ಆ್ಯಪ್ನಗರ

ಬಿಜೆಪಿ-ಅಕಾಲಿದಳ ಮೈತ್ರಿಯಲ್ಲಿ ವರ್ಷದ ಹಿಂದೆಯೇ ಬಿರುಕು

ಸುದೀರ್ಘ ಮೈತ್ರಿ ಮುರಿಯಲು ಕೃಷಿ ವಿಧೇಯಕ ನೆಪ ಮಾತ್ರ. ಪೌರತ್ವ ತಿದ್ದುಪಡಿ ವಿಧೇಯಕದ ಬಗ್ಗೆಯೂ ಅಕಾಲಿದಳ ತಕರಾರು ತೆಗೆದಿತ್ತು. ಹರಿಯಾಣದಲ್ಲಿ ಅಕಾಲಿದಳದ ಏಕೈಕ ಶಾಸಕರು 2019ರ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಸೇರಿದಾಗ ಈ ಅಸಮಾಧಾನ ಮತ್ತಷ್ಟು ಜೋರಾಗಿತ್ತು.

Agencies 27 Sep 2020, 8:58 pm
ಚಂಡೀಗಢ: ಬಿಜೆಪಿ ಮತ್ತು ಅಕಾಲಿದಳ ನಡುವಿನ ಒಂದು ವರ್ಷದ ಮನಸ್ತಾಪ ಕೃಷಿ ವಿಧೇಯಕಗಳ ನೆಪದಲ್ಲಿ ಸ್ಫೋಟಗೊಂಡು ಮೈತ್ರಿ ಮುರಿಯುವ ಹಂತಕ್ಕೆ ಹೋಗಿದೆ.
Vijaya Karnataka Web Sukhbir Badal


ಶಿರೋಮಣಿ ಅಕಾಲಿದಳ ಮುಖ್ಯಸ್ಥ ಸುಖ್‌ಬೀರ್‌ ಸಿಂಗ್‌ ಬಾದಲ್‌ ಅವರು ಬಿಜೆಪಿ ಜತೆಗಿನ ಸುದೀರ್ಘ ಮೈತ್ರಿ ಕಡಿದುಕೊಳ್ಳುವುದಾಗಿ ಶನಿವಾರ ರಾತ್ರಿ ಘೋಷಿಸಿದ್ದಾರೆ. ರೈತ ವಿರೋಧಿ ಕೃಷಿ ವಿಧೇಯಕಗಳನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಅವರು ಎನ್‌ಡಿಎ ಮೈತ್ರಿಕೂಟದಿಂದ ಹೊರಬರುವ ತೀರ್ಮಾನಕ್ಕೆ ಕಾರಣ ನೀಡಿದ್ದಾರೆ. ವಾಸ್ತವಾಗಿ ಒಂದು ವರ್ಷದಿಂದಲೂ ಎರಡೂ ಪಕ್ಷಗಳ ನಡುವೆ ಅಸಮಾಧಾನದ ಹೊಗೆ ಎದ್ದಿತ್ತು ಎಂದು ಅಕಾಲಿದಳ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.

ಪೌರತ್ವ ತಿದ್ದುಪಡಿ ವಿಧೇಯಕದ ಬಗ್ಗೆಯೂ ಅಕಾಲಿದಳ ತಕರಾರು ತೆಗೆದಿತ್ತು. ಯಾವುದೇ ನಿರ್ದಿಷ್ಟ ಧರ್ಮವನ್ನು ವಿಧೇಯಕದಲ್ಲಿ ಹೆಸರಿಸುವುದು ಬೇಡ ಎಂದು ಸಲಹೆ ಮಾಡಿತ್ತು. ಅದನ್ನು ಗಣನೆಗೆ ತೆಗೆದುಕೊಳ್ಳದ ಬಿಜೆಪಿ ತಾನು ಅಂದುಕೊಂಡ ಸ್ವರೂಪದಲ್ಲಿಯೇ ವಿಧೇಯಕ ಮಂಡಿಸಿತು. ಒಲ್ಲದ ಮನಸ್ಸಿನಿಂದಲೇ ಅಕಾಲಿದಳ ವಿಧೇಯಕದ ಪರವಾಗಿ ಸಂಸತ್‌ನಲ್ಲಿ ಮತ ಚಲಾಯಿಸಿತ್ತು. ಹರಿಯಾಣದಲ್ಲಿನ ಅಕಾಲಿದಳದ ಏಕೈಕ ಶಾಸಕ ಬಾಲ್‌ಕೌರ್‌ ಸಿಂಗ್‌ 2019ರ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಸೇರಿದಾಗ ಈ ಅಸಮಾಧಾನ ಮತ್ತಷ್ಟು ಜೋರಾಯಿತು. ಅದನ್ನೂ ಅಕಾಲಿದಳ ಮುಖಂಡರು ಸಹಿಸಿಕೊಂಡಿದ್ದರು. ಆದರೆ ಬಿಜೆಪಿಯ ಪಂಜಾಬ್‌ ಮುಖಂಡರು, "ಮುಂದಿನ ಸಲ ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ತರುವುದೇ ತಮ್ಮ ಗುರಿ," ಎಂಬರ್ಥದ ಹೇಳಿಕೆ ನೀಡತೊಡಗಿದಾಗ ಸುಖ್‌ಬೀರ್‌ ಸಿಂಗ್‌ ತಾಳ್ಮೆ ಕಳೆದುಕೊಳ್ಳತೊಡಗಿದ್ದರು.

ಎನ್‌ಡಿಎ ತೊರೆದ ಬೆನ್ನಲ್ಲೇ ಕೇಂದ್ರದ ವಿರುದ್ಧ ಸಂಘಟಿತ ಹೋರಾಟಕ್ಕೆ ಕರೆ ನೀಡಿದ ಅಕಾಲಿದಳ

ಆದರೆ, 1997ರಿಂದಲೂ ಜತೆಗಿರುವ ಮಿತ್ರಪಕ್ಷದ ಭಾವನೆಯನ್ನು ಬಿಜೆಪಿ ಅರ್ಥ ಮಾಡಿಕೊಳ್ಳುವ ಗೋಜಿಗೇ ಹೋಗಲಿಲ್ಲ. ಮೂರು ಕೃಷಿ ವಿಧೇಯಕಗಳ ಕುರಿತು ಮೊದಲು ಬೆಂಬಲಿಸಿದ್ದ ಶಿರೋಮಣಿ ಅಕಾಲಿದಳವು, ರೈತರ ಪ್ರತಿಭಟನೆ ಆರಂಭವಾದ ಬಳಿಕ ವಿಧೇಯಕವನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವಂತೆ ಸಲಹೆ ಮಾಡಿತು. ರೈತರ ಎಲ್ಲಅನುಮಾನ, ಅಸಮಾಧಾನ ಬಗೆಹರಿಸಿದ ನಂತರವೇ ವಿಧೇಯಕ ಮಂಡಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು. ಬಿಜೆಪಿ ಅದನ್ನೂ ಕಿವಿಗೆ ಹಾಕಿಕೊಳ್ಳಲಿಲ್ಲ. ವಿಧೇಯಕ ಮಂಡಿಸುವುದೇ ಆದಲ್ಲಿ ಮೊದಲು ಸಂಸತ್‌ನ ವಿಷಯ ಸಮಿತಿಗೆ ಒಪ್ಪಿಸಿ ಎಂಬ ಸಲಹೆಯನ್ನೂ ಕಡೆಗಣಿಸಿತು. ಇನ್ನು ಬಿಜೆಪಿ ಜೊತೆ ಹೊಂದಾಣಿಕೆ ಸಾಧ್ಯವೇ ಇಲ್ಲ ಎಂಬ ತೀರ್ಮಾನಕ್ಕೆ ಬಂದ ಬಾದಲ್‌, ಅಂತಿಮವಾಗಿ ಬಿಜೆಪಿ ಸಖ್ಯ ತೊರೆಯುವ ನಿರ್ಧಾರ ಪ್ರಕಟಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ