Please enable javascript.ಬಿಜೆಪಿ ಬೇಗುದಿ ಹೆಚ್ಚಿಸಿದ ಮೋದಿ - ಬಿಜೆಪಿ ಬೇಗುದಿ ಹೆಚ್ಚಿಸಿದ ಮೋದಿ - Vijay Karnataka

ಬಿಜೆಪಿ ಬೇಗುದಿ ಹೆಚ್ಚಿಸಿದ ಮೋದಿ

Vijaya Karnataka Web 8 Jun 2013, 7:04 am
Subscribe

ಮಹತ್ವದ ವಿಷಯದ ಬಗ್ಗೆ ಚರ್ಚಿಸಲು ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆಗೆ ಪಕ್ಷದ ಲಾಲಕಷ್ಣ ಆಡ್ವಾಣಿ ಸೇರಿದಂತೆ ಪ್ರಮುಖ ನಾಯಕರು ಗೈರು ಹಾಜರಾಗಿದ್ದಾರೆ.

ಬಿಜೆಪಿ ಬೇಗುದಿ ಹೆಚ್ಚಿಸಿದ ಮೋದಿ
* ಸುಭಾಷ್ ಹೂಗಾರ, ಪಣಜಿ
ಆರು ರಾಜ್ಯಗಳ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳ ಸಿದ್ಧತೆಯಂತಹ ಮಹತ್ವದ ವಿಷಯದ ಬಗ್ಗೆ ಚರ್ಚಿಸಲು ಇಲ್ಲಿ ನಡೆಯುತ್ತಿರುವ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪದಾಧಿಕಾರಿಗಳ ಸಭೆಗೆ ಪಕ್ಷದ ಹಿರಿಯ ಮುಖಂಡ ಲಾಲಕಷ್ಣ ಆಡ್ವಾಣಿ ಸೇರಿದಂತೆ ಪ್ರಮುಖ ನಾಯಕರು ಗೈರು ಹಾಜರಾಗಿದ್ದಾರೆ. ಈ ಮೂಲಕ ಪಕ್ಷದಲ್ಲಿನ ಗುಂಪುಗಾರಿಕೆ ಮೊದಲ ದಿನವೇ ಬಹಿರಂಗವಾದಂತಾಗಿದೆ.

ಆಡ್ವಾಣಿ ಅವರಲ್ಲದೆ, ರಾಷ್ಟ್ರೀಯ ಪದಾಧಿಕಾರಿಗಳಾದ ಉಪಾಧ್ಯಕ್ಷೆ ಉಮಾ ಭಾರತಿ, ಜಸ್ವಂತ್ ಸಿಂಗ್, ಯಶವಂತ್ ಸಿನ್ಹಾ, ಮೇನಕಾ ಗಾಂಧಿ, ರವಿಶಂಕರ ಪ್ರಸಾದ್, ವರುಣ ಗಾಂಧಿ ಅವರಂಥಹ ಪ್ರಮುಖ ನಾಯಕರೂ ಈ ಮಹತ್ವದ ಸಭೆಗೆ ಗೈರು ಹಾಜರಾಗಿದ್ದಾರೆ. ಈ ಪೈಕಿ ಬಹುತೇಕರು ಅನಾರೋಗ್ಯದ ಕಾರಣ ಹೇಳಿ ಸಭೆಯಿಂದ ದೂರ ಉಳಿದಿದ್ದಾರೆ. ಏಕಕಾಲಕ್ಕೆ ಇಷ್ಟೊಂದು ನಾಯಕರ ಆರೋಗ್ಯ ಕೈಕೊಟ್ಟಿದ್ದು ಪಕ್ಷದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸ್ಪಷ್ಟ ಲಕ್ಷಣಗಳಿವೆ. ಆಡ್ವಾಣಿ ಅವರು ಶನಿವಾರ ಸಭೆಗೆ ಹಾಜರಾಗುತ್ತಾರೆ ಎಂದು ಹಿರಿಯ ನಾಯಕ ವೆಂಕಯ್ಯ ನಾಯ್ಡು ಅವರು ಹೇಳಿದರೂ ಆ ಬಗ್ಗೆ ಬಿಜೆಪಿ ನಾಯಕರಲ್ಲಿಯೇ ಅನುಮಾನಗಳಿವೆ.

ಪಕ್ಷದ ಮುಖಂಡರು ಮತ್ತು ಕಾರ‌್ಯಕರ್ತರ ಮಧ್ಯೆ ನರೇಂದ್ರ ಮೋದಿ ಬಗ್ಗೆ ಒಲವು ಹೆಚ್ಚಾಗುತ್ತಿರುವಂತೆ ಆಡ್ವಾಣಿ ಮತ್ತವರ ಬೆಂಬಲಿಗರ ತಳಮಳವೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಪಕ್ಷದ ವೇದಿಕೆಗಳಲ್ಲಿ ಮಾತ್ರವಲ್ಲದೇ ಸಾರ್ವಜನಿಕವಾಗಿಯೂ ತಮ್ಮ ಅತಪ್ತಿಯನ್ನು ಆಡ್ವಾಣಿ ಅವರು ಇತ್ತೀಚೆಗೆ ಹಲವು ಬಾರಿ ವ್ಯಕ್ತಪಡಿಸಿದ್ದಾರೆ.

ಆದರೂ ಮೋದಿ ಕೈಗೆ ಪ್ರಚಾರದ ಚುಕ್ಕಾಣಿ ಸಿಗುವುದು ಬಹುತೇಕ ನಿಶ್ಚಿತ ಎಂಬ ವಾತಾವರಣ ಪಕ್ಷದಲ್ಲಿ ಉಂಟಾಗಿರುವುದರಿಂದ ಅದನ್ನು ತಡೆಯುವ ಕೊನೆ ಪ್ರಯತ್ನವೆಂಬಂತೆ ಆಡ್ವಾಣಿ ಅವರು ಅನಾರೋಗ್ಯದ ಕಾರಣ ನೀಡಿ ಸಭೆಗೆ ಗೈರು ಹಾಜರಾಗಿದ್ದಾರೆ ಎನ್ನುತ್ತಿವೆ ಬಿಜೆಪಿಯ ಮೂಲಗಳು. ಪಕ್ಷದ ದಷ್ಟಿಯಿಂದ ಈ ಪದಾಧಿಕಾರಿಗಳ ಸಭೆಗೆ ಅತ್ಯಂತ ಮಹತ್ವವಿದೆ. ಇದೇ ಮೊದಲ ಬಾರಿಗೆ ರಾಷ್ಟ್ರೀಯ ಪದಾಧಿಕಾರಿಗಳ ಸಭೆಗೆ ಪಕ್ಷದ ಸಂಸದೀಯ ಮಂಡಳಿಯ ಎಲ್ಲ ಸದಸ್ಯರನ್ನು ಆಹ್ವಾನಿಸಲಾಗಿತ್ತು. ಆಡ್ವಾಣಿ ಅವರನ್ನು ಹೊರತುಪಡಿಸಿ ಸಂಸದೀಯ ಮಂಡಳಿಯ ಎಲ್ಲ ಸದಸ್ಯರೂ ಸಭೆಯಲ್ಲಿ ಉಪಸ್ಥಿತರಿದ್ದರು

ಇದರಿಂದಾಗಿ, 2014ರ ಲೋಕಸಭೆ ಚುನಾವಣೆಗೆ ಪಕ್ಷದ ಪ್ರಚಾರ ಸಮಿತಿಯ ನೇತತ್ವವನ್ನು ಗುಜರಾತ್ ಸಿಎಂ ನರೇಂದ್ರ ಮೋದಿ ಅವರಿಗೆ ವಹಿಸುವ ಸಂಬಂಧ ಪಕ್ಷದ ಮುಖಂಡರಲ್ಲಿ ಭುಗಿಲೆದ್ದಿರುವ ಭಿನ್ನಾಭಿಪ್ರಾಯ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ.

ಮೋದಿ ಪರ ಆರೆಸ್ಸೆಸ್ ಒಲವು
ಬಿಜೆಪಿ ಉನ್ನತ ಮೂಲಗಳ ಪ್ರಕಾರ ಬಿಜೆಪಿಯ ಮಾತ ಸಂಘಟನೆ ಆರೆಸ್ಸೆಸ್ ನರೇಂದ್ರ ಮೋದಿ ಅವರ ಪರವಾಗಿದೆ. ಮೋದಿ ಅವರನ್ನು ಮುಂಬರುವ ಚುನಾವಣೆಗಳಿಗೆ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಘೋಷಿಸಬೇಕು ಎಂಬ ಸೂಚನೆ ನಾಗಪುರದಿಂದ ಬಂದಿದ್ದರಿಂದಲೇ ಗೋವಾ ಸಿಎಂ ಮನೋಹರ ಪರಿಕ್ಕರ್, ರಾಜೀವ್‌ಪ್ರತಾಪ ರೂಡಿ ಸೇರಿದಂತೆ ಅನೇಕ ನಾಯಕರು ಬಹಿರಂಗವಾಗಿ ಮೋದಿ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇನ್ನೊಂದೆಡೆ ಆಡ್ವಾಣಿ ನೇತತ್ವದಲ್ಲಿ ಅನೇಕರು ಈ ವಿಚಾರದಲ್ಲಿ ಆತುರ ಮಾಡುವುದು ತರವಲ್ಲ ಎಂಬ ಅಭಿಪ್ರಾಯ ಹೊಂದಿದ್ದಾರೆ. ಈ ಎರಡು ಗುಂಪುಗಳ ಮಧ್ಯೆ ಪಕ್ಷದ ಅಧ್ಯಕ್ಷ ರಾಜನಾಥಸಿಂಗ್ ಒತ್ತಡಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.

ಆಡ್ವಾಣಿ ಅವರು ರಾಜಕೀಯ ನಿವತ್ತಿ ಘೋಷಿಸಬೇಕೆಂದು ಬಹಳ ಹಿಂದೆಯೇ ಹೇಳಿದ್ದ ಆರೆಸ್ಸೆಸ್, ಮಿತ್ರ ಪಕ್ಷಗಳ ಸಹಮತವಿರದೇ ಇದ್ದರೂ ಪಕ್ಷದ ಕಾರ‌್ಯಕರ್ತರಲ್ಲಿ ಉತ್ಸಾಹ ತುಂಬುವ ಏಕೈಕ ಮಾರ್ಗವೆಂದರೆ ನರೇಂದ್ರ ಮೋದಿ ಅವರಿಗೆ ಮುಂಬರುವ ಚುನಾವಣೆಯ ನೇತತ್ವ ವಹಿಸುವುದು ಎನ್ನುತ್ತಿದೆಯಂತೆ. ಈ ಹಿನ್ನೆಲೆಯಲ್ಲಿ ಗೋವಾದ ರಾಷ್ಟ್ರೀಯ ಕಾರ‌್ಯಕಾರಿಣಿಯಲ್ಲೇ ಮೋದಿ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳಲೇಬೇಕಾದ ಒತ್ತಡಕ್ಕೆ ಸಿಲುಕಿರುವ ಬಿಜೆಪಿ, ಅಂಥ ತೀರ್ಮಾನದಿಂದ ಪಕ್ಷದ ಒಳಗೆ ಮತ್ತು ಹೊರಗೆ ಆಗುವ ಪ್ರತಿಕೂಲ ಪರಿಣಾಮಗಳನ್ನು ಕಡಿಮೆ ಮಾಡುವುದು ಹೇಗೆ ಎಂಬುದನ್ನು ಮಾತ್ರ ಈಗ ಯೋಚಿಸುತ್ತಿದೆ.

ಸುಷ್ಮಾ ಅತಪ್ತಿ
ನರೇಂದ್ರ ಮೋದಿ ಅವರ ವಿಚಾರವಾಗಿ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಲೋಕಸಭೆ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ತೀವ್ರ ಅತಪ್ತಿ ವ್ಯಕ್ತಪಡಿಸಿದ್ದಾರೆನ್ನಲಾಗಿದ್ದು, ಈ ಅತಪ್ತಿಯಿಂದಾಗಿಯೇ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ಒಂದು ಗಂಟೆ ವಿಳಂಬವಾಗಿ ಆರಂಭವಾಯಿತು.

ತರಾತುರಿಯಲ್ಲಿ ನರೇಂದ್ರ ಮೋದಿ ಅವರ ಹೆಗಲಿಗೆ ನೇತತ್ವ ವಹಿಸುವುದು ಸರಿಯಲ್ಲ ಎನ್ನುವವರ ಸಾಲಿಗೆ ಸೇರಿರುವ ಸುಷ್ಮಾ ಸ್ವರಾಜ್, ಮಧ್ಹಾಹ್ನ 1.30ಕ್ಕೆ ಪಣಜಿಗೆ ಆಗಮಿಸಿದರೂ 3 ಗಂಟೆಗೆ ನಿಗದಿಯಾಗಿದ್ದ ಪದಾಧಿಕಾರಿಗಳ ಸಭೆಗೆ 4.15ರ ನಂತರವೇ ಆಗಮಿಸಿದರು.

ಮೂಲಗಳ ಪ್ರಕಾರ, ಆಡ್ವಾಣಿ ಅವರನ್ನು ಕಡೆಗಣಿಸಿ ನರೇಂದ್ರ ಮೋದಿ ಅವರ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ ಎಂದು ಸುಷ್ಮಾ ಅವರು ರಾಜನಾಥಸಿಂಗ್ ಅವರಿಗೆ ಹೇಳಿದ್ದಾರೆ. ಈ ಸಂಬಂಧ ರಾಜನಾಥಸಿಂಗ್ ಅವರು ಆಡ್ವಾಣಿ ಅವರನ್ನು ಸಂಪರ್ಕಿಸಿ ಮಾತನಾಡಿದ ನಂತರವೇ ಸುಷ್ಮಾ ಸ್ವರಾಜ್ ಕಾರ‌್ಯಕಾರಿಣಿಗೆ ಬಂದರೆನ್ನಲಾಗಿದೆ. ಈ ಕಾರಣಕ್ಕಾಗಿ 3 ಗಂಟೆಗೆ ಆರಂಭವಾಗಬೇಕಿದ್ದ ಸಭೆ ಸುಮಾರು ಒಂದೂವರೆ ಗಂಟೆ ತಡವಾಗಿ ಆರಂಭವಾಯಿತು.
-----

ಮೋದಿಯಿಂದಾಗಿ ಹಿರಿಯ ನಾಯಕರೇ ಕಾಯಿಲೆ ಬೀಳುತ್ತಿರುವಾಗ ಅವರು ಪ್ರಧಾನಿಯಾದರೆ ದೇಶದ ಗತಿಯೇನು ಎಂದು ಬಿಜೆಪಿ ಕೊಂಚ ಆಲೋಚಿಸಲಿ.
* ರಶೀದ್ ಅಲ್ವಿ, ಕಾಂಗ್ರೆಸ್ ನಾಯಕ

ಆಡ್ವಾಣಿ ಅವರು ಕಾಯಿಲೆ ಬಿದ್ದಿರುವುದರಿಂದ ನಾನೇ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದೆ.ಇದಕ್ಕೆ ಅಪಾರ್ಥ ಕಲ್ಪಿಸಬೇಡಿ.
* ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಸಿಎಂ ನಿತೀಶ್, ಡಿಸಿಎಂ ಸುಶೀಲ್ ಕುಮಾರ್ ಮೋದಿ ಅವರನ್ನು ನೋಡಿ ಜನತೆ ಚುನಾಯಿಸಿದ್ದಾರೆ. ಇಂಥ ಸಂದರ್ಭದಲ್ಲಿ ನಮಗೆ ಗುತ್ತಿಗೆ ನಾಯಕನ(ಮೋದಿ) ಅಗತ್ಯವಿಲ್ಲ,’’
* ನೀರಜ್ ಕುಮಾರ್, ಜೆಡಿಯು ವಕ್ತಾರ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ