ಆ್ಯಪ್ನಗರ

ಪುಲ್ವಾಮಾ ದಾಳಿ ಪ್ರತೀಕಾರ: ಪಾಕ್‌ ವಿರುದ್ಧ ಕ್ರಿಕೆಟ್‌ ವಾರ್‌

ಭಾರತವು ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಜತೆಗಿನ ಪಂದ್ಯಗಳನ್ನು ಬಹಿಷ್ಕರಿಸುವ ಗಂಭೀರ ಚಿಂತನೆ ನಡೆಸಿದೆ. ಇಷ್ಟೇ ಅಲ್ಲ, ವಿಶ್ವ ಕಪ್‌ ಕೂಟದಿಂದಲೇ ನೆರೆ ರಾಷ್ಟ್ರವನ್ನು ಹೊರಗಿರಿಸುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದೆ.

Vijaya Karnataka 23 Feb 2019, 5:30 am
ಹೊಸದಿಲ್ಲಿ: ಪುಲ್ವಾಮಾ ದಾಳಿಯ ಸಂಚುಕೋರ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ದೃಢ ನಿಶ್ಚಯ ಮಾಡಿರುವ ಭಾರತವು ಹಲವು ಆಯಾಮಗಳಲ್ಲಿ ಕಾರ್ಯಾಚರಿಸುತ್ತಿದೆ. ಉಗ್ರ ದಮನ, ಆರ್ಥಿಕ ನಿಬಂಧನೆ, ನೀರು ತಡೆಯ ಕಟ್ಟೆಚ್ಚರಿಕೆಗಳ ಜತೆ ದೇಶದ ಆಕ್ರೋಶವನ್ನು ಕ್ರಿಕೆಟ್‌ಗೂ ವಿಸ್ತರಿಸಲು ಮುಂದಾಗಿದೆ.
Vijaya Karnataka Web ಭಾರತ ಪಾಕಿಸ್ತಾನ ಧ್ವಜ
ಭಾರತ ಪಾಕಿಸ್ತಾನ ಧ್ವಜ


ಭಾರತವು ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಜತೆಗಿನ ಪಂದ್ಯಗಳನ್ನು ಬಹಿಷ್ಕರಿಸುವ ಗಂಭೀರ ಚಿಂತನೆ ನಡೆಸಿದೆ. ಇಷ್ಟೇ ಅಲ್ಲ, ವಿಶ್ವ ಕಪ್‌ ಕೂಟದಿಂದಲೇ ನೆರೆ ರಾಷ್ಟ್ರವನ್ನು ಹೊರಗಿರಿಸುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದೆ.

ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಜತೆ ಆಡಬಾರದು ಎಂಬ ಆಗ್ರಹ ಹೆಚ್ಚುತ್ತಿದ್ದು, ಇದಕ್ಕೆ ಕೇಂದ್ರ ಸರಕಾರ ಮನ್ನಣೆ ನೀಡುವ ಸಾಧ್ಯತೆ ಇದ್ದು, ಇದರ ಸಾಧಕ-ಭಾದಕಗಳ ವಿಮರ್ಶೆ ನಡೆದಿದೆ. ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಮತ್ತು ಕ್ರಿಕೆಟ್‌ ಆಡಳಿತ ಮಂಡಳಿ (ಐಒಸಿ) ಕ್ರಿಕೆಟ್‌ ಬಹಿಷ್ಕಾರದ ನಿರ್ಧಾರವನ್ನು ಕೇಂದ್ರ ಸರಕಾರಕ್ಕೆ ವಹಿಸಿದೆ.

ಕೂಟದಲ್ಲಿ ಭಾರತ-ಪಾಕಿಸ್ತಾನದ ನಡುವಿನ ಮೊದಲ ಪಂದ್ಯ ಜೂನ್‌ 16ರಂದು ನಡೆಯಲಿರುವುದರಿಂದ ಅದಕ್ಕೆ ಮುನ್ನ ದಿಟ್ಟ ನಿರ್ಧಾರ ತೆಗೆದುಕೊಳ್ಳುವುದು ಬಹುತೇಕ ಖಚಿತವಾಗಿದೆ.

ಈ ನಡುವೆ, ಪಾಕಿಸ್ತಾನದ ಜತೆಗೆ ಆಟವಾಡದೆ ಇದ್ದರೆ ಅದಕ್ಕೆ ಧರ್ಮಾರ್ಥವಾಗಿ ಎರಡು ಅಂಕಗಳನ್ನು ನೀಡಿದಂತಾಗುತ್ತದೆ. ಹಾಗಾಗಿ ಅದನ್ನು ಅಂಗಣದಲ್ಲೇ ಹಣಿಯಬೇಕು ಎಂಬ ವಾದವೂ ಕೇಳಿಬರುತ್ತಿದೆ. ಹೀಗಾಗಿ ಕ್ರಿಕೆಟ್‌ ವಾರ್‌ ಕುತೂಹಲ ಹೆಚ್ಚಿದೆ.

ವಿಶ್ವಕಪ್‌ನಿಂದಲೇ ಹೊರಗಿಡಲು ತಂತ್ರ

ಉಗ್ರ ಪೋಷಕ ಪಾಕಿಸ್ತಾನ ಇಡೀ ಜಗತ್ತಿಗೇ ಅಪಾಯಕಾರಿ ಎನ್ನುವುದನ್ನು ಮನವರಿಕೆ ಮಾಡಿ ವಿಶ್ವಕಪ್‌ನಿಂದಲೇ ಅದನ್ನು ಹೊರಗಿರಿಸಲು ಭಾರತ ತಯಾರಿ ನಡೆಸಿದೆ. ಶುಕ್ರವಾರ ನಡೆದ ಕ್ರಿಕೆಟ್‌ ಆಡಳಿತ ಮಂಡಳಿಯಲ್ಲಿ ಈ ಬಗ್ಗೆ ಚರ್ಚೆ ನಡೆದು ಐಸಿಸಿಗೆ ಪತ್ರ ಬರೆಯಲು ನಿರ್ಧರಿಸಲಾಗಿದೆ. ಜತೆಗೆ ಕ್ರಿಕೆಟ್‌ ಆಡುವ ರಾಷ್ಟ್ರಗಳಿಗೆ ಪ್ರತ್ಯೇಕವಾಗಿ ಪತ್ರ ಬರೆದು ಪಾಕಿಸ್ತಾನವನ್ನು ಕೂಟದಿಂದಲೇ ಹೊರಹಾಕಲು ಮನವೊಲಿಸಲು ಮುಂದಾಗಿದೆ.


ಕ್ರಿಕೆಟ್‌ ಬಹಿಷ್ಕಾರ ಯಾಕೆ ಅಗತ್ಯ?

* ಸೈನಿಕರನ್ನು ನಿರ್ದಯವಾಗಿ ಕೊಂದ ಉಗ್ರರ ಪೋಷಕ ಪಾಕಿಸ್ತಾನದ ಜತೆ ಆಟ ಆಡುವುದು ದೇಶದ ಜನರ ಭಾವನೆಗಳಿಗೆ ಮತ್ತಷ್ಟು ಘಾಸಿ ಉಂಟುಮಾಡಿದಂತೆ.

*ಜನಪ್ರಿಯ ಆಟವಾಗಿರುವ ಕ್ರಿಕೆಟ್‌ನಲ್ಲಿ ಪಾಕಿಸ್ತಾನವನ್ನು ಬಹಿಷ್ಕರಿಸುವುದರಿಂದ ಜಗತ್ತಿನ ಮುಂದೆ ಅದರ ಕುಕೃತ್ಯಗಳನ್ನು ಸಮಪರ್ಕವಾಗಿ ಬಿಚ್ಚಿಡುವ ಅವಕಾಶ.


12 ವರ್ಷಗಳಿಂದ ದ್ವಿಪಕ್ಷೀಯ ಸರಣಿ ಇಲ್ಲ

ಭಾರತವು ಪಾಕಿಸ್ತಾನದ ಜತೆಗಿನ ದ್ವಿಪಕ್ಷೀಯ ಸರಣಿಯನ್ನು 2007ರಲ್ಲೇ ಅಂತ್ಯಗೊಳಿಸಿದೆ. ಬಳಿಕ ಕೇವಲ ಬಹುರಾಷ್ಟ್ರಗಳನ್ನು ಒಳಗೊಂಡ ಸರಣಿಯಲ್ಲಷ್ಟೇ ಮುಖಾಮುಖಿ ನಡೆದಿದೆ.


ಬಹಿಷ್ಕಾರದ ಪರ ಪ್ರಬಲ ಧ್ವನಿ


ದೇಶದ ಗೌರವ ವಿಶ್ವಕಪ್‌ಗಿಂತ ದೊಡ್ಡದೇನೂ ಅಲ್ಲ. ಪಾಕಿಸ್ತಾನವನ್ನು ಬಹಿಷ್ಕರಿಸುವ ಕಾರಣಕ್ಕೆ ವಿಶ್ವಕಪ್‌ನಿಂದ ಭಾರತ ಹೊರಗುಳಿದರೂ ನಷ್ಟವೇನೂ ಆಗದು.
- ಹರ್ಭಜನ್‌ ಸಿಂಗ್‌

ಕ್ರಿಕೆಟ್‌ ಮಾತ್ರವಲ್ಲ, ಪಾಕಿಸ್ತಾನದ ಜತೆಗಿನ ಎಲ್ಲ ರೀತಿಯ ಆಟಗಳಿಂದಲೂ ಭಾರತ ದೂರವಿರಬೇಕು.
- ಸೌರವ್‌ ಗಂಗೂಲಿ


ಸೋಲಿಸಿ ಬುದ್ಧಿಕಲಿಸೋಣ

ಪಾಕ್‌ ಜತೆಗಿನ ಆಟ ಬಹಿಷ್ಕರಿಸಿ ಧರ್ಮಾರ್ಥವಾಗಿ ಎರಡು ಅಂಕ ನೀಡುವ ಬದಲು ಆಟವಾಡಿಯೇ ಮಣಿಸಿ ಬುದ್ಧಿ ಕಲಿಸುವುದು ಉತ್ತಮ.
- ಸಚಿನ್‌ ತೆಂಡೂಲ್ಕರ್‌

ಒಲಿಂಪಿಕ್‌ ಸಮಿತಿ ಎಚ್ಚರಿಕೆ

ಹೊಸದಿಲ್ಲಿಯಲ್ಲಿ ಶನಿವಾರ ಆರಂಭವಾಗುವ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದ ಇಬ್ಬರು ಶೂಟರ್‌ಗಳಿಗೆ ವೀಸಾ ನೀಡಲು ಭಾರತ ನಿರಾಕರಿಸಿರುವುದಕ್ಕೆ ಒಲಿಂಪಿಕ್‌ ಸಮಿತಿ ಸಿಟ್ಟಾಗಿದೆ. ಮುಂದೆ ಸರಕಾರ ಲಿಖಿತ ಆಶ್ವಾಸನೆ ನೀಡದ ಹೊರತು ಒಲಿಂಪಿಕ್ಸ್‌ಗೆ ಸಂಬಂಧಿಸಿದ ಟೂರ್ನಿಗಳ ಆತಿಥ್ಯ ನೀಡಲಾಗದು ಎಂದು ಎಚ್ಚರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ