ಆ್ಯಪ್ನಗರ

ಕರ್ನಾಟಕ ಆಯ್ತು, ಈಗ ತೆಲಂಗಾಣಕ್ಕೆ ಬಿಜೆಪಿ ಫೋಕಸ್

ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದ್ದು, ಈಗ ಚುನಾವಣೆ ಮುಗಿದ ಬಳಿಕ ತೆಲಂಗಾಣದ ಕಡೆ ಕಣ್ಣಿಟ್ಟಿದೆ. ಹಲವು ರಾಜ್ಯಗಳಂತೆ ತೆಲಂಗಾಣದಲ್ಲಿ 2019ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಗಮನವಿಟ್ಟಿದೆ ಎಂದು ತೆಲಂಗಾಣ ರಾಜ್ಯ ಬಿಜೆಪಿಯ ಅಧ್ಯಕ್ಷ ಕೆ.ಲಕ್ಷ್ಮಣ್ ಹೇಳಿದ್ದಾರೆ.

TIMESOFINDIA.COM 20 May 2018, 12:57 pm
ಹೈದರಾಬಾದ್: ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದ್ದು, ಈಗ ಚುನಾವಣೆ ಮುಗಿದ ಬಳಿಕ ತೆಲಂಗಾಣದ ಕಡೆ ಕಣ್ಣಿಟ್ಟಿದೆ. ಹಲವು ರಾಜ್ಯಗಳಂತೆ ತೆಲಂಗಾಣದಲ್ಲಿ 2019ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಗಮನವಿಟ್ಟಿದೆ ಎಂದು ತೆಲಂಗಾಣ ರಾಜ್ಯ ಬಿಜೆಪಿಯ ಅಧ್ಯಕ್ಷ ಕೆ.ಲಕ್ಷ್ಮಣ್ ಹೇಳಿದ್ದಾರೆ.
Vijaya Karnataka Web AMIT SHAH MODI


2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ಜತೆಗೆ ವಿಧಾನಸಭೆ ಚುನಾವಣೆ ಸಹ ನಡೆಯಲಿದೆ. ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ಪಕ್ಷದ ಸಭೆಯ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತೆಲಂಗಾಣಕ್ಕೆ ಗಮನ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಚುನಾವಣೆ ಮುಗಿಯುತ್ತಿದ್ದಂತೆ ತೆಲಂಗಾಣ, ಆಂಧ್ರ ಪ್ರದೇಶ, ಒಡಿಶಾ ಹಾಗೂ ಪಶ್ಚಿಮ ಬಂಗಾಳಕ್ಕೆ ಒತ್ತು ನೀಡುವ ಬಗ್ಗೆ ಅಮಿತ್ ಶಾ ಹೇಳಿದ್ದಾರೆ ಎಂದು ಪಿಟಿಐಗೆ ಲಕ್ಷ್ಮಣ್ ಮಾಹಿತಿ ನೀಡಿದ್ದಾರೆ. ಅಲ್ಲದೆ, ಮುಂದಿನ ತಿಂಗಳು ಅಮಿತ್ ಶಾ ತೆಲಂಗಾಣಕ್ಕೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಅರಿಯುವುದು ಸೇರಿದಂತೆ ಮುಂದಿನ ಚುನಾವಣೆಗೆ ಪ್ಲಾನ್ ಮಾಡುವುದನ್ನು ಬಿಜೆಪಿ ಚಾಣಕ್ಯ ಮಾಡಲಿದ್ದಾರೆ ಎಂದು ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದಾರೆ.

ಬಿಜೆಪಿ ಈಗಾಗ್ಲೇ, ರಾಜ್ಯದಲ್ಲಿ ಸಂಘಟನಾತ್ಮಕವಾಗಿ ಪ್ರಬಲವಾಗಿದೆ. ಜತೆಗೆ ರಾಜ್ಯದಲ್ಲಿ ಮತ್ತಷ್ಟು ಬಲವಾಗಲು ಪ್ರತಿ ಬೂತ್ ಮಟ್ಟದಲ್ಲೂ ಪನ್ನ ಪ್ರಮುಖರನ್ನು ನೇಮಕ ಮಾಡುವ ಮಾದರಿಯನ್ನು ಅಳವಡಿಸಿಕೊಳ್ಳುತ್ತೇವೆ ಎಂದು ಲಕ್ಷ್ಮಣ್ ಮಾಹಿತಿ ನೀಡಿದ್ದಾರೆ. ಬಿಜೆಪಿ ಹಲವು ರಾಜ್ಯಗಳಲ್ಲಿ ಪನ್ನ ಪ್ರಮುಖರು ಎಂಬ ಮಾದರಿ ಅನುಸರಿಸಿದ್ದು, ಇದು ಯಶಸ್ವಿಯಾಗಿದೆ. ಪನ್ನ ಟೀಂನ ಉಸ್ತುವಾರಿಯೊಬ್ಬರು ತನ್ನ ವ್ಯಾಪ್ತಿಗೆ ಬರುವ ಮತದಾರರ ಕುಟುಂಬವನ್ನು ಭೇಟಿ ಮಾಡುವುದು ಇದರ ಉದ್ದೇಶವಾಗಿದೆ. ಇನ್ನು, 119 ವಿಧಾನಸಭಾ ಕ್ಷೇತ್ರಗಳ ಪೈಕಿ, ಈಗಾಗಲೇ 40 ರಿಂದ 50 ಕ್ಷೇತ್ರಗಳಲ್ಲಿ ಪನ್ನ ಪ್ರಮುಖರು ತನ್ನ ಕೆಲಸ ಮುಗಿಸಿದ್ದು, ಉಳಿದ ಕ್ಷೇತ್ರಗಳಲ್ಲೂ ಇನ್ನು ಒಂದು ಅಥವಾ ಎರಡು ತಿಂಗಳುಗಳಲ್ಲಿ ಮುಗಿಸಲಾಗುವುದು ಎಂದು ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದಾರೆ. ಹಾಗೂ, ರಾಜ್ಯದಲ್ಲಿ ಬಿಜೆಪಿಯನ್ನು ಸಂಘಟನಾತ್ಮಕವಾಗಿ ಮತ್ತಷ್ಟು ಪ್ರಬಲವಾಗಿಸಲು ಇತರೆ ಕ್ರಮಗಳನ್ನು ಕೈಗೊಳ್ಳುವುದಾಗಿ ಲಕ್ಷ್ಮಣ್ ಹೇಳಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳನ್ನು ಜನರಿಗೆ ಪ್ರಚುರಪಡಿಸುವುದಕ್ಕೆ ನಾವು ಗಮನ ಕೊಡುತ್ತೇವೆ. ಹಾಗೂ ಹೆದ್ದಾರಿ, ರೈಲ್ವೆ ಹಾಗೂ ಉಜ್ವಲ ಉಚಿತ ಗ್ಯಾಸ್ ಸಂಪರ್ಕ ಯೋಜನೆ ಬಗ್ಗೆ ತೆಲಂಗಾಣಕ್ಕೆ ಕೇಂದ್ರ ಸರಕಾರ ನೀಡಿರುವ ಅನುದಾನದ ಬಗ್ಗೆಯೂ ಜನರಿಗೆ ಅರಿವು ಮೂಡಿಸುತ್ತದೆ ಎಂದು ಅವರು ಹೇಳಿದ್ದಾರೆ. ಜತೆಗೆ, ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್‌ಎಸ್‌ ಸರಕಾರ ನೀಡಿದ್ದ ಹಲವು ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ. ಉದ್ಯೋಗ, ಬಡವರಿಗೆ 2 ರೂಮಿನ ಮನೆಗಳನ್ನು ನೀಡುವ ಯೋಜನೆ ಹಾಗೂ ದಲಿತರಿಗೆ 3 ಎಕರೆ ಭೂಮಿಯನ್ನು ನೀಡುವ ಬಗ್ಗೆ ಭರವಸೆ ನೀಡಿ ಕೈತೊಳೆದುಕೊಂಡಿದೆ ಈ ಬಗ್ಗೆಯೂ ಜನರಿಗೆ ಮಾಹಿತಿ ನೀಡುವುದಾಗಿ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಮಾಹಿತಿ ನೀಡಿದ್ದಾರೆ.

ತೆಲಂಗಾಣದ ಎಸ್‌ಸಿಗಳು, ಹಿಂದುಳಿದ ವರ್ಗ ಹಾಗೂ ಯುವಕರು ಸೇರಿ ಹಲವು ವರ್ಗಗಳ ಜನತೆಯವರ ಜತೆ ಚರ್ಚೆ ಮಾಡಿ ಉತ್ತಮ ಪ್ರಣಾಳಿಕೆಯನ್ನು ಪಕ್ಷ ಬಿಡುಗಡೆ ಮಾಡಲಿದೆ ಎಂದೂ ಹೇಳಿದ್ದಾರೆ. ಇನ್ನು, ರಾಜ್ಯದ 17 ಲೋಕಸಭೆ ಕ್ಷೇತ್ರಗಳ ಉಸ್ತುವಾರಿಯನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ಬಿಹಾರ ಸಚಿವ ಮಂಗಲ್ ಪಾಂಡೆ ನೋಡಿಕೊಳ್ಳಲಿದ್ದಾರೆ. ಅವರು ಶೀಘ್ರದಲ್ಲೇ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಲಕ್ಷ್ಮಣ್ ಮಾಹಿತಿ ನೀಡಿದ್ದಾರೆ. ಅಲ್ಲದೆ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳು ನೋಡಿಕೊಳ್ಳುತ್ತಿದ್ದಾರೆ. ಆದರೆ, ಅಧಿಕಾರ ಇಲ್ಲದ ರಾಜ್ಯಗಳ ಕಡೆ ಬಿಜೆಪಿಯ ಕೇಂದ್ರ ನಾಯಕರು ಹೆಚ್ಚು ಗಮನ ನೀಡುತ್ತಾರೆ. ಇದರಿಂದ ನಮಗೆ ಹೆಚ್ಚು ಲಾಭವಾಗಬಹುದು ಎಂದು ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಲಕ್ಷ್ಮಣ್ ಸಂತಸ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ