ಆ್ಯಪ್ನಗರ

ಬಂಗಾಳದಲ್ಲಿ ಭುಗಿಲೆದ್ದ ಹಿಂಸೆಗೆ ಇಬ್ಬರು ಬಲಿ

ಪಶ್ಚಿಮ ಬಂಗಾಳದಲ್ಲಿ ಗುರುವಾರ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

PTI 21 Jun 2019, 5:00 am
ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಗುರುವಾರ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Vijaya Karnataka Web police


ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವಿನ ಹಿಂಸಾಚಾರದಿಂದ ಇತ್ತೀಚೆಗೆ ದೇಶದ ಗಮನ ಸೆಳೆದಿದ್ದ ಬರಾಖ್‌ಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಭಾಟ್‌ಪರದಲ್ಲಿ ಘರ್ಷಣೆ ನಡೆಸಿದೆ. ಕಚ್ಚಾಬಾಂಬ್‌ ಸಿಡಿಸಲಾಗಿದ್ದು, ಬಂದೂಕಿನಿಂದ ಗುಂಡು ಹಾರಿಸಲಾಗಿದೆ. ಅನಾಮಧೇಯ ಗುಂಪುಗಳ ನಡೆದ ಘರ್ಷಣೆ ಇದಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 24 ಪರಗಣ ಜಿಲ್ಲೆಯಲ್ಲಿ ನೂತನ ಪೊಲೀಸ್‌ ಠಾಣೆ ಉದ್ಘಾಟನೆಗೆ ಪಶ್ಚಿಮ ಬಂಗಾಳ ಪೊಲೀಸ್‌ ಮಹಾನಿರ್ದೇಶಕರು ಆಗಮಿಸಿದ ಕೆಲವೇ ಗಂಟೆಗೂ ಈ ಘಟನೆ ನಡೆದಿದೆ. ಹೀಗಾಗಿ ಪೊಲೀಸ್‌ ಮಹಾನಿರ್ದೇಶಕರು ಠಾಣೆ ಉದ್ಘಾಟಿಸದೆ ಹಿಂದಿರುಗಿದ್ದಾರೆ.

ಕಚ್ಚಾಬಾಂಬ್‌ ಬಳಸಿ ನಡೆಸಲಾದ ಹೊಡೆದಾಟದ ಹಿಂದೆ ಟಿಎಂಸಿ ಕಾರ್ಯಕರ್ತರು ಮತ್ತು ಕೆಲವು ಪೊಲೀಸರು ಶಾಮೀಲಾಗಿದ್ದಾರೆ ಎಂದು ಸ್ಥಳೀಯ ಸಂಸದ ಅರ್ಜುನ್‌ ಸಿಂಗ್‌ ಆರೋಪಿಸಿದ್ದಾರೆ.

144 ಸೆಕ್ಷನ್‌ ಜಾರಿ: ಎರಡು ಗುಂಪುಗಳ ನಡುವಿನ ಹಿಂಸಾಚಾರಕ್ಕೆ ಹೆದರಿದ ಸ್ಥಳೀಯ ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚಿದ್ದಾರೆ. ಭಾಟ್‌ಪರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಕ್ಷಿಪ್ರ ಕಾರ್ಯಪಡೆಯನ್ನು ನಿಯೋಜಿಸಲಾಗಿದೆ.

ಅಮಿತ್‌ ಶಾಗೆ ವರದಿ

ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ದಿನದಿಂದಲೂ ಬರಾಖ್‌ಪುರ, ಭಾಟ್‌ಪರ, ಕಂಕಿನಾರಾ ಪಟ್ಟಣಗಳಲ್ಲಿ ಹಿಂಸಾಚಾರ ತೀವ್ರವಾಗಿದೆ. ಟಿಎಂಸಿ ಕಾರ್ಯಕರ್ತರು ಎಂದು ಕರೆಸಿಕೊಳ್ಳುವ ಗೂಂಡಾಗಳು ಸ್ಥಳೀಯರನ್ನು ಹೆದರಿಸುತ್ತಿದ್ದಾರೆ, ಬಿಜೆಪಿ ಕಾರ್ಯಕರ್ತರ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಹಾಗಾಗಿ ಬಿಜೆಪಿ ಶಾಸಕರ ನಿಯೋಗ ಈ ಸ್ಥಳಗಳಿಗೆ ಭೇಟಿ ನೀಡಿ, ವಿಸ್ತೃತ ವರದಿಯನ್ನು ಗೃಹ ಸಚಿವ ಅಮಿತ್‌ ಶಾ ಅವರಿಗೆ ಸಲ್ಲಿಸಲಿದೆ ಎಂದು ಬಿಜೆಪಿ ವಕ್ತಾರ ಕೈಲಾಶ್‌ ವಿಜಯವರ್ಗೀಯ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ