ಆ್ಯಪ್ನಗರ

ಬಿಲ್ಕಿಸ್‌ ಬಾನೊಗೆ 50 ಲಕ್ಷ ಪರಿಹಾರ, ಉದ್ಯೋಗ ನೀಡಲು ಸುಪ್ರೀಂ ಆದೇಶ

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪೀಠ 2002ರಿಂದ ಅವರು ಅಲೆಮಾರಿ ಜೀವನ ನಡೆಸುತ್ತಿರುವ ಬಾನೊ ಅವರಿಗೆ ವಸತಿ ಹಾಗೂ ಸರಕಾರಿ ಉದ್ಯೋಗ ಒದಗಿಸುವಂತೆಯೂ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.

Vijaya Karnataka 24 Apr 2019, 5:00 am
ಹೊಸದಿಲ್ಲಿ: 2002ರ ಗುಜರಾತ್‌ ದಂಗೆಯ ವೇಳೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಮತ್ತು ಕುಟುಂಬದ ಎಲ್ಲಾ ಸದಸ್ಯರನ್ನೂ ಕಳೆದುಕೊಂಡ ಬಿಲ್ಕಿಸ್‌ ಬಾನೊ ಅವರಿಗೆ 50 ಲಕ್ಷ ರೂ. ಪರಿಹಾರ ನೀಡುವಂತೆ ಗುಜರಾತ್‌ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ಆದೇಶಿಸಿದೆ.
Vijaya Karnataka Web bilkis


ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪೀಠ 2002ರಿಂದ ಅವರು ಅಲೆಮಾರಿ ಜೀವನ ನಡೆಸುತ್ತಿರುವ ಬಾನೊ ಅವರಿಗೆ ವಸತಿ ಹಾಗೂ ಸರಕಾರಿ ಉದ್ಯೋಗ ಒದಗಿಸುವಂತೆಯೂ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.

''ಈ ಪ್ರಕರಣದಲ್ಲಿ ಶಾಮೀಲಾಗಿದ್ದ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ನಾಲ್ವರು ಅಧಿಕಾರಿಗಳ ಪಿಂಚಣಿ ತಡೆ ಹಿಡಿಯಲಾಗಿದೆ. ಮತ್ತೊಬ್ಬ ಅಧಿಕಾರಿಗೆ ಹಿಂಬಡ್ತಿ ನೀಡಲಾಗಿದೆ,'' ಎಂದು ಗುಜರಾತ್‌ ಸರಕಾರದ ಪ್ರತಿನಿಧಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟಿಗೆ ಮಾಹಿತಿ ನೀಡಿದ್ದಾರೆ.

ಗುಜರಾತ್‌ ಸರಕಾರ ಈ ಮುನ್ನ ತಮಗೆ ನೀಡಲು ಮುಂದಾಗಿದ್ದ 5 ಲಕ್ಷ ರೂ. ಪರಿಹಾರವನ್ನು ಬಿಲ್ಕಿಸ್‌ ಬಾನೊ ತಿರಸ್ಕರಿಸಿದ್ದರು. ತಮಗೆ ಉತ್ತಮ ಮೊತ್ತದ ಪರಿಹಾರ ದೊರೆಯಬೇಕು ಹಾಗೂ ತನಿಖೆಯ ಹಾದಿ ತಪ್ಪಿಸಲು ಯತ್ನಿಸಿದ ಹಾಗೂ ಬಾಂಬೆ ಹೈಕೋರ್ಟಿನಿಂದ ತಪ್ಪಿತಸ್ಥರೆಂದು ತೀರ್ಮಾನಿಸಲ್ಪಟ್ಟ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಆದೇಶಿಸಬೇಕೆಂದು ಕೋರಿ ಬಾನೊ ಸುಪ್ರೀಂ ಕೋರ್ಟ್‌ ಮೆಟ್ಟಿಲೇರದ್ದರು.

ಎರಡು ವಾರದೊಳಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕಳೆದ ಮಾ. 29ರಂದು ಗುಜರಾತ್‌ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು.

2002ರ ಮಾ.3ರಂದು ಬಿಲ್ಕಿಸ್‌ ಬಾನೊ ಕುಟುಂಬದ ಮೇಲೆ ಗುಂಪೊಂದು ದಾಳಿ ನಡೆಸಿತ್ತು. ಈ ಘಟನೆಯಲ್ಲಿ ಆಕೆಯ ಕುಟುಂಬದ 14 ಸದಸ್ಯರನ್ನು ಹತ್ಯೆಗೈಯ್ಯಲಾಗಿತ್ತು. ಹತ್ಯೆಗೀಡಾದವರಲ್ಲಿ ಬಿಲ್ಕಿಸ್‌ ಬಾನೋರ ಮೂರು ವರ್ಷದ ಪುತ್ರಿ ಸಲೇಹ ಕೂಡ ಸೇರಿದ್ದಳು. ಆಕೆಯ ತಲೆಯನ್ನು ದುಷ್ಕರ್ಮಿಗಳು ಬಂಡೆಯೊಂದಕ್ಕೆ ಜಜ್ಜಿದ್ದರು. ಆ ಸಂದರ್ಭ ಗರ್ಭಿಣಿಯಾಗಿದ್ದ ಬಿಲ್ಕಿಸ್‌ ಬಾನೊ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು. ಆಕೆ ಸತ್ತಿದ್ದಾಳೆಂದು ಭಾವಿಸಿ ದುಷ್ಕರ್ಮಿಗಳು ಅಲ್ಲಿಂದ ತೆರಳಿದ್ದರು. ಆಕೆಯ ಮೇಲೆ ಅತ್ಯಾಚಾರಗೈದ 11 ಮಂದಿಯನ್ನು 2008ರಲ್ಲಿ ತಪ್ಪಿತಸ್ಥರೆಂದು ಘೋಷಿಸಿದ ಬಾಂಬೆ ಹೈಕೋರ್ಟ್‌ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ