ಆ್ಯಪ್ನಗರ

ಅಧಿಕಾರಕ್ಕಾಗಿ ಪ್ರಜಾತಂತ್ರವನ್ನೇ ಕೊಂದ ಕಾಂಗ್ರೆಸ್: ತುರ್ತು ಪರಿಸ್ಥಿತಿ 44ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ವಾಗ್ದಾಳಿ

ತುರ್ತು ಪರಿಸ್ಥಿತಿ ವಿರುದ್ಧ 'ತೀಕ್ಷ್ಣವಾಗಿ ಮತ್ತು ನಿರ್ಭಯದಿಂದ ಹೋರಾಡಿದ' ವೀರರಿಗೆ ಪ್ರಧಾನಿ ಮೋದಿ ಟ್ವೀಟ್‌ಗಳ ಮೂಲಕ ಸೆಲ್ಯೂಟ್ ಮಾಡಿದ್ದಾರೆ. ಆಗಿನ ಪ್ರಧಾನಿ ಇಂದಿರಾ ಗಾಂಧಿ 1975ರ ಜೂನ್ 25ರಂದು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. ಆ ಅವಧಿಯಲ್ಲಿ ದೇಶದ ಜನತೆ ಪಟ್ಟ ಕಷ್ಟಗಳನ್ನು ವಿವರಿಸುವ ವೀಡಿಯೋ ಒಂದನ್ನು ಪ್ರಧಾನಿ ಮೋದಿ ಶೇರ್ ಮಾಡಿಕೊಂಡಿದ್ದಾರೆ. 'ಭಾರತದ ಪ್ರಜಾಸತ್ತಾತ್ಮಕ ಶಕ್ತಿಗಳು ಸರ್ವಾಧಿಕಾರಿ ಮನಸ್ಥಿತಿಯ ವಿರುದ್ಧ ಗೆಲುವು ಸಾಧಿಸಿದವು' ಎಂದು ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Times Now 25 Jun 2019, 12:55 pm
ಹೊಸದಿಲ್ಲಿ: ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆಯಾದ 45ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸರಣಿ ಟ್ವೀಟ್‌ಗಳ ಮೂಲಕ ಕಾಂಗ್ರೆಸ್ ಪಕ್ಷದ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ತುರ್ತು ಪರಿಸ್ಥಿತಿ ವಿರುದ್ಧ 'ತೀಕ್ಷ್ಣವಾಗಿ ಮತ್ತು ನಿರ್ಭಯದಿಂದ ಹೋರಾಡಿದ' ವೀರರಿಗೆ ಪ್ರಧಾನಿ ಮೋದಿ ಟ್ವೀಟ್‌ಗಳ ಮೂಲಕ ಸೆಲ್ಯೂಟ್ ಮಾಡಿದ್ದಾರೆ.

ಆಗಿನ ಪ್ರಧಾನಿ ಇಂದಿರಾ ಗಾಂಧಿ 1975ರ ಜೂನ್ 25ರಂದು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. ಆ ಅವಧಿಯಲ್ಲಿ ದೇಶದ ಜನತೆ ಪಟ್ಟ ಕಷ್ಟಗಳನ್ನು ವಿವರಿಸುವ ವೀಡಿಯೋ ಒಂದನ್ನು ಪ್ರಧಾನಿ ಮೋದಿ ಶೇರ್ ಮಾಡಿಕೊಂಡಿದ್ದಾರೆ.


'ಭಾರತದ ಪ್ರಜಾಸತ್ತಾತ್ಮಕ ಶಕ್ತಿಗಳು ಸರ್ವಾಧಿಕಾರಿ ಮನಸ್ಥಿತಿಯ ವಿರುದ್ಧ ಗೆಲುವು ಸಾಧಿಸಿದವು' ಎಂದು ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

1975ರಿಂದ 1977ರ ವರೆಗೆ ಎರಡು ವರ್ಷಗಳ ಕಾಲ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು. ಆ ಅವಧಿಯಲ್ಲಿ ಪ್ರಜೆಗಳ ಮೂಲಭೂತ ಹಕ್ಕುಗಳೆಲ್ಲವನ್ನೂ ಅಮಾನತುಗೊಳಿಸಲಾಗಿತ್ತು. ಕಾಂಗ್ರೆಸ್‌ ವಿರೋಧಿಗಳನ್ನು, ಟೀಕಾಕಾರರನ್ನು ಜೈಲಿಗಟ್ಟಲಾಗಿತ್ತು.

ಕಾಂಗ್ರೆಸ್ ಪಕ್ಷ ತನ್ನ 'ರಾಜಕೀಯ ಅಜೆಂಡಾಗಳಿಗಾಗಿ' 1975ರಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ಕೇಂದ್ರ ಗೃಹಸಚಿವ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಟ್ವೀಟ್ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.


ತುರ್ತು ಪರಿಸ್ಥಿತಿ ವಿರುದ್ಧ ಸಮರ ಸಾರಿದ ವೀರರ ತ್ಯಾಗ ಮತ್ತು ಶೌರ್ಯಗಳನ್ನು ಶಾ ಕೊಂಡಾಡಿದ್ದಾರೆ. '1975ರಲ್ಲಿ ಇದೇ ದಿನ ಕೆಲವೇ ಮಂದಿಯ ರಾಜಕೀಯ ಹಿತಾಸಕ್ತಿಗಳಿಗಾಗಿ ದೇಶದ ಪ್ರಜಾಪ್ರಭುತ್ವವನ್ನೇ ಕೊಲೆ ಮಾಡಲಾಗಿತ್ತು. ನಾಗರಿಕರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿತ್ತು. ಪತ್ರಿಕೆಗಳ ಮೇಲೆ ನಿರ್ಬಂಧ (ಸೆನ್ಸಾರ್) ಹೇರಲಾಗಿತ್ತು. ಪ್ರಜಾಪ್ರಭುತ್ವದ ಮರುಸ್ಥಾಪನೆಗಾಗಿ ಲಕ್ಷಾಂತರ ದೇಶಭಕ್ತರು ನಾನಾ ತೆರದ ಹಿಂಸೆಗಳನ್ನು ಸಹಿಸಿಕೊಂಡು ಹೋರಾಡಿದರು' ಎಂದು ಶಾ ಟ್ವೀಟ್ ಮಾಡಿದ್ದಾರೆ.

'ಆ ಹೋರಾಟಗಾರರಿಗೆ ನನ್ನ ನಮನಗಳು' ಎಂದು ಶಾ ತಿಳಿಸಿದ್ದಾರೆ.


ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ, 'ತುರ್ತು ಪರಿಸ್ಥಿತಿ ಭಾರತದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯ' ಎಂದು ಬಣ್ಣಿಸಿದ್ದಾರೆ. '1975ರ ಜೂನ್ 25ರಂದು ತುರ್ತು ಸ್ಥಿತಿ ಹೇರಿಕೆ ಮತ್ತು ಅನಂತರದ ಅವಧಿಯಲ್ಲಿ ಜನತೆಯ ಮೇಲೆ ನಡೆದ ದೌರ್ಜನ್ಯಗಳು ಇತಿಹಾಸದಲ್ಲೇ ಕರಾಳ ಅಧ್ಯಾಯವಾಗಿದೆ' ಎಂದು ರಾಜನಾಥ್ ಟ್ವೀಟ್‌ ಮಾಡಿದ್ದಾರೆ.

'ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ಸಂವಿಧಾನದ ಸಮಗ್ರತೆಯನ್ನು ಎತ್ತಿ ಹಿಡಿಯುವುದರ ಮಹತ್ವವನ್ನು ಈ ದಿನ ಸ್ಮರಿಸಿಕೊಳ್ಳಲಾಗುತ್ತಿದೆ' ಎಂದು ಅವರು ತಿಳಿಸಿದ್ದಾರೆ.

ತುರ್ತು ಪರಿಸ್ಥಿತಿ ವಿರುದ್ಧ ಮುಂಚೂಣಿ ಹೋರಾಟ ನಡೆಸಿದ ಭಾರತೀಯ ಜನಸಂಘ ಮತ್ತು ಆರೆಸ್ಸೆಸ್‌ ಸ್ವಯಂಸೇವಕರನ್ನು 'ಅನಭಿಷಿಕ್ತ ನಾಯಕ'ರೆಂದು ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ ಶ್ಲಾಘಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ