ಆ್ಯಪ್ನಗರ

25ರಿಂದ ನಿತ್ಯವೂ ಅಯೋಧ್ಯೆ ವಿಚಾರಣೆ

ಸದ್ಯ ನಡೆಯುತ್ತಿರುವ ಸಂಧಾನ ಪ್ರಕ್ರಿಯೆಯ ವಾಸ್ತವಿಕ ವರದಿಯನ್ನು ಜುಲೈ 18ರೊಳಗೆ ಸಲ್ಲಿಸುವಂತೆಯೂ ನ್ಯಾ.ಖಲೀಫುಲ್ಲಾ ನೇತೃತ್ವದ ಸಮಿತಿಗೆ ಪೀಠ ಸೂಚಿಸಿತು.

PTI 12 Jul 2019, 5:00 am
ಹೊಸದಿಲ್ಲಿ: ಸಂಧಾನ ಸಾಧ್ಯವಿಲ್ಲ ಎನ್ನುವುದು ಖಚಿತವಾದರೆ ಜುಲೈ 25ರಿಂದ ಅಯೋಧ್ಯೆ ವಿವಾದ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡು ನಿತ್ಯವೂ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಗುರುವಾರ ತಿಳಿಸಿದೆ.
Vijaya Karnataka Web supreme


''ಈಗಾಗಲೇ ಸಂಧಾನಕ್ಕಾಗಿ ರಚಿಸಲಾಗಿರುವ ನಿವೃತ್ತ ನ್ಯಾ. ಎಫ್‌.ಎಂ.ಐ. ಖಲೀಫುಲ್ಲಾ ನೇತೃತ್ವದ ತ್ರಿಸದಸ್ಯ ಸಮಿತಿ ಕೋರ್ಟ್‌ಗೆ ವರದಿ ಸಲ್ಲಿಸಿ, ಸಂಧಾನ ಪ್ರಕ್ರಿಯೆ ಯಶಸ್ವಿಯಾಗುವ ಲಕ್ಷಣಗಳಿಲ್ಲ . ಸಂಧಾನ ಮುಂದುವರಿಸಿ ಪ್ರಯೋಜನವಿಲ್ಲ ಎಂದು ಖಾತ್ರಿಪಡಿಸಬೇಕು. ಆಗ ಪ್ರಕರಣದಲ್ಲಿ ಪ್ರತಿವಾದಕ್ಕೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ನಡೆಸಲಾಗುವುದು,'' ಎಂದು ಸಿಜೆಐ ರಂಜನ್‌ ಗೊಗೋಯ್‌ ನೇತೃತ್ವದ ಸಾಂವಿಧಾನಿಕ ಪೀಠ ಹೇಳಿದೆ.

ಸದ್ಯ ನಡೆಯುತ್ತಿರುವ ಸಂಧಾನ ಪ್ರಕ್ರಿಯೆಯ ವಾಸ್ತವಿಕ ವರದಿಯನ್ನು ಜುಲೈ 18ರೊಳಗೆ ಸಲ್ಲಿಸುವಂತೆಯೂ ನ್ಯಾ.ಖಲೀಫುಲ್ಲಾ ನೇತೃತ್ವದ ಸಮಿತಿಗೆ ಪೀಠ ಸೂಚಿಸಿತು.

' ಸಂಧಾನ ಸಮಿತಿ ನಿರೀಕ್ಷೆ ಮಟ್ಟದಲ್ಲಿ ಯಶಸ್ಸು ಸಾಧಿಸಿಲ್ಲ. ಪ್ರಕರಣದ ಸಂಬಂಧ ಯಾವುದೇ ಬೆಳವಣಿಗೆ ಕೂಡ ಆಗುತ್ತಿಲ್ಲ ' ಎಂದು ಅಯೋಧ್ಯೆ ಭೂವಿವಾದ ಪ್ರಕರಣದ ದಾವೆದಾರರ ಪೈಕಿ ಒಬ್ಬರಾದ ಗೋಪಾಲ್‌ ಸಿಂಗ್‌ ವಿಶಾರದ್‌ ಮಂಗಳವಾರ ಸಿಜೆಐ ಗೊಗೊಯ್‌ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ತಿಳಿಸಿದ್ದರು. ಜತೆಗೆ ಪ್ರಕರಣದ ತ್ವರಿತ ವಿಚಾರಣೆಯನ್ನು ಆರಂಭಿಸಲು ಕೂಡ ಮನವಿ ಮಾಡಿದ್ದರು.

ಆರ್ಟ್‌ ಆಫ್‌ ಲಿವಿಂಗ್‌ ಸ್ಥಾಪಕ ಶ್ರೀಶ್ರೀ ರವಿಶಂಕರ್‌ ಗುರೂಜಿ, ಮದ್ರಾಸ್‌ ಹೈಕೋರ್ಟ್‌ನ ಹಿರಿಯ ವಕೀಲ ಶ್ರೀರಾಮ್‌ ಪಂಚು ಸದಸ್ಯರಾಗಿರುವ ನಿವೃತ್ತ ನ್ಯಾ. ಖಲೀಫುಲ್ಲಾ ನೇತೃತ್ವದ ಸಂಧಾನ ಸಮಿತಿಯನ್ನು ಸುಪ್ರೀಂಕೋರ್ಟ್‌ ಮಾ.8ರಂದು ರಚಿಸಿತ್ತು. ಕ್ಯಾಮೆರಾ ರೆಕಾರ್ಡಿಂಗ್‌ನಲ್ಲಿ ಎಂಟು ವಾರಗಳ ಒಳಗೆ ಫೈಜಾಬಾದ್‌ನಲ್ಲಿ ಸಂಧಾನ ಪ್ರಕ್ರಿಯೆ ಮುಗಿಸುವಂತೆ ಸಮಿತಿಗೆ ಸೂಚನೆ ನೀಡಲಾಗಿತ್ತು. ಬಳಿಕ ಮೇ 10ರಂದು ಸಂಧಾನ ಸಮಿತಿಯ ಪ್ರಗತಿ ಕುರಿತು ವಿಚಾರಣೆ ನಡೆಸಿದ ಕೋರ್ಟ್‌ ಸಂಧಾನಕ್ಕೆ ನೀಡಲಾಗಿದ್ದ ಡೆಡ್‌ಲೈನ್‌ಅನ್ನು ಆಗಸ್ಟ್‌ 15ಕ್ಕೆ ವಿಸ್ತರಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ