ಆ್ಯಪ್ನಗರ

ಕಾವೇರಿ ಗಂಗೆಗಿಂತಲೂ ಕಲುಷಿತ!

ದೇಶದ ಪ್ರಮುಖ ನದಿಗಳಿಗೆ ಹೋಲಿಸಿದರೆ ಸಮುದ್ರಕ್ಕೆ ಸೇರುವ ನೀರಿನ ಪ್ರಮಾಣ ಕಡಿಮೆ, ಆದರೆ ನದಿ ಒಡಲಲ್ಲಿ ಅಪಾಯಕಾರಿ ರಾಸಾಯನಿಕಗಳ ಕಲ್ಮಷ ಮಾತ್ರ ಭಯಂಕರ. ಇದು ಕಾವೇರಿ ನದಿಯ ಸ್ಥಿತಿ.

Vijaya Karnataka 24 Dec 2017, 7:55 am

ಚೆನ್ನೈ: ದೇಶದ ಪ್ರಮುಖ ನದಿಗಳಿಗೆ ಹೋಲಿಸಿದರೆ ಸಮುದ್ರಕ್ಕೆ ಸೇರುವ ನೀರಿನ ಪ್ರಮಾಣ ಕಡಿಮೆ, ಆದರೆ ನದಿ ಒಡಲಲ್ಲಿ ಅಪಾಯಕಾರಿ ರಾಸಾಯನಿಕಗಳ ಕಲ್ಮಷ ಮಾತ್ರ ಭಯಂಕರ. ಇದು ಕಾವೇರಿ ನದಿಯ ಸ್ಥಿತಿ. ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾಲಯವು ನಡೆಸಿದ ಸರಕಾರಿ ಪ್ರಾಯೋಜಿತ ಅಧ್ಯಯನದಲ್ಲಿ ಈ ಕಳವಳಕಾರಿ ಸಂಗತಿ ತಿಳಿದುಬಂದಿದೆ.

ಕಾವೇರಿಯಿಂದ ಪ್ರತಿ ವರ್ಷ 8.3 ಕ್ಯೂಬಿಕ್‌ ಕಿಲೋಮೀಟರ್‌ ನದಿ ನೀರು ಸಾಗರ ಸೇರುತ್ತಿದೆ. ಇದರ ಪ್ರತಿ ಲೀಟರ್‌ ನೀರಿನಲ್ಲಿ ಒಟ್ಟು ಕರಗುವ ಘನವಸ್ತುಗಳ (ಟಿಡಿಎಸ್‌) ಮಟ್ಟ 753 ಮಿಲಿಗ್ರಾಂ ತಲುಪಿದೆ. ಇದು ಗಂಗಾ ನದಿಯ ಟಿಡಿಎಸ್‌ ಪ್ರಮಾಣಕ್ಕಿಂತ ಐದು ಪಟ್ಟು ಹೆಚ್ಚು ಎಂದು ಇದೇ ಡಿಸೆಂಬರ್‌ 9ರಂದು ಬಿಡುಗಡೆಗೊಂಡ ಅಂತಿಮ ವರದಿಯಲ್ಲಿ ತಿಳಿಸಲಾಗಿದೆ.

ಪವಿತ್ರ ಕಾವೇರಿಯ ಒಡಲು ಕಲ್ಮಷಗೊಳ್ಳಲು ತಮಿಳುನಾಡು ಮತ್ತು ಕರ್ನಾಟಕ ಎರಡೂ ರಾಜ್ಯಗಳ ಪಾಪದ ಪಾಲಿದೆ. ಮೇಕೆದಾಟು, ಶ್ರೀರಂಗಪಟ್ಟಣ, ಕಂಡಿಯೂರು, ಅಪ್ಪಕುದಥನ್‌, ಪನ್ನವಾಡಿ ಮತ್ತು ರುದ್ರಪಟ್ಟಣ ಸೇರಿದಂತೆ ಇನ್ನು ಹಲವು ಕಡೆಯ ಅಂತರ್ಜಲ ರಾಸಾಯನಿಕಗಳಿಂದ ಹದಗೆಟ್ಟಿದ್ದು ಅದು ನದಿಯ ಒಡಲು ವಿಷಯುಕ್ತಗೊಳ್ಳಲು ಕಾರಣ. ಇದರಿಂದ ಕಾವೇರಿ ನೀರು ನೀರಾವರಿ ಹಾಗೂ ಕುಡಿಯಲು ಅನರ್ಹಗೊಳ್ಳುತ್ತಿದೆ ಎಂದು ಎಚ್ಚರಿಸಿದೆ.

ಈ ಪುಣ್ಯನದಿಯ ಪಾತ್ರದಲ್ಲಿ ತಲೆ ಎತ್ತಿರುವ ಟೆಕ್ಸ್‌ಟೈಲ್‌, ಬಣ್ಣ ಹಾಕುವ ಉದ್ಯಮಗಳು (ಡೈಯಿಂಗ್‌), ಸಿಮೆಂಟ್‌ ಮತ್ತು ರಾಸಾಯನಿಕ ಕಾರ್ಖಾನೆಗಳು ಟನ್‌ಗಟ್ಟಲೆ ವಿಷಯುಕ್ತ ಘನ ತ್ಯಾಜ್ಯಗಳನ್ನು ನದಿ ನೀರಿಗೆ ಸೇರಿಸುತ್ತಿವೆ ಎಂದು ವರದಿ ಅಪಾಯದ ಮೂಲವನ್ನು ಶೋಧಿಸಿದೆ.

ಕರ್ನಾಟಕದ ತಲಕಾವೇರಿಯಲ್ಲಿ ಜನಿಸುವ ನದಿ ತಮಿಳುನಾಡಿನ ಪೂಂಪುಹಾರ್‌ವರೆಗೆ ಸಾಗಿ ಬಂಗಾಳ ಕೊಲ್ಲಿಗೆ ಸೇರುತ್ತದೆ. 800 ಕಿ.ಮೀ ಉದ್ದಕ್ಕೂ ನದಿಯ ಇಕ್ಕೆಲಗಳಲ್ಲಿ ಆವರಿಸಿರುವ ಅಪಾಯಕಾರಿ ಮಾನವ ಚಟುವಟಿಕೆಗಳನ್ನು ಕೇಂದ್ರೀಕರಿಸಿ ಈ ಅಧ್ಯಯನ ನಡೆಸಲಾಗಿದೆ.

***

ಇತರೆ ನದಿಗಳಿಗೆ ಹೋಲಿಸಿದರೆ ವಿಶೇಷವಾಗಿ ಉದ್ಯಮ ವಲಯದ ಸಮೀಪ, ಕರಾವಳಿ ಮತ್ತು ಉಪ ನದಿಗಳ ಸಂಗಮ ತಾಣದಂತಹÜ ಕಡೆಗಳಲ್ಲಿ ಕಾವೇರಿಯ ನೀರಿನಲ್ಲಿ ಸೋಡಿಯಂ, ಕ್ಲೋರಿನ್‌ನಂತಹ ಅಯಾನುಗಳ ಪ್ರಮಾಣ ಅತಿ ಹೆಚ್ಚಾಗಿ ಕಾಣಿಸಿದೆ.

- ಪ್ರೊ.ಎಲ್‌. ಇಳಂಗೋ, ಅಧ್ಯಯನ ತಂಡದ ಮುಖ್ಯಸ್ಥ

ಕಲುಷಿತ ಕಾವೇರಿಯ ಅಪಾಯವೇನು?

- ಕುಡಿಯುವ ನೀರಿನಲ್ಲಿ ಸೋಡಿಯಂ ಪ್ರಮಾಣ ಮಿತಿಮೀರಿ ಹೆಚ್ಚುವುದರಿಂದ ರಕ್ತದೊತ್ತಡ (ಬಿಪಿ) ಹೆಚ್ಚುತ್ತದೆ.

- ಜನರ ಸಂತಾನೋತ್ಪತ್ತಿ ಸಾಮರ್ಥ್ಯ‌ಕ್ಕೂ ದೊಡ್ಡ ಪೆಟ್ಟು ಬೀಳುತ್ತದೆ.

ನದಿ ಟಿಡಿಎಸ್‌ (ಮಿ.ಗ್ರಾಂ/ಲೀ) ಸಾಗರ ಸೇರುವ ಪ್ರಮಾಣ (ಕ್ಯೂ.ಮೀ/ವರ್ಷಕ್ಕೆ)

ಕಾವೇರಿ 753 8

ಗಂಗಾ 130 493

ಕೃಷ್ಣಾ 320 30

ಗೋದಾವರಿ 200 105

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ