ಆ್ಯಪ್ನಗರ

ದಿಲ್ಲಿ ಚುನಾವಣೆ ಮೇಲೆ ಪ್ರಭಾವ ಬೀರಲು ದೊಡ್ಡ ಜಾಲ ಇತ್ತು: ಫೇಸ್‌ಬುಕ್‌ ಮಾಜಿ ಉದ್ಯೋಗಿ ಸ್ಫೋಟಕ ಮಾಹಿತಿ

ದಿಲ್ಲಿ ಹಿಂಸಾಚಾರ ಸೇರಿದಂತೆ ಹಲವು ಪ್ರಕರಣಗಳಲ್ಲಿ ಫೇಸ್‌ಬುಕ್‌ನಲ್ಲಿ ಪ್ರಕಟವಾದ ದ್ವೇಷ ಭಾಷಣ ಮತ್ತು ವಿಡಿಯೊಗಳ ಬಗ್ಗೆ ಸಂಸ್ಥೆಯು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.

Vijaya Karnataka Web 16 Sep 2020, 11:21 am
ಹೊಸದಿಲ್ಲಿ: ಹೊಸದಿಲ್ಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮೇಲೆ ಪ್ರಭಾವ ಬೀರಲು ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳಲಾಗಿತ್ತು ಎಂದು ಫೇಸ್‌ಬಕ್‌ ಮಾಜಿ ಉದ್ಯೋಗಿ ಬಹಿರಂಗಪಡಿಸಿದ್ದಾರೆ.
Vijaya Karnataka Web ಅರವಿಂದ್‌ ಕೇಜ್ರಿವಾಲ್‌
ಅರವಿಂದ್‌ ಕೇಜ್ರಿವಾಲ್‌


ಇದಕ್ಕೆ ಸಂಘಟಿತ ಪ್ರಯತ್ನ ಇತ್ತು. ಸಾವಿರಾರು ನಟರು ಕೂಡ ಇದರಲ್ಲಿ ಭಾಗಿಯಾಗಿದ್ದರು. ಇದೊಂದು ಬೃಹತ್‌ ಜಾಲ ಎಂದು ಫೇಸ್‌ಬುಕ್‌ನ ಂಆಜಿ ಉದ್ಯೋಗಿ ಸೋಫಿ ಜ್ಯಾಂಗ್‌ ಬರೆದಿದ್ದಾರೆ.

ಫೇಸ್‌ಬುಕ್ ಉದ್ಯೋಗಿಗಳಿಗೆ ಸುಮಾರು ಆರು ಸಾವಿರದ ಆರುನೂರು ಪದಗಳ ಸುದೀರ್ಘ ಪತ್ರವನ್ನು ಬರೆದಿದ್ದು, ಅದೀಗ ಆನ್‌ಲೈನ್‌ನಲ್ಲಿ ಲಭ್ಯವಾಗಿದೆ.

ಫೇಸ್‌ಬುಕ್‌ ಎಂದಿಗೂ ಈ ಜಾಲ ಇರುವ ಬಗ್ಗೆ ಬಹಿರಂಗಪಡಿಸಿಲ್ಲ. ಅಲ್ಲದೇ ಈ ಜಾಲದ ಹಿಂದಿನ ಬಲ ಯಾವುದು ಎಂದೂ ಹೇಳಿಕೊಂಡಿರಲಿಲ್ಲ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಈ ಪತ್ರದ ಕುರಿತು ಕೆಲವು ಮಾಹಿತಿಯನ್ನು ಹಂಚಿಕೊಂಡಿರುವ ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವಿಯಾ, ದಿಲ್ಲಿ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷದ ಜಯಕ್ಕಾಗಿ ಈ ಜಾಲ ನಿರಂತರ ಪ್ರಯತ್ನ ಮಾಡಿತ್ತು ಎಂದು ತಿಳಿಸಿದ್ದಾರೆ.

ಇದಕ್ಕೆ ಪ್ರತ್ಯುತ್ತ ನೀಡಿರುವ ಆಮ್‌ ಆದ್ಮಿ ಪಕ್ಷದ ಐಟಿ ಘಟಕದ ಮುಖ್ಯಸ್ಥ ಅಂಕಿತ್ ಲಾಸ್‌, ಫೇಸ್‌ಬುಕ್‌ ಎಂದಿಗೂ ಬಿಜೆಪಿಯ ಪರವಾಗಿ ಇರುತ್ತದೆ ಎಂಬುದು ಬಹಿರಂಗ ಸತ್ಯವಾಗಿದೆ. ಬಿಜೆಪಿ ಬಲಿಷ್ಠವಾಗಿದೆ. ಒಂದು ವೇಳೆ ಬಿಜೆಪಿ ಬಲವಾಗಿದೆ ಎಂದಾದರೆ ಅದರ ವಿರುದ್ಧ ಹೋರಾಡಲು ಸಂಘಟನೆಯ ಶಕ್ತಿ ಅನಿವಾರ್ಯ. ಆದರೆ ಫೇಸ್‌ಬುಕ್‌ ಜತೆ ನಾವು ಕೈ ಜೊಡಿಸಿದ್ದೇವೆ ಎಂಬುದು ಮಾತ್ರ ಸುಳ್ಳು ಎಂದು ಹೇಳಿದ್ದಾರೆ.

ನೋಟಿಸ್‌ಗೆ ಫೇಸ್‌ಬುಕ್‌ ಆಕ್ಷೇಪ

ದ್ವೇಷ ಭಾಷಣಗಳ ವಿಚಾರದಲ್ಲಿ ನಿಷ್ಕ್ರಿಯತೆ ತೋರಲಾಗಿದೆ ಎಂದು ಆರೋಪಿಸಿ ತನ್ನ ವಿರುದ್ಧ ದಿಲ್ಲಿ ವಿಧಾನಸಭೆ ಸಮಿತಿಯೊಂದು ಜಾರಿಗೊಳಿಸಿದ್ದ ನೋಟಿಸ್‌ಗೆ ಫೇಸ್‌ಬುಕ್‌ ಆಕ್ಷೇಪ ವ್ಯಕ್ತಪಡಿಸಿದೆ. ಸಮಿತಿ ಮುಂದೆ ಹಾಜರಾಗಲು ನಿರಾಕರಿಸಿದೆ.

ಸಾಮಾಜಿಕ ಜಾಲತಾಣ ವಿಚಾರವು ಕೇಂದ್ರ ಸರಕಾರದ ವ್ಯಾಪ್ತಿಗೆ ಒಳಪಡುವಂಥದ್ದಾಗಿದ್ದು, ಕೂಡಲೇ ಈ ನೋಟಿಸ್‌ ಅನ್ನು ದಿಲ್ಲಿ ವಿಧಾನಸಭೆ ಸಮಿತಿ ವಾಪಸ್‌ ಪಡೆಯಬೇಕೆಂದು ಫೇಸ್‌ಬುಕ್‌ ಹೇಳಿದೆ.

ಶಾಂತಿ ಮತ್ತು ಸೌಹಾರ್ದತೆ ಕುರಿತಾದ ದಿಲ್ಲಿ ವಿಧಾನಸಭೆಯ ಸಮಿತಿಯು, ಫೇಸ್‌ಬುಕ್‌ ಇಂಡಿಯಾ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಜಿತ್‌ ಮೋಹನ್‌ಗೆ ನೋಟಿಸ್‌ ಜಾರಿ ಮಾಡಿತ್ತು.

''ಸಮಿತಿಯ ಮುಂದೆ ಹಾಜರಾಗಲು ನಿರಾಕರಿಸಿರುವ ಫೇಸ್‌ಬುಕ್‌ನ ನಡೆಯು ಸಮಿತಿಯ ಹಕ್ಕುಚ್ಯುತಿಗೆ ಸಮಾನವಾಗಿದೆ. ಸಂಸ್ಥೆಗೆ ಹೊಸದಾಗಿ ಸಮನ್ಸ್‌ ನೀಡಲಾಗುವುದು,'' ಎಂದು ರಾಜೇಂದ್ರ ನಗರ್‌ ಕ್ಷೇತ್ರದ ಆಮ್‌ ಆದ್ಮಿ ಪಕ್ಷದ ಶಾಸಕ ರಾಘವ್‌ ಛಾಧಾ ನೇತೃತ್ವದ ಸಮಿತಿ ತಿಳಿಸಿದೆ.

ದಿಲ್ಲಿ ಹಿಂಸಾಚಾರ ಸೇರಿದಂತೆ ಹಲವು ಪ್ರಕರಣಗಳಲ್ಲಿ ಫೇಸ್‌ಬುಕ್‌ನಲ್ಲಿ ಪ್ರಕಟವಾದ ದ್ವೇಷ ಭಾಷಣ ಮತ್ತು ವಿಡಿಯೊಗಳ ಬಗ್ಗೆ ಸಂಸ್ಥೆಯು ಕ್ರಮ ಕೈಗೊಂಡಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ