ಆ್ಯಪ್ನಗರ

ಮಹಿಳೆಯರಿಗೆ 33% ಟಿಕೆಟ್‌ ಮೀಸಲಿಟ್ಟ ಬಿಜೆಡಿ

ಲೋಕಸಭಾ ಚುನಾವಣೆ ವೇಳಾಪಟ್ಟಿ ಪ್ರಕಟಗೊಳ್ಳುವ ತುಸು ಹೊತ್ತಿನ ಮುನ್ನ ನವೀನ್‌ ಪಟ್ನಾಯಕ್‌ ಈ ಘೋಷಣೆ ಹೊರಡಿಸಿದ್ದಾರೆ.

Vijaya Karnataka 11 Mar 2019, 7:36 am
ಭುವನೇಶ್ವರ: ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ನೇತೃತ್ವದ ಬಿಜು ಜನತಾದಳ ಪಕ್ಷ ವು (ಬಿಜೆಡಿ) ಲೋಕಸಭಾ ಚುನಾವಣೆ ಟಿಕೆಟ್‌ ಹಂಚಿಕೆಯಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವುದಾಗಿ ಘೋಷಿಸಿದೆ. ಸಂಸತ್ತಿನಲ್ಲಿ ಮಹಿಳಾ ಮೀಸಲು ವಿಧೇಯಕ 9 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವಾಗಲೇ ಬಿಜೆಡಿ ಈ ದಿಟ್ಟ ಕ್ರಮ ಕೈಗೊಂಡು ಗಮನ ಸೆಳೆದಿದೆ. ಇಂತಹ ಕ್ರಮ ಕೈಗೊಂಡ ದೇಶದ ಮೊದಲ ಪಕ್ಷವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
Vijaya Karnataka Web LokSabha


ಲೋಕಸಭಾ ಚುನಾವಣೆ ವೇಳಾಪಟ್ಟಿ ಪ್ರಕಟಗೊಳ್ಳುವ ತುಸು ಹೊತ್ತಿನ ಮುನ್ನ ನವೀನ್‌ ಪಟ್ನಾಯಕ್‌ ಈ ಘೋಷಣೆ ಹೊರಡಿಸಿದ್ದಾರೆ.

ಮಹಿಳಾ ಸ್ವಯಂ ಸೇವಾ ಸಂಘ ಉದ್ದೇಶಿಸಿ ಮಾತನಾಡಿದ ಅವರು, ''ಪ್ರಸಿದ್ಧ ಬಿಜು ಬಾಬು ಅವರ ಕರ್ಮಭೂಮಿಯಾದ ಕೇಂದ್ರಪರಾದಲ್ಲಿ ಮಹಿಳಾ ಮೀಸಲಾತಿ ವಿಚಾರ ಘೋಷಿಸಲು ಸಂತಸವಾಗುತ್ತಿದೆ,'' ಎಂದರು.

ಮಹಿಳಾ ಸಬಲೀಕರಣದ ಹಾದಿಯಲ್ಲಿ ಒಡಿಶಾದ ಮಹಿಳೆಯರು ಮುಂದಿದ್ದಾರೆ. ಭಾರತ ಜಾಗತಿಕ ಮಟ್ಟದಲ್ಲಿ ಮುನ್ನಡೆ ಸಾಧಿಸಬೇಕೆಂದಿದ್ದರೆ, ಅಮೆರಿಕ ಹಾಗೂ ಚೀನಾಗಳಿಗೆ ಸಮನಾಗಿ ಮುಂದುವರಿಯಬೇಕೆಂದಿದ್ದರೆ ಮಹಿಳಾ ಸಬಲೀಕರಣ ಅಗತ್ಯ ಎಂದು ಪಟ್ನಾಯಕ್‌ ಅಭಿಪ್ರಾಯಪಟ್ಟಿದ್ದಾರೆ.

ಸಂಸತ್ತು ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲು ಒದಗಿಸುವ ಮಹಿಳಾ ಮೀಸಲು ವಿಧೇಯಕವನ್ನು ಜಾರಿಗೆ ತರಬೇಕೆಂದು ಕೇಂದ್ರವನ್ನು ಆಗ್ರಹಿಸಿ ಕಳೆದ ನವೆಂಬರ್‌ನಲ್ಲಿ ಒಡಿಶಾ ಸರಕಾರ ನಿರ್ಣಯ ಕೈಗೊಂಡಿತ್ತು.

ಬಿಜೆಪಿ, ಕಾಂಗ್ರೆಸ್‌ಗೆ ಇಕ್ಕಟ್ಟು:
ಬಿಜೆಡಿಯ ಮಹಿಳಾ ಮೀಸಲು ಕಾರ್ಯತಂತ್ರವು ಚುನಾವಣೆಯಲ್ಲಿ ಭಾರಿ ಪ್ರಭಾವ ಬೀರಲಿದೆ ಎಂದು ಹೇಳಲಾಗಿದೆ. ಪ್ರತಿಪಕ್ಷಗಳ ಪಾಲಿಗೆ ಇದು ಹೊಸ ಇಕ್ಕಟ್ಟನ್ನೂ ತಂದಿದೆ. 33% ಮೀಸಲು ನೀತಿ ಪ್ರಕಾರ, ಒಡಿಶಾದಲ್ಲಿರುವ ಒಟ್ಟು 21 ಲೋಕಸಭಾ ಕ್ಷೇತ್ರಗಳ ಪೈಕಿ 7 ಸ್ಥಾನಗಳು ಬಿಜೆಡಿ ಮಹಿಳೆಯರಿಗೆ ಬಿಟ್ಟುಕೊಡಲಿದೆ.

ಆದರೆ, ರಾಷ್ಟ್ರೀಯ ಪಕ್ಷಗಳಾಗಿರುವ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಈ ನೀತಿಯನ್ನು ಅನುಸರಿಸುವುದು ಕಷ್ಟದ ಕೆಲಸ. ಏಕೆಂದರೆ, ಈ ಪಕ್ಷಗಳು ಕೇವಲ ಒಡಿಶಾಕ್ಕೆ ಮಾತ್ರ ಮಹಿಳಾ ಮೀಸಲು ಅನುಸರಿಸಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಅದು ಸಿನಿಕತನವೆನಿಸುತ್ತದೆ. ಹಾಗೆಂದು, ಇತರ ಎಲ್ಲಾ ರಾಜ್ಯಗಳಲ್ಲೂ ಇದನ್ನು ಅನ್ವಯಿಸುವ ಪರಿಸ್ಥಿತಿಯೂ ಇಲ್ಲ. ಹಾಗಾಗಿ ಇದು ಪಟ್ನಾಯಕ್‌ ಪಾಲಿಗೆ ವರದಾನವಾಗಲಿದೆ ಎಂದು ಹೇಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ