ಆ್ಯಪ್ನಗರ

ಎಸ್ಸಿ/ಎಸ್ಟಿ ಬಡ್ತಿ ಮೀಸಲು ಪರ ಕೇಂದ್ರ ಪ್ರಬಲ ವಾದ

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸರಕಾರಿ ಉದ್ಯೋಗಿಗಳಿಗೆ ಬಡ್ತಿಯಲ್ಲಿ ಮೀಸಲಾತಿ ನೀಡಲು 2006ರಲ್ಲಿ ರೂಪಿಸಿದ ಮಾನದಂಡಗಳನ್ನು ಬದಲಾಯಿಸುವಂತೆ ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ...

Vijaya Karnataka 3 Aug 2018, 10:46 pm
ಹೊಸದಿಲ್ಲಿ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸರಕಾರಿ ಉದ್ಯೋಗಿಗಳಿಗೆ ಬಡ್ತಿಯಲ್ಲಿ ಮೀಸಲಾತಿ ನೀಡಲು 2006ರಲ್ಲಿ ರೂಪಿಸಿದ ಮಾನದಂಡಗಳನ್ನು ಬದಲಾಯಿಸುವಂತೆ ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದು, ಪ್ರಬಲ ವಾದ ಮಂಡಿಸಿದೆ.
Vijaya Karnataka Web ಸಂಸತ್‌ ಭವನ
ಸಂಸತ್‌ ಭವನ


ಅಟಾರ್ನಿ ಜನರಲ್‌ ಕೆಕೆ ವೇಣುಗೋಪಾಲ್‌ ಅವರು ಸುಪ್ರೀಂ ಕೋರ್ಟ್‌ ನಲ್ಲಿ ಈ ಬಗ್ಗೆ ವಾದ ಮಂಡಿಸಿದ್ದು, ಸಾವಿರಾರು ವರ್ಷಗಳಿಂದ ಎಸ್‌ಸಿ/ಎಸ್‌ ಟಿಗಳಿಗೆ ವಂಚನೆಯಾಗಿದ್ದು, ಪರಿಶಿಷ್ಟ ನೌಕರರು ಹಿಂದುಳಿದವರೆಂದು ಭಾವಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಮುಂಬಡ್ತಿಯಲ್ಲಿ ಶೇ.22.5 ರಷ್ಟು ಮೀಸಲು ನೀಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

2006ರ ಸುಪ್ರೀಂಕೋರ್ಟ್‌ ತೀರ್ಪಿನ ಪ್ರಕಾರ, ಬಡ್ತಿಯಲ್ಲಿ ಮೀಸಲಾತಿ ನೀಡಬೇಕು ಎಂದರೆ ಉನ್ನತ ಅಧಿಕಾರಿ ವರ್ಗದಲ್ಲಿ ನಿರ್ದಿಷ್ಟ ಸಮುದಾಯದ ಅಧಿಕಾರಿಗಳ ಪ್ರಾತಿನಿಧ್ಯದ ಕೊರತೆ ಎಷ್ಟಿದೆ ಎಂಬುದನ್ನು ದಾಖಲೆ ಸಮೇತ ಒದಗಿಸಬೇಕಾಗುತ್ತದೆ. ಆದರೆ, ಯಾವುದೇ ರಾಜ್ಯ ಸರಕಾರವಾಗಲೀ ಕೇಂದ್ರ ಸರಕಾರವಾಗಲೀ ಈ ಬಗ್ಗೆ ನಿಖರ ಮಾಹಿತಿಯನ್ನು ಹೊಂದಿಲ್ಲ. ಹಾಗಾಗಿ ಬಡ್ತಿಯಲ್ಲಿ ಮೀಸಲು ನೀಡಲಾಗದು ಎಂದು ಸುಪ್ರೀಂಕೋರ್ಟ್‌ ಪದೇಪದೆ ಹೇಳುತ್ತಿದೆ.

ಇತರರ ಬಡ್ತಿಗೂ ಅಡ್ಡಿ

ಎಸ್‌ಸಿ/ಎಸ್‌ಡಿ ಉದ್ಯೋಗಿಗಳ ಸ್ಥಾನಮಾನಕ್ಕೆ ಸಂಬಂಧಿಸಿ ಪರಿಪೂರ್ಣ ಮಾಹಿತಿ ಸಂಗ್ರಹ ಸಾಧ್ಯವಿಲ್ಲ ಎಂದು ವಾದಿಸಿರುವ ಕೇಂದ್ರ, ಈ ಬಗ್ಗೆ ಇರುವ ಗೊಂದಲದಿಂದಾಗಿ ಇತರರ ಬಡ್ತಿಗೂ ತೊಂದರೆಯಾಗುತ್ತಿದೆ ಎಂದು ಹೇಳಿದೆ.

ಈ ನಡುವೆ, ಕೇಂದ್ರ ಸರಕಾರ 'ನಿಯಮಗಳಿಗೆ ಮತ್ತು ಸುಪ್ರೀಂಕೋರ್ಟ್‌ನ ಅಂತಿಮ ತೀರ್ಮಾನಕ್ಕೆ ಒಳಪಟ್ಟು' ಬಡ್ತಿ ನೀಡಬಹುದು ಎಂದು ಸುಪ್ರೀಂಕೋರ್ಟ್‌ ಸೂಚನೆ ನೀಡಿದೆಯಾದರೂ, ಮಾಹಿತಿಗಾಗಿ ಪಟ್ಟು ಹಿಡಿದಿರುವುದರಿಂದ ಗೊಂದಲ ಮುಂದುವರಿದಿದೆ.

ದಲಿತ ಅನಿವಾರ್ಯತೆ

ಮುಂದಿನ ವರ್ಷ ಲೋಕಸಭೆ ಚುನಾವಣೆ ಎದುರಿಸಬೇಕಾಗಿರುವ ಎನ್‌ಡಿಎ ಸರಕಾರ ಹಲವಾರು ಪ್ರಕರಣಗಳ ಹಿನ್ನೆಲೆಯಲ್ಲಿ ದಲಿತಾಕ್ರೋಶವನ್ನು ಎದುರಿಸುತ್ತಿದೆ. ಹೀಗಾಗಿ, ದಲಿತರನ್ನು ಒಲಿಸಿಕೊಳ್ಳಲು ಈಗಾಗಲೇ ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ ಆದೇಶವನ್ನು ಮೀರಿ ಎಸ್‌ ಸಿ/ಎಸ್‌ ಟಿ ದೌರ್ಜನ್ಯ ತಡೆ ಕಾಯಿದೆಯ ಮೂಲ ನಿಬಂಧನೆಗಳನ್ನು ಮರುಸ್ಥಾಪಿಸಲು ಹೊಸ ವಿಧೇಯಕವನ್ನೇ ಮಂಡಿಸಿದೆ. ಈಗ ಬಡ್ತಿ ಮೀಸಲು ವಿಷಯದಲ್ಲೂ ಪ್ರಬಲ ವಾದ ಮಂಡಿಸಿರುವುದು ಕುತೂಹಲಕಾರಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ