ಆ್ಯಪ್ನಗರ

ಬಿಹಾರ ಚುನಾವಣೆ 2020: ಎನ್‌ಡಿಎ 50ಕ್ಕೂ ಹೆಚ್ಚು ಸೀಟು ಗೆಲ್ಲಲಿದೆ; ಮತದಾನದ ಬಳಿಕ ಜಿತನ್ ರಾಮ್‌ ಮಾಂಜಿ ಹೇಳಿಕೆ!

ಬಿಹಾರದ ಗದ್ದುಗೆಗೆ ಮತದಾನ ಆರಂಭವಾಗಿದೆ. ಮೊದಲ ಹಂತದ ಮತದಾನ ಬುಧವಾರದಿಂದ ಆರಂಭಗೊಂಡಿದೆ. ಕೊರೊನಾ ಹಿನ್ನೆಲೆ ಮತಗಟ್ಟೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನು ಔರಂಗಾಬಾದ್‌ನಲ್ಲಿ ಮತದಾನಕ್ಕೂ ಮೊದಲು ಎರಡು ಸುಧಾರಿತ ಸ್ಪೋಟಕ ಪತ್ತೆಯಾಗಿರುವುದು ಆತಂಕ ಮೂಡಿಸಿದೆ.

Vijaya Karnataka Web 28 Oct 2020, 2:42 pm
ಪಾಟ್ನಾ: ಬಿಹಾರದ ಅಧಿಕಾರದ ಗದ್ದುಗೆಗಾಗಿ ಮೆಗಾ ಫೈಟ್‌ ಆರಂಭವಾಗಿದ್ದು ಪ್ರಬಲ ನಾಯಕರ ಹಣೆಬರಹ ಬರೆಯುವ ಮತದಾನ ಆರಂಭವಾಗಿದೆ. 71 ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಪ್ರಕ್ರಿಯೆ ಬುಧವಾರ ಮುಂಜಾನೆಯಿಂದ ಆರಂಭವಾಗಿದೆ.
Vijaya Karnataka Web ElZupVzVkAkuRkt


ಕೊರೊನಾದ ಮಧ್ಯೆಯು ಜನರು ಮತಗಟ್ಟೆಗಳಿಗೆ ಬಂದು ಮತದಾನ ಮಾಡುತ್ತಿದ್ದಾರೆ. ಇನ್ನೊಂದೆಡೆ ಚುನಾವಣಾ ಆಯೋಗವು ಮೊದಲು ಮತಗಟ್ಟೆಗೆ ಸ್ಯಾನಿಟೈಸ್‌ ಸಿಂಪಡನೆ ಮಾಡಿದ್ದು, ವೋಟಿಂಗ್‌ಗೆ ಬರುವವರಿಗೆ ಹ್ಯಾಂಡ್ ಸ್ಯಾನಿಟೈಸ್‌ ನೀಡುತ್ತಿದೆ. ಎಲ್ಲಾ ರೀತಿಯಲ್ಲೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಈ ಚುನಾವಣೆ ಜೆಡಿಯು ಮುಖ್ಯಸ್ಥ ಹಾಗೂ ಹಾಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಎಲ್‌ಜೆಪಿ ಮುಖ್ಯಸ್ಥ ಚಿರಾಗ್‌ ಪಾಸ್ವಾನ್‌ ಹಾಗೂ ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್‌ ನಡುವಿನ ಮೆಗಾ ಫೈಟ್‌ ಆಗಿದ್ದು ಗೆಲುವು ಯಾರಿಗೆ ಎನ್ನುವ ಲೆಕ್ಕಚಾರಗಳು ಈಗೀನಿಂದಲೇ ಶುರುವಾಗಿದೆ. ಸದ್ಯ ಬಿಹಾರದ ಚುನಾವಣೆ ಯುವ ಹಾಗೂ ಹಳೆ ನಾಯಕರ ಭರ್ಜರಿ ಭಾಷಣಗಳಿಂದ ಗಮನ ಸೆಳೆಯುತ್ತಿದೆ.

=======
ಇಂದು ನಡೆದ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಕೂಟ 50ಕ್ಕೂ ಹೆಚ್ಚು ಸೀಟು ಗೆಲ್ಲಲಿಗೆ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಜಿನತ್‌ ರಾಮ್‌ ಮಾಂಜಿ ವಿಶ್ವಾಸ ವ್ಯಕ್ತಪಡಿಸಿದರು. ಗಯಾ ಮತಗಟ್ಟೆಯಲ್ಲಿ ವೋಟ್‌ ಹಾಕಿದ ಬಳಿಕ ಮಾತನಾಡಿದ ಮಾಂಜಿ, ಇಂದು ನಡೆದ 71 ಸೀಟುಗಳ ಪೈಕಿ 50 ಸೀಟುಗಳಲ್ಲಿ ಎನ್‌ಡಿಎ ಸುಲಭ ಜಯ ಸಾಧಿಸಲಿದೆ ಎಂದು ತಿಳಿಸಿದರು.


========

ಸರತಿ ಸಾಲಿನಲ್ಲಿ ನಿಂತು ವಿಶೇಷ ಚೇತನರು ಮತದಾನ ಮಾಡುತ್ತಿರುವ ದೃಶ್ಯ ಕಂಡುಬಂತು. ಸರತಿ ಸಾಲಿನಲ್ಲಿ ನಿಂತಿದ್ದ ವಿಶೇಷ ಚೇತನರು ಮಾಸ್ಕ್‌ ಧರಿಸಿ ಕೊರೊನಾ ನಿಯಮಗಳನ್ನು ಪಾಲಿಸಿದ್ದರು.


-----------
ಇನ್ನು ಒಟ್ಟು 72 ಕ್ಷೆತ್ರಗಳ ಪೈಕಿ ಒಟ್ಟು 16.96% ರಷ್ಟು ಮತದಾನ ನಡೆದಿದೆ. ಬೆಳಗ್ಗೆ 11 ಗಂಟೆವರೆಗೆ 16.96% ರಷ್ಟು ಮತದಾನವಾಗಿದ್ದು ಅಲ್ಪ ಕುಸಿತ ಕಂಡಿದೆ ಎಂದು ತಿಳಿದುಬಂದಿದೆ. ಇನ್ನು ಸಂಜೆಯೊಳಗೆ ಮತದಾರರು ಬರುವ ನಿರೀಕ್ಷೆಯಲ್ಲಿ ಪಕ್ಷದ ಏಜೆಂಟರು ಕಾಯುತ್ತಿದ್ದಾರೆ.
----------
ಮತದಾನ ಕೇಂದ್ರದಲ್ಲಿ ಇವಿಎಂ ಅಸಮರ್ಪಕ ಕಾರ್ಯನಿರ್ವಹಣೆ ಹಿನ್ನೆಲೆ ಜಮುಯಿ ಕ್ಷೇತ್ರದ ಗ್ರಾಮಸ್ಥರು ಮತದಾನವನ್ನು ಬಹಿಷ್ಕರಿಸಿದ್ದಾರೆ. ಮುಂಜಾನೆ 5 ರಿಂದ ಗ್ರಾಮಸ್ಥರು ಸರದಿಯಲ್ಲಿ ನಿಂತಿದ್ದರು. ಆದರೆ ಇವಿಎಂಗಳಲ್ಲಿ ದೋಷ ಕಂಡುಬಂದ ಹಿನ್ನೆಲೆ ಮತದಾನ ಪ್ರಕ್ರಿಯೆಯನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಹೇಳಿದ್ದಾರೆ. ಸದ್ಯ ಇಲ್ಲಿ ಶೇ.7.3ರಷ್ಟು ಮತದಾನ ನಡೆದಿದೆ.
-----------

ಬಿಹಾರ ಸಚಿವ ಪ್ರೇಮ್ ಕುಮಾರ್ ಅವರು ಮತ ಚಲಾಯಿಸುವ ಹಿನ್ನೆಲೆ ಗಯಾದಲ್ಲಿರುವ ಮತದಾನ ಕೇಂದ್ರಕ್ಕೆ ಸೈಕಲ್ ಮೂಲಕ ಆಗಮಿಸಿದರು. ಸಚಿವರ ವಿಭಿನ್ನತೆಗೆ ಜನರು ಚಪ್ಪಾಳೆ ಮೂಲಕ ಸ್ವಾಗತಿಸಿದರು.


ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಲಖಿಸರೈನ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದರು.

ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಜೊತೆಗೆ ಮತಗಟ್ಟೆಗೆ ತೆರಳುವಾಗ ಕೊರೊನಾ ಸಂಬಂಧ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ತಿಳಿಸಿದ್ದಾರೆ.


ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು ಜನರು ಮತ ಹಾಕಲು ಮತಗಟ್ಟೆಗೆ ಬಂದಿರುವ ದೃಶ್ಯ ಇದು. ಗಯಾದಲ್ಲಿನ ಮತಗಟ್ಟೆ.


ಗಯಾ ಮತಗಟ್ಟೆ: ಮತದಾನಕ್ಕೆ ಬರುವ ಜನರಿಗೆ ಹ್ಯಾಂಡ್‌ ಸ್ಯಾನಿಟೈಸ್‌ ನೀಡುವ ದೃಶ್ಯ ಹಾಗೂ ಮತಗಟ್ಟೆಯಲ್ಲಿರುವ ಸಿಬ್ಬಂದಿ ಮಾಸ್ಕ್‌, ಗ್ಲೌಸ್‌ ಧರಿಸಿರುವ ದೃಶ್ಯ.


ಇನ್ನು ಮತದಾನಕ್ಕೂ ಮೊದಲು ಔರಂಗಾಬಾದ್‌ನ ಧಿಬ್ರಾ ಪ್ರದೇಶದಲ್ಲಿ ಕೇಂದ್ರ ಮೀಸಲು ಪೊಲೀಸ್‌ ಪಡೆ ಎರಡು ಸುಧಾರಿತ ಸ್ಫೋಟಕ ಸಾಧನಗಳನ್ನು ವಶಪಡಿಸಿಕೊಂಡಿದೆ. ಮತಗಟ್ಟೆಯ ಬಳಿ ಎರಡು ಐಇಡಿ ಪತ್ತೆಯಾಗಿದ್ದು ಅವನ್ನು ಪೊಲೀಸ್‌ ಪಡೆ ನಿಷ್ಕ್ರಿಯಗೊಳಿಸಿದೆ.


ಮೊದಲ ಹಂತದ ಚುನಾವಣೆಯಲ್ಲಿ ಒಟ್ಟು 71 ಸೀಟುಗಳಿಗೆ ಬುಧವಾರ ಮತದಾನ ನಡೆಯುತ್ತಿದೆ. ಇನ್ನು 71 ಸೀಟುಗಳಿಗೆ ವಿವಿಧ ಪಕ್ಷಗಳಿಂದ 1,066 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.


ಮತದಾನ ಆರಂಭಕ್ಕೂ ಮುನ್ನ ಮತಗಟ್ಟೆಗಳಿಗೆ ಸ್ಯಾನಿಟೈಸ್‌ ಸಿಂಪಡನೆ ಮಾಡಲಾಯಿತು. ಕೊರೊನಾ ಹಿನ್ನೆಲೆ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ