ಆ್ಯಪ್ನಗರ

ಬಿಜೆಪಿಗೆ ಬಿಸಿತುಪ್ಪವಾದ ಬಿಹಾರ ಸೀಟು ಹಂಚಿಕೆ..! ಎನ್‌ಡಿಎಯಿಂದ ಎಲ್‌ಜೆಪಿ ಹೊರ ನಡೆಯೋ ಸಾಧ್ಯತೆ

ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಶಿರೋಮಣಿ ಅಕಾಲಿ ದಳ ಹೊರ ನಡೆದಿರುವ ಬೆನ್ನಲ್ಲಿಯೇ ಮತ್ತೊಂದು ಪಕ್ಷ ಆಡಳಿತಾರೂಢ ಮೈತ್ರಿಕೂಟವನ್ನು ತೊರೆಯುವ ಸಾಧ್ಯತೆ ದಟ್ಟವಾಗಿದೆ.

Vijaya Karnataka Web 29 Sep 2020, 4:03 pm
ಪಾಟ್ನಾ: ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಶಿರೋಮಣಿ ಅಕಾಲಿ ದಳ ಹೊರ ನಡೆದಿರುವ ಬೆನ್ನಲ್ಲಿಯೇ ಮತ್ತೊಂದು ಪಕ್ಷ ಆಡಳಿತಾರೂಢ ಮೈತ್ರಿಕೂಟವನ್ನು ತೊರೆಯುವ ಸಾಧ್ಯತೆ ದಟ್ಟವಾಗಿದೆ. ಅಕ್ಟೋಬರ್‌ - ನವೆಂಬರ್‌ನಲ್ಲಿ ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆಯ ಸೀಟು ಹಂಚಿಕೆ ವಿಚಾರವಾಗಿ ಎನ್‌ಡಿಎ ಮೈತ್ರಿಕೂಟದಲ್ಲಿ ಭಿನ್ನಮತ ತಲೆದೊರಿದ್ದು, ಪ್ರಮುಖ ಮಿತ್ರ ಪಕ್ಷ ಎಲ್‌ಜೆಪಿ ಮೈತ್ರಿಕೂಟದಿಂದ ಹೊರನಡೆಯುವ ಸಾಧ್ಯತೆ ಇದೆ.
Vijaya Karnataka Web bihar polls lok janshakti partys ultimatum to bjp on seat sharing ahead of elections
ಬಿಜೆಪಿಗೆ ಬಿಸಿತುಪ್ಪವಾದ ಬಿಹಾರ ಸೀಟು ಹಂಚಿಕೆ..! ಎನ್‌ಡಿಎಯಿಂದ ಎಲ್‌ಜೆಪಿ ಹೊರ ನಡೆಯೋ ಸಾಧ್ಯತೆ


ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದಲ್ಲಿ ಎಲ್‌ಜೆಪಿಯ ರಾಮ್‌ ವಿಲಾಸ್‌ ಪಾಸ್ವಾನ್‌ ಮಂತ್ರಿಯಾಗಿದ್ದು, ಅವರ ಪುತ್ರ ಚಿರಾಗ್‌ ಪಾಸ್ವಾನ್‌ ಸೋಮವಾರ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಸೀಟು ಹಂಚಿಕೆ ವಿಚಾರವಾಗು ಶೀಘ್ರ ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ, 243 ಕ್ಷೇತ್ರಗಳ ಪೈಕಿ 143 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಲೋಕ ಜನಶಕ್ತಿ ಪಕ್ಷದಿಂದ ಕಣಕ್ಕಿಳಿಸುತ್ತೇವೆ ಎಂದು ಚಿರಾಗ್‌ ಪಾಸ್ವಾನ್‌ ಜೆಪಿ ನಡ್ಡಾಗೆ ತಿಳಿಸಿದ್ದಾರೆ. ಸಿಎಂ ನಿತೀಶ್ ಕುಮಾರ್ ಅವರ ಜೆಡಿಯು ವಿರುದ್ಧವೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಹಿಂಜರಿಯುವುದಿಲ್ಲ ಎಂದು ಚಿರಾಗ್ ಪಾಸ್ವಾನ್ ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಲ್‌ಜೆಪಿ ಜೊತೆ ಮೈತ್ರಿ ಇಲ್ಲ ಎಂದಿರುವ ಜೆಡಿಯು..!

ಕೆಲ ದಿನಗಳ ಹಿಂದಷ್ಟೇ ಎಲ್‌ಜೆಪಿಯೊಂದಿಗೆ ಯಾವುದೇ ಮೈತ್ರಿ ಇಲ್ಲ ಎಂದು ಜೆಡಿಯು ಹೇಳಿದೆ ಎಂದು ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಅವರಿಗೆ ಚಿರಾಗ್‌ ಪಾಸ್ವಾನ್‌ ನೆನಪಿಸಿದ್ದಾರೆ. ಆದ್ದರಿಂದ ಜೆಡಿಯು ಅಭ್ಯರ್ಥಿಗಳ ವಿರುದ್ಧ ಎಲ್‌ಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಬಹುದು ಎಂದು ಜ್ಯೂನಿಯರ್‌ ಪಾಸ್ವಾನ್‌ ಹೇಳಿರುವುದು ಈ ಸಲದ ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ವರ್ಸಸ್‌ ಎನ್‌ಡಿಎ ಸನ್ನಿವೇಶವನ್ನು ಸೃಷ್ಟಿಸುವ ಸಾಧ್ಯತೆ ಇದೆ. ನಿತೀಶ್ ಕುಮಾರ್ ಮತ್ತು ಚಿರಾಗ್ ಪಾಸ್ವಾನ್ ನಡುವಿನ ದ್ವೇಷದಿಂದ ಕಳೆದ ಕೆಲವು ತಿಂಗಳುಗಳಿಂದ ಎಲ್‌ಜೆಪಿಯೊಂದಿಗಿನ ಬಿಜೆಪಿಯ ಸಂಬಂಧ ಹಳಸುತ್ತಿದೆ. ಎನ್‌ಡಿಎ ಮೈತ್ರಿಕೂಟದ ಭಾಗವಾದರೂ ಎಲ್‌ಜೆಪಿ ಬಹಿರಂಗವಾಗಿಯೇ ಅನೇಕ ಬಾರಿ ನಿತೀಶ್‌ ಕುಮಾರ್‌ ಸರಕಾರವನ್ನು ಟೀಕಿಸಿದೆ.

ಎಲ್‌ಜೆಪಿಗೆ ಚಿರಾಗ್‌ ಪಾಸ್ವಾನ್‌ ಸಿಎಂ ಅಭ್ಯರ್ಥಿ..!

ನಿತೀಶ್ ಕುಮಾರ್ ಅವರ ನಾಯಕತ್ವದೊಂದಿಗೆ ಎನ್‌ಡಿಎ ಹೋಗುತ್ತದೆಯೋ ಅಥವಾ ಮನಸ್ಸು ಬದಲಿಸುತ್ತದೆಯೋ ಎಂಬುದರ ಆಧಾರದ ಮೇಲೆ ಬಿಜೆಪಿಯನ್ನು ಬೆಂಬಲಿಸುವುದಾಗಿ ಚಿರಾಗ್‌ ಪಾಸ್ವಾನ್‌ ಮೇ ತಿಂಗಳಿನಲ್ಲಿ ಹೇಳಿದ್ದರು. ಅಂದಿನಿಂದ ಸಿಎಂ ನಿತೀಶ್‌ ಕುಮಾರ್‌ ಅವರ ಮೇಲಿನ ವಾಗ್ದಾಳಿಯನ್ನು ಹಂತ ಹಂತವಾಗಿ ಚಿರಾಗ್‌ ಪಾಸ್ವಾನ್‌ ಮೊನಚುಗೊಳಿಸುತ್ತಾ ಬರುತ್ತಿದ್ದಾರೆ. ಈಗ ಎಲ್‌ಜೆಪಿ ನಾಯಕರು ಚಿರಾಗ್ ಪಾಸ್ವಾನ್ ಅವರನ್ನೇ ಸಿಎಂ ಅಭ್ಯರ್ಥಿ ಎಂದು ಹೇಳುತ್ತಿದ್ದಾರೆ. ಆದರೆ, ಬಿಜೆಪಿ ನಾಯಕರು ಈಗಾಗಲೇ ನಿತೀಶ್ ಕುಮಾರ್ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ. ಬಿಹಾರ ವಿಧಾನಸಭೆಯ 243 ಕ್ಷೇತ್ರಗಳಿಗೆ ಅಕ್ಟೋಬರ್ 28, ನವೆಂಬರ್ 3 ಮತ್ತು 7 ರಂದು ಮತದಾನ ನಡೆಯಲಿದ್ದು, ನವೆಂಬರ್ 10ರಂದು ಫಲಿತಾಂಶ ಪ್ರಕಟವಾಗಲಿದೆ.

ಎನ್‌ಡಿಎಗೆ ಮಾಂಝಿ ಸೇರ್ಪಡೆಯಿಂದಲೂ ಭಿನ್ನಮತ..!

ಇನ್ನು, ಎಲ್‌ಜೆಪಿ ರೀತಿಯ ವೋಟ್‌ ಬ್ಯಾಂಕ್‌ ಹೊಂದಿರುವ ಜಿತನ್‌ ರಾಮ್‌ ಮಾಂಝಿ ಪಕ್ಷವನ್ನು ಸಿಎಂ ನಿತೀಶ್‌ ಕುಮಾರ್‌ ಎನ್‌ಡಿಎಗೆ ಕರೆತಂದಿರುವುದು ಪಾಸ್ವಾನ್‌ ಶಿಬಿರದಲ್ಲಿ ಜೆಡಿಯು ಹಾಗೂ ಬಿಜೆಪಿ ವಿರುದ್ಧ ಕತ್ತಿ ಮಸೆಯಲು ಕಾರಣವಾಗಿದೆ. ಇನ್ನು, ಆದ ಗಾಯಕ್ಕೆ ಉಪ್ಪು ಹಚ್ಚಿದಂತೆ ನಿತೀಶ್ ಕುಮಾರ್ ಇತ್ತೀಚೆಗೆ ಸಪ್ತ ಪರಿಹಾರಗಳು ಭಾಗ 2ನ್ನು ಬಿಡುಗಡೆಗೊಳಿಸಿದ್ದರು. ಮೈತ್ರಿ ಬದಲಾವಣೆಯಾಗಿದ್ದರೂ ಸಹ ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆಗಿನ ಹಿಂದಿನ ಮೈತ್ರಿಯ ಕಾರ್ಯಸೂಚಿಯಲ್ಲಿ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಬಗ್ಗೆ ಚಿರಾಗ್ ಪಾಸ್ವಾನ್ ಭಾರೀ ಟೀಕಾ ಪ್ರಹಾರ ನಡೆಸುತ್ತಿದ್ದಾರೆ.

ಎಲ್‌ಜೆಪಿ ಹೊರನಡೆದರೆ ಬಿಜೆಪಿಗೆ ಮತ್ತೊಂದು ನಷ್ಟ..!

ಪಾಸ್ವಾನ್‌ಗಳು ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವನ್ನು ತೊರೆಯಲು ನಿರ್ಧರಿಸಿದರೆ ಇತ್ತೀಚಿನ ದಿನಗಳಲ್ಲಿ ಮೈತ್ರಿಕೂಟ ತೊರೆದ ಮೂರನೇ ಪ್ರಮುಖ ಪಕ್ಷವಾಗಲಿದೆ. ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ಪಂಜಾಬ್‌ನ ಶಿರೋಮಣಿ ಅಕಾಲಿದಳ ಬಿಜೆಪಿಯ ಎನ್‌ಡಿಎಯನ್ನು ತೊರೆದಿತ್ತು. ಇದಕ್ಕೂ ಮುನ್ನ ದೀರ್ಘಕಾಲಿಕ ಮಿತ್ರ ಶಿವಸೇನೆಯನ್ನು ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಹುದ್ದೆಯ ಹಂಚಿಕೆ ವಿಚಾರದಲ್ಲಿ ಬಂದ ಭಿನ್ನಾಭಿಪ್ರಾಯದಿಂದ ಬಿಜೆಪಿ ಕಳೆದುಕೊಂಡಿತ್ತು. ಇನ್ನು, ಚಿರಾಗ್ ಪಾಸ್ವಾನ್ ಮೈತ್ರಿಕೂಟದಿಂದ ಹೊರನಡೆದರೂ ಸಹ ಎಲ್‌ಜೆಪಿಯ ದಲಿತ ವೋಟ್‌ ಬ್ಯಾಂಕ್‌ನ ಹೊರಗಿನ ಮಹಾದಲಿತ್ ಮತಗಳನ್ನು ಕ್ರೋಢಿಕರಿಸುತ್ತದೆ ಎಂದು ಬಿಹಾರದ ಬಿಜೆಪಿ ನಾಯಕರು ನಂಬಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ