ಆ್ಯಪ್ನಗರ

ಸರ್‌ ನೇಮ್‌ ಅನ್ನೇ ರಾಜಕೀಯ ಬ್ರ್ಯಾಂಡ್ ಮಾಡಿಕೊಂಡಿರುವ ಕಾಂಗ್ರೆಸ್‌: ಜೇಟ್ಲಿ

ಕುಟುಂಬದ ಅಡ್ಡ ಹೆಸರನ್ನು ರಾಜಕೀಯ ಬ್ರ್ಯಾಂಡ್ ಆಗಿ ಬಳಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ವಿರುದ್ಧ ಅರುಣ್ ಜೇಟ್ಲಿ ವಾಗ್ದಾಳಿ ನಡೆಸಿದರು.

TIMESOFINDIA.COM 28 Nov 2018, 10:29 am
ಹೊಸದಿಲ್ಲಿ: ಕುಟುಂಬದ ಅಡ್ಡ ಹೆಸರನ್ನು ಕಾಂಗ್ರೆಸ್ ರಾಜಕೀಯ ಬ್ರ್ಯಾಂಡ್ ಆಗಿ ಬಳಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ವಿರುದ್ಧ ಪ್ರಖರ ವಾಕ್ ಪ್ರಹಾರ ನಡೆಸಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ, 2019ರ ಸಾರ್ವತ್ರಿಕ ಚುನಾವಣೆಯನ್ನು ಸಾಮಾನ್ಯ ಪೋಷಕರ ಪುತ್ರ ಹಾಗೂ ಜನಪ್ರಿಯ ಪೋಷಕರ ಪುತ್ರನ ನಡುವಿನ ನೇರಾನೇರ ಹಣಾಹಣಿ ಎಂದು ಕಾಂಗ್ರೆಸ್ ಭಾವಿಸುವುದಾದರೆ, ನಾವು ಸಂತೋಷದಿಂದ ಈ ಸವಾಲನ್ನು ಸ್ವೀಕರಿಸುತ್ತೇವೆ ಎಂದು ಹೇಳಿದ್ದಾರೆ.
Vijaya Karnataka Web arun


ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ 'What was the name of Sardar Patel's father' ಎಂಬ ಶೀರ್ಷಿಕೆಯಲ್ಲಿ ಬರೆದುಂಕೊಂಡಿರುವ ಜೇಟ್ಲಿ, ಕಾಂಗ್ರೆಸ್‌ನಂಥ ಕುಟುಂಬ ರಾಜಕಾರಣದ ಪಕ್ಷದಲ್ಲಿ ಪ್ರತಿಭೆ ಮತ್ತು ಅರ್ಹತೆಗೆ ಬೆಲೆ ಇಲ್ಲ. ಸರ್‌ ನೇಮ್ ಹೊಂದಿರುವ ಕುಟುಂಬದೊಂದಿಗೆ ಸುತ್ತುವರಿಯುವವರಿಗೆ ಮಾತ್ರ ಬೆಲೆ ಸಿಗುತ್ತದೆ ಎಂದು ಜರಿದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಕುಟುಂಬ ಸದಸ್ಯರನ್ನು ರಾಜಕೀಯ ಚರ್ಚೆಯಲ್ಲಿ ಎಳೆದು ತರುವ ಮೂಲಕ ಕೆಲ ಕಾಂಗ್ರೆಸ್ ನಾಯಕರು ವಿವಾದ ಸೃಷ್ಟಿಸಿದ ಬೆನ್ನಲ್ಲೇ ಜೇಟ್ಲಿ ಈ ಪೋಸ್ಟ್ ಮಾಡಿದ್ದಾರೆ.

ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್‌ನವರು ಪ್ರಧಾನಿ ಮೋದಿ ಅವರ ತಾಯಿಯ ವಯಸ್ಸನ್ನೂ ಎಳೆದು ತರುತ್ತಾರೆ. ಪ್ರಧಾನಿಯ ಅಪ್ಪ ಯಾರೆಂದು ಗೊತ್ತಿಲ್ಲ ಎಂಬಂತಹ ಹೇಳಿಕೆಗಳನ್ನೂ ನೀಡುತ್ತಾರೆ. ಇದು ಆ ಪಕ್ಷದ ಅಹಂಕಾರವನ್ನು ತೋರ್ಪಡಿಸುತ್ತದೆಯೇ ಹೊರತು ಬೇರೇನೂ ಅಲ್ಲ. ಕಾಂಗ್ರೆಸ್‌ನವರು ಮೊದಲು ಸರ್ದಾರ್‌ ವಲ್ಲಭಭಾಯಿ ಪಟೇಲರ ತಂದೆ ಯಾರೆಂದು ಹೇಳಲಿ ಎಂದು ಒತ್ತಾಯಿಸಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸಾಮಾನ್ಯ ಪೋಷಕರೊಬ್ಬರ ಪುತ್ರರಾಗಿರುವ ನರೇಂದ್ರ ಮೋದಿ ಹಾಗೂ ಪ್ರತಿಭೆ ಮತ್ತು ಅರ್ಹತೆ ಇಲ್ಲದೆಯೇ ಕೇವಲ ಮನೆತನದ ನಾಮ ಬಲದಿಂದಲೇ ಕಾಂಗ್ರೆಸ್‌ ಸಾರಥ್ಯ ವಹಿಸಿಕೊಂಡಿರುವ ವ್ಯಕ್ತಿ (ರಾಹುಲ್ ಗಾಂಧಿ) ನಡುವಿನ ಪೈಪೋಟಿ ಎಂದು ಕಾಂಗ್ರೆಸ್ ಒಪ್ಪಿಕೊಳ್ಳುವುದಾದರೇ, ಭಾರತೀಯ ಜನತಾ ಪಾರ್ಟಿ ಸಂತೋಷದಿಂದ ಸವಾಲು ಸ್ವೀಕರಿಸುತ್ತದೆ ಎಂದು ಜೇಟ್ಲಿ ತಿರುಗೇಟು ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ