ಆ್ಯಪ್ನಗರ

ದಿಲ್ಲಿ ಹೀನಾಯ ಸೋಲಿನ ಬೆನ್ನಲ್ಲೇ 'ಛತ್ರಪತಿ ಮೋದಿ ಜಿಂದಾಬಾದ್‌' ಎಂದ ಉಮಾ ಭಾರತಿ!

ಮಂಗಳವಾರ ಪ್ರಕಟವಾಗಿರುವ ದಿಲ್ಲಿ ವಿಧಾನಸಭೆ ಫಲಿತಾಂಶ ಬಿಜೆಪಿಗೆ ತೀವ್ರ ಮುಖಭಂಗ ಉಂಟು ಮಾಡಿರುವಾಗಲೇ ಉಮಾ ಭಾರತಿ ಈ ರೀತಿಯ ವಿಡಂಬನೆಯ ಟ್ವೀಟ್‌ ಮಾಡಿರುವುದು ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

Agencies 12 Feb 2020, 8:42 pm
ಭೋಪಾಲ್‌: ದೇಶದಲ್ಲಿಇತ್ತೀಚೆಗೆ ಪ್ರಕಟಗೊಂಡ ವಿಧಾನಸಭೆಗಳ ಚುನಾವಣೆ ಫಲಿತಾಂಶವು ಪ್ರಧಾನಿ ನರೇಂದ್ರ ಮೋದಿ ಅವರು ಅಸಾಧಾರಣ ನಾಯಕ, ಸರಿಸಾಟಿ ಇರದ 'ಛತ್ರಪತಿ' ಎನ್ನುವುದನ್ನು ಬಿಂಬಿಸಿವೆ ಎಂದು ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ ವಿಡಂಬನೆ ಮಿಶ್ರಿತ ಟ್ವೀಟ್‌ ಮಾಡಿದ್ದಾರೆ.
Vijaya Karnataka Web Uma Bharti


''ಲೋಕಸಭೆ ಚುನಾವಣೆಗಿಂತ ಮೊದಲಿನಿಂದ ಹಿಡಿದು ಇದುವರೆಗೆ, ಎರಡೂವರೆ ವರ್ಷಗಳಲ್ಲಿ ಅನೇಕ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆದು ಹೋಗಿವೆ. ಅವುಗಳ ಫಲಿತಾಂಶವು ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ವಿಷಯದಲ್ಲಿ ಸ್ಪಷ್ಟ ಸಂದೇಶವೊಂದನ್ನು ಸಾರಿವೆ. ಬಿಜೆಪಿ ಒಳಗೆ ಹಾಗೂ ದೇಶದಲ್ಲಿ ಅವರಿಗೆ ಸರಿಸಾಟಿಯಾಗುವ ಯಾವೊಬ್ಬ ನಾಯಕನೂ ಇಲ್ಲ ಎನ್ನುವುದನ್ನು ಆ ಫಲಿತಾಂಶಗಳು ಸಾಬೀತುಪಡಿಸಿವೆ,'' ಎಂದು ಬುಧವಾರ ಹಿಂದಿ ಭಾಷೆಯಲ್ಲಿ ಟ್ವೀಟಿಸಿದ್ದಾರೆ.

ಮಂಗಳವಾರ ಪ್ರಕಟವಾಗಿರುವ ದಿಲ್ಲಿ ವಿಧಾನಸಭೆ ಫಲಿತಾಂಶ ಬಿಜೆಪಿಗೆ ತೀವ್ರ ಮುಖಭಂಗ ಉಂಟು ಮಾಡಿರುವಾಗಲೇ ಉಮಾ ಭಾರತಿ ಈ ರೀತಿಯ ವಿಡಂಬನೆಯ ಟ್ವೀಟ್‌ ಮಾಡಿರುವುದು ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಪಂಜಾಬ್‌, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನ ಚುನಾವಣೆಗಳಲ್ಲಿಯೂ ಬಿಜೆಪಿ ಸೋಲುಂಡಿದೆ. ಲೋಕಸಭೆ ಚುನಾವಣೆ ನಂತರ ನಡೆದ ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ಚುನಾವಣೆಗಳಲ್ಲೂ ಪಕ್ಷ ಹಿನ್ನಡೆ ಅನುಭವಿಸಿದೆ.

''ಇಡೀ ದೇಶದ ಜನ ಮೋದೀಜಿ ಅವರನ್ನು ಬಿಗಿದಪ್ಪಿದ್ದಾರೆ. ಛತ್ರಪತಿ ಮೋದಿ ಜಿಂದಾಬಾದ್‌,'' ಎಂದು ಉಮಾ ಭಾರತಿ ಹೇಳಿದ್ದಾರೆ. 'ಛತ್ರಪತಿ' ಎನ್ನುವ ಗುಣವಾಚಕ ಪದವು ಮರಾಠ ಸಾಮ್ರಾಟ ಛತ್ರಪತಿ ಶಿವಾಜಿ ಅವರನ್ನು ಕುರಿತದ್ದಾಗಿದೆ. ಇತ್ತೀಚೆಗೆ ಬಿಜೆಪಿ ನಾಯಕರೊಬ್ಬರು ಬರೆದ ಪುಸ್ತಕದಲ್ಲಿ ಮೋದಿ ಅವರನ್ನು ಛತ್ರಪತಿ ಶಿವಾಜಿಗೆ ಹೋಲಿಕೆ ಮಾಡಲಾಗಿತ್ತು. ಇದನ್ನೇ ಉಮಾ ಭಾರತಿಯವರು ವಿಡಂಬನೆಗೆ ಬಳಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ