ವೆಲ್‌ ಬಾಕಿ ಬರ್ಲಿಲ್ಲ


ತೀವ್ರ ಬರಗಾಲದ ವೇಳೆ ಜಿಲ್ಲಾದ್ಯಂತ ಕುಡಿಯುವ ನೀರಿನ ಸಮಸ್ಯೆ ತಲೆದೋರಿತ್ತು. ಈ ಸಂದರ್ಭದಲ್ಲಿ ಜನ ಹಾಗೂ ಜಾನುವಾರುಗಳ ಬಳಕೆಗೆ ಕೊರೆಯಿಸಿದ ಕೊಳವೆ ಬಾವಿಗಳ ಏಳು ಕೋಟಿ ರೂ.ಗಳ ಬಿಲ್‌ ಮಾತ್ರ ಪಾವತಿಯಾಗಿಲ್ಲ. ಹೀಗಾಗಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಅನುದಾನಕ್ಕೆ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.

ಎಷ್ಟು ಬೋರವೆಲ್‌?: ಜಿಲ್ಲೆಯ ಬರ ಪರಿಸ್ಥಿತಿ ನಿರ್ವಹಣೆಗೆ ಸರಕಾರ ತಲಾ ಒಂದು ಕೋಟಿಯಂತೆ ಒಟ್ಟು ಆರು ಕೋಟಿ ಅನುದಾನ ನೀಡಿತ್ತು. ಈ ಸಂದರ್ಭದಲ್ಲಿ ಶಾಸಕರ ಅಧ್ಯಕ್ಷತೆಯ ಟಾಸ್ಕ್‌ಫೋರ್ಸ್‌ ಸಮಿತಿಯು ಆರಂಭದಲ್ಲಿ 332 ಕೊಳವೆ ಬಾವಿ ಕೊರೆಯಿಸಲು ಅನುಮೋದನೆ ನೀಡಿತ್ತು. ಆಡಳಿತಾತ್ಮಕ ಅನುಮೋದನೆ ಕಾರಣಕ್ಕೆ ಕ್ರಿಯಾ ಯೋಜನೆಯಲ್ಲೂ ಹೊಸ ಕೊಳವೆ ಪಟ್ಟಿ ಸೇರಿಸಲಾಗಿತ್ತು.

ಜಿಲ್ಲಾ ಪಂಚಾಯಿತಿಗೆ ಸರಕಾರ ಬಿಡುಗಡೆ ಮಾಡಿದ 6 ಕೋಟಿ ರೂ.ಗಳಲ್ಲಿ 332 ಕೊಳವೆಬಾವಿಗಳಿಗೆ 3.37 ಕೋಟಿ ರೂ. ಪಾವತಿಸಲಾಗಿತ್ತು. ಉಳಿದ ಮೊತ್ತದಲ್ಲಿ ಪೈಪಲೈನ್‌, ಕರೆಂಟ್‌ ಸಂಪರ್ಕದ ಜತೆಗೆ ಅಗತ್ಯಕ್ಕೆ ತಕ್ಕಂತೆ ಹಣ ಬಳಸಿಕೊಳ್ಳಲು ಅನುಮೋದನೆ ಪಡೆದುಕೊಳ್ಳಲಾಗಿತ್ತು.

ಸರಕಾರ ಬಿಡುಗಡೆ ಮಾಡಿದ ಹಣ ಅನಗತ್ಯವಾಗಿ ಪೋಲು ಆಗುವುದನ್ನು ತಪ್ಪಿಸಲು ಜಿ.ಪಂ. ಗ್ರಾಮೀಣ ಕುಡಿಯುವ ನೀರು ಯೋಜನೆ ಇ.ಇ. ವಿನಾಯಕ ಹುಲ್ಲೂರ ಗ್ರಾ.ಪಂ.ಯಿಂದ ನಿರ್ಮಿಸಲಾಗಿದ್ದ ಹಳೆಯ ಪಂಪಸೆಟ್‌ ಸಂಪರ್ಕವನ್ನೇ ಬಳಸಿಕೊಳ್ಳಲು ನಿರ್ಧರಿಸಿದರು. ಈ ಕಾರಣಕ್ಕೆ ಜಿಲ್ಲಾಡಳಿತಕ್ಕೆ 1.5 ಕೋಟಿ ರೂ. ಉಳಿತಾಯಗೊಳಿಸುವಲ್ಲಿ ಇಚ್ಛಾಶಕ್ತಿ ತೋರಿದ್ದರು.

ಬಾಕಿ ಯಾವುದು?: 2018-19 ರಲ್ಲಿ ಪುನಃ ಬರ ಪರಿಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಅನುದಾನ ಲಭ್ಯವಿಲ್ಲದಿದ್ದರೂ ಶಾಸಕರ ಅಧ್ಯಕ್ಷತೆಯ ಸಮಿತಿ ಪುನಃ 578 ಹೊಸ ಕೊಳವೆಬಾವಿ ಕೊರೆಯಿಸಲು ಅನುಮೋದನೆ ನೀಡಿತು. ಆದರೆ ಕ್ರಿಯಾ ಯೋಜನೆ ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ ಎರಡನೇ ಹಂತದಲ್ಲಿ ಒಪ್ಪಿಗೆ ಪಡೆಯಲಾದ ಬೋರವೆಲ್‌ಗಳ ಯಾದಿ ಕ್ರಿಯಾ ಯೋಜನೆಯಲ್ಲಿ ಸೇರ್ಪಡೆಗೊಳಿಸಲು ಸಾಧ್ಯವಾಗಲಿಲ್ಲ.

ಜಿಲ್ಲಾದ್ಯಂತ ಬರ ಪರಿಸ್ಥಿತಿ ತೀವ್ರಗೊಂಡ ಹಿನ್ನೆಲೆಯಲ್ಲಿ ಮತ್ತು ಜಿಲ್ಲೆಗೆ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಭೇಟಿ ನೀಡಿದ ವೇಳೆ ಶಾಸಕರು ಮತ್ತು ಜಿಪಂ ಸದಸ್ಯರು ಒತ್ತಾಯಿಸಿದ ಮೇರೆಗೆ ಹೊಸ ಕೊಳವೆಬಾವಿ ಕೊರೆಯಿಸುವಂತೆ ಮೌಖಿಕವಾಗಿ ಸೂಚಿಸಿದರು. ಹೀಗಾಗಿ 6.98 ಕೋಟಿ ರೂ. ವೆಚ್ಚದಲ್ಲಿ ಬರೋಬ್ಬರಿ 578 ಕೊಳವೆಬಾವಿ ಕೊರೆಯಿಸಲಾಯಿತು.

ಆಗಿರುವ ತೊಂದರೆ ಏನು?: ಹಣ ಇಲ್ಲದಿದ್ದರೂ ಬೋರ್‌ವೆಲ್‌ ಹೊಡೆದಿರುವ ಮಾಲಿಕರಿಗೆ ಬಾಕಿ ಇರುವ ಏಳು ಕೋಟಿ ಹಾಗೇ ಇದೆ. ಈ ನಡುವೆ ಮಳೆ ಆರಂಭಕ್ಕೂ ಮುನ್ನ ಸಲ್ಲಿಕೆಯಾಗಿರುವ 50 ರಿಂದ 60 ಹೊಸ ಕೊಳವೆ ಬಾವಿ ಕೊರೆಯಲು ಈ ಮಾಲಿಕರು ಸುತಾರಾಂ ಒಪ್ಪದಿರುವುದು ಅಧಿಕಾರಿಗಳಿಗೆ ಬಿಸಿ ತುಪ್ಪವಾಗಿದೆ.

ಇದೀಗ ಮಳೆ ಬಂದು ಸ್ವಲ್ಪಮಟ್ಟಿಗೆ ಬರ ನೀಗಿದೆ. ಆದರೆ ಕೊರೆಯಿಸಿದ ಬೋರವೆಲ್‌ಗಳ ಏಳು ಕೋಟಿ ಬಾಕಿ ಮಾತ್ರ ಹಾಗೆಯೇ ಇದೆ. ಸದ್ಯದ ರಾಜಕೀಯ ವಿದ್ಯಮಾನಗಳ ಸಂದರ್ಭದಿಂದಾಗಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಬಾಕಿ ಗತಿ ಏನು? ಎನ್ನುವ ಆತಂಕದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಸಚಿವ-ಶಾಸಕರ ಮತ್ತು ಡಿ.ಸಿ. ಸಿಇಒ ಕ್ರಮ ಏನು? ಕಾದು ನೋಡಬೇಕಿದೆ.

ವಿಫಲವಾದರೂ ಹಣ: ಬರ ಪರಿಸ್ಥಿತಿ ನಿಭಾವಣೆಗೆ ಕೊರೆಯಿಸಿದ ಕೊಳವೆಬಾವಿಗಳೆಲ್ಲ ಸಕ್ಸಸ್‌ ಆಗಿ ನೀರು ಲಭ್ಯವಾಗಿಲ್ಲ. ಪ್ರಥಮ ಹಂತದ 332 ಬೋರವೆಲ್‌ ಪೈಕಿ 90 ವಿಫಲವಾಗಿವೆ. ಎರಡನೇ ಹಂತದಲ್ಲಿ ಕೊರೆದ 578 ಬೋರವೆಲ್‌ ಪೈಕಿ 426 ಮಾತ್ರ ಸಕ್ಸಸ್‌ ಆಗಿವೆ. ಉಳಿದವು ವಿಫಲವಾಗಿವೆ. ನೀರಿಲ್ಲದಿದ್ದರೂ ಕೊರೆಯಿಸಿದ ಬೋರವೆಲ್‌ಗೆ ಹಣ ಕೊಡಲೇಬೇಕಿದೆ ಎನ್ನುವುದು ಸಹ ವಿಶೇಷ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ