ಆ್ಯಪ್ನಗರ

ಮಸೂದ್‌ ಕುರಿತು ಕಾಂಗ್ರೆಸ್‌, ಬಿಜೆಪಿ ಟ್ವೀಟ್‌ ವಾರ್‌

ಪ್ರಧಾನಿಯನ್ನು ಟೀಕಿಸಿ ರಾಹುಲ್‌ ಮಾಡಿರುವ ಟ್ವೀಟ್‌ಗೆ ಬಿಜೆಪಿ ತನ್ನ ಅಧಿಕೃತ ಟ್ವಿಟರ್‌ ಅಕೌಂಟ್‌ ಮೂಲಕವೇ ಖಡಕ್‌ ಪ್ರತ್ಯುತ್ತರ ಕೊಟ್ಟಿದೆ.

Vijaya Karnataka 15 Mar 2019, 5:00 am
ಹೊಸದಿಲ್ಲಿ: ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಜೈಷೆ ಮೊಹಮ್ಮದ್‌ ಉಗ್ರ ಸಂಘಟನೆ ಸ್ಥಾಪಕ ಮಸೂದ್‌ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಚೀನಾ ಮತ್ತೆ ಅಡ್ಡಗಾಲು ಹಾಕಿದ ಬೆನ್ನಲ್ಲೇ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು, ''ನರೇಂದ್ರ ಮೋದಿ ಒಬ್ಬ ದುರ್ಬಲ ಪ್ರಧಾನಿ. ಅವರು ಚೀನಾ ಅಧ್ಯಕ್ಷರಿಗೆ ಹೆದರುತ್ತಿದ್ದಾರೆ,'' ಎಂದು ಟೀಕಿಸಿದ್ದಾರೆ. ಇದಕ್ಕೆ ಬಿಜೆಪಿ ಅಷ್ಟೇ ತೀಕ್ಷ್ಣವಾಗಿ ತಿರುಗೇಟು ನೀಡಿದ್ದು, ''ನಿಮ್ಮ ತಾತ (ನೆಹರೂ) ನೀಡಿದ ಕೊಡುಗೆಯ ದೆಸೆಯಿಂದಲೇ ಚೀನಾ ಇಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸದಸ್ಯ ರಾಷ್ಟ್ರವಾಗಲು ಕಾರಣವಾಗಿದೆ,'' ಎಂದು ಇತಿಹಾಸದ ಪಾಠ ಮಾಡಿದೆ.
Vijaya Karnataka Web rahul


''ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ಪ್ರಸ್ತಾವನೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾ ಮತ್ತೊಮ್ಮೆ ವಿರೋಧ ವ್ಯಕ್ತಪಡಿಸಿದ್ದರೂ ಅದರ ನಡೆಯನ್ನು ಉಗ್ರ ಮಾತುಗಳಲ್ಲಿ ಖಂಡಿಸುವ ಧೈರ್ಯ ಮೋದಿ ತೋರುತ್ತಿಲ್ಲ. ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರಿಗೆ ಹೆದರುತ್ತಿದ್ದಾರೆ. ಗುಜರಾತಿನಲ್ಲಿ ಕ್ಸಿ ಜತೆಗೆ ಜೋಕಾಲಿಯಾಡುವುದು, ದಿಲ್ಲಿಯಲ್ಲಿ ಅಪ್ಪಿಕೊಳ್ಳುವುದು, ಚೀನಾಕ್ಕೆ ಹೋಗಿ ತಲೆ ಬಾಗುವುದು...ಇದು ಮೋದಿ ಅವರ ಚೀನಾ ರಾಜತಾಂತ್ರಿಕ ನೀತಿ ,'' ಎಂದು ರಾಹುಲ್‌ ಟ್ವಿಟರ್‌ನಲ್ಲಿ ಲೇವಡಿ ಮಾಡಿದ್ದಾರೆ.

ಇದು ನಿಮ್ಮ ತಾತನ ಕೊಡುಗೆ: ಪ್ರಧಾನಿಯನ್ನು ಟೀಕಿಸಿ ರಾಹುಲ್‌ ಮಾಡಿರುವ ಟ್ವೀಟ್‌ಗೆ ಬಿಜೆಪಿ ತನ್ನ ಅಧಿಕೃತ ಟ್ವಿಟರ್‌ ಅಕೌಂಟ್‌ ಮೂಲಕವೇ ಖಡಕ್‌ ಪ್ರತ್ಯುತ್ತರ ಕೊಟ್ಟಿದೆ. ''ಆವತ್ತು ನಿಮ್ಮ ಮಹಾನ್‌ ತಾತ (ನೆಹರೂ) ಭಾರತದ ಆಶಯಗಳನ್ನು ಬದಿಗಿಟ್ಟು ಚೀನಾ ಪರವಾಗಿ ನಿಂತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಆ ದೇಶಕ್ಕೆ ಕಾಯಂ ಸದಸ್ಯತ್ವದ ಕೊಡುಗೆ ನೀಡದೇ ಇರುತ್ತಿದ್ದರೆ ಚೀನಾ ಇವತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲೇ ಇರುತ್ತಿರಲಿಲ್ಲ. ನಿಮ್ಮ ಘನ ಕುಟುಂಬವು ಈ ದೇಶಕ್ಕೆ ಮಾಡಿದ ಎಲ್ಲ ತಪ್ಪುಗಳನ್ನು ಇವತ್ತು ಭಾರತ ಸರಿಪಡಿಸಿಕೊಳ್ಳುತ್ತಿದೆ. ಉಗ್ರ ನಿಗ್ರಹ ಹೋರಾಟದಲ್ಲಿ ನಾವು ಖಂಡಿತವಾಗಿಯೂ ಜಯಗಳಿಸಲಿದ್ದೇವೆ. ಈ ವಿಚಾರವನ್ನು ಮೋದಿ ಅವರಿಗೆ ಬಿಟ್ಟುಬಿಡಿ ಮತ್ತು ಅಲ್ಲಿಯವರೆಗೆ ನೀವು ಚೀನೀ ರಾಜತಾಂತ್ರಿಕರೊಂದಿಗೆ ಗೌಪ್ಯ ಮಾತುಕತೆ ನಡೆಸುತ್ತಿರಿ,'' ಎಂದು ಬಿಜೆಪಿ ಟ್ವಿಟರ್‌ನಲ್ಲಿ ತಿರುಗೇಟು ನೀಡಿದೆ.


ನಮ್ಮ ಬುಲೆಟ್‌ಪ್ರೂಫ್‌ ಜಾಕೆಟ್‌ಗಳಲ್ಲಿ ಚೀನಾದ ಫಿಂಗರ್‌ಪ್ರಿಂಟ್‌, ನರ್ಮದಾ ತಟದ ಏಕತಾ ಪ್ರತಿಮೆಯಲ್ಲಿ ಚೀನಾದ ಫಿಂಗರ್‌ಪ್ರಿಂಟ್‌, ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಪ್ರಯತ್ನಕ್ಕೆ ತಡೆಯೊಡ್ಡುವಲ್ಲಿ ಚೀನಾದ ಫಿಂಗರ್‌ಪ್ರಿಂಟ್‌. ನಮ್ಮ ವಿದೇಶಾಂಗ ನೀತಿಗಳ ಸರಣಿ ವೈಫಲ್ಯದಲ್ಲಿ ಪ್ರಧಾನಿ ಮೋದಿ ಅವರ ಫಿಂಗರ್‌ಪ್ರಿಂಟ್‌.

- ಅಸಾದುದ್ದೀನ್‌ ಓವೈಸಿ, (ಟ್ವಿಟರ್‌ನಲ್ಲಿ ಟೀಕಿಸಿದ್ದು)


ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯ ರಾಷ್ಟ್ರದ ಸ್ಥಾನ ಭಾರತದ ಕೈತಪ್ಪಲು ಹಾಗೂ ಕಾಶ್ಮೀರದ ಇಂದಿನ ಸಮಸ್ಯೆಗೆ ಮೊದಲ ಪ್ರಧಾನಿ ನೆಹರೂ ಅವರೇ ಮೂಲ ಕಾರಣ. ನೆಹರೂ ಭಾರತದ ಆಶಯ ಬದಿಗೊತ್ತಿ ಚೀನಾವನ್ನು ಮಹಾನ್‌ ದೇಶ ಎಂದು ಕರೆದಿದ್ದಲ್ಲದೇ ಅದರ ಪರ ಲಾಬಿ ನಡೆಸಿದ್ದರು. ಸ್ವಾತಂತ್ರ್ಯೋತ್ತರದ ದಾಖಲೆಗಳು ಇದನ್ನು ಸಾರುತ್ತವೆ.

- ಅರುಣ್‌ ಜೇಟ್ಲಿ, ವಿತ್ತ ಸಚಿವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ