ಆ್ಯಪ್ನಗರ

ತೆಲಂಗಾಣ ಸಿಎಂ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪ, ಕೆಸಿಆರ್‌ ವಿರುದ್ಧ ಮುಗಿಬಿದ್ದ ಬಿಜೆಪಿ

ಟಿಆರ್‌ಎಸ್‌ ಭದ್ರಕೋಟೆ ದುಬ್ಬಕ್ಕ ವಿಧಾನಸಭಾ ಕ್ಷೇತ್ರಕ್ಕೆ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ್ದು, ಇದೇ ಹುಮ್ಮಸ್ಸಿನಲ್ಲಿ ಗ್ರೇಟರ್‌ ಹೈದರಾಬಾದ್‌ ಮಹಾನಗರ ಪಾಲಿಕೆಯನ್ನೂ ಕೈವಶ ಮಾಡಿಕೊಳ್ಳಲು ಕಮಲ ಪಾಳಯ ಯೋಜನೆ ರೂಪಿಸಿದೆ.

Agencies 18 Nov 2020, 8:05 pm
ಹೈದರಾಬಾದ್‌: ಬದಲಾದ ರಾಜಕೀಯ ಸಮೀಕರಣಗಳು ಮತ್ತು ಗ್ರೇಟರ್‌ ಹೈದರಾಬಾದ್‌ ಮಹಾನಗರ ಪಾಲಿಕೆ (ಜಿಎಚ್‌ಎಂಸಿ) ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್‌ ರಾವ್‌ (ಕೆಸಿಆರ್‌) ಅವರನ್ನು ಟಾರ್ಗೆಟ್‌ ಮಾಡಲು ಆರಂಭಿಸಿದೆ.
Vijaya Karnataka Web K Chandrashekar Rao
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್‌ ರಾವ್‌


ಕೆಸಿಆರ್‌ ಕುಟುಂಬದ ವಿರುದ್ಧ ಬಿಜೆಪಿ ಭ್ರಷ್ಟಾಚಾರ ಆರೋಪ ಮಾಡಿರುವುದಲ್ಲದೆ, ಮೊದಲ ಬಾರಿಗೆ ಆಕ್ರಮಣಕಾರಿಯಾಗಿ ದಾಳಿ ನಡೆಸಲು ಆರಂಭಿಸಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರವನ್ನೂ ಬರೆದು, ಕೇಂದ್ರ ತನಿಖಾ ದಳದಿಂದ ತನಿಖೆ ನಡೆಸುವಂತೆ ಮನವಿಯನ್ನೂ ಮಾಡಿದೆ.

ಈ ಮೂಲಕ ತೆಲಂಗಾಣ ರಾಷ್ಟ್ರ ಸಮಿತಿಯ ಇಮೇಜ್‌ ಹಾಳು ಮಾಡುವುದು ಬಿಜೆಪಿಯ ಉದ್ದೇಶವಾಗಿದೆ. ಇದರೊಂದಿಗೆ ಮುಂದಿನ ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿಸಲಾಗಿರುವ ಹೈದರಾಬಾದ್‌ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಲಾಭ ಗಳಿಸುವುದು ಬಿಜೆಪಿಯ ಪ್ಲ್ಯಾನ್‌.

ಇತ್ತೀಚೆಗೆ ಪ್ರತಿಷ್ಠಿತ ದುಬ್ಬಕ್ಕ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಪಕ್ಷ ಜಯಗಳಿಸುತ್ತಿದ್ದಂತೆ ಕೆಸಿಆರ್‌ ಕುಟುಂಬದ ವಿರುದ್ಧ ಬಿಜೆಪಿ ಸಮರವನ್ನೇ ಸಾರಿದೆ. ಈ ಕ್ಷೇತ್ರವನ್ನು ಸಿಎಂ ಕೆಸಿಆರ್‌, ಅವರ ಪುತ್ರ ಕೆಟಿ ರಾಮರಾವ್‌ ಮತ್ತು ಸಂಬಂಧಿ ಟಿ ಹರೀಶ್‌ ರಾವ್‌ ಅವರ ಕ್ಷೇತ್ರಗಳು ಸುತ್ತುವರಿದಿದ್ದು, ಇದು ಟಿಆರ್‌ಎಸ್‌ ಪಕ್ಷದ ಭದ್ರಕೋಟೆಯಾಗಿತ್ತು. ಇಲ್ಲಿ ಜಯಗಳಿಸಿರುವುದು ಬಿಜೆಪಿಗೆ ಮತ್ತಷ್ಟು ಬಲ ನೀಡಿದೆ. ಅದೇ ಹುಮ್ಮಸ್ಸಿನಲ್ಲಿ ಇದೀಗ ಹೈದರಾಬಾದ್‌ನಲ್ಲೂ ಬಾವುಟ ಹಾರಿಸುವುದು ಬಿಜೆಪಿಯ ಯೋಜನೆಯಾಗಿದೆ.

ಆತುರಾತುರವಾಗಿ ಡಿಸೆಂಬರ್ 1 ರಂದೇ ಜಿಎಚ್‌ಎಂಸಿ ಚುನಾವಣೆಯನ್ನು ಘೋಷಿಸುವುದರೊಂದಿಗೆ ಆಡಳಿತರೂಢ ಟಿಆರ್‌ಎಸ್‌ ಗಲಿಬಿಲಿಗೊಂಡಿದೆ ಎಂದು ಬಿಜೆಪಿ ಆರೋಪಿಸಿದೆ.

ಹಿರಿಯ ಬಿಜೆಪಿ ನಾಯಕ ಮತ್ತು ಲೋಕಸಭಾ ಸದಸ್ಯ ಗದ್ದಂ ವಿವೇಕಾನಂದ ಗೃಹ ಸಚಿವ ಅಮಿತ್‌ ಶಾ ಅವರಿಗೆ ಬರೆದ ಪತ್ರದಲ್ಲಿ, ಕೆಸಿಆರ್‌ ಕುಟುಂಬ ಮತ್ತು ಅವರ ಬೇನಾಮಿಗಳು ತೆಲಂಗಾಣ ಜನರ ಹಣವನ್ನು ಲೂಟಿ ಮಾಡಿ ಸಾವಿರಾರು ಕೋಟಿ ರೂಪಾಯಿ ಆಸ್ತಿ ಸಂಪಾದಿಸಿದ್ದಾರೆ ಎಂದು ದೂರಿದ್ದಾರೆ.

ಕಟು ಶಬ್ದಗಳಿಂದ ಕೂಡಿರುವ ಎರಡು ಪುಟಗಳ ಪತ್ರದಲ್ಲಿ ಕೆಸಿಆರ್‌ ವಿರುದ್ಧ ಹಲವು ಆರೋಪಗಳನ್ನು ಮಾಡಲಾಗಿದೆ. ಕಲೇಶ್ವರಂ ಬೃಹತ್‌ ನೀರಾವರಿ ಯೋಜನೆಯ ಮೊತ್ತವನ್ನು 36,000 ಕೋಟಿ ರೂಪಾಯಿಯಿಂದ 1 ಲಕ್ಷ ಕೋಟಿ ರೂಪಾಯಿಗೆ ಏರಿಕೆ ಮಾಡಲಾಗಿದೆ. 2 ಟಿಎಂಸಿ ಯೋಜನೆಗೆ ಈಗಾಗಲೇ 1 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದರೂ, ಒಂದೇ ಒಂದು ಹನಿ ನೀರೂ ಬಿಡುಗಡೆಯಾಗಿಲ್ಲ. 3ನೇ ಟಿಎಂಸಿ ನೀರಿಗೆ ಕೆಸಿಆರ್‌ ಟೆಂಡರ್‌ ಕರೆಯದೇ 25,000 ಕೋಟಿ ರೂಪಾಯಿಗಳ ಯೋಜನೆ ನೀಡಿದ್ದಾರೆ. ಕೇವಲ ಕಮಿಷನ್‌ ಹೊಡೆಯಲೆಂದೇ ಈ ಟೆಂಡರ್‌ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ