ಆ್ಯಪ್ನಗರ

ಬೋಪಣ್ಣ, ಬೋಸ್ ಮರು ಶಿಫಾರಸು: ಸರಕಾರದ ಆಕ್ಷೇಪಕ್ಕೆ ಕೊಲಿಜಿಯಂ ತಿರಸ್ಕಾರ

ಇಬ್ಬರು ನ್ಯಾಯಮೂರ್ತಿಗಳ ಸ್ಪರ್ಧಾತ್ಮಕತೆ, ನಡವಳಿಕೆ ಮತ್ತು ಪ್ರಾಮಾಣಿಕತೆ ವಿಷಯದಲ್ಲಿ ಯಾವುದೇ ಪ್ರಶ್ನೆಗಳಿಲ್ಲ ಎಂದು ಹೇಳಿರುವ ಕೊಲಿಜಿಯಂ ಅವರ ಹೆಸರನ್ನು ಮರುಪರಿಶೀಲಿಸುವಂತೆ ಸೂಚಿಸಿದೆ.

Vijaya Karnataka 10 May 2019, 3:29 pm
ಹೊಸದಿಲ್ಲಿ: ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್‌ ಮತ್ತು ಎ.ಎಸ್‌. ಬೋಪಣ್ಣ ಅವರ ಪದೋನ್ನತಿಗೆ ಕೇಂದ್ರ ಸರಕಾರ ಎತ್ತಿರುವ ಆಕ್ಷೇಪವನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದ್ದು, ಅವರಿಬ್ಬರ ಹೆಸರನ್ನು ಮತ್ತೆ ಕಳುಹಿಸಿಕೊಡಲು ನಿರ್ಧರಿಸಿದೆ.
Vijaya Karnataka Web bopanna


ಈ ಇಬ್ಬರು ನ್ಯಾಯಮೂರ್ತಿಗಳ ಸ್ಪರ್ಧಾತ್ಮಕತೆ, ನಡವಳಿಕೆ ಮತ್ತು ಪ್ರಾಮಾಣಿಕತೆ ವಿಷಯದಲ್ಲಿ ಯಾವುದೇ ಪ್ರಶ್ನೆಗಳಿಲ್ಲ ಎಂದು ಹೇಳಿರುವ ಕೊಲಿಜಿಯಂ ಅವರ ಹೆಸರನ್ನು ಮರುಪರಿಶೀಲಿಸುವಂತೆ ಸೂಚಿಸಿದೆ. ಬುಧವಾರ ಸಿಜೆಐ ರಂಜನ್‌ ಗೊಗೊಯ್‌ ನೇತೃತ್ವದಲ್ಲಿ ನಡೆದ ಕೊಲಿಜಿಯಂ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು.

ಮತ್ತಿಬ್ಬರ ಶಿಫಾರಸು; ಈ ನಡುವೆ, ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿಯಾಗಿರುವ ಬಿ.ಆರ್‌. ಗವಾಯ್‌ ಹಾಗೂ ಹಿಮಾಚಲ ಪ್ರದೇಶ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿರುವ ಸೂರ್ಯಕಾಂತ್‌ ಅವರಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡಲು ಕೊಲಿಜಿಯಂ ಶಿಫಾರಸು ಮಾಡಿದೆ.

ಸುಪ್ರೀಂಕೋರ್ಟ್‌ಗೆ 31 ನ್ಯಾಯಮೂರ್ತಿಗಳ ನೇಮಕಕ್ಕೆ ಅವಕಾಶವಿದ್ದು, ಪ್ರಸಕ್ತ 27 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸೇವಾ ಹಿರಿತನವಿಲ್ಲ ಎಂದಿದ್ದ ಸರಕಾರ:

ಜಾರ್ಖಂಡ್‌ ಹೈಕೋರ್ಟ್‌ ಮುಖ್ಯ ನ್ಯಾ. ಅನಿರುದ್ಧ್‌ ಬೋಸ್‌, ಗುವಾಹಟಿ ಹೈಕೋರ್ಟ್‌ ಮುಖ್ಯ ನ್ಯಾ. ಎ.ಎಸ್‌. ಬೋಪಣ್ಣ ಅವರ ಹೆಸರನ್ನು ಸೇವಾ ಹಿರಿತನ ಮತ್ತು ಪ್ರಾದೇಶಿಕ ಪ್ರಾತಿನಿಧ್ಯತೆಯ ಕಾರಣಗಳನ್ನು ನೀಡಿ ಸರಕಾರ ತಿರಸ್ಕರಿಸಿತ್ತು. ಅಖಿಲ ಭಾರತ ನ್ಯಾಯಮೂರ್ತಿಗಳ ಸೇವಾ ಹಿರಿತನದಲ್ಲಿ ನ್ಯಾ. ಬೋಸ್‌ 12ನೇ ಸ್ಥಾನದಲ್ಲಿದ್ದಾರೆ. ನ್ಯಾ. ಬೋಪಣ್ಣ 36ನೇ ಸ್ಥಾನ ಹೊಂದಿದ್ದಾರೆ. ನ್ಯಾ. ಬೋಸ್‌ ಮೂಲತಃ ಕೋಲ್ಕೊತಾ ಹೈಕೋರ್ಟ್‌ನವರಾದರೆ, ನ್ಯಾ. ಬೋಪಣ್ಣ ಕರ್ನಾಟಕ ಹೈಕೋರ್ಟ್‌ನವರು. ಕಳೆದ ವರ್ಷ ದೆಹಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಾಗಿ ನ್ಯಾ. ಬೋಸ್‌ ಅವರ ಹೆಸರನ್ನು ಕೊಲಿಜಿಯಂ ಶಿಫಾರಸು ಮಾಡಿದಾಗಲೂ ಸರಕಾರ ಒಪ್ಪಿರಲಿಲ್ಲ. ಏ.12ರಂದು ಈ ಇಬ್ಬರು ನ್ಯಾಯಮೂರ್ತಿಗಳನ್ನು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿ ನೇಮಿಸಲು ಸರಕಾರಕ್ಕೆ ಕೊಲಿಜಿಯಂ ಶಿಫಾರಸು ಮಾಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ