ಆ್ಯಪ್ನಗರ

Teesta Setalvad: ಅಮಿತ್ ಶಾ ಸಂದರ್ಶನದ ಕೆಲವೇ ಗಂಟೆಯಲ್ಲಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಬಂಧನ!

Teesta Setalvad Detained: ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಸಂದರ್ಶನದಲ್ಲಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರ ಬಗ್ಗೆ ಉಲ್ಲೇಖಿಸಿದ ಕೆಲವೇ ಗಂಟೆಗಳಲ್ಲಿ ಗುಜರಾತ್ ಎಟಿಎಸ್ ಪೊಲೀಸರು ಮುಂಬಯಿಗೆ ತೆರಳಿ ತೀಸ್ತಾ ಅವರನ್ನು ಬಂಧಿಸಿದೆ.

Edited byಅಮಿತ್ ಎಂ.ಎಸ್ | Vijaya Karnataka Web 25 Jun 2022, 8:55 pm

ಹೈಲೈಟ್ಸ್‌:

  • ಮುಂಬಯಿಯಲ್ಲಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಬಂಧನ
  • ಮಹಾರಾಷ್ಟ್ರಕ್ಕೆ ತೆರಳಿದ್ದ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಪೊಲೀಸ್
  • ಗುಜರಾತ್ ಗಲಭೆ ಪ್ರಕರಣದಲ್ಲಿ ತೀಸ್ತಾ ಸೆಟಲ್ವಾಡ್ ಬಗ್ಗೆ ಅಮಿತ್ ಶಾ ಪ್ರಸ್ತಾಪ
  • ಪ್ರಧಾನಿ ಮೋದಿ ವಿರುದ್ಧ ಸುಳ್ಳು ಮಾಹಿತಿ ನೀಡಿದ್ದಾಗಿ ತೀಸ್ತಾ ವಿರುದ್ಧ ಆರೋಪ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web activist teesta setalvad detained by gujarat ats police in mumbai hours after amit shah statement
Teesta Setalvad: ಅಮಿತ್ ಶಾ ಸಂದರ್ಶನದ ಕೆಲವೇ ಗಂಟೆಯಲ್ಲಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಬಂಧನ!
ಮುಂಬಯಿ: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಪೊಲೀಸರು ಮಹಾರಾಷ್ಟ್ರದ ರಾಜಧಾನಿ ಮುಂಬಯಿಯಲ್ಲಿ ಶನಿವಾರ ಬಂಧಿಸಿದೆ. ತೀಸ್ತಾ ಅವರ ಎನ್‌ಜಿಒಗೆ ಸಂಬಂಧಿಸಿದ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ.
ಗುಜರಾತ್‌ನ ಎಟಿಎಸ್ ತಂಡವು ತೀಸ್ತಾ ಅವರ ಮನೆಗೆ ತೆರಳಿ ಅವರನ್ನು ಬಂಧಿಸಿದ ಬಳಿಕ ಮುಂಬಯಿಯಲ್ಲಿನ ಸಾಂಟಾಕ್ರೂಜ್ ಪೊಲೀಸ್ ಠಾಣೆಗೆ ಕರೆದೊಯ್ದಿದೆ.
19 ವರ್ಷ ವಿಷಕಂಠನಂತೆ ಮೋದಿ ಎಲ್ಲವನ್ನೂ ನುಂಗಿದರು, ಈಗ ಬಂಗಾರದಂತೆ ಹೊಳೆಯುತ್ತಿದ್ದಾರೆ: ಅಮಿತ್‌ ಶಾ

2002ರ ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿದ್ದ ಆದೇಶವನ್ನು ಶುಕ್ರವಾರ ಸುಪ್ರೀಂಕೋರ್ಟ್ ಎತ್ತಿಹಿಡಿದಿತ್ತು. ಇದರ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾ ಅವರು ತೀಸ್ತಾ ಸೆಟಲ್ವಾಡ್ ಅವರ ಎನ್‌ಜಿಒ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅದಾಗಿ ಕೆಲವೇ ಗಂಟೆಗಳಲ್ಲಿ ತೀಸ್ತಾ ಅವರನ್ನು ಬಂಧಿಸಿರುವುದು ರಾಜಕೀಯ ತಿರುವು ಪಡೆದುಕೊಳ್ಳುವ ಸೂಚನೆ ನೀಡಿದೆ.


ಗುಜರಾತ್ ಗಲಭೆಯಲ್ಲಿ ಹಿಂಸಾಚಾರದ ವೇಳೆ ಮೃತಪಟ್ಟಿದ್ದ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ತಿರಸ್ಕರಿಸಿತ್ತು.


"ನಾನು ಸುಪ್ರೀಂಕೋರ್ಟ್ ತೀರ್ಪನ್ನು ಬಹಳ ಸೂಕ್ಷ್ಮವಾಗಿ ಓದಿದ್ದೇನೆ. ಈ ತೀರ್ಪಿನಲ್ಲಿ ತೀಸ್ತಾ ಸೆಟಲ್ವಾಡ್ ಅವರ ಹೆಸರನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಅವರು ನಡೆಸುತ್ತಿರುವ ಎನ್‌ಜಿಒ- ಆ ಎನ್‌ಜಿಒದ ಹೆಸರು ನನಗೆ ನೆನಪಿಲ್ಲ- ಅದು ಗಲಭೆ ಕುರಿತಂತೆ ಪೊಲೀಸರಿಗೆ ಆಧಾರರಹಿತ ಮಾಹಿತಿ ನೀಡಿತ್ತು" ಎಂದು ಅಮಿತ್ ಶಾ ಕಿಡಿಕಾರಿದ್ದರು.
ಅಕ್ರಮ ವಿದೇಶಿ ದೇಣಿಗೆ: ತೀಸ್ತಾ ವಿರುದ್ಧ ಸಿಬಿಐ ಆರೋಪಪಟ್ಟಿ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಫ್ರಿ ಅವರ ಭಾವನೆಗಳನ್ನು ತೀಸ್ತಾ ದುರ್ಬಳಕೆ ಮಾಡಿಕೊಂಡಿದ್ದರು ಎಂದು ಅಮಿತ್ ಶಾ ಸಂದರ್ಶನದಲ್ಲಿ ಹೇಳಿದ್ದರು. "ಜಾಕಿಯಾ ಜಾಫ್ರಿ ಅವರು ಬೇರೆ ಯಾರದ್ದೋ ಸೂಚನೆಗಳಂತೆ ನಡೆದುಕೊಂಡಿದ್ದಾರೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಅನೇಕ ಸಂತ್ರಸ್ತರ ಅಫಿಡವಿಟ್‌ಗಳಿಗೆ ಎನ್‌ಜಿಒ ಸಹಿ ಹಾಕಿದೆ. ಆದರೆ ಅದು ಅವರಿಗೆ ಗೊತ್ತೇ ಇಲ್ಲ. ತೀಸ್ತಾ ಸೆಟಲ್ವಾಡ್ ಅವರ ಎನ್‌ಜಿಒ ಇದನ್ನು ಮಾಡುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಯುಪಿಎ ಸರ್ಕಾರ ಆ ಸಮಯದಲ್ಲಿ ಅಧಿಕಾರಕ್ಕೆ ಬಂದಾಗ, ಎನ್‌ಜಿಒಗೆ ಅದು ಸಹಾಯ ಮಾಡಿತ್ತು" ಎಂದು ಆರೋಪಿಸಿದ್ದರು.
ತೀಸ್ತಾ NGO ಗೆ ಸರಕಾರಿ ನಿಧಿ: ಒತ್ತಡ ಹೇರಿದ್ದ ಸಿಬಲ್

2002ರ ಗುಜರಾತ್ ಗಲಭೆ ಪ್ರಕರಣದ ಕಾವು ಇರುವಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಕಿಡಿಕಾರಿತ್ತು. ಗಲಭೆಯ ಸಂತ್ರಸ್ತರ ಜತೆಗೆ ಸೆಟಲ್ವಾಡ್ ಅವರ ಎನ್‌ಜಿಒ ನಿರಂತರ ಕೆಲಸ ಮಾಡಿದ್ದರ ಬಗ್ಗೆ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಕಟುವಾದ ಪದಗಳನ್ನು ಬಳಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಜಾಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯಲ್ಲಿ ತೀಸ್ತಾ ಸೆಟಲ್ವಾಡ್ ಸಹ ಅರ್ಜಿದಾರೆಯಾಗಿದ್ದರು.


ಈ ಪ್ರಕರಣವು 'ಅರ್ಹತೆಯ ಹೊರತಾಗಿದೆ' ಮತ್ತು 'ದುರುದ್ದೇಶದಿಂದ ಅರ್ಜಿ ಸಲ್ಲಿಸಿರುವುದು ಸ್ಪಷ್ಟವಾಗಿದೆ' ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಸುಪ್ರೀಂಕೋರ್ಟ್ ನೇಮಿಸಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ), ಆಗಿನ ಗುಜರಾತ್ ಸಿಎಂ ನರೇಂದ್ರ ಮೋದಿ ಅವರಿಗೆ ಕ್ಲೀನ್‌ಚಿಟ್ ನೀಡಿದ್ದನ್ನು ಕೋರ್ಟ್ ಎತ್ತಿಹಿಡಿದಿತ್ತು.

"ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳುವುದರಲ್ಲಿ ಭಾಗಿಯಾದ ಎಲ್ಲರನ್ನೂ ಕಟಕಟೆಯಲ್ಲಿ ನಿಲ್ಲಿಸಬೇಕು ಮತ್ತು ಕಾನೂನಿಗೆ ಅನುಗುಣವಾಗಿ ವಿಚಾರಣೆಗೆ ಒಳಪಡಿಸಬೇಕು" ಎಂದಿದ್ದ ನ್ಯಾಯಮೂರ್ತಿ, ಯಾರದ್ದೋ ಸೂಚನೆಯಂತೆ ಅರ್ಜಿ ಸಲ್ಲಿಸಿರುವಂತೆ ಕಾಣಿಸುತ್ತಿದೆ ಎಂದಿದ್ದರು.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ