ಆ್ಯಪ್ನಗರ

7 ಹೆಂಡತಿಯರ ಗಂಡ, 6 ಜನರ ಮೇಲೆ ಲೈಂಗಿಕ ದೌರ್ಜನ್ಯ; ನಕಲಿ ಎನ್ಕೌಂಟರ್ ಸ್ಪೆಷಲಿಸ್ಟ್ ಅಂದರ್

ಹೆಚ್ಚಿಗೇನೂ ಓದದ ಈತ ತಾನೊಬ್ಬ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಹಲವು ಹೆಣ್ಣು ಮಕ್ಕಳ ಬದುಕಿಗೆ ಮುಳ್ಳಾದ. ಇತ್ತೀಚಿಗೆ ತನ್ನ ಅರ್ಧಪ್ರಾಯಕ್ಕಿಂತ ಚಿಕ್ಕ ಯುವತಿಯನ್ನು ವಿವಾಹವಾದ ಆತ ತನ್ನ ಕೃತ್ಯಗಳೀಗಿಗ ಶಿಕ್ಷೆ ಅನುಭವಿಸುತ್ತಿದ್ದಾನೆ.

TIMESOFINDIA.COM 16 Sep 2019, 1:40 pm
ಚೆನ್ನೈ: ಆತ 7ನೇ ತರಗತಿಗೆ ಶಾಲೆ ಬಿಟ್ಟಿದ್ದ. ತಾನೊಬ್ಬ ಎನ್‌ಕೌಂಟರ್ ಸ್ಪೆಷಲಿಸ್ಟ್ ಪೊಲೀಸ್ ಅಧಿಕಾರಿ ಎಂದಾತ ಎಲ್ಲರನ್ನು ನಂಬಿಸಿದ್ದ. ಇದೇ ಸೋಗಿನಲ್ಲಿ ಒಂದಲ್ಲ ಎರಡಲ್ಲ 7 ಮಂದಿಯನ್ನು ಮದುವೆಯಾಗಿದ್ದ. ಅಷ್ಟೇ ಅಲ್ಲ ಮತ್ತಾರು ಮಂದಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಇದೆಲ್ಲ ಆಗಿದ್ದು ಕೇವಲ ಎರಡು ವರ್ಷದಲ್ಲಿ. ಈ ಕಿಲಾಡಿ ನಕಲಿ ಪೊಲೀಸ್ ಈಗ ಕಂಬಿ ಎಣಿಸುತ್ತಿದ್ದಾನೆ.
Vijaya Karnataka Web Criminal


ಆರೋಪಿಯನ್ನು ರಾಜೇಶ ಪೃಥ್ವಿ ಎಂದು ಗುರುತಿಸಲಾಗಿದ್ದು 42 ವರ್ಷದ ಈತ, ತಿರುಪೂರ್ ನಿವಾಸಿಯಾಗಿದ್ದಾನೆ.

ಚೆನ್ನೈನಲ್ಲಿ ಟೆಲಿ ಮಾರ್ಕೆಂಟಿಗ್ ಸಂಸ್ಥೆಯನ್ನು ಹೊಂದಿರುವ ಈತ , ಅಲ್ಲಿ ಕೆಲಸಕ್ಕೆ ಯುವತಿಯರನ್ನು ನೇಮಕಾತಿ ಮಾಡಿಕೊಂಡು ಸೆಳೆಯಲು ಯತ್ನಿಸುತ್ತಿದ್ದ. ತಾನು ಪೊಲೀಸ್ ಸಮವಸ್ತ್ರದಲ್ಲಿರುವ ಫೋಟೋಗಳನ್ನು ತೋರಿಸಿ, ಇಬ್ಬರು ಅಪಾಯಕಾರಿ ಕ್ರಿಮಿನಲ್‌ಗಳ ಎನ್ಕೌಂಟರ್‌ನಲ್ಲಿ ಪಾಲ್ಗೊಂಡ ಬಳಿಕ ಸಮವಸ್ತ್ರ ಧರಿಸದೇ ಓಡಾಡುತ್ತಿದ್ದೇನೆ, ಎಂದು ಹೇಳಿ ಹುಡುಗಿಯರನ್ನು ನಂಬಿಸುತ್ತಿದ್ದ.

ಜೂನ್ 30 ರಂದು 18 ವರ್ಷದ ಯುವತಿಯೊಬ್ಬಳ ಪೋಷಕರು, ರಾಜೇಶ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಗಳು ಕಾಣೆಯಾಗಿದ್ದಾಳೆಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸ್ವತಃ ರಾಜೇಶ್ ಆಕೆಯನ್ನು ಅಪಹರಿಸಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿತ್ತು. ಹೀಗಾಗಿ ಪೋಷಕರು ಮದ್ರಾಸ್ ಹೈ ಕೋರ್ಟ್‌ನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಕಾರ್ಯಾಚರಣೆ ಕೈಗೊಂಡ ಪೊಲೀಸರು, ತಿರುಪೂರ್‌ನ ನೋಚಿಪಾಳ್ಯಂನಲ್ಲಿ ಸೆಪ್ಟೆಂಬರ್ 9 ರಂದು ಆಕೆಯನ್ನು ಪತ್ತೆ ಹಚ್ಚಿದರು. ರಾಜೇಶ್ ತನ್ನನ್ನು ಮದುವೆಯಾಗಿದ್ದಾನೆಂದು ಆಕೆ ಹೇಳಿದಾಗ ಪೋಷಕರು ಆಘಾತಕೊಂಡಿದ್ದಾರೆ.

ಮಗಳನ್ನು ಮನೆಗೆ ಕರೆತಂದ ಕೆಲ ದಿನಗಳ ಬಳಿಕ ರಾಜೇಶ್ ಅವರ ಮನೆಗೆ ಬಂದು, ಪತ್ನಿಯನ್ನು ತನ್ನ ಜತೆ ಕಳುಹಿಸಿಕೊಡುವಂತೆ ಗಲಾಟೆ ಮಾಡಿದ್ದಾನೆ. ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ಬಂಧಿಸಿದಾಗ ಆತನೆಷ್ಟು ಕಿಲಾಡಿ ಕ್ರಿಮಿನಲ್ ಎಂಬುದು ಬೆಳಕಿಗೆ ಬಂದಿದೆ.

ವೈದ್ಯಕೀಯ ಸೀಟು ಕೊಡಿಸುವುದಾಗಿ ಹೇಳಿ ಹಲವು ಪೋಷಕರಿಂದ ಸುಮಾರು 30 ಲಕ್ಷ ಎಗರಿಸಿದ್ದ ರಾಜೇಶ್ ತನ್ನ ಸಂಸ್ಥೆಯಲ್ಲಿ22 ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ. ಅವರಲ್ಲಿ 6 ಜನರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಮತ್ತೇಳು ಜನರನ್ನು ಮದುವೆಯಾಗಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ತಿರುಚಿ, ಕೊಯಮತ್ತೂರು, ತಿರುಪುರ್, ತಿರುಪತಿ ಮತ್ತು ಕಾಳಹಸ್ತಿಗಳಲ್ಲಿ ಆತನ ಪ್ರತ್ಯೇಕ ಸಂಸಾರವಿದೆ ಎಂದು ತಿಳಿದು ಬಂದಿದೆ. ನಕಲಿ ಸಂಸ್ಥೆ ನಡೆಸಿ ಜನರನ್ನು ವಂಚಿಸಿ ಸಂಪಾದಿಸಿದ್ದ ಹಣವನ್ನಾತ ಸಂಸಾರ ನಡೆಸಲು ವ್ಯಯಿಸುತ್ತಿದ್ದ, ಎಂದು ಪೊಲೀಸರು ತಿಳಿಸಿದ್ದಾರೆ.

ಆತನ ನಿಜ ನಾಮಧೇಯ ದಿನೇಶ್ ಎಂದಾಗಿದ್ದು, ರಾಜೇಶ್ ಪೃಥ್ವಿ ಎಂಬ ಹೆಸರಲ್ಲಿ ಆತ ನಕಲಿ ಆಧಾರ್ ಕಾರ್ಡ್ ಹೊಂದಿದ್ದ . ಹಿಂದೊಮ್ಮೆ ಬಂಧಿಸಲ್ಪಟ್ಟಿದ್ದ ಆ ಜಾಮೀನು ಪಡೆದು ಹೊರ ಬಂದ ಬಳಿಕ ಪೊಲೀಸರಿಗೆ ಚಳ್ಳೆ ಹಣ್ಣು ತೋರಿಸಿ ಓಡಾಡಿಕೊಂಡಿದ್ದ. ಶ್ರೀ ರಾಮ್ ಗುರು ದೀನಾ, ದಯಾಳನ್, ದೀನ ದಯಾಳನ್, ರಾಜೇಶ್ ಪೆರುಮಾಳ್ - ಹೀಗೆ ಅನೇಕ ನಕಲಿ ಹೆಸರುಗಳು ಆತನಿಗಿದ್ದವು, ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ