ಆ್ಯಪ್ನಗರ

ಭೂತಾನ್‌ ವಿದ್ಯಾರ್ಥಿಗಳ ಬೆನ್ನು ತಟ್ಟಿದ ಪ್ರಧಾನಿ

ಅಂತರಿಕ್ಷ ಮತ್ತು ಡಿಜಿಟಲ್‌ ಪೇಮೆಂಟ್‌ನಂತಹ ಕ್ಷೇತ್ರಗಳಲ್ಲಿಎರಡೂ ದೇಶಗಳು ಪರಸ್ಪರ ಸಹಕಾರದಿಂದ ಕೆಲಸ ಮಾಡಲು ಸಾಕಷ್ಟು ಅವಕಾಶಗಳಿವೆ ಎಂದರು.

PTI 19 Aug 2019, 5:00 am
ಥಿಂಪು: ಭೂತಾನ್‌ ಯುವ ಸಮುದಾಯಕ್ಕೆ ಹೊಸ ಹೊಸ ಅನ್ವೇಷಣೆಗಳ ಮೂಲಕ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ತಾಕತ್ತಿದೆ. ನಿಮ್ಮಲ್ಲಿರುವ ಅಸಾಮಾನ್ಯ ಪ್ರತಿಭೆಯನ್ನು ಹೊಸ ಪೀಳಿಗೆಯ ಸುಂದರ ಬದುಕಿಗೆ ಧಾರೆಯರೆಯಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭೂತನ್‌ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
Vijaya Karnataka Web 0.27294700_1566105021_636x400-pm-modi-at-ru


ಎರಡು ದಿನಗಳ ಯಶಸ್ವಿ ಭೂತಾನ್‌ ಪ್ರವಾಸ ಮುಗಿಸಿ ಭಾನುವಾರ ತವರಿಗೆ ಮರಳುವ ಮುನ್ನ ಮೋದಿ ಅವರು ಥಿಂಪುವಿನ 'ರಾಯಲ್‌ ಯೂನಿವರ್ಸಿಟಿ ಆಫ್‌ ಭೂತಾನ್‌' ಸಂಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ನೀವು ಸಾಕಷ್ಟು ಶ್ರಮ ಹಾಕಿ ಶ್ರದ್ಧೆಯಿಂದ ಕೆಲಸ ಮಾಡಿ ಹಿಮಾಲಯ ದೇಶದ ಕೀರ್ತಿಯನ್ನು ಉತ್ತುಂಗಕ್ಕೆ ಒಯ್ಯುವಂತೆ ಕರೆ ನೀಡಿದರು. ಅಂತರಿಕ್ಷ ಮತ್ತು ಡಿಜಿಟಲ್‌ ಪೇಮೆಂಟ್‌ನಂತಹ ಕ್ಷೇತ್ರಗಳಲ್ಲಿ ಎರಡೂ ದೇಶಗಳು ಪರಸ್ಪರ ಸಹಕಾರದಿಂದ ಕೆಲಸ ಮಾಡಲು ಸಾಕಷ್ಟು ಅವಕಾಶಗಳಿವೆ ಎಂದರು.

''ಹಿಂದೆಂದಿಗಿಂತಲೂ ಹೆಚ್ಚಿನ ಅವಕಾಶಗಳು ಇಂದು ವಿಶ್ವದಲ್ಲಿ ತೆರೆದುಕೊಂಡಿದೆ. ನಿಮ್ಮಲ್ಲಿ ಅಸಾಮಾನ್ಯ ಕೆಲಸಗಳನ್ನು ಮಾಡುವ ಶಕ್ತಿ ಮತ್ತು ಸಾಮರ್ಥ್ಯ‌ ಸಾಕಷ್ಟಿದೆ. ಅದು ಭವಿಷ್ಯದ ತಲೆಮಾರಿನ ಮೇಲೆ ಪರಿಣಾಮ ಬೀರಲಿದೆ. ನಿಮ್ಮ ಮನಸ್ಸಿಗೆ ಹತ್ತಿರವಾದುದನ್ನು ಪೂರ್ಣ ಆಸಕ್ತಿಯಿಂದ, ಇಚ್ಛೆಯಿಂದ ಮಾಡಿ,'' ಎಂದು ಪ್ರಧಾನಿ ಮೋದಿ ಕರೆ ನೀಡಿದರು. ''ಅಭಿವೃದ್ಧಿಯಲ್ಲಿ ಭೂತಾನ್‌ ಬಹುಮುಂದೆ ಸಾಗುತ್ತಿದ್ದಂತೆ ನಿಮ್ಮ 130 ಕೋಟಿ ಭಾರತೀಯ ಸ್ನೇಹಿತರು ನಿಮ್ಮ ಶ್ರಮವನ್ನು ಅತ್ಯಂತ ಹೆಮ್ಮೆಯಿಂದ ನೋಡುತ್ತಾರಷ್ಟೇ ಅಲ್ಲದೇ ನಿಮ್ಮ ಸಂತೋಷದ ಪಾಲುದಾರರಾಗುತ್ತಾರೆ. ನಿಮ್ಮೊಂದಿಗೆ ಅವರೂ ಕಲಿಕೆಯಲ್ಲಿ ಭಾಗಿಯಾಗುತ್ತಾರೆ,'' ಎಂದು ಹೇಳಿದರು.

ಭಾರತ ಉತ್ಸುಕ: ಭಾರತದ 'ನ್ಯಾಷನಲ್‌ ನಾಲೆಡ್ಜ್‌ ನೆಟ್‌ವರ್ಕ್‌' ಮತ್ತು ಭೂತಾನ್‌ನ 'ಡ್ರಕ್‌ ರಿಸರ್ಚ್‌ ಆಂಡ್‌ ಎಜುಕೇಷನ್‌ ನೆಟ್‌ವರ್ಕ್‌' ಜಂಟಿ ಕಾರ‍್ಯಕ್ರಮ ಉಲ್ಲೇಖಿಸಿದ ಪ್ರಧಾನಿ, ''ಇಂತಹ ಒಪ್ಪಂದಗಳು ಯುವ ಮನಸ್ಸುಗಳ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. ಉಭಯ ದೇಶಗಳ ವಿಶ್ವವಿದ್ಯಾಲಯಗಳ, ಸಂಶೋಧನಾ ಸಂಸ್ಥೆಗಳ, ಆರೋಗ್ಯ ಮತ್ತು ಕೃಷಿ ಕ್ಷೇತ್ರದ ಸಂಸ್ಥೆಗಳ ನಡುವೆ ಪರಸ್ಪರ ಜ್ಞಾನ ವಿನಿಮಯಕ್ಕೆ ಇದು ಸಹಕಾರಿಯಾಗಲಿದೆ,'' ಎಂದರು. ಚಂದ್ರಯಾನ-2 ಯೋಜನೆ ಪ್ರಸ್ತಾಪಿಸಿದ ಅವರು ಭೂತಾನ್‌ ಕೂಡ ತನ್ನದೇ ಸ್ವಂತ ಉಪಗ್ರಹ ಹೊಂದಲು ಸಾಧ್ಯವಾಗಿದೆ ಎಂದು ಹೇಳಿದರು.

ಬುದ್ಧನ ಭೋಧನೆಗಳಿಂದ ಪ್ರೇರಿತ
ಭಾರತ ಮತ್ತು ಭೂತಾನ್‌ ನಡುವಿನ ಸಂಬಂಧ ಶತಮಾನಗಳಷ್ಟು ಹಳೆಯದಾಗಿದೆ ಎಂದ ಮೋದಿ, ತಮ್ಮ 'ಎಗ್ಸಾಂ ವಾರಿಯರ್ಸ್‌' ಪುಸ್ತಕವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದ ಭೂತಾನ್‌ ಪ್ರಧಾನಿ ಲೋಟೆ ತ್ಸೇರಿಂಗ್‌ ಅವರ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. '' ಎಗ್ಸಾಂ ವಾರಿಯರ್ಸ್‌ ಪುಸ್ತಕದಲ್ಲಿನ ಬರವಣಿಗೆಗೆ ಭಗವಾನ್‌ ಬುದ್ಧನ ಬೋಧನೆಗಳಿಂದ ಪ್ರೇರಣೆ ಪಡೆದಿದ್ದೇನೆ. ಧನಾತ್ಮಕವಾಗಿ ಯೋಚಿಸುವುದು, ಭಯ, ಆತಂಕಗಳಿಂದ ಹೊರಬರುವುದು, ಸ್ವಂತಿಕೆಯಿಂದ ಹಾಗೂ ಪ್ರಕೃತಿಯೊಂದಿಗೆ ವರ್ತಮಾನದಲ್ಲಿ ಬದುಕುವುದು ಇವೆಲ್ಲವೂ ಬುದ್ಧನ ಬೋಧನೆಗಳಾಗಿವೆ,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ