ಆ್ಯಪ್ನಗರ

ಬೆಳೆ ಹಾನಿ ವರದಿ ಶೀಘ್ರ ಸಲ್ಲಿಸಿ

ಹಾವೇರಿ: ಅತಿವೃಷ್ಠಿ ಹಾಗೂ ನೆರೆಯಿಂದ ಬೆಳೆ ಹಾನಿಯಾದ ಬಗ್ಗೆ ವರದಿಯನ್ನು ವಾರದಲ್ಲಿ ಪೂರ್ಣಗೊಳಿಸಿ ಸರಕಾರಕ್ಕೆ ಮಾಹಿತಿ ಸಲ್ಲಿಸುವಂತೆ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳಿಗೆ ಜಿಪಂ ಅಧ್ಯಕ್ಷ ಎಸ್‌.ಕೆ.ಕರಿಯಣ್ಣನವರ ಸೂಚಿಸಿದರು.

Vijaya Karnataka 20 Aug 2019, 5:00 am
ಹಾವೇರಿ: ಅತಿವೃಷ್ಠಿ ಹಾಗೂ ನೆರೆಯಿಂದ ಬೆಳೆ ಹಾನಿಯಾದ ಬಗ್ಗೆ ವರದಿಯನ್ನು ವಾರದಲ್ಲಿ ಪೂರ್ಣಗೊಳಿಸಿ ಸರಕಾರಕ್ಕೆ ಮಾಹಿತಿ ಸಲ್ಲಿಸುವಂತೆ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳಿಗೆ ಜಿಪಂ ಅಧ್ಯಕ್ಷ ಎಸ್‌.ಕೆ.ಕರಿಯಣ್ಣನವರ ಸೂಚಿಸಿದರು.
Vijaya Karnataka Web HVR-19 HAVERI 11


ಹಾವೇರಿ ಜಿಪಂ ಸಭಾಂಗಣದಲ್ಲಿ ಸೋಮವಾರ ಕೆ.ಡಿ.ಪಿ. ಕಾರ್ಯಕ್ರಮಗಳ ಜುಲೈ ಮಾಹೆಯ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿ, ಗ್ರಾಮವಾರು, ಬೆಳೆವಾರು ರೈತರ ಬೆಳೆ ನಷ್ಟದ ಕುರಿತಂತೆ ನಿಖರ ಮಾಹಿತಿ ಸಂಗ್ರಹಿಸಬೇಕು. ಯಾವುದೇ ರೈತ ಪರಿಹಾರದಿಂದ ವಂಚಿತವಾಗಬಾರದು. ಈ ಕಾರಣಕ್ಕಾಗಿ ರೈತರು ಪ್ರತಿಭಟನೆ ನಡೆಸಿದರೆ ನಿಮ್ಮನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶರಣಪ್ಪ ಭೋಗಿ ಮಾತನಾಡಿ, ಜಿಲ್ಲೆಯಲ್ಲಿ ಅಂದಾಜು 12,000 ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾನಿಯಾಗಿರುವುದಾಗಿ ತಿಳಿಸಿದರು. ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಕರು 53 ಹೆಕ್ಟೇರ್‌ ರೇಷ್ಮೆ ಬೆಳೆ ಹಾನಿಯಾಗಿರುವುದಾಗಿ ಮಾಹಿತಿ ನೀಡಿದರು.

ಫಾಗಿಂಗ್‌ ವ್ಯವಸ್ಥೆ:
ಜಲಾವೃತಗೊಂಡಿದ್ದ ಗ್ರಾಮಗಳಲ್ಲಿ ಕೆಟ್ಟ ವಾಸನೆ ಬರುತ್ತಿದೆ. ಸಾಂಕ್ರಾಮಿಕ ರೋಗ ಹರಡದಂತೆ ಡಿಡಿಟಿ ಸಿಂಪರಣೆ, ನಿರಂತರ ಫಾಗಿಂಗ್‌ ಹಾಗೂ ಹಾಲೋಜಿನ್‌ ಮಾತ್ರೆ ವಿತರಿಸಲು ಕ್ರಮಕೈಗೊಳ್ಳುವಂತೆ ಪಿಡಿಒಗಳಿಗೆ ಸೂಚನೆ ನೀಡಲು ಜಿ.ಪಂ. ಸಿಇಒಗೆ ತಿಳಿಸಿದರು.

ನಿರಂತರ ವೈದ್ಯಕೀಯ ತಪಾಸಣೆ ಹಾಗೂ ಆರೋಗ್ಯದ ಮುನ್ನೆಚ್ಚರಿಕೆ ಕುರಿತಂತೆ ಜಾಗೃತಿ ಮೂಡಿಸಬೇಕು. ಎಲ್ಲ ವೈದ್ಯಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಸಕಾಲಕ್ಕೆ ಚಿಕಿತ್ಸೆ ನೀಡುವಂತೆ ಕ್ರಮವಹಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.

ಸಾಂಕ್ರಾಮಿಕ ರೋಗ ಹರಡದಂತೆ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಗೋಶಾಲೆಗಳ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕು ಎಂದು ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

ಕಪ್ಪು ಪಟ್ಟಿಗೆ: ಪಂಚಾಯತ್‌ ರಾಜ್‌ ಎಂಜನೀಯರಿಂಗ್‌ ವತಿಯಿಂದ 75 ಲಕ್ಷ ರೂ. ಅನುದಾನದಲ್ಲಿ ಹೊಸದಾಗಿ ನಿರ್ಮಾಣ ಮಾಡಿದ ಅಗಡಿ-ಯಲಗಚ್ಚ ರಸ್ತೆ ಅತ್ಯಂತ ಕಳಪೆ ಕಾಮಗಾರಿಯಿಂದ ಡಾಂಬರ್‌ ರಸ್ತೆ ಕೆಸರಿನ ರಸ್ತೆಯಂತಾಗಿದೆ. ರಸ್ತೆ ಗುತ್ತಿಗೆದಾರನಿಗೆ ಬಾಕಿ ಹಣ ಪಾವತಿಸಬಾರದು ಹಾಗೂ ಕಪ್ಪು ಪಟ್ಟಿಗೆ ಸೇರಿಸಲು ಜಿ.ಪಂ. ಎಂಜನೀಯರಗೆ ಸೂಚಿಸಿದರು.

ಕಿರುಗಾಲುವೆಗೆ ಪ್ರಸ್ತಾವನೆ: ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆ ನಿರ್ಮಾಣ ಪೂರ್ಣಗೊಂಡರು ಕಿರುಗಾಲುವೆ ನಿರ್ಮಾಣ ಮಾಡದ ಕಾರಣ ರೈತರು ಕಾಲುವೆ ನೀರನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಕಿರುಗಾಲುವೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಯುಟಿಪಿ ಅಭಿಯಂತರರಿಗೆ ಸೂಚಿಸಿದರು.

ಸಭೆಯಲ್ಲಿ ಜಿಪಂ ಸಿಇಒ ಕೆ.ಲೀಲಾವತಿ, ಉಪಕಾರ್ಯದರ್ಶಿ ಜಿ.ಗೋವಿಂದಸ್ವಾಮಿ, ಮುಖ್ಯ ಯೋಜನಾ ನಿರ್ದೇಶಕ ಕುಮಾರ ಮಣ್ಣವಡ್ಡರ, ಜಿ.ಪಂ. ಶಿಕ್ಷ ಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ದುಗ್ಗತ್ತಿ, ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ನೀಲವ್ವ ಚವ್ಹಾಣ ಉಪಸ್ಥಿತರಿದ್ದರು.

ಬೆಳೆ ಸಮೀಕ್ಷೆ ಮಾಹಿತಿ: ಪ್ರಾಥಮಿಕ ಅಂದಾಜಿನಂತೆ 8,135 ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ಮಳೆ ಹಾಗೂ ನೆರೆಯಿಂದ ಕಸ, ಮಣ್ಣು ತುಂಬಿಕೊಂಡಿರುವುದು, ಭೂ ಕುಸಿತ, ಭೂ ಸವಕಳಿ, ಭೂಮಿ ಕೊಚ್ಚಿಹೋಗಿರುವುದು ಗುರುತಿಸಲಾಗಿದೆ. 1,22,397 ಹೆಕ್ಟೇರ್‌ ಬೆಳೆ ಹಾನಿಯಾಗಿರುವುದು ಪ್ರಾಥಮಿಕ ವರದಿಯಿಂದ ಕಂಡುಬಂದಿದೆ. ನಿಖರ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಕೃಷಿ ಜಂಟಿ ನಿರ್ದೇಶಕ ಮಂಜುನಾಥ್‌ ಬಿ. ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ