ಆ್ಯಪ್ನಗರ

ನಿಜಾಮ್‌ ಸಂಸ್ಕೃತಿಗೆ ಕೊನೆ ಹಾಡುವ ಶಪಥ..! ಹೈದರಾಬಾದ್‌ನಲ್ಲಿ ಅಮಿತ್‌ ಶಾ ಬಿರುಸಿನ ಪ್ರಚಾರ

ಈ ಸಲದ ಬೃಹತ್‌ ಹೈದರಾಬಾದ್‌ ಮಹಾನಗರ ಪಾಲಿಕೆ ಚುನಾವಣೆ ಭಾರೀ ಮಹತ್ವ ಪಡೆದುಕೊಂಡಿದ್ದು, ಬಿಜೆಪಿ ಎಲೆಕ್ಷನ್‌ ಅನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಬಹಿರಂಗ ಪ್ರಚಾರಕ್ಕೆ ಕೊನೆ ದಿನವಾದ ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ರೋಡ್‌ ಶೋ ನಡೆಸಿ, ನಿಜಾಮ ಸಂಸ್ಕೃತಿಯನ್ನು ಅಂತ್ಯಗೊಳಿಸುವ ಶಪಥ ಮಾಡಿದರು.

Agencies 29 Nov 2020, 11:39 pm
ಹೈದರಾಬಾದ್‌: ಬೃಹತ್‌ ಹೈದರಾಬಾದ್‌ ಮಹಾನಗರ ಪಾಲಿಕೆ ಚುನಾವಣೆ ಬಹಿರಂಗ ಪ್ರಚಾರದ ಕೊನೆಯ ದಿನ ಬಿರುಸಿನ ವಾಗ್ವಾದಕ್ಕೆ ನಗರ ಸಾಕ್ಷಿಯಾಯಿತು.
Vijaya Karnataka Web in hyderabad amit shah pushes for democracy says will end nizam culture
ನಿಜಾಮ್‌ ಸಂಸ್ಕೃತಿಗೆ ಕೊನೆ ಹಾಡುವ ಶಪಥ..! ಹೈದರಾಬಾದ್‌ನಲ್ಲಿ ಅಮಿತ್‌ ಶಾ ಬಿರುಸಿನ ಪ್ರಚಾರ


ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ವಾರಸಿಗುಡ ಪ್ರದೇಶದಲ್ಲಿ ಒಂದು ಗಂಟೆ ರೋಡ್‌ ಶೋ ನಡೆಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬಂದರೆ ಹೈದರಾಬಾದ್‌ನಲ್ಲಿ ನವಾಬ್‌ ಮತ್ತು ನಿಜಾಮ್‌ ಸಂಸ್ಕೃತಿ ಕಿತ್ತೊಗೆಯುತ್ತೇವೆ. ವಂಶಪಾರಂಪರ್ಯ ಆಡಳಿತದಿಂದ ಪ್ರಜಾಪ್ರಭುತ್ವ, ಭ್ರಷ್ಟಾಚಾರದ ಬದಲಾಗಿ ಉತ್ತಮ ಆಡಳಿತ, ರಹಸ್ಯದಿಂದ ಪಾರದರ್ಶಕತೆಗೆ ಬದಲಾವಣೆ ತರುತ್ತೇವೆ. ಹೈದರಾಬಾದ್‌ ಅನ್ನು ಮಿನಿ ಭಾರತ ಮಾಡುತ್ತೇವೆ. ಎಲ್ಲಾ ಕ್ಷೇತ್ರಗಳಲ್ಲಿಯೂ ನಗರ ಖ್ಯಾತಿ ಪಡೆಯುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಎಐಎಂಐಎಂ ಮುಖ್ಯಸ್ಥ ಅಸಾಸುದ್ದೀನ್‌ ಓವೈಸಿ ಅವರು ನಾಲೆಗಳು, ಸರೋವರಗಳು, ನೀರಿನ ಮೂಲಗಳನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ. ಅದು ಗೊತ್ತಿದ್ದೂ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಸುಮ್ಮನಿದ್ದಾರೆ. ಓವೈಸಿ ಜತೆ ರಹಸ್ಯ ಮೈತ್ರಿ ಮಾಡಿಕೊಂಡಿರುವುದರಿಂದಲೇ ಅವರು ಮೌನವಾಗಿದ್ದಾರೆ. ಮೈತ್ರಿಯನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಅವರಿಗೆ ಭಯವೇಕೆ? ಇಡೀ ನಗರ ಪ್ರವಾಹಕ್ಕೆ ಸಿಲುಕಿದ್ದರೂ ಮುಖ್ಯಮಂತ್ರಿ ತಮ್ಮ ಬಂಗಲೆಯಿಂದ ಹೊರಬರಲಿಲ್ಲ, ಸಂತ್ರಸ್ತರಿಗೆ ಪರಿಹಾರ ನೀಡಲಿಲ್ಲ ಎಂದು ಆರೋಪಿಸಿದರು.

ಹೈದರಾಬಾದ್: ಭಾಗ್ಯಲಕ್ಷ್ಮೀ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದ ಅಮಿತ್ ಶಾ!


ಇನ್ನು ಓವೈಸಿ ಅವರು ಹೈದರಾಬಾದ್‌ ಅನ್ನು ಪಾಕಿಸ್ತಾನದ ಜತೆ ವಿಲೀನ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು. ಯಾವ ಚುನಾವಣೆಯನ್ನೂ ಬಿಜೆಪಿ ಲಘುವಾಗಿ ಪರಿಗಣಿಸುವುದಿಲ್ಲ. ಅಂತೆಯೇ ಹೈದಾರಾಬಾದ್‌ ಪಾಲಿಕೆ ಚುನಾವಣೆಯನ್ನೂ ಪಕ್ಷ ಗಂಭೀರವಾಗಿ ಪರಿಗಣಿಸಿದೆ ಎಂದು ಅಮಿತ್‌ ಶಾ ಹೇಳಿದರು.

ಒಡೆದು ಆಳುವವರು
ಅಮಿತ್‌ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮೊದಲಾದವರು ಪಾಲಿಕೆ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದನ್ನು ಟೀಕಿಸಿರುವ ತೆಲಂಗಾಣ ಮುಖ್ಯಮಂತ್ರಿ ಹಾಗೂ ಟಿಆರ್‌ಎಸ್‌ ವರಿಷ್ಠ ಕೆ.ಚಂದ್ರಶೇಖರ ರಾವ್‌ ಅವರು, ಒಡೆದು ಆಳುವ ಶಕ್ತಿಗಳು ನಗರಕ್ಕೆ ಕಾಲಿಟ್ಟಿವೆ ಎಂದು ಹೇಳಿದ್ದಾರೆ. ನಗರದಲ್ಲಿ ಅಶಾಂತಿ ಸೃಷ್ಟಿಸುವುದೇ ಅವರ ಗುರಿ. ಅಂತಹವರಿಗೆ ಪಾಲಿಕೆ ಆಡಳಿತ ನೀಡಿದರೆ ನಮ್ಮ ಮಕ್ಕಳ ಭವಿಷ್ಯ ಏನಾಗುತ್ತದೆ? ಹೈದರಾಬಾದ್‌ ಪ್ರವಾಹದಲ್ಲಿ ತತ್ತರಿಸಿದಾಗ ನಗರಕ್ಕೆ ಕಾಲಿಡದವರು ಈಗ ಬಂದಿದ್ದಾರೆ ಎಂದು ಕೆಸಿಆರ್‌ ಟೀಕಿಸಿದ್ದಾರೆ.

ಹೈದರಾಬಾದ್ ಪಾಲಿಕೆ ಚುನಾವಣೆ: ಅಮಿತ್ ಶಾ ಬರುವ ಮುನ್ನ ಬಿಜೆಪಿಗೆ ಕೆಸಿಆರ್ ಟಾಂಗ್!

ಬಿಜೆಪಿಯು 2023ರಲ್ಲಿ ನಡೆಯುವ ತೆಲಂಗಾಣ ವಿಧಾನಸಭೆ ಮೇಲೆ ಕಣ್ಣಿಟ್ಟಿದೆ. ಅದಕ್ಕೆ ಹೈದರಾಬಾದ್‌ ಪಾಲಿಕೆ ಚುನಾವಣೆಯಿಂದಲೇ ತಾಲೀಮು ಆರಂಭಿಸಿದೆ. ರಾಜ್ಯದಲ್ಲಿ ಬಿಜೆಪಿ ನಿಧಾನವಾಗಿ ತಳವೂರುತ್ತಿರುವುದರಿಂದ ತಳಮಳಕ್ಕೆ ಒಳಗಾಗಿರುವ ಕೆಸಿಆರ್‌ ಅವರು, ಡಿಸೆಂಬರ್‌ನಲ್ಲಿ ಬಿಜೆಪಿಯೇತರ ಪಕ್ಷಗಳ ನಾಯಕರ ಸಮಾವೇಶವನ್ನು ಹೈದರಾಬಾದ್‌ನಲ್ಲಿ ಆಯೋಜಿಸಿದ್ದಾರೆ. 150 ಸದಸ್ಯ ಬಲದ ಪಾಲಿಕೆಗೆ ಡಿ.1ರಂದು ಚುನಾವಣೆ ನಡೆಯಲಿದ್ದು, ಡಿ.4ರಂದು ಫಲಿತಾಂಶ ಪ್ರಕಟವಾಗಲಿದೆ.

ಹೈದರಾಬಾದ್ ಭಾಗ್ಯನಗರವಾಗಲಿದೆ ಎಂದ ಯೋಗಿ: ಅಸಾದುದ್ದೀನ್ ಒವೈಸಿ ಪ್ರತಿಕ್ರಿಯೆ ಏನಿತ್ತು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ