ಆ್ಯಪ್ನಗರ

ಚೌಧರಿ ಎಸಗಿದ ಮಹಾ ಪ್ರಮಾದ

ಚೌಧರಿಯವರ ಮಾತಿನ ಓಘ ಬೇರೆ ಸ್ವರೂಪ ಪಡೆಯುತ್ತಿರುವುದನ್ನು ಅರ್ಥ ಮಾಡಿಕೊಂಡ ಸೋನಿಯಾ ಗಾಂಧಿ ಅವರತ್ತ ತಿರುಗಿದರೆ, ರಾಹುಲ್‌ ಗಾಂಧಿ ಪೆಚ್ಚು ಮೋರೆ ಹಾಕಿಕೊಂಡು ತಲೆ ತಗ್ಗಿಸಿದರು.

PTI 7 Aug 2019, 5:00 am
ಹೊಸದಿಲ್ಲಿ: ''ಜಮ್ಮು-ಕಾಶ್ಮೀರವು ಆಂತರಿಕ ಭದ್ರತೆ ವಿಷಯವೋ ಅಥವಾ ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿಷಯವೋ,'' ಎಂದು ಪ್ರಶ್ನಿಸುವ ಮೂಲಕ ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು 'ಮಹಾ ಪ್ರಮಾದ' ಎಸಗಿದರು.
Vijaya Karnataka Web adhir

ಜಮ್ಮು-ಕಾಶ್ಮೀರದಲ್ಲಿ 370 ಹಾಗೂ 35ಎ ವಿಧಿ ರದ್ದುಪಡಿಸಿದ ರಾಷ್ಟ್ರಪತಿ ಆದೇಶದ ಸ್ಥಿರೀಕರಣ ನಿರ್ಣಯ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಾಗಿಸುವ ರಾಜ್ಯ ಪುನರ್‌ವಿಂಗಡಣೆ ವಿಧೇಯಕ ಕುರಿತ ಚರ್ಚೆ ವೇಳೆ ಚೌಧರಿ ಎತ್ತಿದ ಈ ಪ್ರಶ್ನೆ ಸ್ವತಃ ಕಾಂಗ್ರೆಸ್‌ ನಾಯಕರನ್ನೇ ಮುಜುಗರಕ್ಕೆ ಸಿಲುಕಿಸಿತು. ಚೌಧರಿಯವರ ಮಾತಿನ ಓಘ ಬೇರೆ ಸ್ವರೂಪ ಪಡೆಯುತ್ತಿರುವುದನ್ನು ಅರ್ಥ ಮಾಡಿಕೊಂಡ ಸೋನಿಯಾ ಗಾಂಧಿ ಅವರತ್ತ ತಿರುಗಿದರೆ, ರಾಹುಲ್‌ ಗಾಂಧಿ ಪೆಚ್ಚು ಮೋರೆ ಹಾಕಿಕೊಂಡು ತಲೆ ತಗ್ಗಿಸಿದರು.
''ನೀವು ಇದು ಆಂತರಿಕ ವಿಷಯ ಎನ್ನುತ್ತೀರಿ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರು ಜಮ್ಮು-ಕಾಶ್ಮೀರವು ದ್ವಿಪಕ್ಷೀಯ ವಿಷಯ ಎನ್ನುತ್ತಾರೆ. 1948ರಿಂದಲೂ ವಿಶ್ವಸಂಸ್ಥೆ ಜಮ್ಮು-ಕಾಶ್ಮೀರದ ಪರಿಸ್ಥಿತಿ ಮೇಲೆ ನಿಗಾ ಇರಿಸಿದೆ. ನಾವು ಶಿಮ್ಲಾ ಮತ್ತು ಲಾಹೋರ್‌ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಹೀಗಾಗಿ ಇದು ಆಂತರಿಕ ವಿಷಯವೋ, ದ್ವಿಪಕ್ಷೀಯ ವಿಷಯವೋ ಎನ್ನುವುದನ್ನು ಸ್ಪಷ್ಟಪಡಿಸಿ. ನಮಗೆ ಇದು ತಿಳಿಯಬೇಕು. ಇಡೀ ಕಾಂಗ್ರೆಸ್‌ ಪಕ್ಷ ಇದರ ಬಗ್ಗೆ ತಿಳಿದುಕೊಳ್ಳಲು ಕಾತರವಾಗಿದೆ,'' ಎಂದು ಚೌಧರಿ ಅವರು ಗೃಹ ಸಚಿವ ಅಮಿತ್‌ ಶಾ ಅವರನ್ನು ಆಗ್ರಹಿಸಿದರು. ಇದು ಆಡಳಿತ ಪಕ್ಷದ ಸದಸ್ಯರನ್ನು ಸಿಟ್ಟಿಗೆಬ್ಬಿಸಿತು.
''ನೀವು ಜನರಲ್‌ ಸ್ಟೇಟ್‌ಮೆಂಟ್‌ ನೀಡಬೇಡಿ. ನಾವು ಯಾವ ನಿಯಮ ಉಲ್ಲಂಘಿಸಿದ್ದೇವೆ ಎನ್ನುವುದನ್ನು ಸ್ಪಷ್ಟಪಡಿಸಿ. ಅದಕ್ಕೆ ನಾನು ಉತ್ತರಿಸುತ್ತೇನೆ,'' ಎಂದು ಶಾ ಉತ್ತರಿಸಿದರು. ''ಜಮ್ಮು-ಕಾಶ್ಮೀರ ಆಂತರಿಕ ವಿಷಯವಾಗಿದ್ದರೆ ವಿಶ್ವಸಂಸ್ಥೆ ಹೇಗೆ ಮಧ್ಯಪ್ರವೇಶ ಮಾಡಲು ಸಾಧ್ಯ? ನೀವು ಪಾಕ್‌ ಆಕ್ರಮಿತ ಕಾಶ್ಮೀರದ ಕುರಿತು ಯೋಚಿಸುತ್ತಿಲ್ಲ ಎಂದುಕೊಳ್ಳುತ್ತೇನೆ. ನೀವು ಎಲ್ಲಾ ನಿಯಮ ಉಲ್ಲಂಘಿಸಿದ್ದೀರಿ. ರಾತ್ರೋರಾತ್ರಿ ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತಿಸಿದ್ದೀರಿ. ಮಾತ್ರವಲ್ಲ, ಕಾಶ್ಮೀರವನ್ನೇ ಸೆರೆಮನೆಯಾಗಿ ಪರಿವರ್ತಿಸಿದ್ದೀರಿ,'' ಎಂದು ಚೌಧರಿ ಆರೋಪಿಸಿದರು.
''ನೀವು ಏನು ಹೇಳುತ್ತಿದ್ದೀರಿ? ಜಮ್ಮು-ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗ ಎಂದು ಭಾವಿಸಿಲ್ಲವೆ? ಜಮ್ಮು-ಕಾಶ್ಮೀರ ಎಂದರೆ ಪಾಕ್‌ ಆಕ್ರಮಿತ ಕಾಶ್ಮೀರ ಹಾಗೂ ಅಕ್ಸಾಯ್‌ ಚಿನ್‌ ಪ್ರದೇಶವೂ ಸೇರಿಕೊಂಡಿದೆ,'' ಎಂದು ಅಮಿತ್‌ ಶಾ ಉತ್ತರಿಸಿದರು.
.........
ನಾಯತ್ವ ಇಲ್ಲದ ಕಾಂಗ್ರೆಸ್‌ ಈಗ ಮೆದುಳೂ ಇಲ್ಲದ ಪಕ್ಷವಾಗಿದೆ. ಸೋಲಿನಿಂದ ಕಂಗೆಟ್ಟಿರುವ ಪಕ್ಷ ಬೌದ್ಧಿಕ ದಿವಾಳಿತನ ಅನುಭವಿಸುತ್ತಿದೆ ಎನ್ನುವುದನ್ನು ಚೌಧರಿಯವರ ಹೇಳಿಕೆ ನಿರೂಪಿಸಿದೆ. ಇಂತಹ ಹೇಳಿಕೆ ನೀಡುತ್ತಿರುವಾಗ ಆ ಪಕ್ಷದ ಯಾರೊಬ್ಬರೂ ಅವರನ್ನು ತಡೆಯಲೂ ಮುಂದಾಗಲಿಲ್ಲ!
- ಮುಕ್ತಾರ್‌ ಅಬ್ಬಾಸ್‌ ನಕ್ವಿ, ಕೇಂದ್ರ ಸಚಿವ
........

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ