ಆ್ಯಪ್ನಗರ

ಕಾಶ್ಮೀರದಲ್ಲಿ ಭದ್ರತಾ ಪಡೆಯಿಂದ ಮೂಸಾ ಉತ್ತರಾಧಿಕಾರಿಯ ಹತ್ಯೆ: ಉಗ್ರ ಸಂಘಟನೆಗಳ ಬೇರು ಕಟ್‌

ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಗಳು ಉತ್ತರಾಧಿಕಾರಿಯನ್ನು ಹೊಡೆದುರುಳಿಸಿದ್ದು, ಉಗ್ರ ಸಂಘಟನೆಗಳ ಬೇರು ಸದ್ಯಕ್ಕೆ ಕಿತ್ತೊಗೆಯಲಾಗಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ತ್ರಾಲ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಲೋನ್‌ ಹಾಗೂ ಆತನ ಇಬ್ಬರು ಸಹಚರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ .

Vijaya Karnataka Web 24 Oct 2019, 7:41 am
ಶ್ರೀನಗರ: ಪಾಕಿಸ್ತಾನ ಪೋಷಿತ ಉಗ್ರ ಸಂಘಟನೆ ಅಲ್‌ ಕೈದಾ ಕಾಶ್ಮೀರ ಕಣಿವೆಯಲ್ಲಿ ಬೇರೂರಲು ಕಾರಣನಾದ ಉಗ್ರ ಝಾಕೀರ್‌ ಮೂಸಾನ ಉತ್ತರಾಧಿಕಾರಿ ಎಂದೇ ಬಿಂಬಿತನಾಗಿದ್ದ ಉಗ್ರ ಹಮೀದ್‌ ಲೋನ್‌ ಅಲಿಯಾಸ್‌ ಹಮೀದ್‌ ಲೆಲ್ಹಾರಿಯನ್ನು ಹತ್ಯೆಗೈಯ್ಯುವ ಮೂಲಕ ರಾಜ್ಯದಲ್ಲಿ ಅಲ್‌ ಕೈದಾವನ್ನು ಸದ್ಯಕ್ಕೆ ಬೇರು ಸಮೇತ ಕಿತ್ತೊಗೆಯಲಾಗಿದೆ.
Vijaya Karnataka Web j-k-zakir-musas-successor-hamid-lelhari


ಅಲ್‌ ಕೈದಾದ ಕಾಶ್ಮೀರ ವಿಭಾಗ ' ಅನ್ಸರ್‌ ಘಾಜ್ವತ್‌-ಉಲ್‌ ಹಿಂದ್‌' (ಎಜಿಎಚ್‌) ಉಸ್ತುವಾರಿಯನ್ನು ಹಮೀದ್‌ ಲೋನ್‌ ವಹಿಸಿಕೊಂಡಿದ್ದ. ಅಲ್ಲದೇ ಜೈಷೆ ಮೊಹಮ್ಮದ್‌ ಸೇರಿದಂತೆ ವಿವಿಧ ಉಗ್ರ ಸಂಘಟನೆಗಳ ನಡುವೆ ಸಮನ್ವಯಕಾರನಾಗಿಯೂ ಕೆಲಸ ಮಾಡುತ್ತಿದ್ದ. ಮಂಗಳವಾರ ರಾತ್ರಿ ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ತ್ರಾಲ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಲೋನ್‌ ಹಾಗೂ ಆತನ ಇಬ್ಬರು ಸಹಚರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ ಎಂದು ಜಮ್ಮು-ಕಾಶ್ಮೀರ ಪೊಲೀಸ್‌ ಮಹಾನಿರ್ದೇಶಕ ದಿಲ್‌ಬಾಗ್‌ ಸಿಂಗ್‌ ಹೇಳಿದ್ದಾರೆ.

ಕಣಿವೆಯಲ್ಲಿಎಜಿಎಚ್‌ ಪ್ರಾಬಲ್ಯ ಸಾಧಿಸಿದ ಕೂಡಲೇ ಅದರ ನೆರವಿನಿಂದ ಕಾಶ್ಮೀರದಲ್ಲಿ ಸಾಮ್ರಾಜ್ಯ ವಿಸ್ತರಣೆಗೆ ಉಗ್ರ ಸಂಘಟನೆ ಜೈಷೆ ಮೊಹಮ್ಮದ್‌ ಕೂಡ ತುದಿಗಾಲಲ್ಲಿ ನಿಂತಿತ್ತು ಎಂದು ಗುಪ್ತಚರ ದಳ ಈ ಮುಂಚೆಯೇ ಎಚ್ಚರಿಸಿತ್ತು. ಪ್ರಮುಖ ಮುಖಂಡರನ್ನು ಕಳೆದುಕೊಂಡಿರುವ ಎಜಿಎಚ್‌ಗೆ ಸದ್ಯ ಉಳಿದಿರುವುದು ಭೂಗತ ಬೆಂಬಲಿಗರು ಮಾತ್ರ. ಅಂತಹವರು ಸದ್ಯ ತಲೆಯೆತ್ತುವ ಸಾಧ್ಯತೆ ಕಡಿಮೆ ಎಂದು ಸಿಂಗ್‌ ಹೇಳಿದ್ದಾರೆ.

ಆ.5ರಂದೇ ರಾಜ್ಯ ಪ್ರವೇಶ:
ಕಳೆದ ಆಗಸ್ಟ್‌ 5ರಂದು ಕೇಂದ್ರ ಸರಕಾರವು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದತಿಯನ್ನು ಘೋಷಿಸಿದ್ದರಿಂದ ಕಂಗೆಟ್ಟ ಪಾಕಿಸ್ತಾನವು ಅದೇದಿನ ಬಹುದೊಡ್ಡ ಸಂಖ್ಯೆಯಲ್ಲಿಉಗ್ರರನ್ನು ಕಾಶ್ಮೀರದ ಉತ್ತರ ಹಾಗೂ ದಕ್ಷಿಣ ಭಾಗಗಳಿಗೆ ನುಗ್ಗಿಸಿದೆ. ರಾಜೌರಿ, ಪೂಂಛ್‌, ಹೀರಾ ನಗರ, ಸಾಂಬಾ, ಉರಿ, ಮಚ್ಛಿಲ್‌, ಕೇರನ್‌, ಗುರೇಜ್‌ ಸೆಕ್ಟರ್‌ಗಳಲ್ಲಿಪಾಕ್‌ ಸೈನಿಕರಿಂದ ಸರಣಿ ಕದನ ವಿರಾಮ ಉಲ್ಲಂಘನೆ ನಿರಂತರವಾಗಿ ನಡೆಯುತ್ತಿರುವುದೇ ಇದಕ್ಕೆ ಸಾಕ್ಷಿ. ನಾವು ಈಗಾಗಲೇ ಒಳನುಸುಳಿರುವ ಉಗ್ರರ ಅಡಗುತಾಣಗಳನ್ನು ಪತ್ತೆ ಮಾಡಿದ್ದೇವೆ. ಅವರನ್ನು ನಿರ್ಮೂಲನೆ ಮಾಡಲಾಗುತ್ತಿದೆ ಎಂದು ಸಿಂಗ್‌ ವಿವರಿಸಿದ್ದಾರೆ.

ಪಿಒಕೆ ದಾಳಿಗೆ 18 ಉಗ್ರರು ಬಲಿ:
ಅಕ್ಟೋಬರ್‌ 19 ಹಾಗೂ 20ರಂದು ಗಡಿ ನಿಯಂತ್ರಣ ರೇಖೆಯಿಂದ ಪಾಕ್‌ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ಭಾರತೀಯ ಯೋಧರು ನಡೆಸಿದ ದಾಳಿಯಲ್ಲಿ 18 ಉಗ್ರರು ಹಾಗೂ 16 ಪಾಕ್‌ ಸೈನಿಕರು ಮೃತಪಟ್ಟಿದ್ದಾರೆ ಎಂದು ಸೇನೆ ಬುಧವಾರ ಮಾಹಿತಿ ನೀಡಿದೆ. ಪಿಒಕೆಯಲ್ಲಿನ ನೀಲಂ ಕಣಿವೆಯಲ್ಲಿನ ಉಗ್ರರ ಶಿಬಿರಗಳನ್ನು ಗುರಿಯಾಗಿಸಿ ಭಾರತೀಯ ಸೇನೆ ಆರ್ಟಿಲರಿ ಗನ್‌ಗಳಿಂದ ದಾಳಿ ನಡೆಸಿತ್ತು. ಪಾಕ್‌ ಪದೆಪದೆ ನಡೆಸುತ್ತಿರುವ ಕದನ ವಿರಾಮ ಉಲ್ಲಂಘನೆ ಹಾಗೂ ಉಗ್ರರ ಒಳನುಸುಳುವಿಕೆಗೆ ಉತ್ತರ ನೀಡಲು ಭಾರತೀಯ ಸೇನೆ ದಾಳಿ ನಡೆಸಿತ್ತು.

ಪಾಕ್‌ನ ಪ್ಲ್ಯಾನ್‌ ಕೆ2 ಬಯಲು:
ಭಾರತದಲ್ಲಿಉಗ್ರರ ದಾಳಿ ಮೂಲಕ ಆತಂಕದ ವಾತಾವರಣ ನಿರ್ಮಿಸಲು ಹವಣಿಸುತ್ತಿರುವ ಪಾಕ್‌ ಸೇನೆಯ ಗುಪ್ತಚರ ಸಂಸ್ಥೆ 'ಐಎಸ್‌ಐ' ಸದ್ಯ ಖಲಿಸ್ತಾನ ಉಗ್ರರೊಂದಿಗೆ ಕೈಜೋಡಿಸಿ ಕಾಶ್ಮೀರ ಖಲಿಸ್ತಾನ ರೆಫರೆಂಡಮ್‌ ಫ್ರಂಟ್‌ (ಕೆಕೆಆರ್‌ಎಫ್‌) ಎಂಬ ಹೊಸ ಉಗ್ರ ಸಂಘಟನೆ ಹುಟ್ಟುಹಾಕಿದೆ. ಪಂಜಾಬ್‌ನಲ್ಲಿಉಗ್ರ ಸಂಘಟನೆಗಳಿಗೆ ಪುನಶ್ಚೇತನ ತುಂಬಲು ಡ್ರೋನ್‌ಗಳ ಮೂಲಕ ಶಸ್ತಾ್ರಸ್ತ್ರಗಳನ್ನು ಎಲ್‌ಒಸಿ ಬಳಿ ಪಾಕ್‌ ಸೇನೆ ಎಸೆಯುತ್ತಿದೆ. ಇದಕ್ಕೆ ಕೆ2(ಕಾಶ್ಮೀರ+ಖಲಿಸ್ತಾನ) ಪ್ಲ್ಯಾನ್‌ ಎಂದು ಗೌಪ್ಯ ಹೆಸರು ನೀಡಲಾಗಿದೆ. ಮಾನವ ರಹಿತ ವೈಮಾನಿಕ ವಾಹನಗಳನ್ನು (ಯುಎವಿ) ಪಾಕ್‌ ಸೇನೆ ವತಿಯಿಂದ ಬಬ್ಬರ್‌ ಖಾಲ್ಸಾ ಖಲಿಸ್ತಾನ ಪಡೆಗೆ ನೀಡಲಾಗುತ್ತಿದೆ ಎಂದು ಗುಪ್ತಚರ ಮೂಲಗಳು ಪತ್ತೆ ಮಾಡಿವೆ. ಪಂಜಾಬ್‌ ಹಾಗೂ ಜಮ್ಮು-ಕಾಶ್ಮೀರದಲ್ಲಿವಿಧ್ವಂಸಕ ಕೃತ್ಯಗಳನ್ನು ಎಸಗುವುದೇ ಕೆಕೆಆರ್‌ಎಫ್‌ ಗುರಿಯಾಗಿದೆ. ಪಾಕ್‌ನ ಈ ಯೋಜನೆ ಸುಳಿವು ಪಡೆದ ಕೇಂದ್ರ ಗೃಹ ಸಚಿವಾಲಯವು, ಪಂಜಾಬ್‌ನಲ್ಲಿರಾಷ್ಟ್ರೀಯ ತನಿಖಾ ದಳ, ರಾ, ಗುಪ್ತಚರ ಇಲಾಖೆ, ಗಡಿ ಭದ್ರತಾ ಪಡೆ ಮತ್ತು ಪಂಜಾಬ್‌ ಪೊಲೀಸರ ಜಂಟಿ ಉಗ್ರ ನಿಗ್ರಹ ಪಡೆಯನ್ನು ಸ್ಥಾಪಿಸಲು ತೀರ್ಮಾನಿಸಿದೆ. ಸೈಬರ್‌ ದಾಳಿಗಳನ್ನು ಕೂಡ ನಿಗ್ರಹಿಸುವ ಆಧುನಿಕ ತಂತ್ರಜ್ಞಾನ ವ್ಯವಸ್ಥೆಯನ್ನು ಈ ಪಡೆ ಹೊಂದಿರಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ